ನವದೆಹಲಿ, [ಜ.09]: ರಾಷ್ಟ್ರೀಯ ಪುರುಷರ ಹಾಕಿ ತಂಡದ ಮುಖ್ಯ ಕೋಚ್​ ಸ್ಥಾನದಿಂದ ಹರೇಂದ್ರ ಸಿಂಗ್​ ಅವರನ್ನು ಕೆಳಗಿಳಿಸಲಾಗಿದೆ ಎಂದು ಹಾಕಿ ಇಂಡಿಯಾ ಬುಧವಾರ ಘೋಷಿಸಿದೆ.

ಕಳೆದ ವರ್ಷ ಮೇ ತಿಂಗಳಲ್ಲಿ ಅಂದಿನ ಕೋಚ್​ ಆಗಿದ್ದ ಜೋರ್ಡ್​ ಮರಿಜ್ನೆ ಅವರು ಮಹಿಳಾ ಹಾಕಿ ತಂಡದ ಕೋಚ್ ಆಗಿ ನೇಮಕವಾದಾಗ ಹರೇಂದ್ರ ಸಿಂಗ್​ ಅವರನ್ನು ಪುರಷರ ತಂಡದ ಮುಖ್ಯ ಕೋಚ್​ ಆಗಿ ನೇಮಿಸಲಾಗಿತ್ತು. 

ಆದರೆ ಈಗ ಅವರನ್ನು ಮತ್ತೆ ರಾಷ್ಟ್ರೀಯ ಜೂನಿಯರ್ ತಂಡದ ಕೋಚ್ ​ಆಗಿ ನೇಮಿಸಲಾಗಿದೆ ಎಂದು ಆಡಳಿತ ಮಂಡಳಿಯ ಪತ್ರಿಕಾ ಪ್ರಕಟಣೆ ತಿಳಿಸಿದೆ.

ರಾಷ್ಟ್ರೀಯ ತಂಡದ ಮುಖ್ಯ ಕೋಚ್​ ಸ್ಥಾನಕ್ಕೆ ಅರ್ಜಿ ಆಹ್ವಾನಿಸಿದ್ದು ಮುಂದಿನ ಕೋಚ್​ ನೇಮಕವಾಗುವವರೆಗೂ ಮಧ್ಯಂತರ ಕೋಚ್ ಆಗಿ ಹಾಕಿ ಇಂಡಿಯಾ ಹೈ ಪರ್ಫಾಮೆನ್ಸ್ ನಿರ್ದೇಶಕ ಡೇವಿಡ್​ ಆನ್​ ಮತ್ತು ಪ್ರಸ್ತುತ ವಿಶ್ಲೇಷಣಾ ಕೋಚ್ ಕ್ರಿಸ್​ ಸಿರಿಯಲ್ಲೊ ಕಾರ್ಯ ನಿರ್ವಹಿಸಲಿದ್ದಾರೆ.

ಹರೇಂದ್ರ ಸಿಂಗ್​ ಅವರು ಯುವ ಆಟಗಾರರಿಗೆ ಅತ್ಯುತ್ತಮ ತರಬೇತಿ ನೀಡುತ್ತಾರೆ. ಹಾಗಾಗಿ ಅವರನ್ನು ಮತ್ತೆ ಜೂನಿಯರ್​ ತಂಡದ ಕೋಚ್​ ಆಗಿ ನೇಮಿಸಲಾಗಿದೆ ಎಂದು ಹಾಕಿ ಇಂಡಿಯಾ ಪ್ರಕಟಣೆಯಲ್ಲಿ ತಿಳಿಸಿದೆ.