ಆ್ಯಡಿಲೇಡ್(ಡಿ.06): ಆಸೀಸ್ ನೆಲ ಎಂದೊಡೆ ಟೀಂ ಇಂಡಿಯಾಗೆ ಅದೆಕೋ ಒಂಥರಾ ನಡುಕ. ಟೆಸ್ಟ್ ಆರಂಭಕ್ಕೂ ಮುನ್ನ ಅಬ್ಬರಿಸಿ ಬೊಬ್ಬಿರಿಯುವ ಆಟಗಾರರು, ಮೈದಾನದಲ್ಲಿ ಒಬ್ಬರಾದ ಮೇಲೊಬ್ಬರಂತೆ ಪೆವಿಲಿಯನ್ ಸೇರುವುದು ನೋಡಲು ಕಷ್ಟ.


ಹೌದು, ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿರುವ ಭಾರತ, ಭಾರೀ ಆಘಾತ ಎದುರಿಸಿದೆ. 190 ರನ್ ಗಳಿಗೆ ತನ್ನ ಪ್ರಮುಖ 7 ವಿಕೆಟ್ ಕಳೆದುಕೊಂಡಿರುವ ಭಾರತ, ಆಸೀಸ್ ಬಾಲರ್ ಗಳನ್ನು ಎದುರಿಸಲು ತೀವ್ರ ಸಂಕಷ್ಟ ಎದುರಿಸುತ್ತಿದೆ. 

ಕೇವಲ 72 ರನ್ ಗಳಿಗೆ ತನ್ನ ಪ್ರಮುಖ ನಾಲ್ಕು ವಿಕೆಟ್ ಗಳನ್ನು ಕಳೆದುಕೊಂಡಿರುವ ಭಾರತ, ರನ್ ಗಳಿಸಲು ಪರದಾಡುತ್ತಿದೆ. ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ಟೀಂ ಇಂಡಿಯಾ ಆರಂಭಿಕರಾದ ಕೆಎಲ್ ರಾಹುಲ್ 2 ರನ್ ಗಳಿಸಿ ಔಟಾದರೆ, ಮುರಳಿ ವಿಜಯ್ 11 ರನ್ ಗಳಿಸಿ ಪೆವಿಲಿಯನ್ ಸೇರಿದರು. ಇನ್ನು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಬಂದಷ್ಟೇ ವೇಗವಾಗಿ ಕ್ವಾಜಾಗೆ ಕ್ಯಾಚ್ ನೀಡಿ ಪೆವಿಲಿಯನ್ ಸೇರಿದರು. 

ನಂತರ ತಾಳ್ಮೆಯ ಆಟವಾಡುತ್ತಿದ್ದ ಅಜಿಂಕ್ಯ ರಹಾನೆ ಸಹ 13 ರನ್ ಗಳಿಸಿ ಹಜಲ್ ವುಡ್ ಎಸೆತದಲ್ಲಿ ಹ್ಯಾಂಡ್ಸ್ ಕ್ಯೂಬ್ ಗೆ ಕ್ಯಾಚ್ ನೀಡಿ ಔಟಾದರು. ರೋಹಿತ್ ಶರ್ಮಾ ಕೂಡ ಮಿಂಚುವಲ್ಲಿ ವಿಫಲರಾಗಿದ್ದಾರೆ.

ಸದ್ಯ ಚೇತೇಶ್ವರ ಪೂಜಾರ(73) ಹಾಗೂ ಇಶಾಂತ್ ಶರ್ಮಾ ಮೈದಾನದಲ್ಲಿದ್ದಾರೆ. ಭಾರತ ಇದೀಗ ಕೇವಲ ಪೂಜಾರ ಅವರ ಮೇಲೆ ಭರವಸೆ ಇಟ್ಟುಕೊಂಡಿದೆ.