ಆ್ಯಡಿಲೇಡ್(ಡಿ.06): ಭಾರತ-ಆಸ್ಟ್ರೆಲೀಯಾ ನಡುವಿನ ಮೊದಲ ಟೆಸ್ಟ್ ಪಂದ್ಯದ ಮೊದಲ ದಿನದಾಟ ಅಂತ್ಯ ಕಂಡಿದೆ. ಭಾರತ ಅತ್ಯಂತ ದಯನೀಯ ಸ್ಥಿತಿಯಲ್ಲಿದ್ದು, ಬ್ಯಾಟ್ಸಮನ್ ಚೇತೇಶ್ವರ್ ಪೂಜಾರ ಅವರ ಭರ್ಜರಿ ಶತಕದ ನೆರವಿನಿಂದ 9 ವಿಕೆಟ್ ನಷ್ಟಕ್ಕೆ 250 ರನ್ ಗಳಿಸಿದೆ.

ಆಸೀಸ್ ನೆಲದಲ್ಲಿ ತಮ್ಮ ಚೊಚ್ಚಲ ಶತಕ ದಾಖಲಿಸಿದ ಪೂಜಾರ 123 ರನ್ ಬಾರಿಸುವ ಮೂಲಕ ದಯನೀಯ ಸ್ಥಿತಿಯಲ್ಲಿದ್ದ ತಂಡಕ್ಕೆ ನೆರವಾದರು. ಭಾರತದ ಟಾಪ್ ಬ್ಯಾಟ್ಸಮನ್ ಗಳೆಲ್ಲಾ ಒಬ್ಬೊಬ್ಬರಾಗಿ ಪೆವಿಲಿಯನ್ ಸೇರುತ್ತಿದ್ದರೆ, ಪೂಜಾರ ಮಾತ್ರ ಸ್ಕ್ರೀಸ್ ನಲ್ಲಿ ಗಟ್ಟಿಯಾಗಿ ನೆಲೆಯೂರಿ ತಂಡಕ್ಕೆ ಆಸರೆಯಾದರು. ಇದು ಆಸೀಸ್ ವಿರುದ್ಧ ಪೂಜಾರ ಅವರ ಮೂರನೇ ಶತಕ ಕೂಡ ಹೌದು.

ಆದರೆ ಅಂತಿಮ ಘಟ್ಟದಲ್ಲಿ ಪೂಜಾರ ಕೂಡ ವಿಕಟ್ ಒಪ್ಪಿಸುವ ಮೂಲಕ ಭಾರತದ ಕ್ರೀಡಾ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದರು. ಸದ್ಯ ಮೊದಲ ಟೆಸ್ಟ್ ಪಂದ್ಯದ ದಿನದಾಟ ಮುಗಿದಿದ್ದು, ಭಾರತ 9 ವಿಕೆಟ್ ನಷ್ಟಕ್ಕೆ 250 ಗಳಿಸಿದ್ದು ಮೊಹಮ್ಮದ್ ಶಮಿ ಮತ್ತ ಇಶಾಂತ್ ಶರ್ಮಾ ಆಡುತ್ತಿದ್ದಾರೆ.

ಇನ್ನು ಆಸೀಸ್ ಪರ ಮಿಶೆಲ್ ಸ್ಟಾರ್ಕ್, ಜೋಶ್ ಹೆಜಲ್ ವುಡ್ ಮತ್ತು ಪ್ಯಾಟ್ ಕಮಿನ್ಸ್ ತಲಾ ಎರಡು ವಿಕೆಟ್ ಕಬಳಿಸಿದರೆ, ಸ್ಪಿನ್ನರ್ ನಾಥನ್ ಲಿಯಾನ್ ಕೂಡ ಎರಡು ವಿಕೆಟ್ ಕಬಳಿಸಿ ಮಿಂಚಿದರು.