ಜಲಾಲ್‌ಬಾದ್(ಸೆ.27): ಅಫ್ಘಾನಿಸ್ತಾನ ಟಿ20 ಕ್ರಿಕೆಟ್ ಲೀಗ್  ಟೂರ್ನಿಗೆ ಅಂತಿಮ ಕಸರತ್ತು ನಡೆಯುತ್ತಿದೆ. ಅಕ್ಟೋಬರ್ 5 ರಿಂದ 21ರ ವರೆಗೆ ನಡೆಯಲಿರುವ ಚೊಚ್ಚಲ ಟಿ20 ಟೂರ್ನಿಗೆ ನಂಗರ್‌ಹಾರ್ ಲೀಯೋಪಾರ್ಡ್ಸ್ ಭರ್ಜರಿ ಸಿದ್ಧತೆ ನಡೆಸಿದೆ.

ನಂಗರ್‌ಹಾರ್ ಲೀಯೋಪಾರ್ಡ್ಸ್ ತಂಡ, ಟೀಂ ಇಂಡಿಯಾ ಮಾಜಿ ವೇಗಿ, ಕನ್ನಡಿಗ ವೆಂಕಟೇಶ್ ಪ್ರಸಾದ್ ಅವರನ್ನ ಮುಖ್ಯ ಕೋಚ್ ಆಗಿ ನೇಮಕ ಮಾಡಿದೆ.  ವೆಸ್ಟ್ಇಂಡೀಸ್ ಆಲ್ರೌಂಡರ್ ಆಂಡ್ರೆ ರಸೆಲ್ ನಾಯಕತ್ವದ ನಂಗರ್‌ಹಾರ್ ಲೀಯೋಪಾರ್ಡ್ಸ್ ತಂಡ ಇದೀಗ ವೆಂಕಟೇಶ್ ಪ್ರಸಾದ್ ಮಾರ್ಗದರ್ಶನದಲ್ಲಿ ಕಣಕ್ಕಿಳಿಯಲಿದೆ.

ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಬೌಲಿಂಗ್ ಕೋಚ್ ಆಗಿ ಸೇವೆ ಸಲ್ಲಿಸಿರುವ ವೆಂಕಟೇಶ್ ಪ್ರಸಾದ್, 2007ರಲ್ಲಿ ಟೀಂ ಇಂಡಿಯಾ ಬೌಲಿಂಗ್ ಕೋಚ್ ಆಗಿಯೂ ಜವಾಬ್ದಾರಿ ನಿರ್ವಹಿಸಿದ್ದಾರೆ.

ರಸೆಲ್ ನಾಯಕತ್ವದ ಲಿಯೋಪಾರ್ಡ್ಸ್ ತಂಡದಲ್ಲಿ ಬಾಂಗ್ಲಾದೇಶ ಕ್ರಿಕೆಟಿಗ ತಮೀಮ್ ಇಕ್ಬಾಲ್, ಮುಶ್ಫಿಕರ್ ರಹೀಮ್, ಪಾಕಿಸ್ತಾನದ ಮೊಹಮ್ಮದ್ ಹಫೀಜ್, ಆಸ್ಟ್ರೇಲಿಯಾದ ಬೆನ್ ಕಟ್ಟಿಂಗ್, ನ್ಯೂಜಿಲೆಂಡ್‌ನ ಮಿಚೆಲ್ ಮೆಕ್ಲೆನಾಘನ್ ಸೇರಿದಂತೆ ಹಲವು ಸ್ಟಾರ್ ಆಟಗಾರರು ತಂಡದಲ್ಲಿದ್ದಾರೆ.