ಮುಂಬೈ(ಡಿ.22): ಭಾರತ ಸೇರಿ ವಿಶ್ವದ ಅಗ್ರ ಬ್ಯಾಡ್ಮಿಂಟನ್‌ ತಾರೆಯರು ಶನಿವಾರದಿಂದ ಆರಂಭಗೊಳ್ಳುವ 4ನೇ ಆವೃತ್ತಿಯ ಪ್ರೀಮಿಯರ್‌ ಬ್ಯಾಡ್ಮಿಂಟನ್‌ ಲೀಗ್‌(ಪಿಬಿಎಲ್‌)ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. 

9 ತಂಡಗಳು ಪ್ರಶಸ್ತಿಗಾಗಿ ಸೆಣಸಲಿದ್ದು, ತಲಾ 10 ಆಟಗಾರರಂತೆ ಒಟ್ಟು 90 ಶಟ್ಲರ್‌ಗಳು ಕಣದಲ್ಲಿದ್ದಾರೆ. 17 ದೇಶಗಳ ಶಟ್ಲರ್‌ಗಳು ಪಿಬಿಎಲ್‌ನಲ್ಲಿ ಆಡಲಿದ್ದು, ಒಲಿಂಪಿಕ್‌ ಹಾಗೂ ವಿಶ್ವ ಚಾಂಪಿಯನ್‌ ಸ್ಪೇನ್‌ನ ಕ್ಯಾರೋಲಿನಾ ಮರಿನ್‌, ಭಾರತದ ತಾರೆಗಳಾದ ಪಿ.ವಿ.ಸಿಂಧು, ಸೈನಾ ನೆಹ್ವಾಲ್‌, ಕಿದಾಂಬಿ ಶ್ರೀಕಾಂತ್‌ ಪ್ರಮುಖ ಆಕರ್ಷಣೆಯಾಗಿದ್ದಾರೆ. ಲೀಗ್‌ನಲ್ಲಿ ಒಟ್ಟು 8 ಒಲಿಂಪಿಕ್‌ ಪದಕ ವಿಜೇತರು ಆಡಲಿರುವುದು ವಿಶೇಷ. ಇದೇ ವೇಳೆ ಮೊದಲ ಬಾರಿಗೆ ಚೀನಾ ಆಟಗಾರರು ಸಹ ಕಾಣಿಸಿಕೊಳ್ಳಲಿದ್ದಾರೆ.

ಮುಂಬೈನಲ್ಲಿ ಮೊದಲ ಚರಣ ನಡೆಯಲಿದ್ದು, ಒಟ್ಟು 5 ನಗರಗಳು ಪಂದ್ಯಗಳಿಗೆ ಆತಿಥ್ಯ ವಹಿಸಲಿವೆ. ಹೈದರಾಬಾದ್‌, ಪುಣೆ, ಅಹಮದಾಬಾದ್‌ ಚರಣಗಳ ಬಳಿಕ ಜ.7ರಿಂದ ಬೆಂಗಳೂರು ಚರಣ ಆರಂಭಗೊಳ್ಳಲಿದೆ. ಜ.11, 12ರಂದು ಸೆಮಿಫೈನಲ್‌, ಜ.13ರಂದು ನಡೆಯಲಿರುವ ಫೈನಲ್‌ ಪಂದ್ಯಕ್ಕೂ ಬೆಂಗಳೂರು ವೇದಿಕೆ ಒದಗಿಸಲಿದೆ. ಪುಣೆ ಹಾಗೂ ಅಹಮದಾಬಾದ್‌ನಲ್ಲಿ ಮೊದಲ ಬಾರಿಗೆ ಪಂದ್ಯಗಳು ನಡೆಯಲಿವೆ.

ಒಟ್ಟು 6 ಕೋಟಿ ಬಹುಮಾನ

ಪಿಬಿಎಲ್‌ 4ನೇ ಆವೃತ್ತಿಯ ಒಟ್ಟು ಪ್ರಶಸ್ತಿ ಮೊತ್ತ 6 ಕೋಟಿಯಾಗಿದ್ದು, ಚಾಂಪಿಯನ್‌ ಆಗುವ ತಂಡ 3 ಕೋಟಿ ಪಡೆದುಕೊಳ್ಳಲಿದೆ. ರನ್ನರ್‌-ಅಪ್‌ಗೆ 1.5 ಕೋಟಿ, 3ನೇ ಹಾಗೂ 4ನೇ ಸ್ಥಾನ ಪಡೆಯುವ ತಂಡಗಳಿಗೆ ತಲಾ 75 ಲಕ್ಷ ಬಹುಮಾನ ದೊರೆಯಲಿದೆ.

ಪಿಬಿಎಲ್‌ 4ರ ತಂಡಗಳು    

ತಂಡ                  ನಾಯಕ/ನಾಯಕಿ
ಬೆಂಗಳೂರು ರಾಪ್ಟ​ರ್ಸ್    ಕಿದಂಬಿ ಶ್ರೀಕಾಂತ್‌
ಹೈದರಾಬಾದ್‌ ಹಂಟ​ರ್ಸ್  ಪಿ.ವಿ.ಸಿಂಧು
ಮುಂಬೈ ರಾಕೆಟ್ಸ್‌ ಲೀ ಯೊಂಗ್‌ ಡೇ
ನಾರ್ಥ್ ಈಸ್ಟರ್ನ್‌ ವಾರಿಯ​ರ್ಸ್ ಸೈನಾ ನೆಹ್ವಾಲ್‌
ಪುಣೆ 7 ಏಸಸ್‌  ಕ್ಯಾರೋಲಿನಾ ಮರಿನ್‌
ಚೆನ್ನೈ ಸ್ಮ್ಯಾಷರ್ಸ್  ಸುಂಗ್‌ ಜಿ ಹ್ಯುನ್‌
ಅಹಮದಾಬಾದ್‌ ಸ್ಮ್ಯಾಷರ್ಸ್ ಮಾಸ್ಟರ್ಸ್  ವಿಕ್ಟರ್‌ ಅಕ್ಸೆಲ್ಸನ್‌
ಅವಧ್‌ ವಾರಿಯ​ರ್ಸ್ ಸೊನ್‌ ವಾನ್‌ ಹೊ
ಡೆಲ್ಲಿ ಡ್ಯಾಶ​ರ್ಸ್  ಎಚ್‌.ಎಸ್‌.ಪ್ರಣಯ್‌

 ಅಂಕಿ-ಅಂಶ:

90 - ಲೀಗ್‌ನಲ್ಲಿ ಆಡಲಿರುವ ಒಟ್ಟು ಆಟಗಾರರು

17 - ಲೀಗ್‌ನಲ್ಲಿ 17 ದೇಶಗಳ ಆಟಗಾರರಿದ್ದಾರೆ

08 - 8 ಒಲಿಂಪಿಕ್ಸ್‌ ಪದಕ ವಿಜೇತರು ಕಣದಲ್ಲಿದ್ದಾರೆ