ಜರ್ಮನ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತದ ಸವಾಲು ಅಂತ್ಯ
ಜರ್ಮನ್ ಓಪನ್ ಟೂರ್ನಿಯಲ್ಲಿ ಭಾರತೀಯ ಶಟ್ಲರ್‌ಗಳ ಹೋರಾಟ ಅಂತ್ಯ
ಭಾರತೀಯರ ಅಭಿಯಾನ ಮೊದಲ ಸುತ್ತಿನಲ್ಲೇ ಕೊನೆ
ಲಕ್ಷ್ಯ ಸೆನ್‌ಗೂ ಆಘಾತಕಾರಿ ಮೊದಲ ಸುತ್ತಿನಲ್ಲೇ ಆಘಾತಕಾರಿ ಸೋಲು
ಮುಲ್ಹೀಮ್(ಮಾ.09): ಭಾರತೀಯ ಶಟ್ಲರ್‌ಗಳ ಕಳಪೆ ಪ್ರದರ್ಶನ ಮತ್ತೆ ಮುಂದುವರಿದಿದ್ದು, ಜರ್ಮನ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತೀಯರ ಅಭಿಯಾನ ಮೊದಲ ಸುತ್ತಲ್ಲೇ ಕೊನೆಗೊಂಡಿದೆ. ಬುಧವಾರ ಪುರುಷರ ಸಿಂಗಲ್ಸ್ನಲ್ಲಿ ವಿಶ್ವ ನಂ.12 ಲಕ್ಷ್ಯ ಸೇನ್ ಫ್ರಾನ್ಸ್‌ನ ಕ್ರಿಸ್ಟೊಪೊಪೊವ್ ವಿರುದ್ಧ 19-21, 16-21 ನೇರ ಗೇಮ್ಗಳಲ್ಲಿ ಪರಾಭವಗೊಂಡರು.
ಇತ್ತೀಚೆಗೆ ರಾಷ್ಟ್ರೀಯ ಚಾಂಪಿಯನ್‌ಶಿಪ್ ಗೆದ್ದಿದ್ದ ಕರ್ನಾಟಕದ ಮಿಥುನ್ ಮಂಜುನಾಥ್, ಸಿಂಗಾಪೂರದ ಲೊಹ್ ಕೀನ್ ಯೆವ್ ವಿರುದ್ಧ 8-21, 21-19, 11-21 ಗೇಮ್ಗಳಲ್ಲಿ ಸೋತು ಹೊರಬಿದ್ದರು. ಮಹಿಳಾ ಸಿಂಗಲ್ಸ್ನಲ್ಲಿ ಮಾಳ್ವಿಕಾ ಬನ್ಸೋದ್, ತಸ್ನೀಮ್ ಮೀರ್ ಕೂಡಾ ಮೊದಲ ಸುತ್ತಲ್ಲೇ ಅಭಿಯಾನ ಕೊನೆಗೊಳಿಸಿದರು.
ಮಹಿಳಾ ಟೆನಿಸ್: ಭಾರತದ ಆಟಗಾರ್ತಿಯರಿಗೆ ಮುನ್ನಡೆ
ಬೆಂಗಳೂರು: ಐಟಿಎಫ್ ಮಹಿಳಾ ಓಪನ್ ಟೆನಿಸ್ ಟೂರ್ನಿಯಲ್ಲಿ ಭಾರತ ರುತುಜಾ ಭೋಸಲೆ, ಝೀಲ್ ದೇಸಾಯಿ, ಅಂಕಿತಾ ರೈನಾ ಪ್ರಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ. ಇಲ್ಲಿನ ಕೆಎಸ್‌ಎಲ್‌ಟಿಎ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಟೂರ್ನಿಯ ಮಹಿಳಾ ಸಿಂಗಲ್ಸ್ ಮೊದಲ ಸುತ್ತಿನಲ್ಲಿ ರುತುಜಾ 2ನೇ ಶ್ರೇಯಾಂಕಿತೆ, ಗ್ರೀಕ್‌ನ ವ್ಯಾಲೆಂಟಿನಿ ವಿರುದ್ಧ 4-6, 6-4, 6-0 ಸೆಟ್ಗಳಲ್ಲಿ ಗೆದ್ದರು. ಝೀಲ್, ಜರ್ಮನಿಯ ರೆಬೆಕಾ ಸಾರಾ ವಿರುದ್ಧ 6-3, 6-2 ಅಂತರದಲ್ಲಿ ಜಯಿಸಿದರೆ, ಅಂಕಿತಾ ಭಾರತದವರೇ ಆದ ವನ್ಶಿತಾ ಪಠಾಣಿಯಾರನ್ನು 6-3, 6-0 ಸೆಟ್ಗಳಿಂದ ಮಣಿಸಿದರು. ಆದರೆ ಪದಕ ನಿರೀಕ್ಷೆ ಮೂಡಿಸಿದ್ದ ವೈದೇಹಿ ಚೌಧರಿ, ಸಹಜಾ ಯಮಲಪಲ್ಲಿ ಸೋತು ಹೊರಬಿದ್ದರು.
ಐಎಸ್‌ಎಲ್ ಸೆಮೀಸ್: ಬಿಎಫ್‌ಸಿಗೆ 1-0 ಜಯ
ಮುಂಬೈ: 9ನೇ ಆವೃತ್ತಿಯ ಇಂಡಿಯನ್ ಸೂಪರ್ ಲೀಗ್(ಐಎಸ್‌ಎಲ್) ಫುಟ್ಬಾಲ್ ಟೂರ್ನಿಯ ಫೈನಲ್‌ನತ್ತ ಬೆಂಗಳೂರು ಎಫ್‌ಸಿ ಮೊದಲ ಹೆಜ್ಜೆ ಇರಿಸಿದೆ. ಮುಂಬೈ ಸಿಟಿ ಎಫ್‌ಸಿ ವಿರುದ್ಧದ ಸೆಮಿಫೈನಲ್‌ನ ಮೊದಲ ಚರಣದಲ್ಲಿ ಪಂದ್ಯದಲ್ಲಿ ಬಿಎಫ್‌ಸಿ 1-0 ಗೋಲಿನ ಗೆಲುವು ಸಾಧಿಸಿತು. ಇದರೊಂದಿಗೆ 2023ರಲ್ಲಿ ಬಿಎಫ್‌ಸಿ ಸತತ 10ನೇ ಗೆಲುವು ದಾಖಲಿಸಿ ಅಜೇಯ ಓಟ ಮುಂದುವರಿಸಿದೆ.
ಮಂಗಳವಾರ ಇಲ್ಲಿನ ಫುಟ್ಬಾಲ್ ಅರೇನಾ ಮೈದಾನದಲ್ಲಿ ನಡೆದ ಪಂದ್ಯ ಭಾರೀ ರೋಚಕತೆಯಿಂದ ಕೂಡಿತ್ತು. ಮೊದಲಾರ್ಧದಲ್ಲಿ ಉಭಯ ತಂಡಗಳು ಗೋಲು ದಾಖಲಿಸಲು ವಿಫಲವಾದವು. ಪಂದ್ಯವು ಡ್ರಾದತ್ತ ಸಾಗುತ್ತಿದ್ದ ವೇಳೆ 79ನೇ ನಿಮಿಷದಲ್ಲಿ ಬಿಎಫ್‌ಸಿ ಮೊದಲ ಗೋಲು ದಾಖಲಿಸಿತು. ಕಾರ್ನರ್ ಕಿಕ್ ಮೂಲಕ ರೋಶನ್ ಒದಗಿಸಿದ ಅವಕಾಶವನ್ನು ಸುನಿಲ್ ಚೆಟ್ರಿ ಗೋಲಾಗಿಸಿದರು. ಆಕರ್ಷಕ ಹೆಡ್ಡರ್ ಮೂಲಕ ಚೆಂಡನ್ನು ಗೋಲು ಪೆಟ್ಟಿಗೆಯೊಳಕ್ಕೆ ಸೇರಿಸಿದ ಚೆಟ್ರಿ, ಬಿಎಫ್‌ಸಿ ಮುನ್ನಡೆ ಪಡೆಯಲು ನೆರವಾದರು. ನಾಯಕ ಬಾರಿಸಿದ ಗೋಲು, ಬಿಎಫ್‌ಸಿ ಪಾಲಿಗೆ ಗೆಲುವಿನ ಗೋಲಾಯಿತು.
ಈ ಮಟ್ಟದ ಯಶಸ್ಸು ಗಳಿಸಲು ವಿರಾಟ್ ಕೊಹ್ಲಿ ಏನೇನಲ್ಲಾ ತ್ಯಾಗ ಮಾಡಿದ್ರು?
90+1ನೇ ನಿಮಿಷದಲ್ಲಿ ಬಿಎಫ್‌ಸಿಗೆ ತನ್ನ ಮುನ್ನಡೆಯನ್ನು ಹೆಚ್ಚಿಸಿಕೊಳ್ಳುವ ಅವಕಾಶವಿತ್ತು. ರಾಯ್ ಕೃಷ್ಣ ನೀಡಿದ ಪಾಸ್ ಅನ್ನು ಸುಲಭವಾಗಿ ಗೋಲು ಪೆಟ್ಟಿಗೆಗೆ ಸೇರಿಸುವ ಪ್ರಯತ್ನದಲ್ಲಿ ಚೆಟ್ರಿ ವಿಫಲರಾದರು. ಅವರು ಒದ್ದ ಚೆಂಡು ನೇರವಾಗಿ ಮುಂಬೈ ಗೋಲ್‌ಕೀಪರ್ ಕೈ ಸೇರಿತು.
ಬಿಎಫ್‌ಸಿ ಹಾಗೂ ಮುಂಬೈ ನಡುವಿನ ಸೆಮಿಫೈನಲ್ 2ನೇ ಚರಣ ಮಾರ್ಚ್ 12ರಂದು ಕಂಠೀರವ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಪಂದ್ಯದಲ್ಲಿ ಬಿಎಫ್‌ಸಿ ಡ್ರಾ ಸಾಧಿಸಿದರೂ ಸಾಕು, ಫೈನಲ್ ಪ್ರವೇಶಿಸಲಿದೆ.