ಬೆಂಗಳೂರು ನಗರ ಸೇರಿದಂತೆ ರಾಜ್ಯದ 9 ಜಿಲ್ಲೆಗಳಲ್ಲಿ ಮಾರ್ಚ್ 31ರವರೆಗೆ ಲಾಕ್‍ಡೌನ್‍ಗೆ ಸರ್ಕಾರ ಆದೇಶಿಸಿದೆ. ಹೀಗಾಗಿ ಮನಸ್ಸಿರಲಿ,ಇಲ್ಲದಿರಲಿ ಮನೆಯೊಳಗಿರೋದು ಈ ಪ್ರದೇಶದ ಜನರಿಗೆ ಅನಿವಾರ್ಯ. ಕೊರೋನಾ ವಿರುದ್ಧದ ಹೋರಾಟಕ್ಕೆ ಇಂಥ ಒಂದು ದಿಟ್ಟ ನಿರ್ಧಾರವನ್ನು ಬೆಂಬಲಿಸುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವೂ ಹೌದು. ವಾರದಲ್ಲಿ ಒಂದು ದಿನ ರಜೆ ಸಿಕ್ಕರೂ ಮನೆ ಬಿಟ್ಟು ಹೊರಗೆ ಹೋಗಲು ಹವಣಿಸುವ ಮನಸ್ಥಿತಿ ನಗರವಾಸಿಗಳದ್ದು. ಹೀಗಿರುವಾಗ 9 ದಿನಗಳ ಕಾಲ ಮನೆಯೊಳಗೆ ಬಂಧಿಯಾಗಿರೋದು ನಿಜಕ್ಕೂ ಕಷ್ಟದ ಕೆಲಸವೇ. ಆದ್ರೂ ನಮ್ಮ ಹಾಗೂ ಕುಟುಂಬದ ಆರೋಗ್ಯದ ದೃಷ್ಟಿಯಿಂದ ಹೀಗೆ ಮಾಡೋದು ಅನಿವಾರ್ಯ. ವರ್ಕ್ ಫ್ರಂ ಹೋಮ್ ಮಾಡುತ್ತಿರುವವರಿಗೆ ಸಂಜೆ ತನಕ ಕೆಲಸದಲ್ಲೇ ಮುಳುಗಿರುವ ಕಾರಣ ಅಷ್ಟೇನೂ ವ್ಯತ್ಯಾಸ ಗೋಚರಿಸೋದಿಲ್ಲ. ಆದ್ರೆ ಕೆಲಸವೇ ಇಲ್ಲದೆ ಮನೆಯಲ್ಲಿ ಕುಳಿತುಕೊಳ್ಳುವವರಿಗೆ ಮನೆಯ ನಾಲ್ಕು ಗೋಡೆಗಳೊಳಗೆ ಟೈಂ ಪಾಸ್ ಮಾಡೋದು ಹೇಗಪ್ಪ ಎಂಬ ಚಿಂತೆ ಕಾಡೋದು ಗ್ಯಾರಂಟಿ. ಅಂಥವರು ಏನ್ ಮಾಡ್ಬಹುದು?

ಕೊರೋನಾ ರಜೆಯಲ್ಲಿ ಮಕ್ಕಳನ್ನು ಬ್ಯುಸಿಯಾಗಿಡಲು ಇಲ್ಲಿವೆ ಐಡಿಯಾಗಳು

ಹೊಸ ರೆಸಿಪಿ ಟ್ರೈ ಮಾಡಿ
ಆಫೀಸ್‍ಗೆ ಹೋಗೋವಾಗಲಂತೂ ನಿತ್ಯ ಗಡಿಬಿಡಿ. ಹೊಸ ರೆಸಿಪಿ ರುಚಿ ನೋಡಬೇಕಂತ ಬಾಯಿ ಬಯಸಿದ್ರೂ ಟ್ರೈ ಮಾಡೋಕೆ ಟೈಂ ಸಿಗುತ್ತಿರಲಿಲ್ಲ. ಆದ್ರೆ ಈಗ ಬೇಕಾದಷ್ಟು ಟೈಂ ಕೈಯಲ್ಲಿದೆ. ಸೋ ಸೌಟು ಹಿಡಿದು ನಳಪಾಕ ಸಿದ್ಧಪಡಿಸಿ. ಆನ್‍ಲೈನ್‍ನಲ್ಲಿ ಈಗಂತೂ ಬೇಕಾದಷ್ಟು ಹೊಸ ರೆಸಿಪಿಗಳು ಸಿಗುತ್ತವೆ. ಅವುಗಳನ್ನು ಟ್ರೈ ಮಾಡಿ ಮನೆಮಂದಿಗೆ ಬಡಿಸಿ. ಎಲ್ಲರೂ ಬಾಯಿ ಚಪ್ಪರಿಸಿಕೊಂಡು ತಿಂದು ನಿಮ್ಮ ಕೈ ರುಚಿ ಹೊಗಳಿದ್ರೆ ಮನಸ್ಸಿಗೆ ಆನಂದ ಸಿಗೋದು ಗ್ಯಾರಂಟಿ. ಅಡುಗೆ ಮಾಡೋದ್ರಿಂದ ಸಮಯ ಸರಿದದ್ದೇ ತಿಳಿಯೋದಿಲ್ಲ ಎಂಬುದರ ಜೊತೆಗೆ ಮನಸ್ಸಿಗೆ ರಿಲ್ಯಾಕ್ಸ್ ಆಗುತ್ತದೆ ಕೂಡ. 

ಪುಸ್ತಕಗಳನ್ನು ಓದಿ
ಆಫೀಸ್-ಮನೆ ನಡುವಿನ ಒತ್ತಡದಲ್ಲಿ ನಿಮ್ಮ ಓದುವ ಹವ್ಯಾಸ ನಿಂತೇ ಹೋಗಿರಬಹುದು. ಮನೆಯಲ್ಲಿ ಕುಳಿತು ಟೈಂ ಪಾಸ್ ಮಾಡೋದು ಹೇಗೆ ಎಂಬ ಚಿಂತೆ ಕಾಡುತ್ತಿದ್ರೆ ಪುಸ್ತಕ ಹಿಡಿದು ಕೂತುಕೊಳ್ಳಿ. ಪುಸ್ತಕಗಳಿಗಿಂತ ಉತ್ತಮವಾದ ಗೆಳೆಯರು ಬೇರಿಲ್ಲ ಎಂಬ ಮಾತಿದೆ. ಸಮಯ ಕಳೆಯಲು ಪುಸ್ತಕಗಳು ನೆರವು ನೀಡುತ್ತವೆ. ಜೊತೆಗೆ ನಿಮ್ಮ ಜ್ಞಾನವನ್ನೂ ಹೆಚ್ಚಿಸುತ್ತವೆ. 

ಎಕ್ಸಾಂ ಟೆನ್ಷನ್ ಇಲ್ಲ, ಬೆಳಗ್ಗಿನ ಗಡಿಬಿಡಿಯಿಲ್ಲ, ಆದ್ರೂ ಏನೋ ಮಿಸ್ಸಿಂಗ್!

ಮನೆಮಂದಿ ಒಟ್ಟಿಗೆ ಕೂತು ಸಿನಿಮಾ ನೋಡಿ
ಮನೆಮಂದಿಯೆಲ್ಲ ಒಟ್ಟಿಗೆ ಕುಳಿತು ಸಿನಿಮಾ ನೋಡದೆ ಬಹಳಷ್ಟು ದಿನಗಳೇ ಆಗಿರಬಹುದು. ಮಕ್ಕಳೂ ಸೇರಿದಂತೆ ಮನೆಮಂದಿಯೆಲ್ಲ ಒಟ್ಟಿಗೆ ಕುಳಿತು ನೋಡಬಹುದಾದ ಒಂದಿಷ್ಟು ಸಿನಿಮಾಗಳನ್ನು ಪಟ್ಟಿ ಮಾಡಿ. ದಿನಕ್ಕೆ ಕನಿಷ್ಠ ಒಂದು ಸಿನಿಮಾವನ್ನಾದ್ರೂ ಎಲ್ಲರೂ ಒಟ್ಟಿಗೆ ಕುಳಿತು ನೋಡಿ. ಪಾಪ್‍ಕಾರ್ನ್ ಅಥವಾ ಕುರುಕಲು ತಿಂಡಿಗಳನ್ನು ತಿನ್ನುತ್ತ ನಗೆಚಟಾಕಿ ಹಾರಿಸುತ್ತ ಮನೆಮಂದಿ ಒಟ್ಟಾಗಿ ಸಿನಿಮಾ ನೋಡುವ ಮಜಾನೇ ಬೇರೆ. 

ಮಕ್ಕಳೊಂದಿಗೆ ಆಟವಾಡಿ
ಆಫೀಸ್ ಇರುವಾಗ ಮಕ್ಕಳೊಂದಿಗೆ ಮಾತನಾಡಲು, ಆಟವಾಡಲು ಸಮಯವೇ ಸಿಗುತ್ತಿಲ್ಲ ಎಂದು ಕಂಪ್ಲೆಂಟ್ ಮಾಡುತ್ತಿದ್ದ ಪೋಷಕರಿಗೆ ಈಗ ತಮ್ಮ ಆಸೆಯನ್ನು ತೀರಿಸಿಕೊಳ್ಳಲು ಒಳ್ಳೆಯ ಅವಕಾಶ ಸಿಕ್ಕಿದೆ. ಮಕ್ಕಳೊಂದಿಗೆ ಮಕ್ಕಳಾಗಿ ಬೆರೆಯಿರಿ, ಅವರೊಂದಿಗೆ ಬಾಯ್ತುಂಬಾ ಹರಟಿ, ಆಟವಾಡಿ. ಅವರ ಬೇಕು-ಬೇಡಗಳಿಗೆ ಕಿವಿಯಾಗಿ. ಮಕ್ಕಳು ಜೊತೆಗಿದ್ರೆ ಸಮಯ ಸರಿದದ್ದೇ ತಿಳಿಯಲ್ಲ. ಅವರೊಂದಿಗೆ ಆಟವಾಡುತ್ತಿದ್ರೆ ಮನಸ್ಸಿನ ಬೇಗುದಿಗಳೆಲ್ಲ ದೂರವಾಗುತ್ತವೆ. 

ವಾರ್ಡ್‍ರೋಪ್‍ನಲ್ಲಿ ಬಟ್ಟೆಗಳನ್ನು ನೀಟಾಗಿಡಿ
ವಾರ್ಡ್‍ರೋಪ್‍ನಲ್ಲಿರುವ ಬಟ್ಟೆಗಳನ್ನೆಲ್ಲ ಹೊರಗೆ ತೆಗೆದು ನೀಟಾಗಿ ಮಡಚಿ, ಜೋಡಿಸಿಡಿ. ನಿತ್ಯ ಬಳಕೆಯ ಡ್ರೆಸ್‍ಗಳು, ಆಫೀಸ್‍ಗೆ ಹಾಕುವ ಡ್ರೆಸ್‍ಗಳು, ಪಾರ್ಟಿಗೆ ಹಾಕುವಂತಹ ಡ್ರೆಸ್‍ಗಳನ್ನು ಬೇರೆ ಬೇರೆಯಾಗಿಡಿ. ಇದರಿಂದ ಎಲ್ಲಿಗಾದ್ರೂ ಹೋಗುವಾಗ ಎಲ್ಲವನ್ನು ಎಳೆದು ಗುಡ್ಡೆ ಹಾಕಿಕೊಂಡು ಹುಡುಕುವ ಅನಿವಾರ್ಯತೆ ಇರುವುದಿಲ್ಲ. ವಾರ್ಡ್‍ರೋಪ್ ಕ್ಲೀನಾಗಿದ್ರೆ ಮನಸ್ಸಿಗೂ ಖುಷಿಯಾಗುತ್ತದೆ. 

ಮನೆಯೇ ಮಂತ್ರಾಲಯ ಅಂತ ಪ್ರೂವ್‌ ಮಾಡಿದ ಕೊರೋನಾ

ಮನೆ ಕ್ಲೀನ್ ಮಾಡಿ
ಮನೆಯಲ್ಲಿ ಬದಿ ಬದಿಯಲ್ಲಿರುವ ಧೂಳು-ಕೊಳೆಗಳನ್ನು ಕ್ಲೀನ್ ಮಾಡಿ. ಅನಗತ್ಯವಾದ ವಸ್ತುಗಳನ್ನೆಲ್ಲ ಒಂದೆಡೆ ಕೂಡಿಡಿ. ಕೊರೋನಾ ಭೀತಿ ತಗ್ಗಿದ ಬಳಿಕ ಅವುಗಳನ್ನು ರದ್ದಿಗೆ ಹಾಕುವ ವ್ಯವಸ್ಥೆ ಮಾಡಬಹುದು. ಮನೆ ಕ್ಲೀನಾಗಿದ್ರೆ ಮಸನ್ಸು ಕೂಡ ರಿಲ್ಯಾಕ್ಸ್ ಆಗಿರುತ್ತೆ. ಜೊತೆಗೆ ಬೇಸಿಗೆಯಲ್ಲಿ ಧೂಳು ಜಾಸ್ತಿ, ಹೀಗಾಗಿ ಮಕ್ಕಳು, ವೃದ್ಧರು ಸೇರಿದಂತೆ ಮನೆಮಂದಿಯ ಆರೋಗ್ಯದ ದೃಷ್ಟಿಯಿಂದ ಮನೆಯನ್ನು ಶುಚಿಯಾಗಿಟ್ಟುಕೊಳ್ಳೋದು ಅಗತ್ಯ ಕೂಡ. 
ಇನ್‍ಡೋರ್ ಗೇಮ್ಸ್ ಆಡಿ: ಚೆಸ್, ಕೇರಂ ಸೇರಿದಂತೆ ಮನೆಯೊಳಗೇ ಕುಳಿತು ಆಡಬಹುದಾದ ಗೇಮ್ಸ್ ಅನ್ನು ಮನೆಮಂದಿಯೆಲ್ಲ ಸೇರಿ ಆಡಿ. ಇದರಿಂದ ಟೈಂ ಪಾಸ್ ಆಗೋವ ಜೊತೆಗೆ ಕುಟುಂಬ ಸದಸ್ಯರ ನಡುವಿನ ಬಾಂಧವ್ಯ ಹೆಚ್ಚುತ್ತದೆ. 

ಸ್ನೇಹಿತರೊಂದಿಗೆ ಫೋನ್‍ನಲ್ಲಿ ಮಾತನಾಡಿ
ಮನೆಯೊಳಗೇ ಇರೋದ್ರಿಂದ ಮನಸ್ಸಿಗೆ ಆಗಾಗ ಕಿರಿಕಿರಿ ಅನುಭವವಾಗುತ್ತಿರುತ್ತದೆ. ಹೊರಗೆ ಹೋಗಬೇಕು,ಯಾರೊಂದಿಗಾದ್ರೂ ಮಾತನಾಡಬೇಕು ಎಂಬ ಬಯಕೆ ಮೂಡುತ್ತದೆ. ಇಂಥ ಸಮಯದಲ್ಲಿ ಸ್ನೇಹಿತರಿಗೋ ಅಥವಾ ಬಂಧುಗಳಿಗೋ ಫೋನ್ ಮಾಡಿ ಮಾತನಾಡಿ.ಇದರಿಂದ ಮನಸ್ಸು ಹಗುರವಾಗುತ್ತದೆ.