ಚಂದ್ರನಿಂದ ವಾಪಾಸ್ ಆದ ಪಿಎಂ, ಭೂಕಕ್ಷೆಗೆ ಸೇರಿಸಿ ಮಹತ್ತರ ಸಾಧನೆ ಮಾಡಿದ ಇಸ್ರೋ!
ಚಂದ್ರನ ಸುತ್ತ ಸುತ್ತುತ್ತಿದ್ದ ಚಂದ್ರಯಾನ-3 ರ ಪ್ರೊಪಲ್ಷನ್ ಮಾಡ್ಯೂಲ್ (ಪಿಎಂ) ಅನ್ನು ಇಸ್ರೋ ಮತ್ತೆ ಭೂಮಿಯ ಕಕ್ಷೆಗೆ ತಂದಿದೆ. ಅಂದರೆ ಇಸ್ರೋ ತನ್ನ ಬಾಹ್ಯಾಕಾಶ ನೌಕೆಯನ್ನು ಹಿಂಪಡೆಯುವ ಸಾಮರ್ಥ್ಯ ಇದರಿಂದ ಗೊತ್ತಾಗಿದೆ. ಇದಕ್ಕೂ ಮುನ್ನ ಇಸ್ರೋ ವಿಕ್ರಮ್ ಲ್ಯಾಂಡರ್ ಅನ್ನು ಚಂದ್ರನ ಮೇಲ್ಮೈಗೆ ಇಳಿಸುವ ಮೂಲಕ ಇಡೀ ಜಗತ್ತನ್ನು ಅಚ್ಚರಿಗೊಳಿಸಿತ್ತು.
ಬೆಂಗಳೂರು (ಡಿ.6): ಇಸ್ರೋ ಮತ್ತೆ ಇಡೀ ಜಗತ್ತನ್ನೇ ತನ್ನ ಸಾಹಸದಿಂದ ಅಚ್ಚರಿಗೊಳಿಸಿದೆ. ಬಾಹ್ಯಾಕಾಶದಲ್ಲಿ ಸುತ್ತಿತ್ತಿದ್ದ ತನ್ನ ನೌಕೆಯನ್ನು ವಾಪಾಸ್ ಭೂಕಕ್ಷೆಗೆ ಕರೆಸಿಕೊಳ್ಳುವ ಸಾಮರ್ಥ್ಯ ತನಗಿದೆ ಎನ್ನುವುದನ್ನು ಸಾಬೀತು ಮಾಡಿದೆ. ಚಂದ್ರನ ಸುತ್ತ ಸುತ್ತುತ್ತಿರುವ ಚಂದ್ರಯಾನ-3 ಯೋಜನೆಯ ಪ್ರೊಪಲ್ಷನ್ ಮಾಡ್ಯೂಲ್ (PM-ಪಿಎಂ) ಅನ್ನು ಮತ್ತೆ ಭೂಮಿಯ ಕಕ್ಷೆಗೆ ಕರೆಯಲಾಗಿದೆ. ಈಗ ಭೂಮಿಯನ್ನು ಅದರೊಳಗೆ ಅಳವಡಿಸಲಾಗಿರುವ ಶೇಪ್ ಪೇಲೋಡ್ ಮೂಲಕ ಅಧ್ಯಯನ ಮಾಡಲಾಗುತ್ತದೆ. ಶೇಪ್ (SHAPE) ಎಂದರೆ ಸ್ಪೆಕ್ಟ್ರೋಪೋಲಾರಿಮೆಟ್ರಿ ಆಫ್ ಹ್ಯಾಬಿಟಬಲ್ ಪ್ಲಾನೆಟ್ ಅರ್ಥ್. ಈ ಪೇಲೋಡ್ ಅನ್ನು ಮೂರು ತಿಂಗಳವರೆಗೆ ಮಾತ್ರ ನಿರ್ವಹಿಸುವ ಯೋಜನೆಯನ್ನು ಇಸ್ರೋ ಹೊಂದಿತ್ತು. ಏಕೆಂದರೆ ಪಿಎಂ ಇಷ್ಟು ದಿನ ಮಾತ್ರ ಕೆಲಸ ಮಾಡಲು ಸಾಧ್ಯವಾಗಬಹುದು ಎಂದು ಇಸ್ರೋ ಅಂದಾಜು ಮಾಡಿತ್ತು. ಆ ಬಳಿಕ ಪೇಲೋಡ್‌ನ ಸಾಮರ್ಥ್ಯ ಕೊನೆಗೊಳ್ಳುತ್ತದೆ ಎಂದು ತಿಳಿಸಿತ್ತು. ಆದರೆ ಪ್ರೊಪಲ್ಷನ್ ಮಾಡ್ಯೂಲ್‌ನಲ್ಲಿ ಸಾಕಷ್ಟು ಇಂಧನವಿದೆ. ಹಾಗಾಗಿ ಶೇಪ್ ಇನ್ನಷ್ಟು ದಿನಗಳ ಕಾಲ ಕೆಲಸ ಮಾಡಬಹುದು. ಆ ಕಾರಣಕ್ಕಾಗಿ ಇದನ್ನು ಭೂಕಕ್ಷೆಗೆ ತರಲಾಗಿದೆ.
ಭೂಮಿಯನ್ನು ಶೇಪ್ ಮೂಲಕ ಅಧ್ಯಯನ ಮಾಡಲು, ಪ್ರೊಪಲ್ಷನ್ ಮಾಡ್ಯೂಲ್ ಅನ್ನು ಭೂಮಿಯ ಹತ್ತಿರ ಮತ್ತು ಅದರ ಸರಿಯಾದ ಕಕ್ಷೆಯಲ್ಲಿ ತರಬೇಕಾಗಿತ್ತು. ಹಾಗಾಗಿ ಅದನ್ನು 100 ಕಿಲೋಮೀಟರ್ ಎತ್ತರದಲ್ಲಿ ಚಂದ್ರನ ವೃತ್ತಾಕಾರದ ಕಕ್ಷೆಯಿಂದ ಹಿಂದಕ್ಕೆ ತರಲು ಇಸ್ರೋ ನಿರ್ಧಾರ ಮಾಡಿದೆ. ಇದರ ನಂತರ, 2023ರ ಅಕ್ಟೋಬರ್ 9 ರಂದು, ಇಸ್ರೋ ವಿಜ್ಞಾನಿಗಳು ತಮ್ಮ ಕಕ್ಷೆಯನ್ನು ಬದಲಾಯಿಸಲು ಪಿಎಂಗೆ ಸೂಚನೆ ನೀಡಿದ್ದರು.
ಪಿಎಂ ಚಂದ್ರನ ಸುತ್ತ ಒಮ್ಮೆ ಸಾಗಿತನ್ನ ಕಕ್ಷೆಯನ್ನು 150x5112 ಕಿ.ಮೀಗೆ ಏರಿಸಿತು. ಇದಕ್ಕೂ ಮುನ್ನ 100 ಕಿಮೀ ಕಕ್ಷೆಯಲ್ಲಿ 2.1 ಗಂಟೆಗಳಲ್ಲಿ ಚಂದ್ರನ ಸುತ್ತ ಒಂದು ಸುತ್ತು ಹಾಕುತ್ತಿತ್ತು. ನಂತರ ಅದು 7.2 ಗಂಟೆಗಳಲ್ಲಿ ಚಂದ್ರನ ಸುತ್ತು ಹಾಕಲು ಪ್ರಾರಂಭ ಮಾಡಿತು. ಇದಾದ ನಂತರ ವಿಜ್ಞಾನಿಗಳು ಪಿಎಂನಲ್ಲಿ ಇರುವ ಇಂಧನವನ್ನು ಪರಿಶೀಲನೆ ಮಾಡಿದರು. ಇದರ ನಂತರ, ಅಕ್ಟೋಬರ್ 13 ರಂದು, ಎರಡನೇ ಕಕ್ಷೆಯನ್ನು 1.8 ಲಕ್ಷ x 3.8 ಲಕ್ಷ ಕಿಲೋಮೀಟರ್‌ಗಳಿಗೆ ಬದಲಾಯಿಸಲಾಯಿತು. ಇದನ್ನು ಟ್ರಾನ್ಸ್-ಅರ್ಥ್ ಇಂಜೆಕ್ಷನ್ (TEI) ಎಂದು ಕರೆಯಲಾಗುತ್ತದೆ. ಈಗ ಬೇರೆ ಯಾವುದೇ ಗ್ರಹ, ಉಪಗ್ರಹ, ಉಲ್ಕಾಶಿಲೆ ಅಥವಾ ಉಲ್ಕೆಗಳಿಂದ ಭೂಮಿಗೆ ಅಪಾಯವಾಗದ ಸ್ಥಳದಿಂದ ಶೇಪ್ ಭೂಮಿಯ ಮೇಲೆ ಕಣ್ಣಿಡಲಿದೆ.. ಈಗ ಯೋಜನೆಯ ಪ್ರಕಾರ, ಶೇಪ್ ಪೇಲೋಡ್ ಅನ್ನು ಭೂಮಿಯ ಕಡೆಗೆ ತಿರುಗಿಸಲಾಗಿದೆ.
28 ಅಕ್ಟೋಬರ್ 2023 ರಂದು ಸೂರ್ಯಗ್ರಹಣದ ಸಮಯದಲ್ಲಿ ಶೇಪ್ ಮೂಲಕ ವಿಶೇಷ ಕಾರ್ಯಾಚರಣೆಯನ್ನು ಸಹ ನಡೆಸಲಾಗಿತ್ತು. ಈ ಪ್ರಯೋಗದಿಂದ ಇಸ್ರೋಗೆ ನಾಲ್ಕು ರೀತಿಯ ಲಾಭಗಳು ಸಿಕ್ಕಿವೆ. ಮೊದಲನೆಯದು ಚಂದ್ರನಿಂದ ಭೂಮಿಗೆ ವಾಹನವನ್ನು ಮರಳಿ ತರಲು ಯೋಜನೆ ಮತ್ತು ಕಾರ್ಯಗತಗೊಳಿಸುವಿಕೆ. ಈ ರೀತಿಯಲ್ಲಿ ಬಾಹ್ಯಾಕಾಶ ನೌಕೆಯನ್ನು ಹಿಂತಿರುಗಿಸಲು ಸರಿಯಾದ ಸಾಫ್ಟ್‌ವೇರ್ ಮಾಡ್ಯೂಲ್ ಅನ್ನು ರಚಿಸುವುದು. ಮೂರನೆಯದು ಗುರುತ್ವಾಕರ್ಷಣೆಯ ಲಾಭವನ್ನು ಪಡೆದು ಗ್ರಹದ ಸುತ್ತ ಕಕ್ಷೆಯನ್ನು ಬದಲಾಯಿಸುವುದು. ನಾಲ್ಕನೆಯದು, ಚಂದ್ರನ ಮೇಲ್ಮೈಗೆ ಅಪ್ಪಳಿಸದಂತೆ ಪಿಎಂ ಅನ್ನು ರಕ್ಷಿಸುವುದು. ಇದರಿಂದಾಗಿ ಚಂದ್ರನ ಮೇಲೆ ಕಸ ಹರಡಿದಂತಾಗುವುದಿಲ್ಲ.
ಚಂದ್ರಯಾನ-3 ಯಶಸ್ಸಿನ ಬಳಿಕ ಭಾರತದ ನೂತನ ಬಿಲಿಯನೇರ್ ಆಗಿ ಹೊರಹೊಮ್ಮಿದ 60 ವರ್ಷದ ಇಂಜಿನಿಯರ್!
ಚಂದ್ರಯಾನ-3 ರ ಪ್ರೊಪಲ್ಷನ್ ಮಾಡ್ಯೂಲ್ ಪರಮಾಣು ತಂತ್ರಜ್ಞಾನದಿಂದ ಶಕ್ತಿಯನ್ನು ಪಡೆಯುತ್ತಿದೆ. ಕೆಲ ದಿನಗಳ ಹಿಂದೆ ಅಣುಶಕ್ತಿ ಆಯೋಗದ ಅಧ್ಯಕ್ಷ ಅಜಿತ್ ಕುಮಾರ್ ಮೊಹಂತಿ ಇದನ್ನು ಖಚಿತಪಡಿಸಿದ್ದರು. ಪ್ರೊಪಲ್ಷನ್ ಮಾಡ್ಯೂಲ್ನಲ್ಲಿ ಎರಡು ರೇಡಿಯೋಐಸೋಟೋಪ್ ಹೀಟಿಂಗ್ ಯುನಿಟ್ಗಳು (RHU) ಇವೆ ಎಂದು ಅವರು ಹೇಳಿದರು. ಇದು ಒಂದು ವ್ಯಾಟ್ ಶಕ್ತಿಯನ್ನು ಉತ್ಪಾದಿಸುತ್ತದೆ. ಈ ಕಾರಣದಿಂದಾಗಿ, ವಾಹನವು ಚಲಿಸಲು ಅಗತ್ಯವಾದ ತಾಪಮಾನವನ್ನು ಪಡೆಯುತ್ತಿದೆ.
Chandrayan 4: ಚಂದ್ರನ ನೆಲದಿಂದ ಮಣ್ಣನ್ನು ಭೂಮಿಗೆ ವಾಪಾಸ್ ತರಲಿದೆ ಇಸ್ರೋ!
ಆಗಸ್ಟ್ 17 ರಂದು, ಪ್ರೊಪಲ್ಷನ್ ಮಾಡ್ಯೂಲ್ ಅನ್ನು ವಿಕ್ರಮ್ ಲ್ಯಾಂಡರ್‌ನಿಂದ ಬೇರ್ಪಡಿಸಲಾಯಿತು. ಮೊದಲು ಇದರ ಜೀವಿತಾವಧಿ 3 ರಿಂದ 6 ತಿಂಗಳು ಎಂದು ಹೇಳಲಾಗುತ್ತಿತ್ತು. ಆದರೆ ಪಿಎಂ ಇನ್ನೂ ಹಲವು ವರ್ಷಗಳವರೆಗೆ ಕೆಲಸ ಮಾಡಬಹುದು ಎಂದು ಇಸ್ರೋ ಈ ಹೇಳಿಕೆ ನೀಡಿತ್ತು.