ನವದೆಹಲಿ[ಜು.28]: ಜು.15ರಂದು ನಡೆದ ಫ್ರಾನ್ಸ್ ಹಾಗೂ ಕ್ರೊವೇಷಿಯಾ ನಡುವಿನ ಫಿಫಾ ಫುಟ್ಬಾಲ್ ವಿಶ್ವಕಪ್ ಫೈನಲ್ ಪಂದ್ಯವನ್ನು ಭಾರತದಲ್ಲಿ 5.12 ಕೋಟಿ ಮಂದಿ ವೀಕ್ಷಿಸಿದ್ದಾರೆ ಎಂದು ಪಂದ್ಯಾವಳಿ ಪ್ರಸಾರ ಹಕ್ಕು ಪಡೆದಿದ್ದ ಸೋನಿ ಸಂಸ್ಥೆ ತನ್ನ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ. 

ಭಾರತದಲ್ಲಿ ಅತಿಹೆಚ್ಚು ಮಂದಿಯಿಂದ ವೀಕ್ಷಿಸಲ್ಪಟ್ಟ ಫುಟ್ಬಾಲ್ ಪಂದ್ಯ ಇದಾಗಿದೆ. 64 ಪಂದ್ಯಗಳ ಟೂರ್ನಿಯನ್ನು ಒಟ್ಟು 11 ಕೋಟಿಗೂ ಹೆಚ್ಚು ಜನ ವೀಕ್ಷಿಸಿದ್ದಾಗಿ ಸೋನಿ ತಿಳಿಸಿದೆ. ಇದರಲ್ಲಿ ಪಶ್ಚಿಮ ಬಂಗಾಳ ಹಾಗೂ ಕೇರಳದಲ್ಲೇ ಹೆಚ್ಚು ಮಂದಿ ವೀಕ್ಷಿಸಿದ್ದಾರೆ ಎನ್ನಲಾಗಿದೆ. 

ಇದೇ ವೇಳೆ ಪಂದ್ಯಾವಳಿ ವೇಳೆ ಜಾಹೀರಾತಿನಿಂದ ₹200 ಕೋಟಿಗೂ ಹೆಚ್ಚು ಆದಾಯ ಬಂದಿರುವುದಾಗಿ ಸೋನಿ ಸಂಸ್ಥೆ ಘೋಷಿಸಿದೆ. 10 ಸೆಕೆಂಡ್ ಜಾಹೀರಾತಿಗೆ ಗರಿಷ್ಠ ₹6 ಲಕ್ಷ ವರೆಗೂ ಪಡೆದಿದ್ದಾಗಿ ತಿಳಿಸಿದೆ. 2014ರ ಫಿಫಾ ಫುಟ್ಬಾಲ್ ವಿಶ್ವಕಪ್ ವೇಳೆ ಸೋನಿ ಸಂಸ್ಥೆಗೆ ಜಾಹೀರಾತಿನಿಂದ ₹100 ಕೋಟಿ ಆದಾಯ ಬಂದಿತ್ತು ಎಂದು ಅಧಿಕೃತ ಮೂಲಗಳು ತಿಳಿಸಿವೆ.