ಭುವನೇಶ್ವರ್[ಡಿ.02]: ವಿಶ್ವಕಪ್ ಎತ್ತಿಹಿಡಿಯುವ ಕನಸಿನೊಂದಿಗೆ ಶುಭಾರಂಭ ಮಾಡಿರುವ ವಿಶ್ವ ನಂ.5 ಭಾರತ ಪುರುಷರ ಹಾಕಿ ತಂಡವಿಂದು ಮತ್ತೊಂದು ಗೆಲುವಿನ ನಿರೀಕ್ಷೆಯಲ್ಲಿದೆ. ಇಲ್ಲಿನ ಕಳಿಂಗ ಕ್ರೀಡಾಂಗಣದಲ್ಲಿ ’ಸಿ’ ಗುಂಪಿನ ಪಂದ್ಯದಲ್ಲಿ ಭಾರತ ವಿಶ್ವ ನಂ.3 ಬಲಿಷ್ಠ ಬೆಲ್ಜಿಯಂ ಸವಾಲನ್ನು ಎದುರಿಸಲಿದೆ. ಈ ಪಂದ್ಯದಲ್ಲಿ ಭಾರತ ಗೆದ್ದರೆ ಕ್ವಾರ್ಟರ್’ಫೈನಲ್ ನೇರ ಪ್ರವೇಶ ಪಡೆಯಲಿದೆ.

8 ಬಾರಿಯ ಒಲಿಂಪಿಕ್ಸ್ ಪದಕ ವಿಜೇತ ಭಾರತ ಮೊದಲ ಬಾರಿಗೆ 1975ರ ಹಾಕಿ ವಿಶ್ವಕಪ್’ನಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಇದಾದ ಬಳಿಕ ಒಮ್ಮೆಯೂ ಪ್ರಶಸ್ತಿ ಗೆಲ್ಲಲು ಸಾಧ್ಯವಾಗಿಲ್ಲ. ಸುಮಾರು 43 ವರ್ಷಗಳ ಬಳಿಕ ಇದೀಗ ಮತ್ತೊಮ್ಮೆ ಪ್ರಶಸ್ತಿ ಗೆಲ್ಲುವ ಆಸೆ ಮೂಡಿಸಿದೆ. ಉದ್ಘಾಟನಾ ಪಂದ್ಯದಲ್ಲಿ ಭಾರತ ತಂಡವು ದಕ್ಷಿಣ ಆಫ್ರಿಕಾವನ್ನು 5-0 ಗೋಲುಗಳ ಅಂತರದಲ್ಲಿ ಮಣಿಸಿ ಭರ್ಜರಿ ಶುಭಾರಂಭ ಮಾಡಿತ್ತು.

ಇನ್ನು ಬೆಲ್ಜಿಯಂ ಎದುರು ಭಾರತ ಅಷ್ಟೇನು ಉತ್ತಮ ಪ್ರದರ್ಶನವನ್ನು ತೋರಿಲ್ಲ. 2013ರಿಂದೀಚೆಗೆ ಹಾಕಿ ಟೀಂ ಇಂಡಿಯಾ ಬಲಿಷ್ಠ ಬೆಲ್ಜಿಯಂ ಎದುರು 19 ಪಂದ್ಯಗಳನ್ನಾಡಿದ್ದು, ಭಾರತ ಕೇವಲ 5 ಪಂದ್ಯಗಳನ್ನು ಗೆದ್ದಿದ್ದರೆ, ಬೆಲ್ಜಿಯಂ 13 ಪಂದ್ಯಗಳಲ್ಲಿ ಗೆಲುವಿನ ನಗೆ ಬೀರಿದೆ. ಒಂದು ಪಂದ್ಯ ಡ್ರಾನಲ್ಲಿ ಅಂತ್ಯವಾಗಿದೆ. 

ಬಲಿಷ್ಠ ಬೆಲ್ಜಿಯಂ ತಂಡವನ್ನು ಮಣಿಸಬೇಕಿದ್ದರೆ, ಭಾರತ ಮನ್ದೀಪ್ ಸಿಂಗ್, ಸಿಮ್ರನ್’ಜೀತ್ ಸಿಂಗ್, ಆಕಾಶ್’ದೀಪ್, ಲಲಿತ್ ಜತೆಗೆ ಉಳಿದ ಆಟಗಾರರು ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಪ್ರದರ್ಶನ ತೋರಿದರೆ ಭಾರತ ಗೆಲುವಿನ ನಗೆ ಬೀರಬಹುದು.