Asianet Suvarna News Asianet Suvarna News

ಏಷ್ಯಾಡ್’ನಲ್ಲಿ ಭಾರತ ಸಾರ್ವಕಾಲಿಕ ದಾಖಲೆ..!

ಶುಕ್ರವಾರ ನಡೆದ ಸೈಕ್ಲಿಂಗ್ ಸ್ಪರ್ಧೆಯಲ್ಲಿ ಭಾರತದ ಆಟಗಾರರು 1 ಬೆಳ್ಳಿ ಹಾಗೂ 2 ಕಂಚು ಜಯಿಸಿದರು. ಹಾಕಿಯಲ್ಲಿ ಭಾರತದ ವನಿತೆಯರು ಜಪಾನ್ ವಿರುದ್ಧ ಸೋತು ಬೆಳ್ಳಿಗೆ ತೃಪ್ತರಾದರು. ಬಾಕ್ಸರ್ ವಿಕಾಸ್ ಕೃಷನ್ ಕಂಚಿಗೆ ಸಮಾಧಾನಗೊಂಡರೆ, ಸ್ಕ್ವಾಶ್‌ನಲ್ಲಿ ಪುರುಷರು ಕಂಚಿಗೆ ಕೊರಳೊಡ್ಡಿದರು. ಇದರೊಂದಿಗೆ ಕೂಟದ 13ನೇ ದಿನ ಭಾರತದ ಆಟಗಾರರು 2 ಬೆಳ್ಳಿ, 4 ಕಂಚು ಸೇರಿದಂತೆ 6 ಪದಕಗಳನ್ನು ತಮ್ಮದಾಗಿಸಿಕೊಂಡಿದ್ದು, ಒಟ್ಟು ಪದಕಗಳ ಸಂಖ್ಯೆ 65ಕ್ಕೇರಿದೆ. 

Asian Games 2018 India equals best medal haul at Asiad
Author
Jakarta, First Published Sep 1, 2018, 12:35 PM IST

ಬೆಂಗಳೂರು[ಸೆ.01]: ಇಂಡೋನೇಷ್ಯಾದಲ್ಲಿ ನಡೆಯುತ್ತಿರುವ 18ನೇ ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಕ್ರೀಡಾಪಟುಗಳು ನಿರೀಕ್ಷೆಗೂ ಮೀರಿ, ಅಭೂತಪೂರ್ವ ಪ್ರದರ್ಶನ ನೀಡಿದ್ದು ಇತಿಹಾಸದಲ್ಲೇ ಗರಿಷ್ಠ ಪದಕಗಳನ್ನು ಕೊಳ್ಳೆ ಹೊಡೆದಿದ್ದಾರೆ.

ಶುಕ್ರವಾರ ನಡೆದ ಸೈಕ್ಲಿಂಗ್ ಸ್ಪರ್ಧೆಯಲ್ಲಿ ಭಾರತದ ಆಟಗಾರರು 1 ಬೆಳ್ಳಿ ಹಾಗೂ 2 ಕಂಚು ಜಯಿಸಿದರು. ಹಾಕಿಯಲ್ಲಿ ಭಾರತದ ವನಿತೆಯರು ಜಪಾನ್ ವಿರುದ್ಧ ಸೋತು ಬೆಳ್ಳಿಗೆ ತೃಪ್ತರಾದರು.
ಬಾಕ್ಸರ್ ವಿಕಾಸ್ ಕೃಷನ್ ಕಂಚಿಗೆ ಸಮಾಧಾನಗೊಂಡರೆ, ಸ್ಕ್ವಾಶ್‌ನಲ್ಲಿ ಪುರುಷರು ಕಂಚಿಗೆ ಕೊರಳೊಡ್ಡಿದರು. ಇದರೊಂದಿಗೆ ಕೂಟದ 13ನೇ ದಿನ ಭಾರತದ ಆಟಗಾರರು 2 ಬೆಳ್ಳಿ, 4 ಕಂಚು
ಸೇರಿದಂತೆ 6 ಪದಕಗಳನ್ನು ತಮ್ಮದಾಗಿಸಿಕೊಂಡಿದ್ದು, ಒಟ್ಟು ಪದಕಗಳ ಸಂಖ್ಯೆ 65ಕ್ಕೇರಿದೆ. ಇದರೊಂದಿಗೆ ಪದಕ ಪಟ್ಟಿಯಲ್ಲಿ ಭಾರತ 8ನೇ ಸ್ಥಾನ ಪಡೆದುಕೊಂಡಿದೆ.

ಅತಿ ಹೆಚ್ಚು ಪದಕ: 2010ರಲ್ಲಿ ಚೀನಾದಲ್ಲಿ ನಡೆದಿದ್ದ 16ನೇ ಏಷ್ಯನ್ ಗೇಮ್ಸ್‌ನಲ್ಲಿ 65 ಪದಕಗಳನ್ನು ಗೆದ್ದಿದ್ದೇ ಭಾರತದ ದಾಖಲೆ ಆಗಿದೆ. ಈ ಬಾರಿ ಭಾರತ ಈಗಾಗಲೇ 13 ಚಿನ್ನ ಸೇರಿ 65 ಪದಕಗಳನ್ನು ಬಾಚಿಕೊಂಡಿದ್ದು, ಸಾರ್ವಕಾಲಿಕ ದಾಖಲೆ ನಿರ್ಮಿಸುವುದು ಖಚಿತವಾಗಿದೆ. ಏಕೆಂದರೆ ಬಾಕ್ಸರ್ ಅಮಿತ್ ಫಂಗಲ್ ಫೈನಲ್ ಪ್ರವೇಶಿಸಿದ್ದು, ಬೆಳ್ಳಿ ಖಚಿತಗೊಂಡಿದೆ. ಇನ್ನು ಮಹಿಳಾ ಸ್ಕ್ವಾಶ್ ತಂಡ ಸಹ ಅಂತಿಮ ಸುತ್ತಿಗೇರಿದ್ದು, ಇಲ್ಲೂ ಮತ್ತೊಂದು ಪದಕ ಭಾರತಕ್ಕೆ ಪಕ್ಕ ಆಗಿದೆ. 

ಇನ್ನು 2014ರ ಇಂಚಾನ್ ಏಷ್ಯನ್ ಗೇಮ್ಸ್‌ನಲ್ಲಿ ಭಾರತ 11 ಚಿನ್ನ, 10 ಬೆಳ್ಳಿ, 36 ಕಂಚು ಸೇರಿ ೫೭ ಪದಕ ಜಯಿಸಿತ್ತು. 1982ರಲ್ಲಿ ದೆಹಲಿಯಲ್ಲಿ ನಡೆದಿದ್ದ ಕೂಟದಲ್ಲೂ ಭಾರತ ಕ್ರೀಡಾಪಟುಗಳು 57 ಪದಕ ಜಯಿಸಿದ್ದರೂ, ಗೆದ್ದ ಚಿನ್ನದ ಪದಕಗಳ ಸಂಖ್ಯೆ 13 ಆಗಿತ್ತು. 2006ರ ದೋಹಾ ಏಷ್ಯಾಡ್’ನಲ್ಲಿ 53 ಹಾಗೂ 1962ರ ಜರ್ಕಾತ ಏಷ್ಯಾಡ್‌ನಲ್ಲಿ 52 ಪದಕ ಜಯಿಸಿತು.

ನಿರೀಕ್ಷಿಸದ ಆಟಗಳಲ್ಲಿ ಪದಕ: ಅದರಲ್ಲೂ ಚಿನ್ನ ನಿರೀಕ್ಷಿಸಿದ್ದ ಕಬ್ಬಡಿ, ಹಾಕಿ, ಬಾಕ್ಸಿಂಗ್‌ಯಲ್ಲಿ ಭಾರತದ ಆಟಗಾರರು ಕೇವಲ ಕಂಚು, ಬೆಳ್ಳಿಗೆ ಕೊರಳೊಡ್ಡುವ ಮೂಲಕ ನಿರಾಸೆ ಮೂಡಿಸಿದರು.
ಆದರೆ, ಬ್ರಿಡ್ಜ್ (ಇಸ್ಪೀಟ್), ಈಕ್ವೇಸ್ಟ್ರಿಯನ್ (ಕುದುರೆ ಸವಾರಿ), ಟೇಬಲ್ ಟೆನಿಸ್, ಸೈಲಿಂಗ್ (ಹಾಯಿದೋಣಿ)ನಲ್ಲಿ ಭಾರತದ ಕ್ರೀಡಾಪಟುಗಳು ಪದಕ ಗೆಲ್ಲುವ ಮೂಲಕ ಭಾರತದ ಖಾತೆಗೆ
ಪದಕಗಳು ಜಮಾವಣೆಗೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಅಥ್ಲೀಟ್‌ಗಳ ಪ್ರಾಬಲ್ಯ
ಇನ್ನು ಅಥ್ಲೆಟಿಕ್ಸ್‌ನಲ್ಲಿ ಈ ಬಾರಿ ಭಾರತೀಯ ಅಥ್ಲೀಟ್‌ಗಳು ಪ್ರಾಬಲ್ಯ ಮರೆದಿದ್ದು 7 ಚಿನ್ನ, 10 ಬೆಳ್ಳಿ ಹಾಗೂ 2 ಕಂಚು ಸೇರಿ ಒಟ್ಟು 19 ಪದಕಗಳನ್ನು ಬಾಚಿಕೊಂಡಿದ್ದು, ಇದು ಕೂಟದಲ್ಲಿ ಭಾರತದ ಅಥ್ಲೀಟ್ಸ್‌ಗಳ ಗರಿಷ್ಠ 3ನೇ ಪದಕ ಸಾಧನೆಯಾಗಿದೆ. 1951ರಲ್ಲಿ ದೆಹಲಿಯಲ್ಲಿ ನಡೆದ ಕೂಟದಲ್ಲಿ ಅಥ್ಲೆಟಿಕ್ಸ್‌ನಲ್ಲಿ 10 ಚಿನ್ನ ಸೇರಿದಂತೆ 30 ಪದಕಗಳನ್ನು ಭಾರತ ಜಯಿಸಿತ್ತು. 1982ರಲ್ಲಿ ನಡೆದ ಕೂಟದಲ್ಲಿ 4 ಚಿನ್ನ ಸೇರಿ 20 ಪದಕ ಜಯಿಸಿತ್ತು.

3ನೇ ಸ್ಥಾನ: ಈ ಬಾರಿ ಅಥ್ಲೆಟಿಕ್ಸ್‌ನಲ್ಲಿ ಭಾರತ 3ನೇ ಸ್ಥಾನ ಪಡೆದುಕೊಂಡಿದೆ. 12 ಚಿನ್ನ, 12 ಬೆಳ್ಳಿ, 9 ಕಂಚಿನೊಂದಿಗೆ ಚೀನಾದ ಅಥ್ಲೀಟ್‌ಗಳು ಮೊದಲ ಸ್ಥಾನದಲ್ಲಿದ್ದರೆ, 12 ಚಿನ್ನ, 6 ಬೆಳ್ಳಿ
ಹಾಗೂ 7 ಕಂಚಿನೊಂದಿಗೆ ಬಹ್ರೇನ್ ಅಥ್ಲೀಟ್’ಗಳು 2ನೇ ಸ್ಥಾನದಲ್ಲಿದ್ದಾರೆ.

ಭಾರತದ ಟಾಪ್ 4 ಸಾಧನೆ

ವರ್ಷ ಸ್ಥಳ ಚಿನ್ನ ಬೆಳ್ಳಿ ಕಂಚು ಒಟ್ಟು
2018 ಜಕಾರ್ತ 13 23 29 65
2010 ಗುವಾಂಗ್‌ಜೌ 14 17 34 65
1982 ನವದೆಹಲಿ 13 19 25 57
2014 ಇಂಚಾನ್ 11 10 36 57

 

Follow Us:
Download App:
  • android
  • ios