ದುಬೈ(ಸೆ.27): ಏಷ್ಯಾಕಪ್ ಟೂರ್ನಿ ಅಂತಿಮ ಘಟ್ಟ ತಲುಪಿದೆ. ನಾಳೆ(ಸೆ.28) ನಡೆಯಲಿರುವ ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ  ಹಾಗೂ ಬಾಂಗ್ಲಾದೇಶ ಪ್ರಶಸ್ತಿಗಾಗಿ ಹೋರಾಟ ನಡೆಸಲಿದೆ.

ದುಬೈನ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿರುವ ಫೈನಲ್ ಪಂದ್ಯದ ಕುತೂಹಲ ಇಮ್ಮಡಿಯಾಗಿದೆ. 2016ರ ಏಷ್ಯಾಕಪ್ ಫೈನಲ್ ಹೋರಾಟದಲ್ಲಿ ಭಾರತ ಹಾಗೂ ಬಾಂಗ್ಲಾದೇಶ ಮುಖಾಮುಖಿಯಾಗಿತ್ತು. ಇದೀಗ ಮತ್ತೆ ಇದೇ ತಂಡಗಳು ಪ್ರಶಸ್ತಿಗಾಗಿ ಹೋರಾಟ ಮಾಡಲಿದೆ.

ಕಳೆದ ಬಾರಿ ಏಷ್ಯಾಕಪ್ ಫೈನಲ್ ಪಂದ್ಯದ ಸೋಲಿಗೆ ಸೇಡು ತೀರಿಸಿಕೊಳ್ಳಲು ಬಾಂಗ್ಲಾದೇಶ ಸಜ್ಜಾಗಿದೆ. ಇತ್ತರ ಹಾಲಿ ಚಾಂಪಿಯನ್ ಪಟ್ಟ ಉಳಿಸಿಕೊಳ್ಳಲು ಟೀಂ ಇಂಡಿಯಾ ಕೂಡ ರೆಡಿಯಾಗಿದೆ. ಪಂದ್ಯ ಸಂಜೆ 5 ಗಂಟೆಗೆ(ಭಾರತೀಯ ಕಾಲಮಾನ) ಆರಂಭವಾಗಲಿದೆ.

3ನೇ ಬಾರಿಗೆ ಏಷ್ಯಾಕಪ್ ಫೈನಲ್ ಪ್ರವೇಶಿಸಿರುವ ಬಾಂಗ್ಲಾದೇಶವನ್ನ ಲಘುವಾಗಿ ಪರಿಗಣಿಸುವಂತಿಲ್ಲ. ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಬಾಂಗ್ಲಾ ಬಲಿಷ್ಠವಾಗಿದೆ. ಆದರೆ ಇಂಜುರಿ ಸಮಸ್ಯೆ ತಂಡಕ್ಕೆ ಕಾಡುತ್ತಿದೆ.

ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ನಾಯಕ ರೋಹಿತ್ ಶರ್ಮಾ ಸೇರಿದಂತೆ ಹಿರಿಯ ಕ್ರಿಕೆಟಿಗರು ವಿಶ್ರಾಂತಿ ಪಡೆದಿದ್ದರು. ಇದೀಗ ಫೈನಲ್ ಪಂದ್ಯಕ್ಕೆ ಫುಲ್ ಸ್ಟ್ರೆಂಥ್ ತಂಡ ಕಣಕ್ಕಿಳಿಯಲಿದೆ.