ದುಬೈ(ಸೆ.24): ಪಾಕಿಸ್ತಾನ ವಿರುದ್ಧದ ಏಷ್ಯಾಕಪ್ ಸೂಪರ್ 4 ಹಂತದ ಪಂದ್ಯದಲ್ಲಿ 9  ವಿಕೆಟ್ ಭರ್ಜರಿ ಗೆಲುವು ದಾಖಲಿಸಿದ ಟೀಂ ಇಂಡಿಯಾ ಇದೀಗ ಅಫ್ಘಾನಿಸ್ತಾನ ವಿರುದ್ಧದ ಪಂದ್ಯಕ್ಕೆ ಗೇಮ್ ಪ್ಲಾನ್ ರೂಪಿಸುತ್ತಿದೆ.

ಪಾಕ್ ವಿರುದ್ಧದ ಗೆಲುವಿನಿಂದ ಈಗಾಗಲೇ ಏಷ್ಯಾಕಪ್ ಟೂರ್ನಿಯ ಫೈನಲ್ ಪ್ರವೇಶ ಖಚಿತಪಡಿಸಿಕೊಂಡಿರುವ ಟೀಂ ಇಂಡಿಯಾ ಅಫ್ಘಾನಿಸ್ತಾನ ವಿರುದ್ಧದ ಪಂದ್ಯಕ್ಕೆ ತಂಡದಲ್ಲಿ ಕೆಲ ಬದಲಾವಣೆ ಮಾಡಲು ನಿರ್ಧರಿಸಿದೆ.

ಸತತ ಕ್ರಿಕೆಟ್‌ನಿಂದ ಬಳಲುತ್ತಿರುವ ಟೀಂ ಇಂಡಿಯಾದ ಮೂವರು ಕ್ರಿಕೆಟಿಗರಿಗೆ ವಿಶ್ರಾಂತಿ ನೀಡಲು ಟೀಂ ಇಂಡಿಯಾ ಮುಂದಾಗಿದೆ. ಕನ್ನಡಿಗ ಕೆಎಲ್ ರಾಹುಲ್ ಹಾಗೂ ಮನೀಶ್ ಪಾಂಡೆ ಅಫ್ಘಾನ್ ವಿರುದ್ಧದ ಪಂದ್ಯದಲ್ಲಿ ಅವಕಾಶ ಪಡೆಯೋ ಸಾಧ್ಯತೆ ಹೆಚ್ಚಿದೆ.

ಬೌಲಿಂಗ್ ವಿಭಾಗದಲ್ಲೂ ಒಂದು ಬದಲಾವಣೆ ಮಾಡಲು ಮುಂದಾಗಿದೆ. ಸಿದ್ದಾರ್ಥ್ ಕೌಲ್ ಕೂಡ ಆಡೋ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆಯೋ ಸಾಧ್ಯತೆ ಹೆಚ್ಚಿದೆ. ಈ ಮೂಲಕ ಟೀಂ ಇಂಡಿಯಾ  3 ಬದಲಾವಣೆ ಮಾಡಲಿದೆ.

ಪಾಕ್ ವಿರುದ್ಧ ಭಾರತದ ಭರ್ಜರಿ ಗೆಲುವು ಹಾಗೂ ಬಾಂಗ್ಲಾದೇಶ ವಿರುದ್ಧ ಅಫ್ಘಾನಿಸ್ತಾನ ತಂಡದ ಸೋಲು, ಟೀಂ ಇಂಡಿಯಾ ಫೈನಲ್ ಪ್ರವೇಶವನ್ನ ಖಚಿತಪಡಿಸಿದೆ. ಹೀಗಾಗಿ ಅಫ್ಘಾನ್ ವಿರುದ್ಧದ ಫಲಿತಾಂಶ ಟೀಂ ಇಂಡಿಯಾದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ.