ಭುವನೇಶ್ವರ [ಡಿ.02] ಭಾರತ ಮತ್ತು ಬೆಲ್ಜಿಯಂ ನಡುವಿನ ವಿಶ್ವಕಪ್ ಹಾಕಿ ಪಂದ್ಯ ಡ್ರಾ ದಲ್ಲಿ ಅಂತ್ಯವಾಗಿದೆ. ಭುವನೇಶ್ವರ್‌ನ ಕಳಿಂಗ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ಭಾನುವಾರ (ಡಿಸೆಂಬರ್ 2) ನಡೆದ ಪಂದ್ಯ ಡ್ರಾದಲ್ಲಿ ಮುಕ್ತಾಯವಾಗಿದೆ.

ಸಿಮ್ರನ್‌ಜೀತ್ ಸಿಂಗ್ ಮತ್ತು ಹರ್ಮನ್ ಪ್ರೀತ್ ಸಿಂಗ್ ತಂಡದ ಭಾರತದ ಪರ ಗೋಲು ಬಾರಿಸಿದರು. ಪಂದ್ಯ ಆರಂಭದಲ್ಲೇ ಬೆಲ್ಜಿಯಂ ಮೊದಲ ಗೋಲ್ ಬಾರಿಸಿತು. ಬೆಲ್ಜಿಯಂನ ಹೆಂಡ್ರಿಕ್ಸ್ ಅವರು 8ನೇ ನಿಮಿಷದಲ್ಲಿ ಗೋಲ್ ಬಾರಿಸಿ   ಬೆಲ್ಜಿಯಂ ತಂಡಕ್ಕೆ 1-0  ಮುನ್ನಡೆ ನೀಡಿದ್ದರು.

ದ್ವಿತೀಯ ಕ್ವಾರ್ಟರ್ ನಲ್ಲೂ ಮತ್ತೆ ಗೋಲ್ ದಾಖಲಾಗಲೇ ಇಲ್ಲ. 39ನೇ ನಿಮಿಷದಲ್ಲಿ ಭಾರತದ ಹರ್ಮನ್ ಪ್ರೀತ್ ಸಿಂಗ್ ಪೆನಾಲ್ಟಿ ಅವಕಾಶವನ್ನು ಗೋಲ್ ಪರಿವರ್ತಿಸುವಲ್ಲಿ ಯಶಸ್ವಿಯಾದರು. ನಾಲ್ಕನೇ ಕ್ವಾರ್ಟರ್ ಆರಂಭದಲ್ಲೇ ಭಾರತದ ಸಿಮ್ರನ್ ಜೀತ್ ಸಿಂಗ್ ಗೋಲ್ ಬಾರಿಸಿ ತಂಡಕ್ಕೆ 2-1ರ ಮುನ್ನಡೆ ತಂದುಕೊಟ್ಟರು. ಭಾರತ ಗೆಲ್ಲುತ್ತದೆ ಎಂದು ಭಾವಿಸಿದವರಿಗೆ ಸೈಮನ್  56ನೇ ನಿಮಿಷದಲ್ಲಿ ಶಾಕ್ ನೀಡಿ ಪಂದ್ಯ ಸಮಬಲವಾಗುವಂತೆ ಮಾಡಿದರು.

8 ಬಾರಿಯ ಒಲಿಂಪಿಕ್ಸ್ ಪದಕ ವಿಜೇತ ಭಾರತ ಮೊದಲ ಬಾರಿಗೆ 1975ರ ಹಾಕಿ ವಿಶ್ವಕಪ್’ನಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಇದಾದ ಬಳಿಕ ಒಮ್ಮೆಯೂ ಪ್ರಶಸ್ತಿ ಗೆಲ್ಲಲು ಸಾಧ್ಯವಾಗಿಲ್ಲ. ಸುಮಾರು 43 ವರ್ಷಗಳ ಬಳಿಕ ಇದೀಗ ಮತ್ತೊಮ್ಮೆ ಪ್ರಶಸ್ತಿ ಗೆಲ್ಲುವ ಆಸೆ ಮೂಡಿಸಿದೆ. ಉದ್ಘಾಟನಾ ಪಂದ್ಯದಲ್ಲಿ ಭಾರತ ತಂಡವು ದಕ್ಷಿಣ ಆಫ್ರಿಕಾವನ್ನು 5-0 ಗೋಲುಗಳ ಅಂತರದಲ್ಲಿ ಮಣಿಸಿ ಭರ್ಜರಿ ಶುಭಾರಂಭ ಮಾಡಿತ್ತು.