Asianet Suvarna News Asianet Suvarna News

2 ನೇ ಬಾರಿ ಚಂದ್ರನ ಶೋಧಕ್ಕೆ ಇಸ್ರೋ ರೆಡಿ

ಭಾರತದ ಮಹತ್ವಾಕಾಂಕ್ಷಿ ಎರಡನೇ ಚಂದ್ರಯಾನಕ್ಕೆ ಕೊನೆಗೂ ದಿನಗಣನೆ ಆರಂಭವಾಗಿದೆ. ಎರಡು ಬಾರಿ ಸಮಯ ನಿಗದಿಪಡಿಸಿ ಮುಂದೂಡಿದ್ದ ಯೋಜನೆಯನ್ನು ಅಂತಿಮವಾಗಿ ಜುಲೈ ೧೫ಕ್ಕೆ ಕೈಗೊಳ್ಳಲು ಇಸ್ರೋ ನಿರ್ಧರಿಸಿದೆ. ಚಂದ್ರಯಾನ-2 ವಿಶೇಷತೆಯೇನು? ಈ ಮೂಲಕ ಭಾರತ ಏನನ್ನು ಸಾಧಿಸಲು ಹೊರಟಿದೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

India's second mission to moon Chandrayaan-2 to be launched on July 15
Author
Bengaluru, First Published Jun 13, 2019, 1:25 PM IST

ಭಾರತದ ಮಹತ್ವಾಕಾಂಕ್ಷಿ ಎರಡನೇ ಚಂದ್ರಯಾನಕ್ಕೆ ಕೊನೆಗೂ ದಿನಗಣನೆ ಆರಂಭವಾಗಿದೆ. ಎರಡು ಬಾರಿ ಸಮಯ ನಿಗದಿಪಡಿಸಿ ಮುಂದೂಡಿದ್ದ ಯೋಜನೆಯನ್ನು ಅಂತಿಮವಾಗಿ ಜುಲೈ 15 ಕ್ಕೆ ಕೈಗೊಳ್ಳಲು ಇಸ್ರೋ ನಿರ್ಧರಿಸಿದೆ. ಚಂದ್ರಯಾನ-2 ವಿಶೇಷತೆಯೇನು? ಈ ಮೂಲಕ ಭಾರತ ಏನನ್ನು ಸಾಧಿಸಲು ಹೊರಟಿದೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

ಈ ಚಂದ್ರಯಾನದಲ್ಲಿ ಏನೇನು ನಡೆಯಲಿದೆ?

ಭಾರತದ ಬಾಹ್ಯಾಕಾಶ ಸಾಧನೆಯನ್ನು ಮತ್ತೊಂದು ಮೈಲಿಗಲ್ಲಿಗೆ ಕೊಂಡೊಯ್ಯುವ ಚಂದ್ರಯಾನ-2 ನೌಕೆ ಜುಲೈ 9-ಜುಲೈ16ರ ಒಳಗೆ ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ ಉಡಾವಣೆಯಾಗಲಿದೆ. ಜಿಎಸ್‌ಎಲ್‌ವಿ ಎಂಕೆ-2 ರಾಕೆಟ್‌ನಿಂದ ಚಂದ್ರಯಾನ ನೌಕೆಯನ್ನು ಉಡಾವಣೆ ಮಾಡಲಾಗುತ್ತಿದೆ.

ಮೋದಿ ಅಧಿಕಾರಕ್ಕೆ ಬಂದ ಮೇಲೆ ಚಂದ್ರಯಾನ 2ಗೆ ಚಾಲನೆ: ನಾಯರ್

ಈ ಗಗನನೌಕೆಯು ಆರ್ಬಿಟರ್‌, ವಿಕ್ರಮ್‌ ಹೆಸರಿನ ಲ್ಯಾಂಡರ್‌ ಮತ್ತು ಪ್ರಗ್ಯಾನ್‌ ಹೆಸರಿನ ರೋವರ್‌ ಅನ್ನು ಹೊತ್ತೊಯ್ಯಲಿದೆ. ಚಂದ್ರಯಾನ-2 ನೌಕೆ ಬಾಕ್ಸ್‌ ಆಕಾರದಲ್ಲಿದ್ದು, ಉಡಾವಣೆಯಾದ ಒಂದು ತಿಂಗಳಲ್ಲಿ ಚಂದ್ರನ ಕಕ್ಷೆ ತಲುಪಲಿದೆ. ಚಂದ್ರನ ಕಕ್ಷೆಗೆ ತಲುಪಿದ ಬಳಿಕ ಆರ್ಬಿಟರ್‌ನಿಂದ ಲ್ಯಾಂಡರ್‌ ಬೇರ್ಪಟ್ಟು, ಚಂದ್ರನ ದಕ್ಷಿಣ ಧ್ರುವದಲ್ಲಿ ನಿಧಾನವಾಗಿ ಲ್ಯಾಂಡ್‌ ಆಗುತ್ತದೆ. ಅಲ್ಲಿ ನೂರಾರು ಕೋಟಿ ವರ್ಷಗಳಷ್ಟುಹಳೆಯ ದೊಡ್ಡ ದೊಡ್ಡ ಬಂಡೆಗಳಿವೆ.

ಸಾಫ್ಟ್‌ಲ್ಯಾಂಡ್‌ ಆದ ಬಳಿಕ 6 ಚಕ್ರಗಳ, ಸುಮಾರು 20 ಕೆ.ಜಿ. ತೂಕವಿರುವ ರೋವರ್‌, ಲ್ಯಾಂಡರ್‌ನಿಂದ ನಿಧಾನವಾಗಿ ಬೇರ್ಪಟ್ಟು ಚಂದ್ರನ ಮೇಲ್ಮೈಯಲ್ಲಿ 100-200 ಮೀಟರ್‌ ದೂರ ಕ್ರಮಿಸಿ ವಿಶ್ಲೇಷಣೆ ಆರಂಭಿಸುತ್ತದೆ. ಇದು ಭೂಮಿಯ ಲೆಕ್ಕದ 14 ದಿನ ಅಥವಾ ಒಂದು ಲೂನಾರ್‌ ಡೇವರೆಗೆ ಕಾರಾರ‍ಯಚರಣೆ ನಡೆಸುತ್ತದೆ. 15 ನಿಮಿಷದ ಒಳಗೆ ಆರ್ಬಿಟರ್‌ ಮೂಲಕ ಭೂಮಿಗೆ ತಾನು ವಿಶ್ಲೇಷಿಸಿದ ಡೇಟಾ ಮತ್ತು ಫೋಟೋಗಳನ್ನು ಕಳಿಸುತ್ತದೆ.

ರೋವರ್‌ ಹೇಗೆ ಕೆಲಸ ಮಾಡುತ್ತದೆ?

ಚಂದ್ರನ ಮೇಲಿಳಿಯುವ ರೋವರ್‌ ಸುಮಾರು 20 ಕೆ.ಜಿ. ತೂಕವಿದ್ದು, ಸೌರಶಕ್ತಿ ಮೂಲಕ ಸ್ವತಂತ್ರವಾಗಿ ಕಾರ್ಯನಿರ್ವಹಿಸಲಿದೆ. ಇದಕ್ಕೆ 6 ಚಕ್ರಗಳಿದ್ದು, ಚಂದ್ರನ ಮೇಲ್ಮೈಯಲ್ಲಿ 100-200 ಮೀಟರ್‌ ಕ್ರಮಿಸಿ ಅಲ್ಲಿ ದೊರಕುವ ಕಲ್ಲು ಮತ್ತು ಮಣ್ಣಿನ ಮಾದರಿ ಪಡೆದು ವಿಶ್ಲೇಷಿಸಿ ಭೂಮಿಗೆ ಆರ್ಬಿಟರ್‌ ಮೂಲಕ ಡೇಟಾ ಮತ್ತು ಫೋಟೋವನ್ನು ಕಳಿಸುತ್ತದೆ. ಚಂದ್ರಯಾನ -2ರ ಆರ್ಬಿಟರ್‌ ತೂಕ 1,400 ಕೆ.ಜಿ. ಮತ್ತು ಲ್ಯಾಂಡರ್‌ ತೂಕ 1250 ಕೆ.ಜಿ. ಇದೆ.

ಎಲ್ಲವೂ ಅಂದುಕೊಂಡಂತಾದರೆ, ಚಂದ್ರನ ಮೇಲ್ಮೈನಲ್ಲಿ ನೀರು ಅಥವಾ ಮಂಜು ಇದೆಯೇ ಎಂಬ ಸ್ಪಷ್ಟಚಿತ್ರಣ ಈ ಬಾರಿ ಲಭ್ಯವಾಗಲಿದೆ. ಮತ್ತು ಯಾವ ವಿಜ್ಞಾನಿಗಳೂ ಶೋಧಿಸದ ಅಂಶಗಳನ್ನು ಇಸ್ರೋ ವಿಜ್ಞಾನಿಗಳು ಶೋಧಿಸಿದ ಹೆಗ್ಗಳಿಕೆಯೂ ನಮ್ಮದಾಗುತ್ತದೆ. ಜೊತೆಗೆ ಲಭ್ಯವಿರುವ ಖನಿಜದ ಕುರಿತೂ ಮಾಹಿತಿ ಲಭ್ಯವಾಗಲಿದ್ದು, ಹೈಡೆಫಿನಿಶನ್‌ ಕ್ಯಾಮೆರಾ ಇರುವುದರಿಂದ ಮಣ್ಣು ಮತ್ತು ಬಂಡೆಗಳ ಸ್ಪಷ್ಟಫೋಟೋಗಳು ದೊರೆಯಲಿವೆ.

ಚಂದ್ರಯಾನ-2 ಉದ್ದೇಶವೇನು?

ಚಂದ್ರನ ಮೇಲ್ಮೈನ ವಿಶ್ಲೇಷಣೆ, ಸ್ಥಳಾಕೃತಿಯ ವಿವರಣೆ, ವಾತಾವರಣ, ಖನಿಜ ಸಂಪತ್ತು, ಪ್ರಾಕೃತಿಕ ಸಂಪನ್ಮೂಲಗಳು, ಹೈಡ್ರಾಕ್ಸಿಲ್‌ ಮತ್ತು ನೀರು ಅಥವಾ ಮಂಜು ಎಷ್ಟಿದೆ ಎಂಬುದನ್ನು ಪತ್ತೆಹಚ್ಚುವುದು.

ಹಾಲಿವುಡ್‌ ಸಿನಿಮಾಕ್ಕಿಂತ ಕಡಿಮೆ ಬಜೆಟ್‌!

ಭಾರತದ ಚಂದ್ರಯಾನ-2 ಅತ್ಯಂತ ಕಡಿಮೆ ವೆಚ್ಚದಲ್ಲಿ ಮಹತ್ತರವಾದ ವಿಷಯವನ್ನು ಶೋಧಿಸಲು ಸಿದ್ಧವಾಗಿದೆ. ಅಂದಾಜು ಖರ್ಚು 124 ಮಿಲಿಯನ್‌ ಡಾಲರ್‌ (860 ಕೋಟಿ ರು.). ಅಂದರೆ ಹಾಲಿವುಡ್‌ನ ಸುಪ್ರಸಿದ್ಧ ‘ಅವೆಂಜರ್‌ ಎಂಡ್‌ಗೇಮ್‌’ ಬಜೆಟ್‌ಗಿಂತ ಕಡಿಮೆ ಹಣದಲ್ಲಿ ಭಾರತ ಚಂದ್ರಯಾನ ಕೈಗೊಳ್ಳುತ್ತಿದೆ. ಈ ಸಿನಿಮಾ ನಿರ್ಮಾಣಕ್ಕೆ 356 ಮಿಲಿಯನ್‌ ಡಾಲರ್‌ ಹಣ ಖರ್ಚಾಗಿತ್ತು.

4 ಟನ್‌ ಹೊರುವ ಭರ್ಜರಿ ರಾಕೆಟ್‌

ಚಂದ್ರಯಾನ-2ರ ಉಪಗ್ರಹವನ್ನು ಹೊತ್ತೊಯ್ಯುತ್ತಿರುವ ಜಿಎಸ್‌ಎಲ್‌ವಿ ಎಂಕೆ-3 ರಾಕೆಟ್‌ ಅನ್ನು 4 ಟನ್‌ ಉಪಕರಣ ಹೊರುವ ಸಾಮರ್ಥ್ಯ ಇರುವಂತೆ ವಿನ್ಯಾಸಗೊಳಿಸಲಾಗಿದೆ. ಇದಕ್ಕೂ ಮುಂಚಿನ ರಾಕೆಟ್‌ಗಳು 3.3 ಟನ್‌ ಮತ್ತು 3.4 ಟನ್‌ ಉಪಕರಣ ಹೊರುವ ಸಾಮರ್ಥ್ಯ ಹೊಂದಿದ್ದವು. ಈ ಬಾರಿ ಒಟ್ಟು 3.8 ಟನ್‌ ಭಾರದ ಉಪಕರಣಗಳಿವೆ.

ಅಮೆರಿಕ, ರಷ್ಯಾ ದಾಖಲೆ ಮುರಿಯುತ್ತಾ ಭಾರತ?

ಅಮೆರಿಕದ ನಾಸಾದ ಅಪೋಲೋ ಮತ್ತು ರಷ್ಯಾದ ಲೂನಾರ್‌ ಮಿಷನ್‌ ಚಂದ್ರನ ಸಮಭಾಜಕ ವೃತ್ತದಲ್ಲಿ ರೋವರ್‌ ಅನ್ನು ಲ್ಯಾಂಡ್‌ ಮಾಡಿದ್ದವು. ಆದರೆ, ಇಸ್ರೋ ಚಂದ್ರನ ದಕ್ಷಿಣ ಧ್ರುವದ ಬಳಿ ರೋವರ್‌ ಇಳಿಸುವ ಯೋಜನೆ ಹಾಕಿಕೊಂಡಿದೆ.

ಒಂದೊಮ್ಮೆ ಇದು ಯಶಸ್ವಿಯಾದರೆ ದಕ್ಷಿಣ ಧ್ರುವದ ಬಳಿ ರೋವರ್‌ ಇಳಿಸಿದ ಮೊಟ್ಟಮೊದಲ ದೇಶ ಎಂಬ ಖ್ಯಾತಿ ಭಾರತದ್ದಾಗುತ್ತದೆ. ಅಲ್ಲದೆ ಈ ಮಹತ್ವಾಕಾಂಕ್ಷಿ ಯೋಜನೆಯು ನಾಸಾದ ಅಪೋಲೋ ಮಿಷನ್‌ ಯೋಜನೆಗಿಂತ ಹೆಚ್ಚು ಶಕ್ತಿಯುತವಾಗಿದ್ದು, ಅದಕ್ಕಿಂತಲೂ ಕಡಿಮೆ ವೆಚ್ಚದಲ್ಲಿ ಇಸ್ರೋ ಮಹತ್ವದ ಸಾಧನೆಗೈಯಲು ಸಿದ್ಧವಾಗಿದೆ.

ರೋವರ್‌ ಇಳಿಸುವ 4ನೇ ದೇಶ

ಇದುವರೆಗೆ ಚಂದ್ರನಲ್ಲಿಗೆ ಮೂರೇ ಮೂರು ದೇಶಗಳು ರೋವರ್‌ ಕಳಿಸಿವೆ. ಸೋವಿಯತ್‌ ರಷ್ಯಾ, ಅಮೆರಿಕ ಮತ್ತು ಚೀನಾ ಆ 3 ದೇಶಗಳು. ನವೆಂಬರ್‌ 17, 1970ರಲ್ಲಿ ರಷ್ಯಾ ಮೊಟ್ಟಮೊದಲ ಬಾರಿಗೆ ರೋವಿಂಗ್‌ ರಿಮೋಟ್‌ ಚಾಲಿತ ರೋಬೋಟ್‌ಅನ್ನು ಚಂದ್ರನಲ್ಲಿ ಇಳಿಸಿತ್ತು.

ಅದನ್ನು ಲುನೋಖೋದ್‌-1 ಎಂದು ಕರೆಯಲಾಗುತ್ತದೆ. ಅದಾದ ಬಳಿಕ ಅಮೆರಿಕ ಮತ್ತು ಚೀನಾ ಈ ಐತಿಹಾಸಿಕ ಸಾಧನೆ ಮಾಡಿದ್ದವು. ಭಾರತ ಈ ಚಂದ್ರಯಾನ-2ನಲ್ಲಿ ಯಶಸ್ವಿಯಾದರೆ ಚಂದ್ರನಲ್ಲಿಗೆ ರೋವರ್‌ ಕಳುಹಿಸಿದ 4ನೇ ದೇಶ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.

ಅಲ್ಲದೆ ಇದುವರೆಗೆ 10 ದೇಶಗಳು ಸ್ವತಂತ್ರವಾಗಿ ಚಂದ್ರನ ಕಕ್ಷೆಯಲ್ಲಿ ಉಪಗ್ರಹ ಇಳಿಸುವಲ್ಲಿ ಯಶಸ್ವಿಯಾಗಿವೆ. ಅವುಗಳಲ್ಲಿ 6 ದೇಶಗಳು ಏಷ್ಯಾ ಖಂಡದವು ಎನ್ನುವುದು ಇನ್ನೊಂದು ವಿಶೇಷ. ಚೀನಾ, ಜಪಾನ್‌, ಇರಾನ್‌, ಇಸ್ರೇಲ್‌, ಭಾರತ ಮತ್ತು ದಕ್ಷಿಣ ಕೊರಿಯಾ ಆ ಏಷ್ಯನ್‌ ರಾಷ್ಟ್ರಗಳು.

ಚಂದ್ರನ ಮೇಲೆ ಇಸ್ರೋಗಿರುವ ಸವಾಲು ಏನು?

ಚಂದ್ರಯಾನ-2 ಇಸ್ರೋ ಪಾಲಿಗೆ ಅತಿ ದೊಡ್ಡ ಸವಾಲಿನ ಕೆಲಸ. ಕಾರಣ ಚಂದ್ರನ ಮೇಲೆ ಗಗನನೌಕೆಯು ಸಾಫ್ಟ್‌ಲ್ಯಾಂಡ್‌ ಆಗುವುದೇ ಅತ್ಯಂತ ಕಠಿಣ ಸವಾಲು. ನೇವಿಗೇಶನ್‌, ನಿಯಂತ್ರಣ ಮತ್ತು ಪ್ರೊಪಲ್ಷನ್‌ ಸಿಸ್ಟಮ್‌ಗಳು ಹೊಂದಾಣಿಕೆಯಿಂದ ಹಾಗೂ ಸ್ವಯಂಚಾಲಿತವಾಗಿ ಕೆಲಸ ಮಾಡಬೇಕಾಗುತ್ತದೆ. ಇನ್ನೊಂದು ಪಥದ ನಿಖರತೆ. ಚಂದ್ರ ಭೂಮಿಯಿಂದ 3,844 ಕಿ.ಮೀ. ದೂರದಲ್ಲಿದೆ. ಹೀಗಾಗಿ ನಿಖರವಾಗಿ ಲ್ಯಾಂಡ್‌ ಆಗುವುದು ಕಷ್ಟಕರ.

ಮತ್ತು ಚಂದ್ರಯಾನದಲ್ಲಿ ಆರ್ಬಿಟರ್‌, ರೋವರ್‌ ಮತ್ತು ಲ್ಯಾಂಡರ್‌ಗಳೊಟ್ಟಿಗೆ ಸಂಪರ್ಕ ಸಾಧಿಸುವಾಗ ರೇಡಿಯೋ ಸಿಗ್ನಲ್‌ಗಳು ದುರ್ಬಲವಾಗಿರುತ್ತ್ತವೆ. ಚಂದ್ರನಲ್ಲಿರುವ ಧೂಳು ಲ್ಯಾಂಡರ್‌ ಮತ್ತು ರೋವರ್‌ ಕೆಲಸಕ್ಕೆ ಅಡ್ಡಿಯುಂಟು ಮಾಡಬಹುದು.

ಪದೇಪದೇ ಮುಂದೂಡಲಾಗುತ್ತಿದೆ ಏಕೆ?

ಚಂದ್ರಯಾನ-2 ಭಾರತದ ಅತ್ಯಂತ ಮಹತ್ವಾಕಾಂಕ್ಷಿ ಯೋಜನೆ. ಈ ಯೋಜನೆಯ ಉಡಾವಣಾ ದಿನಾಂಕ ಪದೇ ಪದೇ ಮುಂದೂಡಲಾಗುತ್ತಿದೆ. ಇದಕ್ಕೂ ಮೊದಲು 2019ರ ಜನವರಿ 3ರಿಂದ ಜನವರಿ 16ರ ಒಳಗೆ ಉಡಾವಣೆ ಮಾಡುವುದಾಗಿ ಇಸ್ರೋ ಹೇಳಿತ್ತು. ಅನಂತರ ಏಪ್ರಿಲ್‌ಗೆ ಮುಂದೂಡಲಾಯಿತು. ಆದರೆ ಕೆಲ ಸಿದ್ಧತೆಗಳು ಅಪರಿಪೂರ್ಣವಾದ್ದರಿಂದ ಮತ್ತೆ ಜುಲೈಗೆ ಮುಂದೂಡಲಾಗಿದೆ.

ಚಂದ್ರಯಾನ ರಾಕೆಟ್‌ನಲ್ಲಿ ಅಮೆರಿಕದ ಲಗೇಜ್‌

ಜುಲೈನಲ್ಲಿ ಉಡಾವಣೆಯಾಗಲಿರುವ ಚಂದ್ರಯಾನ-2 ನೌಕೆ ನಾಸಾದ ‘ನಿಷ್ಕಿ್ರಯ ಪ್ರಾಯೋಗಿಕ ಸಲಕರಣೆ’ಯೊಂದನ್ನು ಚಂದ್ರನಲ್ಲಿಗೆ ಹೊತ್ತೊಯ್ಯಲಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಬಹಿರಂಗಪಡಿಸಿದೆ.

ಈ ವಿದೇಶಿ ಸಾಧನದ ಜತೆಗೆ ಚಂದ್ರಯಾನ-2 ಒಂದು ಕಕ್ಷೆಗಾಮಿ (ಆರ್ಬಿಟರ್‌), ಗ್ರಹನೌಕೆ (ಲ್ಯಾಂಡರ್‌) ‘ವಿಕ್ರಮ…’ ಮತ್ತು ‘ಪ್ರಗ್ಯಾನ್‌’ ಹೆಸರಿನ ಒಂದು ರೋವರ್‌ ಅನ್ನು ಒಳಗೊಂಡಿರುತ್ತದೆ. ಅಷ್ಟೇ ಅಲ್ಲದೆ ನಾನಾ ವೈಜ್ಞಾನಿಕ ಪ್ರಯೋಗಗಳನ್ನು ನಡೆಸಲು ಹಾಗೂ ಚಂದ್ರನ ಮೇಲಿನ ಚಿತ್ರಗಳನ್ನು ತೆಗೆಯಲು ಬಳಕೆಯಾಗಲಿರುವ 13 ಭಾರತೀಯ ಸಾಧನ (ಪೇಲೋಡ್‌)ಗಳನ್ನು ಹೊತ್ತೊಯ್ಯಲಿದೆ.

ಚಂದ್ರಯಾನ-1ರಲ್ಲಿ ನೀರು ಪತ್ತೆಹಚ್ಚಿದ್ದ ಇಸ್ರೋ!

ಮೊಟ್ಟಮೊದಲ ಬಾರಿಗೆ 2008ರಲ್ಲಿ ಭಾರತ ಚಂದ್ರಯಾನ ಕೈಗೊಂಡಿತ್ತು. ಅದು ಶೇ.80ರಷ್ಟುಯಶಸ್ವಿಯಾಗಿತ್ತು. ಜಗತ್ತಿನಲ್ಲೇ ಅತ್ಯಂತ ಕಡಿಮೆ ವೆಚ್ಚದಲ್ಲಿ ಕೈಗೊಂಡ ಚಂದ್ರಯಾನ ಎಂಬ ಖ್ಯಾತಿ ಆ ಯೋಜನೆಗೆ ಬಂದಿದ್ದರಿಂದ ನಂತರದ ವರ್ಷಗಳಲ್ಲಿ ಇಸ್ರೋ ಮೂಲಕ ನಾನಾ ದೇಶಗಳು ತಮ್ಮ ಉಪಗ್ರಹಗಳನ್ನು ಹಾರಿಬಿಡತೊಡಗಿದವು. ಅದರಿಂದ ಇಸ್ರೋಗೆ ಹಣ ಕೂಡ ಹರಿದುಬರತೊಡಗಿತು. ಎಲ್ಲಕ್ಕಿಂತ ಮುಖ್ಯ ಸಂಗತಿಯೆಂದರೆ, ಚಂದ್ರನ ಮೇಲೆ ನೀರಿದೆ ಎಂದು ಮೊಟ್ಟಮೊದಲ ಬಾರಿಗೆ ಆ ಯೋಜನೆಯ ಮೂಲಕ ಭಾರತ ಕಂಡುಹಿಡಿದಿತ್ತು. ಅಲ್ಲಿಯವರೆಗೆ ಅಮೆರಿಕ, ರಷ್ಯಾ, ಚೀನಾಕ್ಕೂ ಇದು ತಿಳಿದಿರಲಿಲ್ಲ.

ಜಾಗತಿಕ ಚಂದ್ರಯಾನ

- ಸೋವಿಯತ್‌ ರಷ್ಯಾ ಮೊಟ್ಟಮೊದಲ ಬಾರಿಗೆ ಚಂದ್ರನಲ್ಲಿಗೆ ನೌಕೆ ಕಳುಹಿಸಿದ ರಾಷ್ಟ್ರ

- ಅಮೆರಿಕ ಚಂದ್ರನಲ್ಲಿಗೆ ಮಾನವನನ್ನು ಕಳುಹಿಸಿದ ಮೊದಲ ರಾಷ್ಟ್ರ (1969)

- ನೀಲ್‌ ಆ್ಯಮ್‌ಸ್ಟ್ರಾಂಗ್‌ ಚಂದ್ರನಲ್ಲಿ ಕಾಲಿಟ್ಟಮೊದಲ ಗಗನಯಾತ್ರಿ

- 12 ಇದುವರೆಗೆ ಚಂದ್ರನ ಮೇಲೆ ಕಾಲಿಟ್ಟವರ ಸಂಖ್ಯೆ

- ಕೀರ್ತಿ ತೀರ್ಥಹಳ್ಳಿ 
 

Follow Us:
Download App:
  • android
  • ios