ಭುವನೇಶ್ವರ್, (ಡಿ.8): ಪುರುಷರ ಹಾಕಿ ವಿಶ್ವಕಪ್ ಪಂದ್ಯದಲ್ಲಿ ಕೆನಡಾ ವಿರುದ್ಧ ಭಾರತ ಅಂತರದ ಗೆಲುವಿನ ನಗೆ ಬೀರಿದೆ. ಈ ಮೂಲಕ ಭಾರತ ಹುಡುಗರು ಕ್ವಾರ್ಟರ್​ ಫೈನಲ್​​ಗೆ ಲಗ್ಗೆ ಇಟ್ಟರು.

ಇಂದು (ಡಿಸೆಂಬರ್ 8) ನಡೆದ ಭುವನೇಶ್ವರ್‌ನ ಕಳಿಂಗ ಅಂತಾರಾಷ್ಟ್ರೀಯ ಹಾಕಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಕೆನಡಾ ತಂಡವನ್ನು ಭಾರತ 5-1 ಗೋಲುಗಳ ಅಂತರದಿಂದ ವಿಜಯ ಪತಾಕೆ ಹಾರಿಸಿದರು.ಈ ಮೂಲಕ ಭಾರತ ನೇರವಾಗಿ ಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸಿದೆ. 

ಪೂಲ್‌ 'ಸಿ'ಯಲ್ಲಿರುವ ಇತ್ತಂಡಗಳ ಈ ಕುತೂಹಲಕಾರಿ ಕದನದಲ್ಲಿ ಭಾರತವೇ ಮೊದಲು ಗೋಲ್ ಖಾತೆ ತೆರೆಯಿತು. ಭಾರತದ ಹರ್ಮನ್‌ಪ್ರೀತ್‌ ಸಿಂಗ್‌ ಅವರು 12ನೇ ನಿಮಿಷದಲ್ಲಿ ಗೋಲ್ ಬಾರಿಸಿ ತಂಡಕ್ಕೆ 1-0ಯ ಮುನ್ನಡೆ ಕೊಟ್ಟರು. ಪಂದ್ಯದ ಪ್ರಥಮಾರ್ಧದಲ್ಲಿ ಮತ್ತೆ ಗೋಲ್ ದಾಖಲಾಗಲಿಲ್ಲ.

ಆದರೆ ಗೋಲ್ ಗಾಗಿ ಪ್ರಬಲ ಸೆಣಸಾಟ ನಡೆಸಿದ ಕೆನಡಾ ತೃತೀಯ ಕ್ವಾರ್ಟರ್ ನಲ್ಲಿ ಗೋಲ್‌ ಬಾರಿಸಿ ಪಂದ್ಯವನ್ನು ಜಿದ್ದಾಜಿದ್ದಿ ಹಂತಕ್ಕೆ ತಂದಿತು. 39ನೇ ನಿಮಿಷದಲ್ಲಿ ಕೆನಡಾದ ಫ್ಲೋರಿಸ್ ವ್ಯಾನ್ ಸನ್ ಅವರು ಗೋಲ್ ಬಾರಿಸಿ ಅಂತರವನ್ನು 1-1ಕ್ಕೆ ಸರಿದೂಗಿಸಿದರು.

ಅಂತಿಮ ಕ್ವಾರ್ಟರ್ನಲ್ಲಿ 46ನೇ ನಿಮಿಷದಲ್ಲಿ ಭಾರತದ ಚಿಂಗ್ಲೆನ್ಸನಾ ಸಿಂಗ್ ಅವರಿಂದ ಗೋಲ್ ಸಿಡಿಯಿತು. ಅದಾಗಿ ಮರುಕ್ಷಣದಲ್ಲಿ ಅಂದರೆ 47ನೇ ನಿಮಿಷದಲ್ಲಿ ಲಲಿತ್ ಉಪಧ್ಯಾಯ 3ನೇ ಗೋಲ್ ಬಾರಿಸಿದರು.

ಇಷ್ಟಕ್ಕೇ ಗೋಲ್ ಮಳೆ ನಿಲ್ಲಲಿಲ್ಲ. 51ನೇ ನಿಮಿಷದಲ್ಲಿ ಭಾರತದ ರೋಹಿದಾಸ್ ಅವರು 4ನೇ ಗೋಲ್, 57ನೇ ನಿಮಿಷದಲ್ಲಿ ಲಲಿತ್ ಉಪಧ್ಯಾಯ 5ನೇ ಗೋಲ್ ಬಾರಿಸಿ ತಂಡದ ಗೆಲುವಿಗೆ ಪ್ರಮುಖ ಪಾತ್ರವಹಿಸಿದರು.