Chandrayaan-3: ಇಂಡೋ-ಪಾಕ್ ಮ್ಯಾಚ್‌ಗೂ ಮುಂಚೆ, ಚಂದ್ರನಲ್ಲಿ ಶತಕ ಬಾರಿಸಿದ ಪ್ರಗ್ಯಾನ್ ರೋವರ್!
ಚಂದ್ರನ ಮೇಲೆ ಪರಿಶೋಧನೆಯಲ್ಲಿ ತೊಡಗಿರುವ ಇಸ್ರೋದ ಪ್ರಗ್ಯಾನ್ ರೋವರ್, ಇತ್ತೀಚೆಷ್ಟೇ ಶತಕ ಬಾರಿಸಿದ್ದು ಅಜೇಯವಾಗಿ ಮುನ್ನಡೆಯುತ್ತಿದೆ ಎಂದು ಇಸ್ರೋ ಮಾಹಿತಿ ನೀಡಿದೆ.
ಬೆಂಗಳೂರು (ಸೆ.2): ಶ್ರೀಲಂಕಾದಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳು ಏಷ್ಯಾಕಪ್ ಕದನದಲ್ಲಿ ಕಾದಾಟ ನಡೆಸುವ ಮುನ್ನವೇ ಚಂದ್ರನ ನೆಲದಲ್ಲಿ ಪ್ರಗ್ಯಾನ್ ರೋವರ್ ಶತಕ ಬಾರಿಸಿದ ಮಾಹಿತಿ ಸಿಕ್ಕಿದೆ. ಚಂದ್ರನ ದಕ್ಷಿಣ ಧ್ರುವದಲ್ಲಿ ಪರಿಶೋಧನೆಯಲ್ಲಿ ತೊಡಗಿಕೊಂಡಿರುವ ಪ್ರಗ್ಯಾನ್ ರೋವರ್, 100 ಮೀಟರ್ ಪ್ರಯಾಣವನ್ನು ಪೂರ್ತಿ ಮಾಡಿದೆ ಎಂದು ಇಸ್ರೋ ಟ್ವೀಟ್ ಮೂಲಕ ತಿಳಿಸಿದೆ. ಅದಲ್ಲದೆ, ಇಸ್ರೋ ಅಧ್ಯಕ್ಷ ಎಸ್. ಸೋಮನಾಥ್ ಕೂಡ ಈ ಮಾಹಿತಿ ಹಂಚಿಕೊಂಡಿದ್ದಾರೆ. ಅದರೊಂದಿಗೆ ಶಿವಶಕ್ತಿ ಪಾಯಿಂಟ್‌ನಿಂದ ಪ್ರಗ್ಯಾನ್ ರೋವರ್ ಸಾಗಿರುವ ಹಾದಿಯ ನಕ್ಷೆಯನ್ನೂ ಕೂಡ ಇಸ್ರೋ ಬಿಡುಗಡೆ ಮಾಡಿದೆ. 'ಇತ್ತೀಚೆಗೆ ಚಂದ್ರನ ಮೇಲೆ, ಪ್ರಗಾನ್ ರೋವರ್ 100 ಮೀಟರ್‌ಗಳನ್ನು ಕ್ರಮಿಸಿದೆ ಮತ್ತು ಪ್ರಯಾಣ ಮುಂದುವರಿಯುತ್ತದೆ' ಎಂದು ಇಸ್ರೋ ಟ್ವೀಟ್ ಮಾಡಿದೆ. ಚಂದ್ರನ ದಕ್ಷಿಣ ಧ್ರುವದಲ್ಲಿ ಶಿವಶಕ್ತಿ ಪಾಯಿಂಟ್‌ನಲ್ಲಿ ನಿಂತ ವಿಕ್ರಮ್ ಲ್ಯಾಂಡರ್‌ನಿಂದ ಪಶ್ಚಿಮಕ್ಕೆ ಆ ಬಳಿಕ ಸ್ವಲ್ಪ ಮಟ್ಟಿಗೆ ಉತ್ತರಕ್ಕೆ ಪ್ರಗ್ಯಾನ್ ರೋವರ್ ಚಲಿಸಿದ್ದು, ಇಲ್ಲಿಯವರೆಗೂ 101.4 ಮೀಟರ್ ದೂರವನ್ನು ಕ್ರಮಿಸಿದೆ ಎಂದು ಇಸ್ರೋ ಮಾಹಿತಿ ಹಂಚಿಕೊಂಡಿದೆ. ಇದರ ಬೆನ್ನಲ್ಲಿಯೇ ಇನ್ನರೆಡು ಅಥವಾ ಮೂರು ದಿನಗಳಲ್ಲಿ ಪ್ರಗ್ಯಾನ್ ರೋವರ್ ಹಾಗೂ ವಿಕ್ರಮ್ ಲ್ಯಾಂಡರ್ ನಿದ್ರಾಸ್ಥಿತಿಗೆ ಹೋಗಲಿದೆ ಎಂದು ಇಸ್ರೋ ಅಧ್ಯಕ್ಷ ಮಾಹಿತಿ ನೀಡಿದ್ದಾರೆ.
ಚಂದ್ರಯಾನ-3ಯ ಲ್ಯಾಂಡರ್ ಹಾಗೂ ರೋವರ್ ಈಗಲೂ ಉತ್ತಮವಾಗಿ ಕಾರ್ಯನಿವರ್ಹಿಸುತ್ತಿದೆ. ನಮ್ಮ ಟೀಮ್ ಕೂಡ ಇದರಲ್ಲಿನ ವೈಜ್ಞಾನಿಕ ಉಪಕರಣಗಳನ್ನು ಬಳಸಿಕೊಂಡು ಉತ್ತಮ ಕೆಲಸಗಳನ್ನು ಮಾಡುತ್ತಿದೆ. ಉತ್ತಮ ಸುದ್ದಿ ಏನೆಂದರೆ, ನಮ್ಮ ರೋವರ್ ಅಂದಾಜು 100 ಮೀಟರ್ ದೂರ ಪ್ರಯಾಣ ಕೂಡ ಮಾಡಿದೆ. ಲ್ಯಾಂಡರ್ ಇದ್ದ ಸ್ಥಳದಿಂದ 100 ಮೀಟರ್ ಪ್ರಯಾಣ ಮಾಡಿದೆ. ಶೀಘ್ರದಲ್ಲಿಯೇ ನಾವು ಲ್ಯಾಂಡರ್ ಹಾಗೂ ರೋವರ್ ಎರಡೂ ಕೂಡ ನಿದ್ರಾಸ್ಥಿತಿಗೆ ದೂಡುವಂಥ ಪ್ರಯತ್ನ ಮಾಡಲಿದ್ದೇವೆ. ಮುಂದಿನ ಒಂದು ಅಥವಾ 2 ದಿನಗಳಲ್ಲಿ ಈ ಕೆಲಸ ನಡೆಯಲಿದೆ. ಯಾಕೆಂದರೆ, ಆ ಸಮಯದಲ್ಲಿ ಚಂದ್ರನಲ್ಲಿ ರಾತ್ರಿಯಾಗುತ್ತದೆ. ಇನ್ನು 14 ದಿನಗಳ ಬಳಿಕ ನಾವು ಅವರಿಬ್ಬರಿಂದ ಸಂವಹನ ಸಾಧಿಸಲು ಪ್ರಯತ್ನ ಮಾಡುತ್ತೇವೆ ಎಂದು ಎಸ್ ಸೋಮನಾಥ್, ಆದಿತ್ಯ ಎಲ್1 ಮಿಷನ್ ಉಡಾವಣೆ ಯಶಸ್ವಿಯಾದ ಸಂದರ್ಭದಲ್ಲಿ ಹೇಳಿದ್ದಾರೆ.
ಚಂದ್ರಯಾನ-3 ಆಗಸ್ಟ್ 23 ರಂದು ಚಂದ್ರನ ದಕ್ಷಿಣ ಧ್ರುವವನ್ನು ಸ್ಪರ್ಶಿಸಿತು, ಭಾರತವು ಚಂದ್ರನ ದಕ್ಷಿಣ ಧ್ರುವದಲ್ಲಿ ಬಾಹ್ಯಾಕಾಶ ನೌಕೆಯನ್ನು ಸಾಫ್ಟ್ ಲ್ಯಾಂಡ್ ಮಾಡಿದ ಮೊದಲ ದೇಶ ಎನಿಸಿಕೊಂಡಿತು. ಐತಿಹಾಸಿಕ ಸಾಫ್ಟ್ ಲ್ಯಾಂಡ್‌ನ ಸುಮಾರು ನಾಲ್ಕು ಗಂಟೆಗಳ ನಂತರ, ಪ್ರಗ್ಯಾನ್ ರೋವರ್ ವಿಕ್ರಮ್‌ನಿಂದ ಹೊರಬಂದಿತ್ತು. ಮರುದಿನ, ಲ್ಯಾಂಡರ್ ಮತ್ತು ರೋವರ್ ಪೇಲೋಡ್‌ಗಳನ್ನು ಆನ್ ಮಾಡಲಾಯಿತು. ಚಂದ್ರನ ಮೇಲೆ ಕಾರ್ಯಾಚರಣೆಯನ್ನು ಪ್ರಾರಂಭಿಸಿದ ಕೇವಲ ಒಂದು ವಾರದಲ್ಲಿ, ಚಂದ್ರಯಾನ-3 ರ ಪೇಲೋಡ್‌ಗಳು ಅದ್ಭುತ ಆವಿಷ್ಕಾರಗಳನ್ನು ಮಾಡಿದೆ.
ನಾಸಾ ಪಾರ್ಕರ್ ಸೋಲಾರ್ ಪ್ರೋಬ್‌ಗೂ ಇಸ್ರೋ ಆದಿತ್ಯ ಎಲ್ - 1 ಮಿಷನ್‌ಗೂ ವ್ಯತ್ಯಾಸವೇನು?
ಚಂದ್ರಯಾನ-3 ಸುಮಾರು ಒಂಬತ್ತು ದಿನಗಳ ಕಾಲ ಚಂದ್ರನ ಮೇಲೆ ಕಾರ್ಯಾಚರಣೆ ನಡೆಸುತ್ತಿದೆ. ವಿಕ್ರಮ್ ಮತ್ತು ಪ್ರಗ್ಯಾನ್ ಇಬ್ಬರ ಮಿಷನ್ ಅವಧಿಯು 14 ದಿನಗಳು, ಅಂದರೆ ಅವರ ಮಿಷನ್ ಜೀವನದಲ್ಲಿ ಸುಮಾರು ಐದು ದಿನಗಳು ಉಳಿದಿವೆ. ಪೇಲೋಡ್‌ಗಳು ಚಂದ್ರನ ಮೇಲೆ ಸಲ್ಫರ್ ಇರುವಿಕೆಯನ್ನು ಪತ್ತೆ ಮಾಡಿದೆ., ಚಂದ್ರನ ದಕ್ಷಿಣ ಧ್ರುವದ ಮೊದಲ ತಾಪಮಾನ-ಆಳದ ಪ್ರೊಫೈಲ್ ಅನ್ನು ರಚಿಸುವುದು, ಚಂದ್ರನ ದಕ್ಷಿಣ ಧ್ರುವ ಪ್ರದೇಶದ ಮೇಲಿನ ಪ್ಲಾಸ್ಮಾ ಪರಿಸರವು ವಿರಳವಾಗಿದೆ ಎಂದು ಕಂಡುಹಿಡಿಯುವುದು ಮತ್ತು ಸಂಭಾವ್ಯ ಚಂದ್ರನ ಭೂಕಂಪವನ್ನು ಪತ್ತೆಹಚ್ಚುವಂತಹ ಮೈಲಿಗಲ್ಲುಗಳನ್ನು ಸಾಧಿಸಿದೆ,
Aditya-L1 Mission: ನಿಗದಿತ ಕಕ್ಷೆ ಸೇರಿದ ಆದಿತ್ಯ ಎಲ್1, ನೌಕೆಯಿಂದ ಬೇರ್ಪಟ್ಟ ಉಪಗ್ರಹ!