ಚಂಡಿಘಡ(ಆ.30): ಏಷ್ಯನ್ ಗೇಮ್ಸ್ ಕ್ರೀಡಾಕೂಟದ ಪುರುಷರ ತ್ರಿಬಲ್ ಜಂಪ್‌ನಲ್ಲಿ ಭಾರದದ ಅರ್ಪಿಂದರ್ ಸಿಂಗ್ ಚಿನ್ನದ ಪದಕ ಗೆದ್ದು ಐತಿಹಾಸಿಕ ಸಾಧನೆ ಮಾಡಿದ್ದರು. ಅರ್ಪಿಂದರ್ ಚಿನ್ನ ಗೆಲ್ಲೋ ಮೂಲಕ ಭಾರತ ಒಟ್ಟು 11 ಚಿನ್ನದ ಪದಕ ಗೆದ್ದ ಸಾಧನೆ ಮಾಡಿತು.

ಅರ್ಪಿಂದರ್ ಚಿನ್ನದ ಸಾಧನೆ ಹಿಂದಿನ ಕತೆ ಮನ ಮಿಡಿಯುವಂತಿದೆ. ಅರ್ಪಿಂದರ್ ತಂದೆ ಜಗ್ಬೀರ್ ಸಿಂಗ್ ಭಾರತೀಯ ಸೇನೆಯಲ್ಲಿ ಹವಲ್ದಾರ್ ಆಗಿ ಸೇವೆ ಸಲ್ಲಿಸಿ 1990ರಲ್ಲಿ ನಿವೃತ್ತಿಯಾಗಿದ್ದಾರೆ. ಜಗ್ಬೀರ್ ಸಿಂಗ್ ಪಿಂಚಣಿಯೆ ಈ ಕುಟುಂಬದ ಜೀವನ ನಿರ್ವಹಣೆ.

ಮಗ ಅರ್ಪಿಂದರ್ ಚಿಕ್ಕಂದಿನಿಂದಲೇ ಅಥ್ಲೆಟಿಕ್ಸ್‌ನಲ್ಲಿ ಹೆಚ್ಚಿನ ಆಸಕ್ತಿ ತೋರಿದ್ದರು. ಹೀಗಾಗಿ ಮಗನನ್ನ ಕ್ರೀಡಾಪಟು ಮಾಡಬೇಕೆಂಬ ಕನಸಿಗೆ ಆರ್ಥಿಕ ಸಂಕಷ್ಠ ಎದುರಾಗಿತ್ತು. 2014ರ ಕಾಮನ್‌ವೆಲ್ತ್ ಗೇಮ್ಸ್ ಕ್ರೀಡಾಕೂಟದ ತರಬೇತಿಗೆ ಅರ್ಪಿಂದರ್ ತಂದೆ ಬಳಿ ಹಣ ಇರಲಿಲ್ಲ.

ಅಂತಾರಾಷ್ಟ್ರೀಯ ಕ್ರೀಡಾಕೂಟದಲ್ಲಿ ಭಾಗವಹಿಸಲು ಅತ್ಯುತ್ತಮ ತರಬೇತಿ ಅಗತ್ಯ. 2014ರ ವೇಳೆ ಅರ್ಪಿಂದರ್ ಅಂತಾರಾಷ್ಟ್ರೀ ಪದಕ ಗೆದ್ದಿರಲಿಲ್ಲ. ಹೀಗಾಗಿ ನಮಗೆ ಯಾರು ಕೂಡ ಆರ್ಥಿಕ ಸಹಾಯ ಮಾಡಲು ಮುಂದೆ ಬರಲಿಲ್ಲ. ಹೀಗಾಗಿ ಇರೋ ಜಮೀನನ್ನ ಅಡ ಇಟ್ಟು 5 ಲಕ್ಷ ರೂಪಾಯಿ ಹೊಂದಿಸಿದ್ದರು.

ಇರೋ ಜಮೀನು ಅಡ ಇಟ್ಟು ಮಗನ ತರಬೇತಿ ನಿರ್ವಹಿಸಿದ್ದರು. ಮುಂದೇನು ಅನ್ನೋ ಪ್ರಶ್ನೆಗೆ ತಂದೆ ಜಗ್ಬೀರ್ ಬಳಿ ಉತ್ತರವಿರಲಿಲ್ಲ. ಆದರೆ 2014ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಅರ್ಪಿಂದರ್ ಪದಕ ಗೆಲ್ಲೋ ಮೂಲಕ ಅಡ ಇಟ್ಟ ಜಮೀನು ವಾಪಾಸ್ ಪಡೆಯೋ ಧರ್ಯ ಬಂದಿತ್ತು ಎಂದು ಅರ್ಪಿಂದರ್ ತಂದೆ ಹೇಳಿದ್ದಾರೆ.

ಇದೀಗ 18ನೇ ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಗೆಲ್ಲೋ ಮೂಲಕ ನನ್ನ ಭರವಸೆ ಇಮ್ಮಡಿಗೊಳಿಸಿದ್ದಾನೆ. ಇದೀಗ ಮುಂದೆ ಅರ್ಪಿಂದರ್ ಉಜ್ವಲ ಭವಿಷ್ಯ ಎದ್ದು ಕಾಣುತ್ತಿದೆ ಎಂದಿದ್ದಾರೆ.  ಅರ್ಪಿಂದರ್ ಸಿಂಗ್ ಮನೆ ಅಮೃತಸರದ ಬಳಿಯ ಉಚ್ಚಾ ಕಿಲಾ ಸಮೀಪದಲ್ಲಿದೆ. ಭಾರತ  ಹಾಗೂ ಪಾಕಿಸ್ತಾನ ಗಡಿಯಿಂದ ಕೇವಲ 20 ಕೀಮಿ ಮಾತ್ರ. ಪುಟ್ಟ ಹಳ್ಳಿಯಿಂದ ಬಡತದನಲ್ಲಿ ಮಿಂದೆದ್ದ ಅರ್ಪಿಂದರ್ ಸಿಂಗ್ ಇದೀಗ ದೇಶವೇ ಕೊಂಡಾಡೋ ಸಾಧನೆ ಮಾಡಿದ್ದಾರೆ.