ಮೀನಿನ ಒಳಕಿವಿಯ ಮೂಳೆಯಲ್ಲಿ ಭೂಮಿಯ ‘ಜನ್ಮ ರಹಸ್ಯ’ ಅಡಕ..!
ವಿಕಸನ ಅವಧಿಯಲ್ಲಿ ಭೂಮಿಯ ಉಷ್ಣತೆ ಮಾಹಿತಿ ಸಿಕ್ಕರೆ ಸೃಷ್ಟಿ ರಹಸ್ಯ ಅರಿಯಲು ಅನುಕೂಲ, ಮೀನಿನ ಒಳಗಿವಿ ಮೂಳೆಯಲ್ಲಿ ಆಯಾ ಕಾಲದ ಉಷ್ಣದ ಮಾಹಿತಿ ಅಡಕ: ಐಐಎಸ್ಸಿ ಸಂಶೋಧನೆ
ಬೆಂಗಳೂರು(ಆ.17): ಭೂಮಿಯ ‘ಉಷ್ಣ’ ಇತಿಹಾಸವನ್ನು ಮೀನುಗಳ ಒಳಕಿವಿಯ ಮೂಳೆಗಳಿಂದ ಅರಿತುಕೊಳ್ಳಬಹುದು ಎಂದು ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ) ಸಂಶೋಧಕರು ಕಂಡುಕೊಂಡಿದ್ದಾರೆ. ಐಐಎಸ್‌ಸಿಯ ಭೂ ವಿಜ್ಞಾನಗಳ ಕೇಂದ್ರದ ಸಹಾಯಕ ಪ್ರೊಫೆಸರ್ ರಮಾನಂದ ಚಕ್ರವರ್ತಿ, ಪ್ರೊಸೆನ್‌ಜಿತ್ ಘೋಷ್, ಪಿಎಚ್‌ಡಿ ವಿದ್ಯಾರ್ಥಿ ಸುರಜಿತ್ ಮೊಂಡಲ್ ಈ ಬಗ್ಗೆ ಮಾಡಿರುವ ಅಧ್ಯಯನ ಕೆಮಿಕಲ್ ಜಿಯೋಲಜಿ ಜರ್ನಲ್‌ನಲ್ಲಿ ಪ್ರಕಟಗೊಂಡಿದೆ.
ಉತ್ತರ ಅಮೆರಿಕದ ಪೂರ್ವ ಕರಾವಳಿಯಲ್ಲಿನ ವಿವಿಧ ಪ್ರದೇಶದಲ್ಲಿನ ಮೀನುಗಳ ಒಳಕಿವಿಯ ಮೂಳೆ (ಒಟೊಲಿತ್) ಮಾದರಿಗಳನ್ನು ಸಂಗ್ರಹಿಸಿ ಥರ್ಮಲ್ ಲೊನೈಜೇಷನ್ ಮಾಸ್ ಸ್ಪೆಕ್ಟ್ರೋಮೀಟರ್ ಮೂಲಕ ಅವುಗಳಲ್ಲಿನ ಕ್ಯಾಲ್ಸಿಯಂ ಸಮಸ್ಥಾನಿಗಳನ್ನು ವಿಶ್ಲೇಷಿಸಿ ಆ ಮೀನುಗಳಿದ್ದ ಸಮುದ್ರದ ಭಾಗದ ಉಷ್ಣಾಂಶವನ್ನು ನಿಖರವಾಗಿ ಪತ್ತೆ ಹಚ್ಚಲು ವಿಜ್ಞಾನಿಗಳು ಯಶಸ್ವಿ ಆಗಿದ್ದಾರೆ. ತನ್ಮೂಲಕ ಸಮುದ್ರ ದಾಳದಲ್ಲಿ ಫಾಸಿಲ್ ರೂಪದಲ್ಲಿರುವ ಸಹಸ್ರಾರು ವರ್ಷಗಳ ಮೀನಿನ ಮೂಳೆಗಳಿಂದ ಆಯಾ ಕಾಲದ ಉಷ್ಣತೆಯನ್ನು ಅಳೆಯಲು ಸಾಧ್ಯವಾಗಬಹುದು ಎಂದು ವಿಜ್ಞಾನಿಗಳು ಅಭಿಪ್ರಾಯ ಪಟ್ಟಿದ್ದಾರೆ.
ಭವಿಷ್ಯದಲ್ಲಿ ಹೈಬ್ರಿಡ್ ಜೀವಿಗಳದ್ದೇ ದರ್ಬಾರ್! ಹೇಗೆ ಇರಲಿದ್ದಾರೆ ಗೊತ್ತಾ ಹೈಬ್ರಿಡ್ ಮನುಷ್ಯರು?
ಕಿವಿಯ ಮೂಳೆಗಳು ಕ್ಯಾಲ್ಸಿಯಂ ಕಾರ್ಬೋನೆಟ್‌ನಿಂದ ನಿರ್ಮಾಣವಾಗಿರುತ್ತದೆ. ಸಮುದ್ರದಲ್ಲಿನ ಖನಿಜಗಳನ್ನು ಪಡೆದು ಈ ಮೂಳೆಗಳು ಮೀನಿನ ಜೀವಿತಾವಧಿಯಲ್ಲಿ ಬೆಳವಣಿಗೆ ಹೊಂದುತ್ತವೆ. ಆದ್ದರಿಂದ ಕಿವಿಯ ಮೂಳೆಯಲ್ಲಿ ಮೀನಿನ ವಯಸ್ಸು, ವಲಸೆ ಕ್ರಮ ಮತ್ತು ಯಾವ ರೀತಿಯ ನೀರಿನಲ್ಲಿ ಮೀನು ವಾಸಿಸುತ್ತಿತ್ತು ಎಂಬ ಮಾಹಿತಿ ಅಡಕವಾಗಿರುತ್ತದೆ. ಕ್ಯಾಲ್ಸಿಯಂ ಸಮಸ್ಥಾನಿಯ ಅನುಪಾತಕ್ಕೂ ಉಷ್ಣತೆಗೂ ನೇರ ಸಂಬಂಧ ಹೊಂದಿರುವುದು ಸಂಶೋಧನೆ ಖಚಿತ ಪಡಿಸಿರುವುದರಿಂದ ಮೀನುಗಳ ಪಳೆಯುಳಿಕೆಗಳ ಮೇಲೆ ಸಂಶೋಧನೆ ನಡೆಸಿ ಅವುಗಳ ಕಾಲದ ಉಷ್ಣತೆಯನ್ನು ಅಳೆಯಬಹುದು.
ಸಾಗರದ ಉಷ್ಣತೆ ಹೆಚ್ಚಿದರೆ ಹಲವು ಜೀವಿಗಳ ನಾಶ
ಭೂಮಿಯ ಆರಂಭದ ದಿನಗಳ ಇತಿಹಾಸವನ್ನು ಅರಿಯಬೇಕಾದರೆ ಆಗ ಸಮುದ್ರದ ಉಷ್ಣತೆ ಏನಿತ್ತು ಎಂಬುದನ್ನು ತಿಳಿದುಕೊಳ್ಳುವುದು ಅತ್ಯಗತ್ಯ. ಈ ಸಂಶೋಧನೆ ಸಮುದ್ರದಲ್ಲಿದ್ದ ಉಷ್ಣತೆಯನ್ನು ಅಳೆಯಲು ಹೊಸ ದಾರಿಯೊಂದನ್ನು ತೆರೆದಿದೆ.
ಸಾಗರದಲ್ಲಿನ ಜೀವಿಗಳು ಉಷ್ಣತೆಯ ಬಗ್ಗೆ ತೀವ್ರ ಸಂವೇದನೆ ಇಟ್ಟುಕೊಂಡಿರುತ್ತವೆ. ಎರಡು ಡಿಗ್ರಿ ಉಷ್ಣತೆ ಹೆಚ್ಚಾದರೆ ಅನೇಕ ಸಮುದ್ರ ಜೀವಿಗಳು ಅಳಿಯುತ್ತವೆ. ವಾತಾವರಣದಲ್ಲಿನ ಕಾರ್ಬನ್ ಡಯಾಕ್ಸೈಡ್‌ನ ಬಹುಪಾಲು ಅಂತಿಮವಾಗಿ ಸಮುದ್ರದಲ್ಲಿ ಕರಗುತ್ತದೆ. ಕಾರ್ಬನ್ ಡಯಾಕ್ಸೈಡ್ ಅನ್ನು ಕರಗಿಸುವ ಸಮುದ್ರದ ಗುಣ ಕೂಡ ಅದರ ಉಷ್ಣತೆಯನ್ನು ನಿರ್ಧರಿಸುತ್ತದೆ. ಉಷ್ಣತೆ ಹೆಚ್ಚಾದಷ್ಟು ಇಂಗಾಲಾಮ್ಲವನ್ನು ಉಳಿಸಿಕೊಳ್ಳುವ ಸಮುದ್ರದ ಸಾಮರ್ಥ್ಯ ಕುಂಠಿತಗೊಳ್ಳುತ್ತದೆ. ಇದರಿಂದ ಜೀವ ಸಂಕುಲಗಳ ಅಳಿವು ಉಳಿವಿನಲ್ಲಿ ಸಮುದ್ರದ ತಾಪ ಪ್ರಮುಖ ಪಾತ್ರ ವಹಿಸುತ್ತದೆ ಎಂದು ರಮಾನಂದ ಚಕ್ರವರ್ತಿ ಹೇಳುತ್ತಾರೆ.