ಚಾಲೆಂಜ್‌ಗಾಗಿ ಓಡಿ ರಾಷ್ಟ್ರೀಯ ಪದಕ ಗೆದ್ದ ಅಭಿನ್..!
ರಾಷ್ಟ್ರಮಟ್ಟದಲ್ಲಿ ಪದಕ ಬೇಟೆಯಾಡುತ್ತಿರುವ ಅಭಿನ್ ದೇವಾಡಿಗ
ಸ್ನೇಹಿತರ ಸವಾಲು ಸ್ವೀಕರಿಸಿ ಅಥ್ಲೆಟಿಕ್ಸ್ ಟ್ರಯಲ್ಸ್‌ಗೆ ಬಂದಿದ್ದ ಅಭಿನ್
27 ರಾಷ್ಟ್ರೀಯ ಪದಕ ಪದಕ ಜಯಿಸಿರುವ ಪ್ರತಿಭಾವಂತ ಅಥ್ಲೀಟ್
- ನಾಸಿರ್ ಸಜಿಪ, ಕನ್ನಡಪ್ರಭ
ಬೆಂಗಳೂರು(ನ.08): 4ನೇ ತರಗತಿಯಲ್ಲಿದ್ದಾಗ ಸ್ನೇಹಿತರ ಸವಾಲು ಸ್ವೀಕರಿಸಿ ಅಥ್ಲೆಟಿಕ್ಸ್ ಟ್ರಯಲ್ಸ್‌ಗೆ ಬಂದಿದ್ದ ಆತ ಮುಂದೊಂದು ದಿನ ರಾಷ್ಟ್ರೀಯ ಗೇಮ್ಸ್‌ನಲ್ಲಿ ಪದಕ ಸಾಧನೆ ಮಾಡುತ್ತೇನೆ ಎಂದು ಕನಸಿನಲ್ಲೂ ಊಹಿಸಿರಲಿಕ್ಕಿಲ್ಲ. ಆದರೆ ಸಂಗೀತದ ಜೊತೆ ಅಥ್ಲೆಟಿಕ್ಸ್ ಟ್ರ್ಯಾಕ್‌ನಲ್ಲೂ ಮಿಂಚತೊಡಗಿದ ಯುವಕ ಈಗ ದೇಶದ ಭರವಸೆಯ ಓಟಗಾರ. ಉಸೈನ್‌ಬೋಲ್ಟ್ ತನ್ನ ರೋಲ್ ಮಾಡೆಲ್ ಎನ್ನುತ್ತಲೇ ಓಡುತ್ತಿರುವ, ಸಂಗೀತವೇ ಉಸಿರು ಎಂದು ಬದುಕುತ್ತಿರುವ ಪ್ರತಿಭಾವಂತ ಯುವಕನ ಹೆಸರು ಅಭಿನ್ ದೇವಾಡಿಗ.
ಉಡುಪಿಯ ಸಂತೆಕಟ್ಟೆಯ ಶಾಂತಿವನದ, ಆಟೋಮೊಬೈಲ್ ಕೆಲಸದಲ್ಲಿರುವ ಭಾಸ್ಕರ್ ದೇವಾಡಿಗ-ಆಶಾ ದಂಪತಿಯ ಪುತ್ರ ಅಭಿನ್ ಇತ್ತೀಚೆಗಷ್ಟೇ ನ್ಯಾಷನಲ್ ಗೇಮ್ಸ್, ನ್ಯಾಷನಲ್ ಓಪನ್ ಅಥ್ಲೆಟಿಕ್ಸ್‌ನಲ್ಲಿ ಪದಕ ಸಾಧನೆ ಮಾಡಿದ್ದಾರೆ. ರಾಷ್ಟ್ರೀಯ ಕ್ರೀಡಾಕೂಟದ 200 ಮೀ. ಓಟದಲ್ಲಿ 20.8 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಬೆಳ್ಳಿ ಗೆದ್ದಿರುವ ಅಭಿನ್ ಶೀಘ್ರದಲ್ಲೇ ಏಷ್ಯನ್ ಗೇಮ್ಸ್‌ಗೆ ಬೇಕಿರುವ 20.60 ಸೆಕೆಂಡ್‌ಗಳ ಅರ್ಹತಾ ಮಟ್ಟ ತಲುಪುವ ನಿರೀಕ್ಷೆಯಲ್ಲಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸುವ ಕನಸು ಹೊತ್ತಿರುವ 21 ವರ್ಷದ ಅಭಿನ್, 2017ರಿಂದ ಜಹೀರ್ ಅಬ್ಬಾಸ್‌ರಿಂದ ತರಬೇತಿ ಪಡೆಯುತ್ತಿದ್ದಾರೆ. ಅದಕ್ಕೂ ಮೊದಲು 2 ವರ್ಷದ ಡಾಲಿನ್ ಡಯಾಸ್‌ರಿಂದ ಟ್ರೈನಿಂಗ್ ಪಡೆದಿದ್ದರು.
27 ರಾಷ್ಟ್ರೀಯ ಪದಕ
2015ರಲ್ಲಿ ಮೊದಲ ಬಾರಿ ರಾಷ್ಟ್ರ ಮಟ್ಟದಲ್ಲಿ ಪದಕ ಗೆದ್ದಿದ್ದ ಅಭಿನ್, 200 ಮೀ.ನಲ್ಲಿ 2017ರಲ್ಲಿ ರಾಷ್ಟ್ರೀಯ ಶಾಲಾ ಕ್ರೀಡಾಕೂಟ, 2019ರಲ್ಲಿ ಕಿರಿಯರ ರಾಷ್ಟ್ರೀಯ ಚಾಂಪಿಯನ್‌ಶಿಪ್, ಫೆಡರೇಶನ್‌ಕಪ್, 2020ರಲ್ಲಿ ಖೇಲೋ ಇಂಡಿಯಾ ಯೂತ್‌ಗೇಮ್ಸ್‌ನಲ್ಲಿ ಕೂಟ ದಾಖಲೆಯೊಂದಿಗೆ ಬಂಗಾರದ ಸಾಧನೆ ಮಾಡಿದ್ದಾರೆ. 2022ರ ಖೇಲೋ ಇಂಡಿಯಾ ವಿವಿ ಗೇಮ್ಸ್‌ನಲ್ಲಿ 4*100 ಮೀ.ನಲ್ಲೂ ಕೂಟ ದಾಖಲೆಯೊಂದಿಗೆ ಚಿನ್ನ ಜಯಿಸಿರುವ ಅವರು, ಈವರೆಗೆ 27 ರಾಷ್ಟ್ರೀಯ ಪದಕಗಳು ಸೇರಿ 50ಕ್ಕೂ ಹೆಚ್ಚಿನ ಪದಕಗಳನ್ನು ಮುಡಿಗೇರಿಸಿಕೊಂಡಿದ್ದಾರೆ.
ಭಾರತ-ಪಾಕಿಸ್ತಾನ ಫೈನಲ್ ಮುಖಾಮುಖಿಗೆ ಇದೆ ಅವಕಾಶ, ಮರುಕಳಿಸುತ್ತಾ 2007ರ ಇತಿಹಾಸ!
ಬಹುಮುಖ ಪ್ರತಿಭೆ
ಅಭಿನ್ ಅಥ್ಲೆಟಿಕ್ಸ್ ಮಾತ್ರವಲ್ಲದೇ ಸಂಗೀತ ಕ್ಷೇತ್ರದಲ್ಲೂ ಮಿಂಚುತ್ತಿರುವುದು ವಿಶೇಷ. ಬಾಲ್ಯದಿಂದಲೇ ವಿವಿಧ ಸಮಾರಂಭಗಳಲ್ಲಿ ಡ್ರಮ್ಮರ್ ಆಗಿ ಪಾಲ್ಗೊಳ್ಳುತ್ತಿದ್ದ ಅಭಿನ್ ಅಥ್ಲೆಟಿಕ್ಸ್‌ನಲ್ಲೂ ತಮ್ಮ ಛಾಪು ಮೂಡಿಸಿದ್ದಾರೆ. ಈವರೆಗೆ ರಾಜ್ಯದ ವಿವಿಧ ಟಿವಿ ಚಾನೆಲ್‌ಗಳು, ತೆಲುಗು, ಮರಾಠಿ, ತಮಿಳು ರಿಯಾಲಿಟಿ ಶೋಗಳು ಸೇರಿ 1000ಕ್ಕೂ ಅಧಿಕ ಸಮಾರಂಭಗಳಲ್ಲಿ ರಿದಂ ನುಡಿಸಿದ್ದಾರೆ. 2011ರಲ್ಲಿ ಮೈಸೂರು ಮಕ್ಕಳ ದಸರಾ ಉದ್ಘಾಟಿಸಿದ್ದು ಮತ್ತೊಂದು ಖ್ಯಾತಿ.
ರಿದಂ ಪ್ಯಾಡ್ ನುಡಿಸಿ ದಾಖಲೆ ಬರೆದ ಅಭಿನ್
6ನೇ ವಯಸ್ಸಲ್ಲೇ ಸಂಗೀತ ಕ್ಷೇತ್ರಕ್ಕೆ ಕಾಲಿಟ್ಟಿದ್ದ ಅಭಿನ್, ಅತೀ ಕಿರಿಯ ಪ್ರಾಯದಲ್ಲಿ ಸ್ಥಳದಲ್ಲೇ ಯಾವುದೇ ಹಾಡಿಗೆ ರಿದಂ ಪ್ಯಾಡ್ ನುಡಿಸುವ ವಿಶೇಷ ಕೌಶಲ್ಯದಿಂದಾಗಿ 2011ರಲ್ಲಿ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ನಲ್ಲೂ ಸ್ಥಾನ ಪಡೆದಿದ್ದಾರೆ. ರಾಜ್ಯ ಸರ್ಕಾರದ ‘ಕಾವ್ಯಶ್ರೀ’, ‘ಅಸಾಧಾರಣ ಮಕ್ಕಳ ಪುರಸ್ಕಾರ’ಪ್ರಶಸ್ತಿಗೂ ಭಾಜನರಾಗಿದ್ದಾರೆ.
ಪ್ರಾಯೋಜಕರು ಬೇಕಾಗಿದ್ದಾರೆ
ಸತತವಾಗಿ ವಿವಿಧ ಕೂಟಗಳಲ್ಲಿ ಪದಕ ಗೆಲ್ಲುತ್ತಾ ರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯುತ್ತಿದ್ದರೂ ಅಭಿನ್‌ಗೆ ಯಾವುದೇ ಪ್ರಾಯೋಜಕತ್ವ ಸಿಕ್ಕಿಲ್ಲ. ಸರ್ಕಾರದ ಅಮೃತ ಕ್ರೀಡಾ ಯೋಜನೆಯಲ್ಲೂ ಅವಕಾಶ ಸಿಕ್ಕಿಲ್ಲ. ಆರ್ಥಿಕ ಸಂಕಷ್ಟವಿದ್ದರೂ ಕೂಟಗಳಲ್ಲಿ ಪಾಲ್ಗೊಳ್ಳಲು ಅಪ್ಪನ ಆದಾಯ ನೆಚ್ಚಿಕೊಂಡಿರುವ ಅಭಿನ್‌ಗೆ, ರಿದಂ ಮೂಲಕ ದೊರೆಯುವ ಅಲ್ಪಸ್ವಲ್ಪ ಹಣವೇ ಆಧಾರ. ಪ್ರಾಯೋಜಕರು, ಸರ್ಕಾರದ ನೆರವು ಸಿಕ್ಕರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಬಹುದು ಎಂಬುದು ಬಿಕಾಂ ಪದವೀಧರ ಅಭಿನ್ ವಿಶ್ವಾಸ.