ಸ್ವದೇಶಿ ಬಾಹ್ಯಾಕಾಶ ನಿಲ್ದಾಣ ನಿರ್ಮಾಣಕ್ಕೆ ದೈತ್ಯ ರಾಕೆಟ್; ಮಂಗಳ ಬಳಿಕ ಶುಕ್ರ ಗ್ರಹಕ್ಕೆ ನೌಕೆ
ಭಾರತವು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಪರ್ಯಾಯವಾಗಿ ಸ್ವಂತ ಬಾಹ್ಯಾಕಾಶ ನಿಲ್ದಾಣವನ್ನು ಸ್ಥಾಪಿಸುವ ಗುರಿಯನ್ನು ಹೊಂದಿದೆ. ಈ ಗುರಿಯನ್ನು ಸಾಧಿಸಲು, ಭಾರತವು ಹೊಸ ಪೀಳಿಗೆಯ ಉಡಾವಣಾ ವಾಹಕವನ್ನು ಅಭಿವೃದ್ಧಿಪಡಿಸಲು ಯೋಜಿಸಿದೆ, ಇದು 2040 ರ ವೇಳೆಗೆ ಮಾನವ ಸಹಿತ ಚಂದ್ರಯಾನಕ್ಕೆ ಸಹಾಯ ಮಾಡುತ್ತದೆ.
ನವದೆಹಲಿ: ಅಮೆರಿಕ ನೇತೃತ್ವದಲ್ಲಿ ವಿವಿಧ ದೇಶಗಳು ಹೊಂದಿರುವ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಪರ್ಯಾಯವಾಗಿ ಸ್ವದೇಶಿ ‘ಭಾರತೀಯ ಅಂತರಿಕ್ಷ ನಿಲ್ದಾಣ’ ಸ್ಥಾಪನೆ ಗುರಿ ಹೊಂದಿರುವ ಕೇಂದ್ರ ಸರ್ಕಾರ ಅದರ ಸಾಕಾರಕ್ಕಾಗಿ ದೈತ್ಯ ರಾಕೆಟ್ ಅಭಿವೃದ್ಧಿಪಡಿಸುವ ಯೋಜನೆಗೆ ಅನುಮತಿ ನೀಡಿದೆ.
ಭಾಗಶಃ ಮರುಬಳಕೆ ಮಾಡಬಹುದಾದ ನವಪೀಳಿಗೆಯ ಉಡ್ಡಯನ ವಾಹಕ (ಎನ್‌ಜಿಎಲ್‌ವಿ) ಅಭಿವೃದ್ಧಿಪಡಿಸುವ ಪ್ರಸ್ತಾವಕ್ಕೆ ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ. ಇಸ್ರೋ ಬಳಿ ಈಗಾಗಲೇ ಇರುವ ದೈತ್ಯ ರಾಕೆಟ್ ‘ಲಾಂಚ್ ವೆಹಿಕಲ್ ಮಾರ್ಕ್ 3’ (ಎಲ್‌ಎಂವಿ-3)ಗಿಂತ ಮೂರು ಪಟ್ಟು ಅಧಿಕ ಭಾರ ಹೊರುವ ಸಾಮರ್ಥ್ಯವನ್ನು ಎನ್‌ಜಿಎಲ್‌ವಿ ಹೊಂದಿರಲಿದೆ. ಎಲ್‌ಎಂವಿ-3ಗೆ ಹೋಲಿಸಿದರೆ ವೆಚ್ಚ ಒಂದೂವರೆ ಪಟ್ಟು ಹೆಚ್ಚಾಗುತ್ತದೆ.
ಎನ್‌ಜಿಎಲ್‌ವಿಗಾಗಿ 8240 ಕೋಟಿ ರು. ವೆಚ್ಚ ಮಾಡಲು ಉದ್ದೇಶಿಸಲಾಗಿದೆ. 2040ರಲ್ಲಿ ಭಾರತ ಕೈಗೊಳ್ಳಲು ಉದ್ದೇಶಿಸಿರುವ ಮಾನವಸಹಿತ ಚಂದ್ರಯಾನಕ್ಕೂ ಈ ರಾಕೆಟ್ ಬಳಕೆಗೆ ಬರಲಿದೆ. ಅಭಿವೃದ್ಧಿ ಹಂತವನ್ನು ಮುಗಿಸಲು 96 ತಿಂಗಳು (8 ವರ್ಷಗಳ) ಗುರಿಯನ್ನು ಸರ್ಕಾರ ನಿಗದಿಪಡಿಸಿದೆ.
ಚಂದ್ರಯಾನ-4ಗೆ ಕ್ಯಾಬಿನೆಟ್ ಗ್ರೀನ್ ಸಿಗ್ನಲ್, 2040ರ ವೇಳೆಗೆ ಚಂದ್ರನ ಮೇಲೆ ಭಾರತೀಯ ಲ್ಯಾಂಡ್!
2040ಕ್ಕೆ ಉಡಾವಣೆ । ₹2104 ಕೋಟಿ ವೆಚ್ಚ
ಚಂದ್ರನ ಮೇಲೆ ಮಾನವರನ್ನು ಇಳಿಸಿ, ಅಧ್ಯಯನ ನಡೆಸಿದ ಬಳಿಕ ಅವರನ್ನು ಸುರಕ್ಷಿತವಾಗಿ ಭೂಮಿಗೆ ಕರೆತರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ಯ ಚಂದ್ರಯಾನ-4 ಯೋಜನೆಗೆ ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿದೆ. ಎಲ್ಲವೂ ಅಂದುಕೊಂಡರೆ 2040ಕ್ಕೆ ಈ ಸಾಹಸ ನಡೆಯಲಿದೆ. ಚಂದ್ರನ ಮೇಲೆ ಮಾನವರನ್ನು ಇಳಿಸಿ, ಅವರನ್ನು ವಾಪಸ್ ಕರೆತರುವ ತಂತ್ರಜ್ಞಾನವನ್ನು ಇಸ್ರೋ ಅನಾವರಣಗೊಳಿಸಬೇಕಿದೆ. ಈ ಯೋಜನೆಗೆ 2104.06 ಕೋಟಿ ರು. ವೆಚ್ಚವಾಗಲಿದೆ.
2008ರಲ್ಲಿ ಇಸ್ರೋ ಚಂದ್ರನ ಅಧ್ಯಯನಕ್ಕೆ ನೌಕೆಯನ್ನು ಕಳುಹಿಸಿತ್ತು. ಚಂದ್ರನ ಕಕ್ಷೆಯಲ್ಲಿ ಸುತ್ತುತ್ತಾ ಅಧ್ಯಯನ ನಡೆಸುವ ಆ ನೌಕೆಗೆ ‘ಚಂದ್ರಯಾನ-1’ ಎಂಬ ಹೆಸರಿಡಲಾಗಿತ್ತು. ಚಂದ್ರನ ಮೇಲೆ ಲ್ಯಾಂಡರ್ ಹಾಗೂ ರೋವರ್ ಇಳಿಸಲು ಚಂದ್ರಯಾನ-2 ಯೋಜನೆಯನ್ನು ಇಸ್ರೋ 2019ರಲ್ಲಿ ಹಮ್ಮಿಕೊಂಡಿತ್ತು. ಸಾಫ್ಟ್‌ವೇರ್ ದೋಷದಿಂದಾಗಿ ಅದು ವಿಫಲವಾಗಿತ್ತು. 2023ರಲ್ಲಿ ಚಂದ್ರಯಾನ-3 ಕೈಗೆತ್ತಿಕೊಂಡು ಚಂದ್ರನ ಮೇಲೆ ಯಶಸ್ವಿಯಾಗಿ ಲ್ಯಾಂಡರ್ ಹಾಗೂ ರೋವರ್ ಅನ್ನು ಇಳಿಸಿತ್ತು.
ಮಂಗಳನ ಬಳಿಕ ಶುಕ್ರಗ್ರಹಕ್ಕೆ ನೌಕೆ
ಚಂದ್ರ, ಸೂರ್ಯ, ಮಂಗಳ ಗ್ರಹದ ಕುರಿತ ಅಧ್ಯಯನವನ್ನು ಯಶಸ್ವಿಯಾಗಿ ನಡೆಸಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ, ಇದೀಗ ಶುಕ್ರ ಗ್ರಹದ ಅಧ್ಯಯನಕ್ಕೆ ಆರ್ಬಿಟರ್ ಕಳುಹಿಸಲು ನಿರ್ಧರಿಸಿದೆ. ಶುಕ್ರ ಗ್ರಹ ಅಧ್ಯಯನ ಕುರಿತ ಯೋಜನೆ ಜಾರಿಗೆ 1236 ಕೋಟಿ ರು. ನೀಡಲು ಕೇಂದ್ರ ಸಚಿವ ಸಂಪುಟ ನಿರ್ಧರಿಸಿದೆ.