ಫಾರ್ಮುಲಾ ಇ-ರೇಸ್: ಜೀನ್ ಎರಿಕ್ ಚಾಂಪಿಯನ್
ದೇಶದ ಚೊಚ್ಚಲ ಫಾರ್ಮುಲಾ ಇ-ಕಾರ್ ರೇಸ್ ಯಶಸ್ವಿ
ಹೈದರಾಬಾದ್‌ನಲ್ಲಿ ಆಯೋಜನೆಗೊಂಡಿದ್ದ ಫಾರ್ಮುಲಾ ಇ-ರೇಸ್
ಅಮೆರಿಕದ ಡಿಎಸ್ ಪೆನ್ಸ್‌ಕೆ ತಂಡದ ಚಾಲಕ ಜೀನ್ ಎರಿಕ್ ಚಾಂಪಿಯನ್
ಹೈದರಾಬಾದ್(ಫೆ.12): ಚೊಚ್ಚಲ ಬಾರಿ ಫಾರ್ಮುಲಾ ಇ-ಕಾರ್ ರೇಸ್ ಅನ್ನು ಭಾರತ ಯಶಸ್ವಿಯಾಗಿ ಆಯೋಜಿಸಿದ್ದು, ಹೈದರಾಬಾದ್‌ನಲ್ಲಿ ನಡೆದ ರೇಸ್ನಲ್ಲಿ ಅಮೆರಿಕದ ಡಿಎಸ್ ಪೆನ್ಸ್‌ಕೆ ತಂಡದ ಚಾಲಕ ಜೀನ್ ಎರಿಕ್ ಚಾಂಪಿಯನ್ ಎನಿಸಿಕೊಂಡರು. ಭಾರತದ ಮಹೀಂದ್ರಾ ಕಾರಿನ ಚಾಲಕರಾದ ಬ್ರಿಟನ್ನ ಓಲಿವರ್ ರೋವ್ಲಂಡ್ 6ನೇ ಸ್ಥಾನ ಪಡೆದರೆ, ಬ್ರೆಜಿಲ್ನ ಲುಕಾಸ್ ಡಿ ಗ್ರಾಸಿ 14ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು. ಕೂಟದಲ್ಲಿ 11 ತಂಡಗಳು ಕಣಕ್ಕಿಳಿದಿದ್ದು, ಪ್ರತಿ ತಂಡದ ಇಬ್ಬರಂತೆ ಒಟ್ಟು 22 ಚಾಲಕರು ರೇಸ್ನಲ್ಲಿ ಪಾಲ್ಗೊಂಡರು.
ಒಳಾಂಗಣ ಅಥ್ಲೆಟಿಕ್ಸ್: ಭಾರತಕ್ಕೆ ಮತ್ತೆರಡು ಪದಕ
ಅಸ್ತಾನ(ಕಜಕಸ್ತಾನ): 2023ರ ಏಷ್ಯನ್ ಒಳಾಂಗಣ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ನಲ್ಲಿ ಭಾರತ ಪದಕ ಬೇಟೆ ಮುಂದುವರಿಸಿದೆ. 2ನೇ ದಿನವಾದ ಶನಿವಾರ ಮಹಿಳೆಯರ ಪೋಲ್ ವಾಲ್ಟ್ನಲ್ಲಿ ಭಾರತ 2 ಪದಕ ಜಯಿಸಿತು.
ಪವಿತ್ರಾ ವೆಂಕಟೇಶ್ (4 ಮೀ.) ಬೆಳ್ಳಿ, ರೋಸಿ ಮೀನಾ(3.90ಮೀ.) ಕಂಚು ಗೆದ್ದರು. ಜ್ಯೋತಿ ಯರ್ರಾಜಿ 60 ಮೀ. ಹರ್ಡಲ್ಸ್ನಲ್ಲಿ 8.16 ಸೆಕೆಂಡ್ಗಳಲ್ಲಿ ಗುರಿ ತಲುಪಿ ತಮ್ಮದೇ ಹೆಸರಲ್ಲಿದ್ದ ರಾಷ್ಟ್ರೀಯ ದಾಖಲೆಯನ್ನು ಉತ್ತಮಗೊಳಿಸಿದರು. ಕೆಲ ದಿನಗಳ ಹಿಂದಷ್ಟೇ ಅವರು ಮಿರಾಮಸ್ನಲ್ಲಿ 8.17 ಸೆಕೆಂಡ್ಗಳಲ್ಲಿ ಕ್ರಮಿಸಿದ್ದರು.
135 ಬಾರಿ ಫಿಕ್ಸಿಂಗ್: ಟೆನಿಸಿಗಗೆ ಆಜೀವ ನಿಷೇಧ!
ಲಂಡನ್: ಬರೋಬ್ಬರಿ 135 ಪಂದ್ಯಗಳಲ್ಲಿ ಮ್ಯಾಚ್ ಫಿಕ್ಸಿಂಗ್ ನಡೆಸಿದ ಪ್ರಕರಣ ದೃಢಪಟ್ಟಹಿನ್ನೆಲೆಯಲ್ಲಿ ಮೊರೊಕ್ಕೊದ ಮಾಜಿ ಟೆನಿಸ್ ಆಟಗಾರ ಯೂನೆಸ್ ರಚೀದಿಗೆ ಆಜೀವ ನಿಷೇಧ ಹೇರಲಾಗಿದೆ. ರಚೀದಿ ಇಬ್ಬರು ಅಲ್ಜೀರಿಯಾ ಆಟಗಾರರ ಜೊತೆ ಸೇರಿ ಫಿಕ್ಸಿಂಗ್ ನಡೆಸಿದ್ದಾರೆ.
ಕೊಡವ ಕೌಟಂಬಿಕ ಹಾಕಿ ಉತ್ಸವದ ಲೋಗೋ, ಬ್ರೌಷರ್ ಬಿಡುಗಡೆ
ಇದು ಯಾವುದೇ ಕ್ರೀಡೆಯಲ್ಲಿ ವ್ಯಕ್ತಿಯೋರ್ವ ನಡೆಸಿದ ಗರಿಷ್ಠ ಮ್ಯಾಚ್ ಫಿಕ್ಸಿಂಗ್ ಎಂದು ಅಂತಾರಾಷ್ಟ್ರೀಯ ಟೆನಿಸ್ ಸಮಗ್ರತೆ ಘಟಕ ತಿಳಿಸಿದೆ. 36 ವರ್ಷದ ರಚೀದಿ ಇನ್ನು ಕೋಚಿಂಗ್ ಜೊತೆಗೆ ಯಾವುದೇ ಟೆನಿಸ್ ಕೂಟಗಳಲ್ಲೂ ಪಾಲ್ಗೊಳ್ಳದಂತೆ ನಿರ್ಬಂಧಿಸಲಾಗಿದೆ. ಜೊತೆಗೆ 34,000 ಯುಎಸ್ ಡಾಲರ್(ಸುಮಾರು 28 ಲಕ್ಷ ರು.) ದಂಡ ವಿಧಿಸಲಾಗಿದೆ. ಯೂನೆಸ್ ಯಾವ ಪಂದ್ಯಗಳಲ್ಲಿ ಫಿಕ್ಸಿಂಗ್ ನಡೆಸಿದ್ದು ಎನ್ನುವ ವಿವರ ಬಹಿರಂಗಗೊಂಡಿಲ್ಲ.
ವಿಶ್ವ ಕ್ರಾಸ್ ಕಂಟ್ರಿ ಓಟ: ಭಾರತದಿಂದ ಐವರ ಸ್ಪರ್ಧೆ
ನವದೆಹಲಿ: ಆಸ್ಪ್ರೇಲಿಯಾದ ಬಾಥಸ್ಟ್ರ್ನಲ್ಲಿ ಫೆ.18ರಂದು ನಡೆಯಲಿರುವ ವಿಶ್ವ ಕ್ರಾಸ್ ಕಂಟ್ರಿ ಚಾಂಪಿಯನ್ಶಿಪ್ನಲ್ಲಿ ಅವಿನಾಶ್ ಸಾಬ್ಳೆ ಸೇರಿದಂತೆ ಭಾರತದ ಐವರು ಅಥ್ಲೀಟ್ಗಳು ಸ್ಪರ್ಧಿಸಲಿದ್ದಾರೆ. 2022ರ ಕಾಮನ್ವೆಲ್ತ್ ಗೇಮ್ಸ್ 3000 ಮೀ. ಸ್ಟೀಪಲ್ಚೇಸ್ನ ಬೆಳ್ಳಿ ವಿಜೇತ ಸಾಬ್ಳೆ ಜೊತೆಗೆ 32 ವರ್ಷದ ಆನಂದ್ ಸಿಂಗ್, ಮಹಿಳಾ ವಿಭಾಗದಲ್ಲಿ ಪಾರುಲ್ ಚೌಧರಿ, ಸಂಜೀವಿನಿ ಜಾಧವ್ ಹಾಗೂ ಚಾವಿ ಯಾದವ್ ಕೂಡಾ ಕೂಟದಲ್ಲಿ ಪಾಲ್ಗೊಳ್ಳಲಿದ್ದಾರೆ. ಪುರುಷರ ವಿಭಾಗದಲ್ಲಿ 47 ದೇಶಗಳ 215, ಮಹಿಳಾ ವಿಭಾಗದಲ್ಲಿ 31 ದೇಶಗಳ 102 ಅಥ್ಲೀಟ್ಗಳು ಸ್ಪರ್ಧಿಸಲಿದ್ದಾರೆ.