French Open: ಸೋಲರಿಯದ ಇಗಾ ಸ್ವಿಯಾಟೆಕ್ ಫೈನಲ್‌ಗೆ ಲಗ್ಗೆ..!

* ಫ್ರೆಂಚ್ ಓಪನ್ ಮಹಿಳಾ ಸಿಂಗಲ್ಸ್‌ನಲ್ಲಿ ಇಗಾ-ಕೊಕೊ ಫೈನಲ್‌ಗೆ ಲಗ್ಗೆ

* ಸತತ 34ನೇ ಗೆಲುವಿನೊಂದಿಗೆ ಫ್ರೆಂಚ್‌ ಓಪನ್‌ ಗ್ರ್ಯಾನ್‌ಸ್ಲಾಂ ಟೆನಿಸ್‌ ಟೂರ್ನಿಯಲ್ಲಿ ಫೈನಲ್‌ಗೆ ಲಗ್ಗೆ

* ಇಟಲಿಯ ಮಾರ್ಟಿನಾ ಟ್ರೆವಿಸನ್‌ ವಿರುದ್ಧ ಅಮೆರಿಕದ 18ರ ಕೊಕೊ ಗಾಫ್‌ ಜಯಭೇರಿ

French Open 2022 Tennis Grand slam Gauff and Swiatek cruise into womens singles final kvn

ಪ್ಯಾರಿಸ್(ಜೂ.3)‌: ವಿಶ್ವ ನಂ.1 ಆಟಗಾರ್ತಿ ಪೋಲೆಂಡ್‌ನ ಇಗಾ ಸ್ವಿಯಾಟೆಕ್‌ (Iga Swiatek) ತಮ್ಮ ಗೆಲುವಿನ ಓಟ ಮುಂದುವರಿದಿದ್ದು, ಸತತ 34ನೇ ಗೆಲುವಿನೊಂದಿಗೆ ಫ್ರೆಂಚ್‌ ಓಪನ್‌ ಗ್ರ್ಯಾನ್‌ಸ್ಲಾಂ ಟೆನಿಸ್‌ ಟೂರ್ನಿಯಲ್ಲಿ (French Open Tennis Grand Slam) ಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ. ಗುರುವಾರ ನಡೆದ ಮಹಿಳಾ ಸಿಂಗಲ್ಸ್‌ ಸೆಮಿಫೈನಲ್‌ನಲ್ಲಿ ಅವರು ರಷ್ಯಾದ ದರಿಯಾ ಕಸತ್ಕಿನಾ ವಿರುದ್ಧ 6-2, 6-1 ನೇರ ಸೆಟ್‌ಗಳಲ್ಲಿ ಜಯಭೇರಿ ಬಾರಿಸಿದರು.

2020ರ ಚಾಂಪಿಯನ್‌ ಸ್ವಿಯಾಟೆಕ್‌, 2000ರ ನಂತರ ಸತತವಾಗಿ ಅತಿಹೆಚ್ಚು ಗೆಲುವು ಸಾಧಿಸಿದ ಆಟಗಾರ್ತಿಯರ ಪಟ್ಟಿಯಲ್ಲಿ ಸೆರೆನಾ ವಿಲಿಯಮ್ಸ್‌(2013)ರ 34 ಗೆಲುವುಗಳ ದಾಖಲೆಯನ್ನು ಸರಿಗಟ್ಟಿದ್ದು, 2003ರಲ್ಲಿ ವೀನಸ್‌ ವಿಲಿಯಮ್ಸ್‌ ಸಾಧಿಸಿದ್ದ 35 ಗೆಲುವುಗಳ ದಾಖಲೆಯನ್ನು ಫೈನಲ್‌ನಲ್ಲಿ ಗೆಲ್ಲುವ ಮೂಲಕ ಸರಿಗಟ್ಟಲು ಎದುರು ನೋಡುತ್ತಿದ್ದಾರೆ. ಸೆಮೀಸ್‌ನ ಆರಂಭದಿಂದಲೇ ಕಸತ್ಕಿನಾ ವಿರುದ್ಧ ಪ್ರಾಬಲ್ಯ ಸಾಧಿಸಿದ ಸ್ವಿಯಾಟೆಕ್‌ ಯಾವ ಕ್ಷಣದಲ್ಲೂ ಎದುರಾಳಿಗೆ ಮೇಲುಗೈ ಸಾಧಿಸಲು ಅವಕಾಶ ನೀಡಲಿಲ್ಲ. ಇದರೊಂದಿಗೆ ಟೂರ್ನಿಯಲ್ಲಿ ಒಂದೂ ಸೆಟ್‌ ಸೋಲದೆ ಚೊಚ್ಚಲ ಬಾರಿಗೆ ಗ್ರ್ಯಾನ್‌ಸ್ಲಾಂ ಸೆಮೀಸ್‌ಗೇರಿದ್ದ ಕಸತ್ಕಿನಾ ಅವರ ಟ್ರೋಫಿ ಕನಸು ಭಗ್ನಗೊಂಡಿತು. ಸ್ವಿಯಾಟೆಕ್‌ ಈ ವರ್ಷ 5 ಟೂರ್ನಿಗಳನ್ನು ಗೆದ್ದಿದ್ದು, ಶನಿವಾರ ಮತ್ತೊಂದು ಪ್ರಶಸ್ತಿ ಗೆಲ್ಲಲು ಕಾತರಿಸುತ್ತಿದ್ದಾರೆ.

ಫೈನಲ್‌ಗೆ ಕೊಕೊ: ಗುರುವಾರ ನಡೆದ 2ನೇ ಸೆಮೀಸ್‌ನಲ್ಲಿ ಇಟಲಿಯ ಮಾರ್ಟಿನಾ ಟ್ರೆವಿಸನ್‌ ವಿರುದ್ಧ ಅಮೆರಿಕದ 18ರ ಕೊಕೊ ಗಾಫ್‌ 6-3, 6-1ರ ಸುಲಭ ಗೆಲುವು ಸಾಧಿಸಿ, ಮೊದಲ ಬಾರಿಗೆ ಗ್ರ್ಯಾನ್‌ ಸ್ಲಾಂ ಫೈನಲ್‌ಗೇರಿದರು. ಶನಿವಾರ ಕೊಕೊ ಗಾಫ್‌ ಪ್ರಶಸ್ತಿಗಾಗಿ ಇಗಾ ಸ್ವಿಯಾಟೆಕ್‌ ವಿರುದ್ಧ ಸೆಣಸಲಿದ್ದಾರೆ.

ಸಿಲಿಚ್‌, ರುಡ್‌ ಸೆಮಿಫೈನಲ್‌ಗೆ

ಪ್ಯಾರಿಸ್‌: ಕ್ರೊವೇಷಿಯಾದ ತಾರಾ ಟೆನಿಸಿಗ, ವಿಶ್ವ ನಂ.10 ಮರಿನ್‌ ಸಿಲಿಚ್‌ ಮೊದಲ ಬಾರಿ ಫ್ರೆಂಚ್‌ ಓಪನ್‌ ಸೆಮಿಫೈನಲ್‌ ಪ್ರವೇಶಿಸಿದ್ದಾರೆ. ಬುಧವಾರ 4 ಗಂಟೆ 10 ನಿಮಿಷ ನಡೆದ ಪುರುಷರ ಸಿಂಗಲ್ಸ್‌ ಕ್ವಾರ್ಟರ್‌ ಫೈನಲ್‌ನಲ್ಲಿ 2014ರ ಯುಎಸ್‌ ಓಪನ್‌ ಚಾಂಪಿಯನ್‌ ಸಿಲಿಚ್‌, 7ನೇ ಶ್ರೇಯಾಂಕಿತ ರಷ್ಯಾದ ಆ್ಯಂಡ್ರೆ ರುಬ್ಲೆವ್‌ ವಿರುದ್ಧ 5​-7, 6-​3, 6-​4, 3​-6, 7​-6(10-​2) ಅಂತರದಲ್ಲಿ ರೋಚಕ ಜಯಗಳಿಸಿ ಸೆಮೀಸ್‌ಗೇರಿದರು. ಈ ಮೂಲಕ ಎಲ್ಲಾ 4 ಗ್ರ್ಯಾನ್‌ಸ್ಲಾಂ ಟೂರ್ನಿಗಳಲ್ಲಿ ಸೆಮೀಸ್‌ ಪ್ರವೇಶಿಸಿದ 5ನೇ ಸಕ್ರಿಯ ಟೆನಿಸಿಗ ಎನಿಸಿಕೊಂಡರು. ಮತ್ತೊಂದು ಕ್ವಾರ್ಟರ್‌ ಹಣಾಹಣಿಯಲ್ಲಿ ಡೆನ್ಮಾರ್ಕ್ನ 19ರ ಹೊಲ್ಗರ್‌ ರ್ಯುನೆ ವಿರುದ್ಧ ನಾರ್ವೆಯ ವಿಶ್ವ ನಂ.8 ಕ್ಯಾಸ್ಪೆರ್‌ ರುಡ್‌ 6​-1, 4-​6, 7​-6(2), 6​-3 ಅಂತರದಲ್ಲಿ ಗೆದ್ದು ಮೊದಲ ಬಾರಿ ಗ್ರ್ಯಾನ್‌ಸ್ಲಾಂ ಸೆಮೀಸ್‌ಗೆ ಲಗ್ಗೆ ಇಟ್ಟರು.

French Open 2022 ಕ್ವಾರ್ಟರ್‌ಗೆ ಇಗಾ ಸ್ವಿಯಾಟೆಕ್‌ ಲಗ್ಗೆ!

ಇಂದು ಸೆಮೀಸ್‌ ಕಾದಾಟ: ಶುಕ್ರವಾರ ನಡೆಯಲಿರುವ ಪುರುಷರ ಸಿಂಗಲ್ಸ್‌ ಸೆಮೀಸ್‌ನಲ್ಲಿ 21 ಗ್ರ್ಯಾನ್‌ಸ್ಲಾಂ ವಿಜೇತ ಸ್ಪೇನ್‌ನ ರಾಫೆಲ್‌ ನಡಾಲ್‌ ಹಾಗೂ ವಿಶ್ವ ನಂ.3, ಜರ್ಮನಿಯ ಅಲೆಕ್ಸಾಂಡರ್‌ ಜ್ವೆರೆವ್‌ ಮುಖಾಮುಖಿಯಾಗಲಿದ್ದಾರೆ. 15ನೇ ಬಾರಿ ಫ್ರೆಂಚ್‌ ಓಪನ್‌ನಲ್ಲಿ ಸೆಮೀಸ್‌ಗೇರಿರುವ ನಡಾಲ್‌ 14 ಫೈನಲ್‌ ನಿರೀಕ್ಷೆಯಲ್ಲಿದ್ದು, ಕಳೆದ ಬಾರಿಯೂ ಸೆಮೀಸ್‌ನಲ್ಲಿ ಸೋತಿದ್ದ ಜ್ವೆರೆವ್‌ ಮೊದಲ ಫೈನಲ್‌ ಮೇಲೆ ಕಣ್ಣಿಟ್ಟಿದ್ದಾರೆ. ಮತ್ತೊಂದು ಸೆಮೀಸ್‌ನಲ್ಲಿ ಮರಿನ್‌ ಸಿಲಿಚ್‌ಗೆ ಕ್ಯಾಸ್ಪೆರ್‌ ರುಡ್‌ ಸವಾಲು ಎದುರಾಗಲಿದ್ದು, ಇಬ್ಬರೂ ಚೊಚ್ಚಲ ಫೈನಲ್‌ ಪ್ರವೇಶಿಸುವ ಕಾತರದಲ್ಲಿದ್ದಾರೆ.
 

Latest Videos
Follow Us:
Download App:
  • android
  • ios