BWF World Championships ಲಕ್ಷ್ಯ ಮಣಿಸಿ ಪ್ರಣಯ್ ಕ್ವಾರ್ಟರ್‌ಗೆ ಲಗ್ಗೆ
ಬ್ಯಾಡ್ಮಿಂಟನ್ ವಿಶ್ವ ಚಾಂಪಿಯನ್‌ಶಿಪ್‌ನ ಪ್ರಣಯ್ ಕ್ವಾರ್ಟರ್ ಫೈನಲ್‌ಗೆ ಲಗ್ಗೆ
ಲಕ್ಷ್ಯ ಸೆನ್ ಎದುರು ರೋಚಕ ಗೆಲುವು ಸಾಧಿಸಿದ ಪ್ರಣಯ್
ಮಹಿಳಾ ಸಿಂಗಲ್ಸ್‌ನಲ್ಲಿ ಸೈನಾ ನೆಹ್ವಾಲ್ ಹೋರಾಟ ಅಂತ್ಯ
ಟೋಕಿಯೋ(ಆ.26): ಬ್ಯಾಡ್ಮಿಂಟನ್ ವಿಶ್ವ ಚಾಂಪಿಯನ್‌ಶಿಪ್‌ನ ಪುರುಷರ ಸಿಂಗಲ್ಸ್ ಪ್ರಿ ಕ್ವಾರ್ಟರ್ ಫೈನಲ್‌ನಲ್ಲಿ ಭಾರತದ ತಾರಾ ಶಟ್ಲರ್‌ಗಳ ನಡುವೆ ಪೈಪೋಟಿ ಏರ್ಪಟ್ಟಿತ್ತು. ಕಳೆದ ಆವೃತ್ತಿಯಲ್ಲಿ ಕಂಚು ಗೆದ್ದಿದ್ದ ಲಕ್ಷ್ಯ ಸೇನ್ ಮತ್ತು ಎಚ್.ಎಸ್.ಪ್ರಣಯ್ ಪರಸ್ಪರ ಮುಖಾಮುಖಿಯಾಗಿದ್ದರು. ಸೇನ್ ವಿರುದ್ಧ 17-21, 21-16, 21-17 ಗೇಮ್‌ಗಳಲ್ಲಿ ಗೆದ್ದ ಪ್ರಣಯ್ ಕ್ವಾರ್ಟರ್ ಫೈನಲ್‌ಗೆ ಲಗ್ಗೆಯಿಟ್ಟರು.
ವಿಶ್ವ ನಂ.18 ಪ್ರಣಯ್‌ಗೆ 20ರ ಹರೆಯದ ಸೇನ್ ವಿರುದ್ಧ ಇದು 4 ಮುಖಾಮುಖಿಗಳಲ್ಲಿ 2ನೇ ಗೆಲುವು. ಭಾರತದ ಥಾಮಸ್ ಕಪ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಪ್ರಣಯ್‌ಗೆ ಕ್ವಾರ್ಟರ್ ಫೈನಲ್‌ನಲ್ಲಿ ಚೀನಾದ ಜುನ್ ಪೆಂಗ್ ಎದುರಾಗಲಿದ್ದಾರೆ.
ಸೈನಾಗೆ ಶಾಕ್: ಮಹಿಳಾ ಸಿಂಗಲ್ಸ್‌ನ ಪ್ರಿ ಕ್ವಾರ್ಟರ್ ಫೈನಲ್‌ನಲ್ಲಿ ಮಾಜಿ ಒಲಿಂಪಿಕ್ಸ್ ಕಂಚು ವಿಜೇತೆ ಸೈನಾ ನೆಹ್ವಾಲ್ ಥಾಯ್ಲೆಂಡ್‌ನ ಬುಸಾನನ್ ವಿರುದ್ಧ 17-21, 21-16, 13-21 ಗೇಮ್‌ಗಳಲ್ಲಿ ಪರಾಭವಗೊಂಡು ನಿರಾಸೆ ಅನುಭವಿಸಿದರು. ಮೊದಲ ಸುತ್ತಿನಲ್ಲಿ ಸುಲಭ ಗೆಲುವು ಸಾಧಿಸಿದ್ದ ಸೈನಾಗೆ 2ನೇ ಸುತ್ತಿನಲ್ಲಿ ಬೈ ಸಿಕ್ಕಿತ್ತು.
BWF World Championships: ಲಕ್ಷ್ಯ ಸೆನ್, ಪ್ರಣಯ್ ಪ್ರಿ ಕ್ವಾರ್ಟರ್‌ಗೆ ಲಗ್ಗೆ
ಡಬಲ್ಸ್‌ನಲ್ಲಿ ಮುನ್ನಡೆ: ಪುರುಷರ ಸಿಂಗಲ್ಸ್ 2ನೇ ಸುತ್ತಲ್ಲಿ ಅರ್ಜುನ್-ಧೃವ್ ಕಪಿಲಾ ಸಿಂಗಾಪೂರದ ಟೆರ್ರಿ ಹೀ-ಲೋ ಲೀನ್ ಹೀನ್ ಜೋಡಿ ವಿರುದ್ಧ 18-21, 21-15, 21-16 ಗೇಮ್‌ಗಳಲ್ಲಿ ಗೆದ್ದು ಇದೇ ಮೊದಲ ಬಾರಿಗೆ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕ್ವಾರ್ಟರ್ ಫೈನಲ್‌ಗೇರಿದರು. ಇನ್ನು ಸಾತ್ವಿಕ್ ರಂಕಿರೆಡ್ಡಿ-ಚಿರಾಗ್ ಶೆಟ್ಟಿಡೆನ್ಮಾರ್ಕ್ನ ಜೆಪ್ಪಾ ಬೇ-ಲಾಸೆ ಮೊಲ್ಹೆಡೆ ವಿರುದ್ಧ 21-12, 21-10 ಗೇಮ್‌ಗಳಲ್ಲಿ ಸುಲಭ ಜಯ ಸಾಧಿಸಿ ಅಂತಿಮ 8ರ ಘಟ್ಟಪ್ರವೇಶಿಸಿದರು.
ಭಾರತೀಯ ಫುಟ್ಬಾಲ್‌ಗೆ ಶಾಸಕ ಹ್ಯಾರಿಸ್ ಉಪಾಧ್ಯಕ್ಷ?
ನವದೆಹಲಿ: ಜಾಗತಿಕ ಫುಟ್ಬಾಲ್ ಆಡಳಿತ ಸಮಿತಿ(ಫಿಫಾ)ಯಿಂದ ನಿಷೇಧಕ್ಕೊಳಗಾಗಿರುವ ಅಖಿಲ ಭಾರತ ಫುಟ್ಬಾಲ್ ಫೆಡರೇಷನ್(ಎಐಎಫ್‌ಎಫ್)ನ ಚುನಾವಣೆ ಸೆಪ್ಟೆಂಬರ್ 2ಕ್ಕೆ ನಿಗದಿಯಾಗಿದ್ದು, ರಾಜಕೀಯ ನಾಯಕರನ್ನು ಒಳಗೊಂಡ ಬಣವೊಂದು ಅವಿರೋಧವಾಗಿ ಆಯ್ಕೆಯಾಗುವ ಸಾಧ್ಯತೆ ಇದೆ.
ಮಾಧ್ಯಮಗಳ ವರದಿ ಪ್ರಕಾರ, ಕರ್ನಾಟಕ ರಾಜ್ಯ ಫುಟ್ಬಾಲ್ ಸಂಸ್ಥೆ(ಕೆಎಸ್‌ಎಫ್‌ಎ) ಅಧ್ಯಕ್ಷ, ಬೆಂಗಳೂರಿನ ಶಾಂತಿನಗರದ ಶಾಸಕ ಎನ್.ಎ.ಹ್ಯಾರಿಸ್ ಎಐಎಫ್‌ಎಫ್‌ನ ಉಪಾಧ್ಯಕ್ಷರಾಗಿ ಆಯ್ಕೆಯಾಗಲಿದ್ದಾರೆ ಎನ್ನಲಾಗಿದೆ. ಎಐಎಫ್‌ಎಫ್‌ನ ನೂತನ ಅಧ್ಯಕ್ಷರಾಗಿ ಭಾರತದ ಮಾಜಿ ಗೋಲ್‌ಕೀಪರ್, ಬಂಗಾಳದ ಬಿಜೆಪಿ ನಾಯಕ ಕಲ್ಯಾಣ್ ಚೌಬೆ ಅವಿರೋಧ ಆಯ್ಕೆಯಾಗುವ ಸಾಧ್ಯತೆ ಇದೆ ಎಂದು ಸುದ್ದಿಯಾಗಿದೆ. ರಾಜ್ಯಗಳ ಫುಟ್ಬಾಲ್ ಸಂಸ್ಥೆಗಳು ಅಭ್ಯರ್ಥಿಗಳನ್ನು ನಾಮನಿರ್ದೇಶನ ಮಾಡಲಿದ್ದು, ಮತದಾನ ಪಟ್ಟಿಯಲ್ಲಿ ಎಲ್ಲಾ ರಾಜ್ಯ/ಕೇಂದ್ರಾಡಳಿತ ಪ್ರದೇಶಗಳ 36 ಸದಸ್ಯರು ಇರಲಿದ್ದಾರೆ.