Commonwealth Games: ಚಿನ್ನದ ಪದಕಕ್ಕೆ ಪಂಚ್ ಮಾಡಿದ ನೀತೂ, ಅಮಿತ್
ಕಾಮನ್‌ವೆಲ್ತ್ ಗೇಮ್ಸ್ ಕ್ರೀಡಾಕೂಟದಲ್ಲಿ ಚೊಚ್ಚಲ ಚಿನ್ನದ ಪದಕ ಗೆದ್ದ ಬಾಕ್ಸರ್ ಅಮಿತ್ ಪಂಘಾಲ್
ಭಾರತದ ಮಹಿಳಾ ಬಾಕ್ಸರ್ ನೀತೂ ಗಂಗಾ ಪಾಲಾದ ಚಿನ್ನದ ಪದಕ
ಬ್ಯಾಡ್ಮಿಂಟನ್‌ನ ಮಹಿಳಾ ಸಿಂಗಲ್ಸ್‌ನಲ್ಲಿ ಫೈನಲ್ ಪ್ರವೇಶಿಸಿದ ಪಿವಿ ಸಿಂಧು
ಬರ್ಮಿಂಗ್‌ಹ್ಯಾಮ್(ಆ.07): ಕಾಮನ್‌ವೆಲ್ತ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾರತದ ಬಾಕ್ಸರ್‌ಗಳು ಚಿನ್ನದ ಬೇಟೆಯಾಡಿದ್ದಾರೆ. ಮಹಿಳಾ ವಿಭಾಗದಲ್ಲಿ ನೀತೂ ಗಂಗಾ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದರೇ, ದೇಶದ ನಂ.1 ಬಾಕ್ಸಿಂಗ್ ಪಟು ಅಮಿತ್ ಪಂಘಾಲ್ ಚೊಚ್ಚಲ ಕಾಮನ್‌ವೆಲ್ತ್ ಗೇಮ್ಸ್ ಚಿನ್ನದ ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೂಲಕ ಭಾರತದ ಪದಕದ ಬೇಟೆ ಭರ್ಜರಿಯಾಗಿಯೇ ಮುಂದುವರೆದಿದೆ.
21 ವರ್ಷದ ಹರ್ಯಾಣ ಮೂಲದ ಬಾಕ್ಸರ್ ನೀತೂ ಗಂಗಾ, ಮಹಿಳೆಯರ 48 ಕೆಜಿ ವಿಭಾಗದ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಇಂಗ್ಲೆಂಡ್‌ನ ಡೇಮಿ ಜೇಡ್ ರೆಸ್ಡಾನ್ ಎದುರು 5-0 ಅಂತರದಲ್ಲಿ ಗೆಲುವು ದಾಖಲಿಸುವ ಮೂಲಕ ದೇಶದ ಕೀರ್ತಿ ಪತಾಕೆ ಹಾರಿಸಿದ್ದಾರೆ.
ಇನ್ನು ಪುರುಷರ 51 ಕೆಜಿ ವಿಭಾಗದ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಅಮಿತ್ ಪಂಘಾಲ್ ಚಿನ್ನದ ಪದಕಕ್ಕೆ ಮುತ್ತಿಕ್ಕುವಲ್ಲಿ ಯಶಸ್ವಿಯಾಗಿದ್ದಾರೆ. ಇದು ಅಮಿತ್ ಪಂಘಾಲ್ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಗೆದ್ದ ಮೊದಲ ಚಿನ್ನದ ಪದಕ ಎನಿಸಿಕೊಂಡಿದೆ. ಈ ಮೊದಲು ಅಮಿತ್ 2018ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಬೆಳ್ಳಿ ಪದಕ ಜಯಿಸಿದ್ದರು.
ಏಕಪಕ್ಷೀಯವಾಗಿ ನಡೆದ ಬಾಕ್ಸಿಂಗ್ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ಬಾಕ್ಸರ್ ಕೀರನ್ ಮೆಕ್‌ಡೊನಾಲ್ಡ್ ಎದುರು ಭರ್ಜರಿ ಗೆಲುವು ಸಾಧಿಸುವ ಮೂಲಕ ಚಿನ್ನದ ಪದಕ ಜಯಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದು ಈ ಬಾರಿಯ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತದ ಪಾಲಾದ 15ನೇ ಚಿನ್ನದ ಪದಕ ಎನಿಸಿಕೊಂಡಿತು.
ಚಿನ್ನದ ಪದಕಕ್ಕೆ ಮತ್ತಷ್ಟು ಹತ್ತಿರವಾದ ಪಿವಿ ಸಿಂಧು:
ಎರಡು ಬಾರಿಯ ಒಲಿಂಪಿಕ್ಸ್ ಪದಕ ವಿಜೇತೆ, ಭಾರತದ ತಾರಾ ಬ್ಯಾಡ್ಮಿಂಟನ್ ಪಟು ಪಿ ವಿ ಸಿಂಧು, ಬರ್ಮಿಂಗ್‌ಹ್ಯಾಮ್ ಕಾಮನ್‌ವೆಲ್ತ್ ಗೇಮ್ಸ್ ಕ್ರೀಡಾಕೂಟದ ಮಹಿಳಾ ಸಿಂಗಲ್ಸ್‌ನಲ್ಲಿ ಫೈನಲ್ ಪ್ರವೇಶಿಸುವ ಮೂಲಕ ಚಿನ್ನದ ಪದಕಕ್ಕೆ ಮತ್ತಷ್ಟು ಹತ್ತಿರವಾಗಿದ್ದಾರೆ. ಮಹಿಳಾ ಸಿಂಗಲ್ಸ್‌ನ ಸೆಮಿಫೈನಲ್ ಪಂದ್ಯದಲ್ಲಿ ಪಿ.ವಿ. ಸಿಂಧು, ಸಿಂಗಪುರದ ಯೊ ಜಿಯಾ ಮಿನ್ ಎದುರು 21-19, 21-17 ನೇರ ಗೇಮ್‌ಗಳಲ್ಲಿ ಗೆಲುವು ದಾಖಲಿಸುವ ಮೂಲಕ ಫೈನಲ್ ಪ್ರವೇಶಿಸಿದ್ದಾರೆ.
Commonwealth Games: ಕಂಚಿನ ಪದಕಕ್ಕೆ ಮುತ್ತಿಕ್ಕಿದ ಭಾರತ ಮಹಿಳಾ ಹಾಕಿ ತಂಡ
ಸದ್ಯ ಭಾರತ 15 ಚಿನ್ನ, 11 ಬೆಳ್ಳಿ, 17 ಕಂಚಿನ ಪದಕದೊಂದಿಗೆ ಒಟ್ಟು 43 ಅಂಕಗಳ ಸಹಿತ 5ನೇ ಸ್ಥಾನದಲ್ಲಿದ್ದರೇ, ಆಸ್ಟ್ರೇಲಿಯಾ, 60 ಚಿನ್ನ, 48 ಬೆಳ್ಳಿ ಹಾಗೂ 51 ಕಂಚಿನ ಸಹಿತ ಒಟ್ಟು 159 ಪದಕಗಳೊಂದಿಗೆ ಮೊದಲ ಸ್ಥಾನದಲ್ಲಿದೆ.