ಭುವನೇಶ್ವರ[ಡಿ.11]: ಪುರುಷರ ಹಾಕಿ ವಿಶ್ವಕಪ್ ಟೂರ್ನಿಯಲ್ಲಿ ಇಂಗ್ಲೆಂಡ್ ಮತ್ತು ಫ್ರಾನ್ಸ್ ತಂಡಗಳು ಕ್ವಾರ್ಟರ್ ಫೈನಲ್ ಪ್ರವೇಶಿಸಿವೆ. ಸೋಮವಾರ ಇಲ್ಲಿ ನಡೆದ ಮೊದಲ ಕ್ರಾಸ್ ಓವರ್
ಪಂದ್ಯದಲ್ಲಿ ಇಂಗ್ಲೆಂಡ್, ನ್ಯೂಜಿಲೆಂಡ್ ವಿರುದ್ಧ 2-0 ಗೋಲುಗಳಿಂದ ಗೆಲುವು ಸಾಧಿಸಿ, ಅಂತಿಮ 8ರ ಘಟ್ಟಕ್ಕೆ ಲಗ್ಗೆ ಇಟ್ಟಿತು. 

ಸೋಲುಂಡ ನ್ಯೂಜಿಲೆಂಡ್, ಟೂರ್ನಿಯಿಂದ ಹೊರಬಿತ್ತು. ಇಂಗ್ಲೆಂಡ್ ಪರ ವಿಲ್ ಕಲ್ನನ್ಸ್(25ನೇ ನಿ.) ಮತ್ತು ಲೂಕ್ ಟೇಲರ್(44ನೇ ನಿ.) ಗೋಲು ಗಳಿಸಿ ತಂಡದ ಗೆಲುವಿಗೆ ನೆರವಾದರು. ಬುಧವಾರ ನಡೆಯಲಿರುವ ಕ್ವಾರ್ಟರ್‌ನಲ್ಲಿ ವಿಶ್ವ ನಂ.7 ಇಂಗ್ಲೆಂಡ್, ಒಲಿಂಪಿಕ್ಸ್ ಚಾಂಪಿಯನ್ ಅರ್ಜೆಂಟೀನಾವನ್ನು ಎದುರಿಸಲಿದೆ.

ಮತ್ತೊಂದು ಕ್ರಾಸ್ ಓವರ್ ಪಂದ್ಯದಲ್ಲಿ ಫ್ರಾನ್ಸ್, ಚೀನಾ ತಂಡವನ್ನು 1-0 ಗೋಲಿನಿಂದ ಪರಾಭವಗೊಳಿಸಿ ಕ್ವಾರ್ಟರ್’ಗೇರಿತು. ಫ್ರಾನ್ಸ್ ಪರ ಟಿಮೋತಿ ಕ್ಲೆಮೆಂಟ್ 36ನೇ ನಿಮಿಷದಲ್ಲಿ
ಗೋಲುಗಳಿಸಿದರು. ಏಕಪಕ್ಷೀಯವಾಗಿ ಸಾಗಿದ ಪಂದ್ಯದಲ್ಲಿ ಚೀನಾದ ಯಾವೊಬ್ಬ ಆಟಗಾರನು ಗೋಲುಗಳಿಸುವಲ್ಲಿ ಸಫಲರಾಗಲಿಲ್ಲ. ಸೋಲಿನೊಂದಿಗೆ ಚೀನಾ ಟೂರ್ನಿಯಿಂದ ಹೊರಬಿತ್ತು.