Asianet Suvarna News Asianet Suvarna News

ಖೇಲೋ ಇಂಡಿಯಾ ವಿವಿ ಗೇಮ್ಸ್‌ಗೆ ಕ್ಷಣಗಣನೆ ಶುರು

* ಖೇಲೋ ಇಂಡಿಯಾ ವಿವಿ ಗೇಮ್ಸ್‌ಗೆ ಬೆಂಗಳೂರು ಆತಿಥ್ಯ

* ಎರಡನೇ ಆವೃತ್ತಿಯ ಖೇಲೋ ಇಂಡಿಯಾ ವಿವಿ ಗೇಮ್ಸ್‌ಗೆ ಉಪರಾಷ್ಟ್ರಪತಿ ಚಾಲನೆ

* ಖೇಲೋ ಇಂಡಿಯಾ ಗೇಮ್ಸ್‌ಗೆ ಏಪ್ರಿಲ್‌ 24ರಂದು ಚಾಲನೆ ಸಿಗಲಿದ್ದು, ಮೇ 3ರಂದು ಮುಕ್ತಾಯಗೊಳ್ಳಲಿದೆ.

Count down begins for Khelo India University Games 2022 kvn
Author
Bengaluru, First Published Apr 20, 2022, 7:41 AM IST

ಬೆಂಗಳೂರು(ಏ.20): ಬಹುನಿರೀಕ್ಷಿತ 2ನೇ ಆವೃತ್ತಿಯ ಖೇಲೋ ಇಂಡಿಯಾ ಯುನಿವರ್ಸಿಟಿ ಗೇಮ್ಸ್‌ಗೆ (Khelo India University Games 2022) ವೇದಿಕೆ ಸಜ್ಜುಗೊಂಡಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರ, ಭಾರತೀಯ ಕ್ರೀಡಾ ಪ್ರಾಧಿಕಾರ(ಸಾಯ್‌), ಜೈನ್‌ ವಿಶ್ವವಿದ್ಯಾನಿಲಯಗಳ ಸಹಭಾಗಿತ್ವದಲ್ಲಿ ನಡೆಯಲಿರುವ ಗೇಮ್ಸ್‌ಗೆ ಏಪ್ರಿಲ್‌ 24ರಂದು ಚಾಲನೆ ಸಿಗಲಿದ್ದು, ಮೇ 3ರಂದು ಮುಕ್ತಾಯಗೊಳ್ಳಲಿದೆ. ಗೇಮ್ಸ್‌ಗೆ ಬೇಕಾದ ಎಲ್ಲಾ ತಯಾರಿ ಮಾಡಲಾಗುತ್ತಿದ್ದು, ಕ್ರೀಡಾ ಕೇಂದ್ರಗಳು, ಮೈದಾನಗಳು ಕ್ರೀಡಾಪಟುಗಳನ್ನು ಬರಮಾಡಿಕೊಳ್ಳಲು ಕಾತರದಿಂದ ಕಾಯುತ್ತಿವೆ.

‘ಕ್ರೀಡಾಕೂಟದಲ್ಲಿ ಕರ್ನಾಟಕದ 18 ಸೇರಿ ಒಟ್ಟಾರೆ 189 ವಿವಿಗಳು ಪಾಲ್ಗೊಳ್ಳಲಿದ್ದು, ಸುಮಾರು 4,500 ಕ್ರೀಡಾಪಟುಗಳು ಸ್ಪರ್ಧಿಸಲಿದ್ದಾರೆ. ಈ ಬಾರಿ ಹೊಸದಾಗಿ ಯೋಗ (Yoga) ಮತ್ತು ಮಲ್ಲಕಂಬವನ್ನು ಸೇರಿಸಲಾಗಿದೆ. ಪರಿಸರದ ಬಗ್ಗೆ ಅರಿವು ಮೂಡಿಸಲು ಗೇಮ್ಸ್‌ನ್ನು ‘ಹಸಿರು ಕ್ರೀಡಾಕೂಟ’ ಎಂದು ಘೋಷಿಸಲಾಗಿದೆ. ಕ್ರೀಡಾಕೂಟದ ವಿಜೇತರು ಮುಂದಿನ ವಿಶ್ವ ವಿವಿ ಗೇಮ್ಸ್‌ಗೆ ಅರ್ಹತೆ ಪಡೆದುಕೊಳ್ಳಲಿದ್ದಾರೆ’ ಎಂದು ಜೈನ್‌ ವಿವಿ ಕ್ರೀಡಾ ನಿರ್ದೇಶಕ ಡಾ.ಶಂಕರ್‌ ಯು.ವಿ. ಮಾಹಿತಿ ನೀಡಿದ್ದಾರೆ.

20 ಕ್ರೀಡೆ, 5 ಕೇಂದ್ರಗಳು: ಈ ಬಾರಿ ಗೇಮ್ಸ್‌ಗೆ ನಗರದ ಕಂಠೀರವ ಕ್ರೀಡಾಂಗಣ (Sree Kanteerava Stadium), ಕನಕಪುರ ರಸ್ತೆಯಲ್ಲಿರುವ ಜೈನ್‌ ವಿವಿ ಗ್ಲೋಬಲ್‌ ಕ್ಯಾಂಪಸ್‌, ಜೈನ್ಸ್‌ ಸ್ಪೋರ್ಟ್ಸ್‌ ಸ್ಕೂಲ್‌, ಸಾಯ್‌ ಶೂಟಿಂಗ್‌ ರೇಂಜ್‌ ಹಾಗೂ ಕೆ.ಎಂ.ಕಾರ್ಯಪ್ಪ ಹಾಕಿ ಕ್ರೀಡಾಂಗಣ ಆತಿಥ್ಯ ವಹಿಸಲಿದೆ. ಈ ಪೈಕಿ ಕುಸ್ತಿ, ಜುಡೋ, ಕಬಡ್ಡಿ, ವಾಲಿಬಾಲ್‌, ಈಜು, ಮಲ್ಲಕಂಬ, ಯೋಗಾಸನ, ಫೆನ್ಸಿಂಗ್‌, ಕರಾಟೆ, ಫುಟ್ಬಾಲ್‌, ಬಾಕ್ಸಿಂಗ್‌ ಜೈನ್‌ ವಿವಿ ಆವರಣದಲ್ಲಿ ನಡೆಯಲಿದ್ದು, ಸಕಲ ವ್ಯವಸ್ಥೆ ಮಾಡಲಾಗಿದೆ. ಬ್ಯಾಡ್ಮಿಂಟನ್‌ (Badminton), ಟೆನಿಸ್‌ (Tennis), ಟೇಬಲ್‌ ಟೆನಿಸ್‌ಗೆ ಜೈನ್‌ ಸ್ಪೋಟ್ಸ್‌ ಸ್ಕೂಲ್‌ ಆತಿಥ್ಯ ವಹಿಸಲಿದೆ. ಅಥ್ಲೆಟಿಕ್ಸ್‌, ಬಾಸ್ಕೆಟ್‌ಬಾಲ್‌, ಹಾಕಿ ಮತ್ತು ಶೂಟಿಂಗ್‌ ಇನ್ನುಳಿದ 3 ಕಡೆಗಳಲ್ಲಿ ನಡೆಯಲಿದೆ. ಎಲ್ಲಾ ಕೇಂದ್ರಗಳೂ ಕ್ರೀಡೆಗೆ ಸಜ್ಜುಗೊಂಡಿದ್ದು, ಅಂತಿಮ ಸ್ಪರ್ಷ ನೀಡಲಾಗುತ್ತಿದೆ.

ವಸತಿ, ಪ್ರಯಾಣ ವ್ಯವಸ್ಥೆ: ಗೇಮ್ಸ್‌ನಲ್ಲಿ ಪಾಲ್ಗೊಳ್ಳುವ ಕ್ರೀಡಾಪಟುಗಳು, ಅಧಿಕಾರಿಗಳು, ಸಹಾಯಕ ಸಿಬ್ಬಂದಿಗೆ ಉಳಿದುಕೊಳ್ಳಲು ವಸತಿ ವ್ಯವಸ್ಥೆಯನ್ನು ಈಗಾಗಲೇ ಸಜ್ಜುಗೊಳಿಸಲಾಗಿದೆ. ಜೈನ್‌ ವಿವಿ ಆವರಣದಲ್ಲಿರುವ ವಿದ್ಯಾರ್ಥಿ ಹಾಸ್ಟೆಲ್‌, ಆರ್ಚ್‌ ಆಫ್‌ ಲಿವಿಂಗ್‌ ಹಾಗೂ ನಗರದ ಕೆಲ ಹೋಟೆಲ್‌ಗಳಲ್ಲಿ ಕೋಣೆಗಳನ್ನು ಕಾಯ್ದಿರಿಸಲಾಗಿದೆ. ಊಟದ ವ್ಯವಸ್ಥೆಯನ್ನು ಜೈನ್‌ ವಿವಿ ಹಾಗೂ ಕಂಠೀರವ ಕ್ರೀಡಾಂಗಣದಲ್ಲಿ ಮಾಡಲಾಗುತ್ತದೆ. ಕ್ರೀಡಾ ಕೇಂದ್ರಗಳಿಗೆ ಪ್ರಯಾಣಿಸಲು ಬಸ್‌ ವ್ಯವಸ್ಥೆ ಹಾಗೂ ಆವರಣದಲ್ಲಿ ಬಗ್ಗಿ ವ್ಯವಸ್ಥೆ ಇದೆ ಎಂದು ಶಂಕರ್‌ ಅವರು ತಿಳಿಸಿದ್ದಾರೆ.

ಕ್ಯಾಂಪಸ್‌ನಲ್ಲೇ ಐಸೋಲೇಸನ್‌: ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವ ಪ್ರತಿ ಕ್ರೀಡಾಪಟು ಎರಡು ಡೋಸ್‌ ಲಸಿಕೆ ಪಡೆದಿರಬೇಕು. ಎಲ್ಲಾ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳೊಂದಿಗೆ ಗೇಮ್ಸ್‌ ಆಯೋಜಿಸಲಾಗುತ್ತಿದೆ. ಒಂದು ವೇಳೆ ಯಾವುದೇ ಕ್ರೀಡಾಪಟು, ಅಧಿಕಾರಿ, ಸಹಾಯಕ ಸಿಬ್ಬಂದಿಗೆ ಸೋಂಕು ದೃಢಪಟ್ಟರೆ ಅವರಿಗೆ ಕ್ಯಾಂಪಸ್‌ ಒಳಗಡೆಯೇ ಪ್ರತ್ಯೇಕ ಐಸೋಲೇಸನ್‌ ವ್ಯವಸ್ಥೆ ಮಾಡಲಾಗಿದೆ. ನಿರಂತರವಾಗಿ ಕೋವಿಡ್‌ ಪರೀಕ್ಷೆಗಳನ್ನು ನಡೆಸಲಾಗುತ್ತದೆ ಎಂದು ಅವರು ಮಾಹಿತಿ ಹಂಚಿಕೊಂಡಿದ್ದಾರೆ.

ಉಪರಾಷ್ಟ್ರಪತಿಗಳಿಂದ ಚಾಲನೆ: ಕ್ರೀಡಾಕೂಟದ ಉದ್ಘಾಟನಾ ಸಮಾರಂಭ ಕಂಠೀರವ ಕ್ರೀಡಾಂಗಣದಲ್ಲಿ ಮಾ.24ರಂದು ಭಾನುವಾರ ನಡೆಯಲಿದೆ. ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಗೇಮ್ಸ್‌ಗೆ ಚಾಲನೆ ನೀಡಲಿದ್ದಾರೆ.

Follow Us:
Download App:
  • android
  • ios