ಭುವನೇಶ್ವರ(ಡಿ.14): 43 ವರ್ಷಗಳ ಬಳಿಕ ಹಾಕಿ ವಿಶ್ವಕಪ್‌ ಎತ್ತಿಹಿಡಿಯುವ ಭಾರತ ತಂಡದ ಕನಸು ಭಗ್ನಗೊಂಡಿದೆ. ಗುರುವಾರ ಇಲ್ಲಿ ನಡೆದ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ 3 ಬಾರಿಯ ಚಾಂಪಿಯನ್‌ ನೆದರ್‌ಲೆಂಡ್ಸ್‌ ವಿರುದ್ಧ 1-2 ಗೋಲುಗಳಲ್ಲಿ ಭಾರತ ಪರಾಭವಗೊಂಡಿತು. ಟೂರ್ನಿಯಲ್ಲಿ 6ನೇ ಸ್ಥಾನಕ್ಕೆ ತೃಪ್ತಿಪಟ್ಟ ಭಾರತದ ಯುವ ಆಟಗಾರರು ಕಣ್ಣೀರಿಡುತ್ತಾ, ಮೈದಾನದಿಂದ ಹೊರನಡೆದರು.

ಪ್ರತಿಭಾನ್ವಿತ ಭಾರತ ತಂಡ 1975ರ ಬಳಿಕ ಮೊದಲ ಬಾರಿಗೆ ವಿಶ್ವಕಪ್‌ ಸೆಮಿಫೈನಲ್‌ಗೇರುವ ನಿರೀಕ್ಷೆ ಹುಟ್ಟಿಸಿತ್ತು. ಆದರೆ ಡಚ್‌ ತಂಡ ಕೋಟ್ಯಂತರ ಅಭಿಮಾನಿಗಳ ಕನಸು ನುಚ್ಚುನೂರಾಗುವಂತೆ ಮಾಡಿದರು.

ಪಂದ್ಯದ 12ನೇ ನಿಮಿಷದಲ್ಲೇ ಭಾರತ ಮುನ್ನಡೆ ಸಾಧಿಸಿತು. ಪೆನಾಲ್ಟಿ ಕಾರ್ನರ್‌ ಅವಕಾಶದಲ್ಲಿ ಆಕಾಶ್‌ದೀಪ್‌ ಸಿಂಗ್‌ ಗೋಲು ಬಾರಿಸಿ ತಂಡಕ್ಕೆ 1-0 ಮುನ್ನಡೆ ಒದಗಿಸಿದರು. ಆದರೆ ಮೊದಲ ಕ್ವಾರ್ಟರ್‌ ಮುಕ್ತಾಯಗೊಳ್ಳಲು 5 ಸೆಕೆಂಡ್‌ ಬಾಕಿ ಇದ್ದಾಗ ಥಿಯೇರಿ ಬ್ರಿಂಕ್‌ಮನ್‌ ಆಕರ್ಷಕ ಗೋಲು ಬಾರಿಸಿ ನೆದರ್‌ಲೆಂಡ್ಸ್‌ ಸಮಬಲ ಸಾಧಿಸಲು ನೆರವಾದರು.

ಮೊದಲಾರ್ಧ 1-1ರಲ್ಲಿ ಮುಕ್ತಾಯಗೊಂಡಿತು. 3ನೇ ಕ್ವಾರ್ಟರ್‌ನಲ್ಲಿ ಭಾರೀ ಪೈಪೋಟಿ ಕಂಡುಬಂತು. ಆದರೆ ಯಾವುದೇ ಗೋಲು ದಾಖಲಾಗಲಿಲ್ಲ. 48ನೇ ನಿಮಿಷದಲ್ಲಿ ನೆದರ್‌ಲೆಂಡ್ಸ್‌ ಗೋಲು ಬಾರಿಸಿದರೂ, ಫೌಲ್‌ ಆಗಿದ್ದ ಕಾರಣ ಭಾರತಕ್ಕೆ ಜೀವದಾನ ದೊರೆಯಿತು. 50ನೇ ನಿಮಿಷದಲ್ಲಿ ಮಿಂಕ್‌ ವಾನ್‌ ಡೆರ್‌ ಪೆನಾಲ್ಟಿ ಕಾರ್ನರ್‌ ಮೂಲಕ ಗೋಲು ಗಳಿಸಿ ಡಚ್‌ ಪಡೆ 2-1ರ ಮುನ್ನಡೆ ಪಡೆಯಲು ನೆರವಾದರು. ಪಂದ್ಯದುದ್ದಕ್ಕೂ ಭಾರತಕ್ಕೆ ಹಲವು ಗೋಲು ಬಾರಿಸುವ ಅವಕಾಶಗಳು ದೊರೆತರೂ, ಅದರ ಲಾಭ ಪಡೆಯಲು ತಂಡ ಯಶಸ್ವಿಯಾಗಲಿಲ್ಲ. ನೆದರ್‌ಲೆಂಡ್ಸ್‌ನ ಬಲಿಷ್ಠ ರಕ್ಷಣಾ ಪಡೆಯನ್ನು ಅಷ್ಟು ಸುಲಭವಾಗಿ ವಂಚಿಸಲು ಭಾರತೀಯರಿಗೆ ಸಾಧ್ಯವಾಗಲಿಲ್ಲ.

ಅಂತಿಮ ಮೂರೂವರೆ ನಿಮಿಷಗಳು ಬಾಕಿ ಇದ್ದಾಗ ಭಾರತ ಗೋಲ್‌ಕೀಪರ್‌ ಹೊರಗಿಟ್ಟು ಹೆಚ್ಚುವರಿ ಆಟಗಾರನೊಂದಿಗೆ ಆಡಲು ನಿರ್ಧರಿಸಿತು. ಆದರೂ ಗೋಲು ದಾಖಲಾಗಲಿಲ್ಲ. ಈ ಗೆಲುವಿನೊಂದಿಗೆ ನೆದರ್‌ಲೆಂಡ್ಸ್‌ 8ನೇ ಬಾರಿಗೆ ವಿಶ್ವಕಪ್‌ ಸೆಮಿಫೈನಲ್‌ ಪ್ರವೇಶಿಸಿತು. ಭಾರತ ಹೊರಬೀಳುತ್ತಿದ್ದಂತೆ ವಿಶ್ವಕಪ್‌ನಲ್ಲಿ ಏಷ್ಯಾದ ತಂಡಗಳ ಹೋರಾಟ ಅಂತ್ಯಗೊಂಡಿತು. ಸೆಮೀಸ್‌ನಲ್ಲಿ ಯುರೋಪ್‌ನ 3 ತಂಡಗಳು ಹಾಗೂ ಹಾಲಿ ಚಾಂಪಿಯನ್‌ ಆಸ್ಪ್ರೇಲಿಯಾ ತಂಡ ಕಾಲಿಟ್ಟಿದೆ. 

ಜರ್ಮನಿಗೆ ಬೆಲ್ಜಿಯಂ ಶಾಕ್‌!

ಗುರುವಾರ ನಡೆದ ಟೂರ್ನಿಯ 3ನೇ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ 2 ಬಾರಿ ವಿಶ್ವ ಚಾಂಪಿಯನ್‌ ಜರ್ಮನಿ ವಿರುದ್ಧ 2-1 ಗೋಲುಗಳ ಗೆಲುವು ಸಾಧಿಸಿದ ಬೆಲ್ಜಿಯಂ, ಸೆಮಿಫೈನಲ್‌ ಪ್ರವೇಶಿಸಿತು. 

50ನೇ ನಿಮಿಷದಲ್ಲಿ ಟಾಮ್‌ ಬೂನ್‌ ಬಾರಿಸಿದ ಗೋಲು, ಬೆಲ್ಜಿಯಂಗೆ ಗೆಲುವು ತಂದುಕೊಟ್ಟಿತು. 14ನೇ ನಿಮಿಷದಲ್ಲೇ ಡೀಟರ್‌ ಲಿನ್ನೆಕೊಜೆಲ್‌ ಬಾರಿಸಿದ ಗೋಲಿನ ನೆರವಿನಿಂದ ಜರ್ಮನಿ ಆರಂಭಿಕ ಮುನ್ನಡೆ ಪಡೆದುಕೊಂಡಿತು. 18ನೇ ನಿಮಿಷದಲ್ಲಿ ಗೋಲು ಬಾರಿಸಿದ ಅಲೆಕ್ಸಾಂಡರ್‌ ಹೆನ್ರಿಕ್ಸ್‌, ಬೆಲ್ಜಿಯಂ ಸಮಬಲ ಸಾಧಿಸಲು ಸಹಕರಿಸಿದರು. ಗುಂಪು ಹಂತದಲ್ಲಿ 3 ಪಂದ್ಯಗಳನ್ನು ಗೆದ್ದು 9 ಅಂಕ ಗಳಿಸಿದ ಕಾರಣ, ಜರ್ಮನಿ ಟೂರ್ನಿಯಲ್ಲಿ 5ನೇ ಸ್ಥಾನ ಪಡೆದುಕೊಂಡಿತು.