ಅಂದು ಸ್ನೇಹಿತರೊಬ್ಬರ ಮನೆಗೆ ಹೋಗಿದ್ದೆವು. ಅವರ ಮೂರನೆಯ ತರಗತಿ ಓದುತ್ತಿರುವ ಮಗಳು ಆಟದ ಸಾಮಾನುಗಳನ್ನು ಹರಡಿಕೊಂಡು ಆಟವಾಡುತ್ತಾ ಕುಳಿತಿದ್ದಳು. ಅದರಲ್ಲಿ ಬೇರೆ ಬೇರೆ ಪ್ರಾಣಿಗಳ ಗೊಂಬೆಗಳಿದ್ದವು. ನಿಜಕ್ಕೂ ಆಕರ್ಷಕವಾಗಿದ್ದ ಅವುಗಳನ್ನು ನೋಡಿ ಅತ್ತ ಹೋಗಿ ಅವಳ ಪಕ್ಕ ಕುಳಿತು ಒಂದೊಂದೇ ಪ್ರಾಣಿಯನ್ನು ತೋರಿಸುತ್ತ ಹೋದೆ ಪಟ ಪಟನೇ ಅವುಗಳ ಹೆಸರು ಹೇಳುತ್ತ ಹೋದಳು. ಸ್ವಲ್ಪ ಅನುಮಾನದಿಂದ ಒಂದು ಪ್ರಾಣಿಯನ್ನು ಎತ್ತಿಕೊಂಡೆ ‘ಡೈನೋಸಾರ್‌’ ಎಂದು ಜೋರಾಗಿ ಕೂಗಿ ಹೇಳಿದಳು.

ಅದಾದ ನಂತರ ಟಿರಾನೋಸಾರ್‌, ಟಿ ರೆಕ್ಸ್‌, ಬ್ರ್ಯಾಕಿಯೋಸಾರಸ್‌ ಹೀಗೆ ಆಕೆ ಹೇಳಿದಾಗ ನನಗೆ ಅಚ್ಚರಿಯೆನಿಸಿತು. ಕೊನೆಗೆ ಇವನ್ನೆಲ್ಲ ನೋಡಿದೀಯಾ ಎಂದರೆ ‘ಓ, ನೋಡಿದೀನಿ’ ಎಂದಳು ಮತ್ತೂ ಆಶ್ಚರ್ಯದಿಂದ ‘ಎಲ್ಲಿ?’ ಎಂದೆ. ‘ಮ್ಯೂಸಿಯಮ್‌ನಲ್ಲಿ ಮತ್ತೆ ಜುರಾಸಿಕ್‌ ಪಾರ್ಕ್ ಸಿನಿಮಾದಲ್ಲಿ’ ಎಂದಳು. ‘ಹೌದಾ ಝೂ ನಲ್ಲಿ ನೋಡಿಲ್ವಾ’ ಕೇಳಿದೆ.

ಒಂದು ಕ್ಷಣ ನನ್ನತ್ತ ನೋಡಿ ‘ ಆಂಟೀ, ಇವೆಲ್ಲಾ ಇಲ್ಲ, ಎಕ್ಸಿ$್ಟಂಕ್ಟ್ ಆಗೋಗಿವೆ. ತುಂಬಾ ತುಂಬಾ ಹಿಂದೆ ನಮ್ಮ ಭೂಮಿ ಮೇಲೆ ಇವು ಇದ್ವು’ ಎಂದು ಅವಳು ಹೇಳಿದಾಗ ನನಗೆ ಮತ್ತೂ ಕುತೂಹಲವಾಯ್ತು. ‘ಹೌದಾ ಇಲ್ವಾ ಯಾಕೆ?’ ಅಂದೆ. ‘ಓ.....ನಿಮಗೆ ಗೊತ್ತಿಲ್ವಾ? ನೀವು ‘ದಿ ಲಾಸ್ಟ್‌ ವಲ್ಡ್‌ರ್‍’ ಸಿನಿಮಾ ನೋಡಿ ಅದರಲ್ಲಿ ಹೇಗೆ ಸ್ಕೈಯಿಂದ ಫೈರ್‌ ಬಂದು ಎಲ್ಲ ಸತ್ತು ಹೋದವು ಅಂತಾ ತೋರಿಸಿದಾರೆ’ ಎಂದು ಆ ಪುಟ್ಟಹುಡುಗಿ ಹೇಳಿದಾಗ ನಾನು ನಿಜಕ್ಕೂ ಬೆರಗಾದೆ.

ಯಾವ ವಿಷಯವನ್ನು ಅರಿಯಲು ವಿಜ್ಞಾನಿಗಳು 18 ನೆಯ ಶತಮಾನದವರೆಗೆ ಕಾಯಬೇಕಾಯಿತೋ, ಅದನ್ನೀಗ ಪುಟ್ಟಮಕ್ಕಳು ಕೂಡ ಸಲೀಸಾಗಿ ಹೇಳಬಲ್ಲರು. ಇದುವೇ ಈ ಹೋಮೋ ಸೆಪಿಯನ್ನನ ಸಾಮರ್ಥ್ಯ ಈ ಭೂಮಿಯ ಮೇಲೆ ತನಗಿಂತ ಮೊದಲು ವಿಕಾಸವಾದ ಬೇರೆಲ್ಲ ಪ್ರಾಣಿಗಳನ್ನು ಹಿಂದಿಕ್ಕಿ ಬಲು ವೇಗವಾಗಿ ಭೂಮಿಯ ಮೇಲಿನ ಅತ್ಯಂತ ಬುದ್ಧಿ ಜೀವಿ ಎನಿಸಿದ. ಕೊನೆಗೆ ತನ್ನ ಜೊತೆಗಿದ್ದ ಇತರ ಮಾನವ ಪ್ರಭೇದಗಳನ್ನು ಸಹ ನಾಶ ಮಾಡಿದ ಎನ್ನುತ್ತಾರೆ ವಿಜ್ಞಾನಿಗಳು.

ಜರ್ಮನಿಯಲ್ಲಿ ಡಾಸ್‌ ನಿಯಾಂದ್ರತಲ್‌ ಎನ್ನುವ ಒಂದು ಸ್ಥಳವಿದೆ. 19 ನೆಯ ಶತಮಾನದ ಮಧ್ಯ ಭಾದಲ್ಲಿ ವಿಜ್ಞಾನಿಗಳು ನಿಯಾಂದ್ರತಲ ಮಾನವನ ಪಳೆಯುಳಿಕೆಗಳನ್ನು ಹುಡುಕಿ ತೆಗೆದರು.ಹೋಮೋ ಸೆಪಿಯನ್ನರೊಡನೆ ಸೇರಿ ಸಂತಾನಭಿವೃದ್ಧಿಯನ್ನು ಕೂಡ ಮಾಡಿರಬಹುದಾದ ಇವರು, ಅಳಿದು ಹೋಗಲು, ಮತಿವಂತ ಹೋಮೋಸೆಪಿಯನ್ನರೊಡನೆ ಬದುಕಲು ಸಾಧ್ಯವಾಗದೇ ಇದ್ದದ್ದು ಒಂದು ಕಾರಣವಾಗಿದೆ. ಸುಮಾರು 30,000 ವರ್ಷಗಳ ಹಿಂದೆ ಇವರು ಭೂಮಿಯಮೇಲಿಂದ ಕಾಣೆಯಾದರು ಎನ್ನುತ್ತದೆ ವಿಜ್ಞಾನ.

ಈ ಎರಡೂ ಅಳಿಯುವಿಕೆಯಲ್ಲಿ ಸಂಪೂರ್ಣ ಪ್ರಭೇದಗಳು ಮತ್ತೆ ಭೂಮಿಯ ಮೇಲೆ ಹುಟ್ಟಿಬಾರದಂತೆ ನಾಶವಾದವು ಇವನ್ನು ಸಾಮೂಹಿಕ ವಿನಾಶ ಎಂದು ಕರೆಯುತ್ತಾರೆ. ಸ್ಯಾನ್‌ ಡಿಗೋ ದ ಇನ್‌ ಸ್ಟಿಟ್ಯೂಟ ಆಫ್‌ ಕನ್ಸರ್ವೇಷನ್‌ ರಿಸಚ್‌ರ್‍ ನಲ್ಲಿ ಒಂದು ಪ್ರಾಣಿ ಸಂಗ್ರಹಾಲಯವಿದೆ ಅದನ್ನು ‘ಫೆä್ರೕಜನ್‌ ಝೂ’ ಎಂದು ಕರೆಯುತ್ತಾರೆ. ಯಾಕೆಂದರೆ ಅಲ್ಲಿರುವ ಪುಟ್ಟಪುಟ್ಟಗಾಜಿನ ಬಾಟಲಿಗಳಲ್ಲಿ, ಈಗಾಗಲೇ ಅಳಿದು ಹೋಗಿರುವ , ಅಳಿವಿನ ಅಂಚಿನಲ್ಲಿರುವ ಜೀವಿಗಳ ವಂಶವಾಹಿ ವಸ್ತುವನ್ನು ಸಂಗ್ರಹಿಸಲಾಗಿದೆ.

ಅಳಿಯುವಿಕೆ ಅಥವಾ ವಿನಾಶವೆಂದರೇನು?

ಈ ಭೂಮಿಯ ಮೇಲಿರುವ ಜೀವಿಗಳು ವಿಕಾಸದ ಹಾದಿಯಲ್ಲಿ ತಮ್ಮದೇ ಕೊಡುಗೆಯನ್ನು ನೀಡಿವೆ ಮತ್ತು ಇಲ್ಲಿರುವ ಪ್ರತಿ ಜೀವಿಯ ಮೇಲೆ ಮತ್ತೊಂದರ ಪ್ರಭಾವವಿದೆ ಒಂದರ ಇರುವಿಕೆ ಇನ್ನೊಂದರ ಇರುವಿಕೆಯನ್ನು ಅವಲಂಭಿಸಿದೆ. ನೈಸರ್ಗಿಕ ಅಥವಾ ಕೃತಕ ಕಾರಣಗಳಿಂದಾಗಿ ಯಾವುದೇ ಒಂದು ಪ್ರಭೇದದ ಸಾಮೂಹಿಕ ಅಳಿವು ಮತ್ತೆ ಹಲವು ಪ್ರಬೇದಗಳ ಅಳಿವಿಗೆ ಕಾರಣವಾಗುತ್ತದೆ. ಈ ರೀತಿಯಾಗಿ ದೊಡ್ಡ ಪ್ರಮಾಣದಲ್ಲಿ ಆಗುವ ಜೀವಿಗಳ ವಿನಾಶವನ್ನು ಸಾಮೂಹಿಕ ಮಹಾ ವಿನಾಶ ಎಂದು ಕರೆಯುತ್ತಾರೆ.

ಉದಾಹರಣೆಗೆ ಇಂದಿಗೆ ಸುಮಾರು 65 ಮಿಲಿಯನ್‌ ವರ್ಷಗಳ ಹಿಂದೆ ಕೇವಲ ಆರು ಮೈಲಿ ಅಗಲದ ಕ್ಷುದ್ರ ಗ್ರಹವೊಂದು ಭೂಮಿಗೆ ಅಪ್ಪಳಿಸಿತು. ಆಗ ಉಂಟಾದ ಧೂಳು ಕಸದ ಮೋಡ ಮತ್ತು ಆಗ ಅಗ್ನಿ ಪರ್ವತಗಳು ಸ್ಪೋಟಗೊಂಡವು. ಅದರಿಂದ ಹೊರಬಂದ ಬೆಂಕಿ ಎಲ್ಲೆಡೆ ವ್ಯಾಪಿಸಿತು ಅದು ಉತ್ಪತ್ತಿ ಮಾಡಿದ ಹೊಗೆಯೂ ಆಕಾಶವನ್ನು ವ್ಯಾಪಿಸಿ ದಟ್ಟವಾದ ಕಪ್ಪು ಮೋಡವನ್ನು ಸೃಸ್ಟಿಸಿತು.

ಇದರಿಂದ ಮುಂದಿನ ಹಲವಾರು ದಿನಗಳವರೆಗೆ ಸೂರ್ಯನ ಕಿರಣಗಳು ಭೂಮಿಯನ್ನು ತಲುಪಲಿಲ್ಲ. ಭೂ ಕುಸಿತ ಸುನಾಮಿಗಳು ಇದರೊಂದಿಗೆ ಸೇರಿಕೊಂಡವು. ಸೂರ್ಯನ ಬಿಸಿಲಿಲ್ಲದೆ, ಸೂರ್ಯನ ಬಿಸಿಲಿಲ್ಲದೆ ದ್ಯುತಿ ಸಂಷ್ಲೇಶಣೆಯ ಕ್ರಿಯೆ ನಡೆಯಲ್ಲಿಲ್ಲವಾದ್ದರಿಂದ ಸಸ್ಯ ಸಂಕುಲ ನಾಶವಾಯಿತು, ಅಳಿದುಳಿದ ಸಸ್ಯಾಹಾರಿಗಳು ಆಹಾರದ ಕೊರತೆಯಿಂದ ಅಳಿದವು.

ಎಲ್ಲವೂ ಮುಗಿದು ಹೋದಾಗ ಟಿ-ರೆಕ್ಸ್‌ ಮತ್ತು ಅದರ ಸಂಗಾತಿಗಳೊಂದಿಗೆ 75% ರಷ್ಟುಸಸ್ಯ ಸಂಕುಲವೂ ಅಗಾಧ ಪ್ರಮಾಣದ ಪ್ರಾಣಿ ಸಂಕುಲವೂ ನಶಿಸಿದ್ದವು. 165 ಮಿಲಿಯನ್‌ ವರ್ಷಗಳವರೆಗೆ ಈ ಭೂಮಿಯ ಮೇಲೆ ನೆಲೆಸಿದ್ದ ಜೀವಿಗಳು ಮತ್ತೆಂದೂ ಕಾಣದಂತೆ ಮರೆಯಾದವು. ಈ ವಿನಾಶದಿಂದ ಚೇತರಿಸಿಕೊಳ್ಳಲು ಭೂಮಿಗೆ ಸರಿ ಸುಮಾರು ಹತ್ತು ಮಿಲಿಯನ್‌ ವರ್ಷಗಳು ಬೇಕಾದವು.

ಆರನೆಯ ಸಾಮೂಹಿಕ ಮಹಾವಿನಾಶ

ಇದೀಗ ವಿಜ್ಞಾನಿಗಳು ಆರನೆಯ ಸಾಮೂಹಿಕ ಮಹಾವಿನಾಶವನ್ನು ಕುರಿತು ಎಚ್ಚರಿಸಿದ್ದಾರೆ. ಅದಕ್ಕಾಗಿ ವರ್ಷವನ್ನು 2100 ಎಂದು ಗುರುತಿಸಿ ಬಿಟ್ಟಿದ್ದಾರೆ. ಕೇವಲ ತಾರೀಕನ್ನು ಘೋಷಿಸಬೇಕಾಗಿದೆ. ಅಂದರೆ ನೂರು ವರ್ಷಗಳಿಗೂ ಕಡಿಮೆ ಅವಧಿ ನಮ್ಮ ಮುಂದಿದೆ. ಅವರ ಪ್ರಕಾರ ಇಂದು ಭೂಮಿಯ ಮೇಲೆ ಹಲವಾರು ಶಕ್ತಿಗಳು ಒಟ್ಟಿಗೇ ಪ್ರಹಾರ ಮಾಡುತ್ತಿವೆ. ಇದಕ್ಕೆ ಕಾರಣ ಬೇರಾರೂ ಅಲ್ಲ ಕೇವಲ ಮಾನವರು. ಇವು ಭೂಮಿಯ ಮೇಲಿರುವ ಹಲವಾರು ಜೀವಿ ಪ್ರಭೇದಗಳನ್ನು ನಾಶಮಾಡಿವೆ ಮತ್ತು ಹಿಂದೊಮ್ಮೆ ಮಾನವನೊಂದಿಗೆ ಈ ಭೂಮಿಯನ್ನು ಹಂಚಿಕೊಂಡಿದ್ದ 50 % ರಷ್ಟುಜೀವಿಗಳು ಈಗಾಗಲೇ ಅಳಿವಿನಂಚಿನಲ್ಲಿವೆ. ಭೂಮಿಯನ್ನು ವ್ಯಾಪಿಸಿರುವ ಜನಸಂಖ್ಯೆ ಸುಮಾರು 7.5 ಮಿಲಿಯನ್‌ ಇರುವುದರಿಂದ ಇದು ಅಷ್ಟೇನೂ ಆತಂಕಕಾರಿ ಎನಿಸಬಹುದು. ಆದರೆ ಜೀವ ವಿಕಾಸ ವಿಜ್ಞಾನಿ ಸ್ಟೀಫನ್‌ ಜಾಯ್‌ ಗುಡ್‌ ‘ನಾವು ಜೀವ ವಿಕಾಸದ ಟೇಪನ್ನು ಮರಳಿ ಹಿಂದಕ್ಕೆ (ರಿವೈಂಡ್‌) ಓಡಿಸಿ ಮತ್ತೆ ಪ್ಲೇ ಮಾಡಲು ಪ್ರಾರಂಭಿಸಿದರೆ, ನಾವು ಅದನ್ನೇ ಮತ್ತೆ ನೋಡುತ್ತೇವೆ ಎನ್ನುವ ಯಾವ ಭರವಸೆಯೂ ಇಲ್ಲ’ ಎನ್ನುತ್ತಾರೆ.

2017ರಲ್ಲಿ ನಡೆಸಿದ ಅಧ್ಯಯನವೊಂದು 27,600 ಕಶೇರುಕಗಳ ಅಧ್ಯಯನವೊಂದನ್ನು ನಡೆಸಿತು. ಅದರ ಪ್ರಕಾರ ಇವುಗಳ 30% ನಶಿಸುತ್ತಿವೆ. ಮತ್ತು ಈ ಸಂಖ್ಯೆ ಏರುತ್ತಲೇ ಹೋಗುತ್ತದೆ. ಕಳೆದ ಕೇವಲ 50 ವರ್ಷಗಳಲ್ಲಿ1700 ಪ್ರಭೇದದ ಉಭಯವಾಸಿಗಳು,ಪಕ್ಷಿಗಳು ಮತ್ತು ಸಸ್ತನಿಗಳು ಅಧಿಕ ಅಪಾಯವನ್ನು ಅನುಭವಿಸುತ್ತಿವೆ. ಇದಕ್ಕೆ ಕಾರಣ ಕಿರಿದಾಗುತ್ತಿರುವ ಅವುಗಳ ಆವಾಸಗಳು. ಮುಂದಿನ 50 ವರ್ಷಗಳಲ್ಲಿ ಮಾನವನ ಚಟುವಟಿಕೆಗಳು ಹಲವಾರು ಜೀವಿಗಳನ್ನುವಿನಾಶದಂಚಿಗೆ ದೂಡುತ್ತವೆ.

ಇದನ್ನು ಸಾಬೀತು ಪಡಿಸುವ ಚಿನ್ಹೆಗಳು ಈಗಾಗಲೇ ಗೋಚರಿಸಿವೆ.

1.ಕೀಟಗಳು ಹಿಂದೆಂದೂ ಇಲ್ಲದ ದಾಖಲೆಯ ಪ್ರಮಾಣದಲ್ಲಿ ಅಂದರೆ 40% ರಷ್ಟುಕಡಿಮೆಯಾಗಿವೆ. ಇದೇ ವರ್ಷದ ಅಂದರೆ 2019 ರ ಅಧ್ಯಯನದ ಪ್ರಕಾರ ಭೂಮಿಯ ಮೇಲಿನ ಒಟ್ಟು ಕೀಟಗಳ ದ್ರವ್ಯರಾಶಿ ವರ್ಷಕ್ಕೆ 2.5 % ಕಡಿಮೆಯಾಗುತ್ತಿದೆ. ಇದಕ್ಕೆ ಪ್ರಮುಖ ಕಾರಣ ಮಾನವ ಬಳಸುತ್ತಿರುವ ಕೀಟನಾಶಕಗಳು.ಇದು ಹೀಗೆಯೇ ಮುಂದುವರಿದರೆ ಮುಂದಿನ ನೂರು ವರ್ಷಗಳಲ್ಲಿ ಭೂಮಿಯ ಮೇಲೆ ಯಾವುದೇ ಕೀಟ ಇರುವುದಿಲ್ಲ. ಇದು ಆಹಾರೋತ್ಪಾದನೆಗೆ ಬೇಕಾದ ಪರಾಗ ಸ್ಪರ್ಶದ ಮೇಲೆ ಪರಿಣಾಮ ಬೀರುವುದರಿಂದ ಬಹು ಮುಖ್ಯ ಸಮಸ್ಯೆಯಾಗುತ್ತದೆ.

2. ಈಗಾಗಲೇ ಹೇಳಿದಂತೆ ಹಿಂದೊಂಮ್ಮೆ ಭೂಮಿಯ ಮೇಲಿದ್ದ ಸುಮಾರು ಅರ್ಧದಷ್ಟುಜೀವಿಗಳು ನಶಿಸಿ ಹೋಗಿವೆ. ಈ ಸರಪಣಿ ಮಾನವನನ್ನೂ ತಲುಪುತ್ತದೆ

3. ಜಗತ್ತಿನ ಸುಮಾರು 26,500 ಜೀವಿಗಳು ಅಪಾಯದಲ್ಲಿವೆ. ಐ.ಯು.ಸಿ. ಎನ್‌ ಪ್ರಕಾರ 99.9% ಅತೀ ಅಪಾಯದಲ್ಲಿರುವ ಜೀವಿಗಳು, 67 % ಅಪಾಯದಲ್ಲಿರುವ ಜೀವಿಗಳು ಮುಂದಿನ ದಶಕಗಳಲ್ಲಿ ನಶಿಸಲಿವೆ.

4.2015 ರ ಅಧ್ಯಯನದ ಪ್ರಕಾರ ಪಕ್ಷಿಗಳು, ಸರೀಸೃಪಗಳು, ಉಭಯವಾಸಿಗಳು ಮತ್ತು ಸಸ್ತನಿಗಳ ಸಹಜಕ್ಕಿಂತ 100 ಪಟ್ಟು ಹೆಚ್ಚಾಗಿದೆ.

5.ಮರಗಳ ಕಡಿಯುವಿಕೆ, ಅರಣ್ಯ ನಾಶ, ಅದರಲ್ಲೂ ವಿಶೇಷವಾಗಿ ಅಮೆಝಾನ್‌ ಕಾಡುಗಳಲ್ಲಿ ಇದು ಆತಂಕವನ್ನು ಉಂಟು ಮಾಡಿದೆ.[.[.ಈ ನ ಪ್ರಕಾರ ಜಗತ್ತಿನ ಸುಮಾರು 80% ಜೀವಿಗಳು ಉಷ್ಣ ವಲಯದ ಮಳೆ ಕಾಡುಗಳಲ್ಲಿವೆ. ಜಗತ್ತಿನಾದ್ಯಂತ ಸುಮಾರು 18% ಕಾಡು ನಾಶವಾಗುತ್ತಿದೆ.

7. ಅತಿಕ್ರಮಣಕಾರಿ ಪ್ರಭೇದಗಳು ಜೀವಿಗಳ ನಾಶಕ್ಕೆ ಪ್ರಮುಖ ಕಾರಣವಾಗಿವೆ. ಇತ್ತೀಚಿನ ಅಧ್ಯಯನದ ಪ್ರಕಾರ ಕ್ರಿ.ಶಕ 1500 ರಿಂದ 953 ಪ್ರಭೇದಗಳು ಈ ಕಾರಣಕ್ಕಾಗಿ ಅಳಿದು ಹೋಗಿವೆ.

8.ಸಾಗರಗಳು ಉಷ್ಣ ವರ್ಧಕ ಅಥವಾ ಹಸಿರು ಮನೆ ಅನಿಲಗಳನ್ನು ವಾತಾವರಣದಿಂದ ಹೀರಿಕೊಳ್ಳುತ್ತಿರುವುದರಿಂದ ಹವಳದ ದಿಬ್ಬಗಳು, ಸಾಗರ ಜೀವಿಗಳು ನಶಿಸಿವೆ.

8.ಸಿಹಿ ನೀರಿನಲ್ಲಿ ವಾಸಿಸುವ ಜೀವಿಗಳು ಮಾಲಿನ್ಯ ಮತ್ತು ಬಿಸಿಯೇರುವಿಕೆಯಿಂದ ನಷಿಸುತ್ತಿವೆ. ಬಹುತೇಕ ಸ್ಥಳೀಯ ಪ್ರಭೇದದ ಮೀನುಗಳು ಅಳಿದು ಹೋಗಿವೆ.

9. ಬಿಸಿಯಾದ ಸಾಗರದ ನೀರು ಹಿಗ್ಗಿ ಸಾಗರಗಳ ನೀರಿನ ಮಟ್ಟವನ್ನು ಹೆಚ್ಚಿಸುತ್ತಿರುವುದರಿಂದ ಭೂ ವಾಸಿ ಜೀವಿಗಳು ಅಪಾಯಕ್ಕೆ ಸಿಲುಕಿವೆ. ಇತ್ತೀಚೆಗೆ 2019 ರ ಫೆಬ್ರವರಿಯಲ್ಲಿ ಆಸ್ಪ್ರೇಲಿಯಾ ತನ್ನ ದಂಶಕ ( ಇಲಿಯಂತಹ ಪ್ರಾಣಿ) ಬ್ರಾಂಬ್ಲೆ ಕೇ ಮೆಲಿಮಾಯ್ಸ ಹವಾಮಾನ ಬದಲಾವಣೆಗೆ ಬಲಿಯಾಗಿ ಅಳಿದು ಹೋದ ಮೊದಲ ಜೀವಿ ಎಂದು ಘೋಷಿಸಿದೆ.

10.ಬಿಸಿಯಾಗುತ್ತಿರುವ ಸಾಗರಗಳಿಂದಾಗಿ ಧೃವ ಪ್ರದೇಶದ ಹಿಮಗಡ್ಡೆಗಳು ಹಿಂದೆಂದೂ ಕಾಣದಷ್ಟುವೇಗವಾಗಿ ಕರಗುತ್ತಿವೆ. ಇದು ಮತ್ತೆ ಸಾಗರಗಳ ನೀರಿನ ಮಟ್ಟವನ್ನು ಏರಿಸುತ್ತದೆ.ಅಮೆರಿಕಾದ 17% ಜೀವಿಗಳೆಲ್ಲವೂ ಇದರಿಂದಾಗಿ ತೀವ್ರವಾದ ಅಪಾಯಕ್ಕೆ ಸಿಲುಕಿವೆ.

ಇವೆಲ್ಲವೂ ವಿನಾಶದ ಹಾದಿಯಲ್ಲಿರುವುದನ್ನು ಸಾಬೀತು ಪಡಿಸಿದರೂ ಸಹ ನಾವು 6 ನೆಯ ಮಹಾವಿನಾಶದ ಆರಂಭದಲ್ಲಿದ್ದೇವೆಯೇ? ಅಥವಾ ಮಧ್ಯದಲ್ಲಿದ್ದೇವೆಯೇ? ಎಂಬ ಬಗ್ಗೆ ವಿಜ್ಞಾನಿಗಳಲ್ಲಿ ಭಿನ್ನಾಭಿಪ್ರಾಯಗಳಿವೆ ಆದರೆ ಒಂದಂತೂ ನಿಜ ನಾವು ಈ ಮಹಾ ವಿನಾಶದ ಕಡೆಗೆ ಸಾಗಿದ್ದೇವೆ ಎಂಬುದರ ಬಗ್ಗೆ ಎಲ್ಲರಲ್ಲಿ ಸಮ್ಮತಿಯಿದೆ ಮತ್ತು ಅದರಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ.

ಈ ಮಹಾ ವಿನಾಶದ ನಂತರವೂ ನಾವು (ಮಾನವರು) ಉಳಿಯಬಲ್ಲೆವೇ?

ಈ ಹಿಂದಿನ ಸಾಮೂಹಿಕ ಮಹಾವಿನಾಶ ಬಹುತೇಕ ಜೀವಿಗಳನ್ನು ನಾಶ ಮಾಡಿದ ಮೇಲೂ ಭೂಮಿಯ ಮೇಲೆ ಜೀವ ಮುಂದುವರೆದಿದೆ.ಈ ಮತಿವಂತ ಮಾನವ ತನ್ನ ಸಂತತಿಯನ್ನು ಈ ಮಾನವ ನಿರ್ಮಿತ ಮಹಾ ವಿನಾಶದಿಂದ ರಕ್ಷಿಸ ಬಲ್ಲನೇ ಎನ್ನುವುದು ಬಲು ದೊಡ್ಡ ಪ್ರಶ್ನೆ. ಈಗಾಗಲೇ ಘಟಿಸಲಿರುವ ಘಟನೆಯ ಅರಿವಿರುವುದರಿಂದ ಸೂಕ್ತವಾದ ಮುನ್ನೆಚ್ಚರಿಕೆಯ ಕ್ರಮಗಳನ್ನು ತೆಗೆದುಕೊಂಡರೆ ಸಾಧ್ಯ ಎನ್ನುತ್ತಾರೆ ಕೆಲವು ವಿಜ್ಞಾನಿಗಳು. ಮತ್ತೆ ಕೆಲವರು ವಿನಾಶದ ಬಂಡಿಯ ಗಾಲಿ ಉರುಳಲು ಪ್ರಾರಂಭಿಸಿಯಾಗಿದೆ ಯಾದ್ದರಿಂದ ಸಾಧ್ಯವಿಲ್ಲ ಎನ್ನುತ್ತಾರೆ.

ತೀರಾ ತಡವಾಯಿತೇ?

ಈಗ ಯಾವುದೇ ಕ್ರಮಗಳನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ ನಮಗೆ ಬಹಳ ಕಡಿಮೆ ಸಮಯವಿದೆ ಎನ್ನುವುದು ಅಮೆರಿಕದ ಸ್ಟಾನ್‌ ಫೋರ್ಡ ವಿಶ್ವವಿದ್ಯಾಲಯದ ಪ್ರೊ.ಪೌಲ್‌ ಎರಿಕ್‌ ಅವರ ಅಭಿಪ್ರಾಯ. ಮಾನವನ ಜನಸಂಖ್ಯೆಯನ್ನು ಕಡಿಮೆ ಮಾಡಲು, ಜೀವನ ಶೈಲಿಯನ್ನು ಬದಲಿಸಿಕೊಳ್ಳಲು ಈಗ ಸಮಯವಿಲ್ಲ. ಅದಕ್ಕೆ ಬಹಳ ಕಾಲ ಹಿಡಿಯುತ್ತದೆ ಎನ್ನುವುದು ಅವರ ವಾದ, ಆದರೆ ಪೃಕೃತಿ ಒಮ್ಮೆ ಮುನಿದರೆ ಹೇಗೆ ಪ್ರದೇಶವೊಂದರ ಚಹರೆಯನ್ನೇ ಬದಲಿಸ ಬಹುದು ಎನ್ನುವುದನ್ನು ನಾವು ಕರ್ನಾಟಕ, ಕೇರಳಗಳಲ್ಲಿ ತೀರ ಇತ್ತೀಚೆಗೆ ನೋಡಿದ್ದೇವೆ. ಮುನಿದ ನಿಸರ್ಗದ ಮುಂದೆ ನಮ್ಮೆಲ್ಲ ಚಾಣಾಕ್ಷತೆಯೂ ವ್ಯರ್ಥ ಎನ್ನುವುದೂ ನಮಗೆ ಗೊತ್ತಿದೆ.ಆದರೂ ವಿಜ್ಞಾನಿಗಳು ಆಶಾವಾದಿಗಳು ಪ್ರಭೇದಗಳನ್ನು ರಕ್ಷಿಸುವ ತ್ತೀವ್ರತರನ ಪ್ರಯತ್ನಗಳನ್ನು ಮಾಡಿ ಯಶಸ್ವಿಯಾಗಿದ್ದರೆ. ಹೀಗೆಯೇ ಮುಂದುವರಿದರೆ ವಿನಾಶವನ್ನು ತಡೆಯಲಾಗದಿದ್ದರೂ ಮುಂದೂಡಬಹುದು ಎನ್ನುವುದು ಅವರ ಆಶಯ.

ನಾವೊಬ್ಬರೇ ಉಳಿದು ಮಾಡುವುದೇನು?

ಅಂತೂ ಎಲ್ಲ ಜೀವಿಗಳು ಅಳಿದು ನಾವು ಉಳಿದೆವೆಂದುಕೊಳ್ಳಿ. ನಾವು ಬದುಕಲು ಸಾಧ್ಯವೇ ಅನ್ನ, ಅರಿವೆ, ಔಷಧ್‌,ಹೀಗೆ ಎಲ್ಲಕ್ಕೂ ನಿಸರ್ಗವನ್ನು ನೆಚ್ಚಿರುವ ನಾವು ಬರಿದಾದ ಭೂಮಿಯ ಮೇಲೆ ಹಸಿರಿಲ್ಲದೇ, ಹಕ್ಕಿಗಳ ಇಂಚರವಿಲ್ಲದೇ, ನಮ್ಮ ಸುತ್ತ ಬೇರಾವ ಜೀವಿಯೂ ಇಲ್ಲದೇ ಬದುಕಬಲ್ಲೆವೇ? ಅದೂ ಮತ್ತೆ ಬೋಳು ಬಂಡೆಯ ಮೇಲೆ ಶಿಲಾವಲ್ಕ ಅಂಕುರಿಸಿ ಜೀವಿಯ ಉಗಮಕ್ಕೆ ನಾಂದಿ ಹಾಡುವವರೆಗೆ. ಹಾಗಾದರೆ ನಾವೀಗ ಏನು ಮಾಡಬೇಕು ? ಇರುವವರೆಗೆ ನಿಸರ್ಗಕ್ಕೆ ಅನ್ಯಾಯವೆಸಗದಂತೆ ನಮ್ಮ ತೊಟ್ಟಿಲನ್ನು ನಾವೇ ಬರಿದು ಮಾಡದಂತೆ ಬದುಕಲು ಪ್ರಯತ್ನಿಸಬೇಕು.

- ಸುಮಂಗಲಾ ಎಸ್‌. ಮುಮ್ಮಿಗಟ್ಟಿ