ಭಾರತದ ತಾರಾ ಬ್ಯಾಡ್ಮಿಂಟನ್ ಪಟು ಪಿ.ವಿ ಸಿಂಧು ಇದೇ ಡಿಸೆಂಬರ್ 22ರಂದು ಹೈದರಾಬಾದ್ ಉದ್ಯಮಿ ಜತೆ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.
ಹೈದರಾಬಾದ್: ಭಾರತದ ತಾರಾ ಬ್ಯಾಡ್ಮಿಂಟನ್ ಪಟು, ಎರಡು ಒಲಿಂಪಿಕ್ಸ್ ಪದಕ ವಿಜೇತ ಆಟಗಾರ್ತಿ ಪಿ.ವಿ. ಸಿಂಧು ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಇದೀಗ 29 ವರ್ಷದ ಸಿಂಧು, ಹೈದರಾಬಾದ್ ಮೂಲದ ಉದ್ಯಮಿಯೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಡಲು ಮುಂದಾಗಿದ್ದಾರೆ. ಇದೇ ಡಿಸೆಂಬರ್ 22ರಂದು ಹೈದರಾಬಾದ್ ಮೂಲದ ಉದ್ಯಮಿ ವೆಂಕಟ ದತ್ತ ಸಾಯಿ ಅವರೊಂದಿಗೆ ಉದಯ್‌ಪುರದಲ್ಲಿ ಸಿಂಧು ಮದುವೆಯಾಗಲಿದ್ದಾರೆ ಎಂದು ವರದಿಯಾಗಿದೆ. ವೆಂಕಟ ದತ್ತ ಸಾಯಿ ಪೋಸಿಡೆಕ್ಸ್ ಟೆಕ್ನಾಲಜೀಸ್ ಕಂಪನಿಯಲ್ಲಿ ಎಕ್ಸಿಕ್ಯೂಟಿವ್ ಡೈರೆಕ್ಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಇನ್ನು ಡಿಸೆಂಬರ್ 24ರಂದು ಹೈದರಾಬಾದ್‌ನಲ್ಲಿಯೂ ಮದುವೆ ಅರತಕ್ಷತೆ ನಡೆಯಲಿದೆ ಎಂದು ಪಿ.ವಿ. ಸಿಂಧು ಕುಟುಂಬದವರು ಖಚಿತಪಡಿಸಿದ್ದಾರೆ. ಪಿ.ವಿ ಸಿಂಧು ಜನವರಿಯಲ್ಲಿ ಮತ್ತೆ ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ ಟೂರ್ನಿಗೆ ಮರಳಲಿದ್ದು, ಮುಂಬರುವ ಟೂರ್ನಿಯನ್ನು ಗಮನದಲ್ಲಿಟ್ಟುಕೊಂಡು ಮದುವೆ ದಿನಾಂಕವನ್ನು ನಿಗದಿಪಡಿಸಲಾಗಿದೆ.
ಟೀಂ ಇಂಡಿಯಾ, ಆಸ್ಟ್ರೇಲಿಯಾಗೆ ಏಕಕಾಲದಲ್ಲಿ ಶಾಕ್ ಕೊಟ್ಟ ದಕ್ಷಿಣ ಆಫ್ರಿಕಾ!
ಪಿವಿ ಸಿಂಧು ಹಾಗೂ ವೆಂಕಟ ದತ್ತ ಅವರ ಕುಟುಂಬದವರು ಪರಸ್ಪರ ಪರಿಚಿತರು. ಹೀಗಿದ್ದೂ ಕಳೆದ ಒಂದು ತಿಂಗಳ ಹಿಂದಷ್ಟೇ ಮದುವೆ ವಿಚಾರ ಅಂತಿಮವಾಗಿದೆ ಎಂದು ವರದಿಯಾಗಿದೆ. ಜನವರಿಯಲ್ಲಿ ಸಾಕಷ್ಟು ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಸಿಂಧು ಪಾಲ್ಗೊಳ್ಳುತ್ತಿರುವುದರಿಂದಾಗಿ, ಡಿಸೆಂಬರ್‌ನಲ್ಲಿ ಮದುವೆ ದಿನಾಂಕ ನಿಗದಿಪಡಿಸಲಾಗಿದೆ ಎಂದು ವರದಿಯಾಗಿದೆ.
ಭಾರತದ ತಾರಾ ಬ್ಯಾಡ್ಮಿಂಟನ್ ತಾರೆಯಾಗಿರುವ ಪಿವಿ ಸಿಂಧು, 5 ಬಾರಿ ವಿಶ್ವ ಚಾಂಪಿಯನ್‌ಶಿಪ್ ಪದಕ ತಮ್ಮದಾಗಿಸಿಕೊಂಡಿದ್ದಾರೆ. ಈ ಪೈಕಿ 2019ರ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ಸಿಂಧು ಚಿನ್ನದ ಪದಕ ಜಯಿಸುವ ಮೂಲಕ ಇತಿಹಾಸ ನಿರ್ಮಿಸಿದ್ದರು. ಇದಷ್ಟೇ ಅಲ್ಲದೇ 2016ರ ರಿಯೋ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಹಾಗೂ 2020ರ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ತಮ್ಮದಾಗಿಸಿಕೊಂಡಿದ್ದರು. ಇನ್ನು ಇತ್ತೀಚೆಗಷ್ಟೇ ನಡೆದ ಸಯ್ಯದ್ ಮೋದಿ ಇಂಟರ್‌ನ್ಯಾಷನಲ್ ಬ್ಯಾಡ್ಮಿಂಟನ್ ಟೂರ್ನಿಯ ಮಹಿಳಾ ಸಿಂಗಲ್ಸ್‌ನಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸುವ ಮೂಲಕ ಪದಕದ ಬರ ನೀಗಿಸಿಕೊಳ್ಳುವಲ್ಲಿ ಸಿಂಧು ಯಶಸ್ವಿಯಾಗಿದ್ದರು.
