ನವದೆಹಲಿ(ಡಿ.05): 2019ರ ಐಪಿಎಲ್ ಗೆ ಎಲ್ಲಾ ತಂಡಗಳೂ ಮತ್ತದರ ಅಭಿಮಾನಿಗಳು ಸಜ್ಜುಗೊಳ್ಳುತ್ತಿದ್ದಾರೆ. 2019ರ ಐಪಿಎಲ್ ಟೂರ್ನಿಯಲ್ಲಿ ಈ ಬಾರಿ ಬಿರುಸಿನ ಸ್ಪರ್ಧೆ ಖಚಿತ ಎಂದೇ ಪ್ರತಿಯೊಂದು ತಂಡದ ಅಭಿಮಾನಿಗಳು ಮಾತನಾಡಿಕೊಳ್ಳುತ್ತಿದ್ದಾರೆ.

ಆದರೆ ಡೆಲ್ಲಿ ಡೇರ್‌ಡೇವಿಲ್ಸ್ ತಂಡದ ಅಭಿಮಾನಿಗಳಲ್ಲಿ ಮಾತ್ರ ಇಂತಹ ರೋಷಾವೇಷ ಕಾಣುತ್ತಿಲ್ಲ. ಕಾರಣ ಎಲ್ಲಾ ಐಪಿಎಲ್ ಪಂದ್ಯಾವಳಿಗಳಲ್ಲೂ ಅತ್ಯಂತ ಕಳಪೆ ಪ್ರದರ್ಶನ ತೋರಿರುವ ಡೆಲ್ಲಿ ಡೇರ್‌ಡೇವಿಲ್ಸ್ ತಂಡ ಎಂದರೆ ಖುದ್ದು ತವರಿನ ಅಭಿಮಾನಿಗಳೇ ಮೂಗು ಮುರಿಯುತ್ತಿದ್ದಾರೆ.

ಆದರೆ ತಂಡದ ಅಭಿಮಾನಿಗಳಲ್ಲಿ ಹುಮ್ಮಸ್ಸು ಮೂಡಿಸಲು ಡೆಲ್ಲಿ ಡೇರ್‌ಡೇವಿಲ್ಸ್ ತಂಡದ ಮಾಲೀಕತ್ವ ನಿರ್ಧರಿಸಿದೆ. ಅದರಂತೆ ತಂಡದ ಹೆಸರನ್ನು ಡೆಲ್ಲಿ ಡೇರ್‌ಡೇವಿಲ್ಸ್ ಬದಲಿಗೆ ಡೆಲ್ಲಿ ಕ್ಯಾಪಿಟಲ್ಸ್ ಎಂದು ಮರುನಾಮಕರಣ ಮಾಡಲಾಗಿದ್ದು, ತಂಡದ ಲೋಗೋ ಕೂಡ ಬದಲಿಸಲಾಗಿದೆ.

ಈ ಕುರಿತು ಮಾಹಿತಿ ನೀಡಿರುವ ಪಾರ್ಥ್ ಜಿಂದಾಲ್, ತಂಡದ ಹೆಸರನ್ನು ಡೆಲ್ಲಿ ಕ್ಯಾಪಿಟಲ್ಸ್ ಎಂದು ಬದಲಾಯಿಸಲು ನಿರ್ಣಯ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.