ಶಿವಮೊಗ್ಗ(ಏ.06): ಜಿಲ್ಲಾ ಮೆಗ್ಗಾನ್‌ ಆಸ್ಪತ್ರೆಯ ಮಕ್ಕಳ ವಿಭಾಗದಲ್ಲಿ ಶಾರ್ಟ್‌ ಸಕ್ರ್ಯೂಟ್‌ನಿಂದಾಗಿ ಬೆಂಕಿ ಹೊತ್ತಿಕೊಂಡ ಘಟನೆ ಭಾನುವಾರ ನಡೆದಿದ್ದು, ಘಟನೆಯಲ್ಲಿ 3 ಮಕ್ಕಳು ದಟ್ಟಹೊಗೆಯಿಂದಾಗಿ ತೀವ್ರ ಅಸ್ವಸ್ಥರಾಗಿದ್ದಾರೆ. ಘಟನೆಯಲ್ಲಿ ವಾರ್ಡ್‌ನಲ್ಲಿದ್ದ 30 ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ನಗರದಲ್ಲಿ ಭಾನುವಾರ ಸಂಜೆ ಗುಡುಗು, ಸಿಡಿಲು ಸಹಿತ ಭಾರಿ ಮಳೆ ಸುರಿಯಿತು. ಈ ಸಂದರ್ಭದಲ್ಲಿ ಸಿಡಿಲಿನ ಹೊಡೆತಕ್ಕೆ ಮೆಗ್ಗಾನ್‌ ಆಸ್ಪತ್ರೆಯ ಮಕ್ಕಳ ತುರ್ತು ನಿಗಾ ವಿಭಾಗದಲ್ಲಿ ಶಾರ್ಟ್‌ ಸಕ್ರ್ಯೂಟ್‌ನಿಂದಾಗಿ ಹೊಗೆ ಹಾಗೂ ಬೆಂಕಿ ಕಾಣಿಸಿಕೊಂಡಿದೆ. ಇದರಿಂದಾಗಿ ಹಲವು ಉಪಕರಣಗಳು ಸುಟ್ಟು ಹೋಗಿವೆ. ತಕ್ಷಣ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕಾಗಿಮಿಸಿ ಬೆಂಕಿ ನಂದಿಸಿ ಅಗತ್ಯ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ.

ಶವ ತಂದು ಮನೆ ಮುಂದೆ ಇಟ್ಟು ಹೋದ ಆ್ಯಂಬುಲೆನ್ಸ್: ಬೆಚ್ಚಿಬಿದ್ದ ಜನರು

ವಾರ್ಡ್‌ನಲ್ಲಿ ಒಂದು ತಿಂಗಳಿಗಿಂತ ಕಡಿಮೆ ವಯಸ್ಸಿನ 28 ನವಜಾತ ಶಿಶು, ಒಂದು ತಿಂಗಳಿಗಿಂತ ಹೆಚ್ಚು ವಯಸ್ಸಿನ 5 ಮಕ್ಕಳು ಮತ್ತು ತಾಯಂದಿರು ಇದ್ದರು. ಅವಘಡ ಸಂಭವಿಸಿದ ತಕ್ಷಣವೇ ಎಚ್ಚೆತ್ತ ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ವಾರ್ಡ್‌ನಲ್ಲಿದ್ದ ಮಕ್ಕಳು ಹಾಗೂ ಮಕ್ಕಳ ತಾಯಂದಿರನ್ನು ರಕ್ಷಿಸಿದರು. ಇದರಿಂದಾಗಿ ಭಾರಿ ದುರಂತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದಂತಾಗಿದೆ. ಕೂಡಲೇ ನವಜಾತ ಶಿಶುಗಳನ್ನು ಆಸ್ಪತ್ರೆಯ ಆ್ಯಂಬುಲೆನ್ಸ್‌ ಮೂಲಕ ನಗರದ ಸರ್ಜಿ ಮಕ್ಕಳ ಆಸ್ಪತ್ರೆಗೆ ರವಾನಿಸಲಾಯಿತು.

ರಾಜ್ಯದ ಎಲ್ಲಾ ಜಿಲ್ಲಾ ಸುದ್ದಿಗಳಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ
 
ಸ್ಥಳಕ್ಕೆ ಸಚಿವ ಕೆ.ಎಸ್‌.ಈಶ್ವರಪ್ಪ, ಸಂಸದ ಬಿ.ವೈ.ರಾಘವೇಂದ್ರ, ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್‌ ಭೇಟಿ ನೀಡಿ ಪರಿಶೀಲನೆ ನಡೆಸಿದರಲ್ಲದೆ, ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿಗಳಿಂದ ಘಟನೆ ಕುರಿತು ಮಾಹಿತಿ ಪಡೆದರು.

ದೇವರ ದಯೆಯಿಂದ ಏನೂ ಆಗಿಲ್ಲ:

ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್‌.ಈಶ್ವರಪ್ಪ ಪ್ರತಿಕ್ರಿಯೆ ನೀಡಿ, ವಾರ್ಡ್‌ನಲ್ಲಿ ಹೊಗೆ ಕಾಣಿಸಿಕೊಂಡ ತಕ್ಷಣ ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ನವಜಾತ ಶಿಶುಗಳನ್ನು ಹಾಗೂ ಮಕ್ಕಳ ತಾಯಂದಿರನ್ನು ಸುರಕ್ಷಿತವಾಗಿ ಬೇರೆಡೆಗೆ ಸ್ಥಳಾಂತರಿಸಿದ್ದಾರೆ. ಭಾರಿ ದುರಂತ ತಪ್ಪಿದಂತಾಗಿದೆ. ಶಾರ್ಟ್‌ ಸಕ್ರ್ಯೂಟ್‌ ಎಂದರೆ ಯಾವ ರೀತಿ ಹೊಗೆ ಆವರಿಸುತ್ತದೆ ಎಂಬುದು ಇತ್ತೀಚೆಗೆ ನಮ್ಮ ಮನೆಯಲ್ಲಿ ನಡೆದ ದುರಂತದಲ್ಲಿ ನಾನು ನೋಡಿದ್ದೇನೆ. ಸದ್ಯ ಇಲ್ಲಿ ಏನೂ ಆಗಿಲ್ಲ. ಎಲ್ಲರೂ ತಕ್ಷಣವೇ ಕಾರ್ಯೋನ್ಮುಖರಾಗಿದ್ದಾರೆ. ಮೂರು ಮಕ್ಕಳು ಸ್ವಲ್ಪ ಹೊಗೆ ಸೇವಿಸಿರಬಹುದು ಎನ್ನಲಾಗಿದ್ದರೂ, ಎಲ್ಲ ಮಕ್ಕಳೂ ಅಪಾಯದಿಂದ ಪಾರಾಗಿದ್ದಾರೆ ಎಂದರು.

ತಕ್ಷಣ ಬೇರೆಡೆಗೆ ಶಿಫ್ಟ್‌:

ಮೆಗ್ಗಾನ್‌ ಆಸ್ಪತ್ರೆಯ ವೈದ್ಯ ಡಾ.ಎಸ್‌.ಶ್ರೀಧರ್‌ ಮಾಹಿತಿ ನೀಡಿ ಗುಡುಗು, ಸಿಡಿಲಿನಿಂದ ಶಾರ್ಟ್‌ಸಕ್ರ್ಯೂಟ್‌ ಸಂಭವಿಸಿದ್ದರಿಂದ ನವಜಾತ ಶಿಶುಗಳ ವಿಭಾಗದಲ್ಲಿ ಹೊಗೆ ಕಾಣಿಸಿಕೊಂಡಿದೆ. ಕೂಡಲೇ ಅಲ್ಲಿದ್ದ ನವಜಾತ ಶಿಶುಗಳನ್ನು ಹಾಗೂ ಮಕ್ಕಳ ತಾಯಂದಿರನ್ನು ಸುರಕ್ಷಿತವಾಗಿ ಹೊರಗಡೆ ಕರೆದುಕೊಂಡು ಬಂದಿದ್ದೇವೆ. ವಿಭಾಗದಲ್ಲಿ 28 ನವಜಾತ ಶಿಶುಗಳು ಹಾಗೂ 8 ಮಕ್ಕಳು ಸೇರಿ ಒಟ್ಟು 33 ಮಕ್ಕಳು ಹಾಗೂ ಮಕ್ಕಳ ತಾಯಂದಿರು ಇದ್ದರು. ಅವಘಡದಿಂದ ಯಾರಿಗೂ ಯಾವುದೇ ತೊಂದರೆಯಾಗಿಲ್ಲ. ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಮಾಹಿತಿ ನೀಡಿದರು.

ಸರ್ಜಿ ಆಸ್ಪತ್ರೆ ಮುಖ್ಯಸ್ಥ ಧನಂಜಯ್‌ ಸರ್ಜಿ ಮಾತನಾಡಿ, ನಗರದ ಮೆಗ್ಗಾನ್‌ ಆಸ್ಪತ್ರೆ ಮಕ್ಕಳ ವಿಭಾಗದಲ್ಲಿ ಅವಗಢ ಸಂಭವಿಸಿದ್ದು, ಆಸ್ಪತ್ರೆಯ ನವಜಾತ ಶಿಶುಗಳನ್ನು ತಮ್ಮ ಆಸ್ಪತ್ರೆಗೆ ಕರೆತರುತ್ತಿರುವುದಾಗಿ ತಿಳಿಸಿದರು. ಕ್ಷಣಾರ್ಧದಲ್ಲಿ ಮೆಗ್ಗಾನ್‌ ಆಸ್ಪತ್ರೆಯಿಂದ ಸರ್ಜಿ ಆಸ್ಪತ್ರೆಗೆ ಮಕ್ಕಳನ್ನು ಸ್ಥಳಾಂತರ ಮಾಡಲಾಗಿದೆ. ಎಲ್ಲ ಮಕ್ಕಳು ಆರೋಗ್ಯವಾಗಿದ್ದಾರೆ ಎಂದು ತಿಳಿಸಿದರು.

ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ, ಮುಂದೆ ನಡೆಯಬಹುದಾಗಿದ್ದ ಅವಘಡವನ್ನು ತಪ್ಪಿಸಿದರು.