Asianet Suvarna News Asianet Suvarna News

ಅಂದು ಗಂಡನಿಂದಲೇ ರೇಪ್ ಆದವಳೀಗ ಯಶಸ್ವಿ ಫಿಟ್‌ನೆಸ್ ಟ್ರೈನರ್

ಅವನು ನನ್ನ ಹೊಟ್ಟೆಗೆ ಜೋರಾಗಿ ಒದ್ದ. ನನಗೆ ವಿಪರೀತ ಬ್ಲೀಡಿಂಗ್ ಶುರುವಾಯ್ತು. ನನ್ನ ಹೊಟ್ಟೆಯೊಳಗೆ ಆಗಷ್ಟೇ ಸೇರಿಕೊಂಡಿದ್ದ ಐದು ವಾರಗಳ ಕಂದನನ್ನು ನಾನು ಕಳೆದುಕೊಂಡಿದ್ದೆ. ಒಂದರ್ಥದಲ್ಲಿ ನಾನು ನನ್ನೊಳಗೇ ಸತ್ತು ಹೋಗಿದ್ದೆ. ಆ ಕ್ಷಣ ಏನೂ ತೋಚಲಿಲ್ಲ. ಮರುಕ್ಷಣ ಅದ್ಯಾವುದೋ ಒಂದು ಛಲವನ್ನಿಟ್ಟುಕೊಂಡು ನಾನು ಬದುಕಬೇಕು ಅಂದುಕೊಂಡೆ. ನನಗಾಗಿ ನಾನು ಬದುಕ್ತೀನಿ ಅಂತ ಛಲ ತೊಟ್ಟೆ.

 

The success story of Lady who raped by her husband
Author
Bengaluru, First Published Feb 21, 2020, 2:33 PM IST

ಹೆಣ್ಣುಮಕ್ಕಳಿಗೆ ಹೋರಾಡಿ ಬದುಕುವ ಶಕ್ತಿಯನ್ನು ಭಗವಂತ ಹುಟ್ಟುವಾಗಲೇ ಕೊಟ್ಟಿರುತ್ತಾನೆ ಎಂಬ ಮಾತಿದೆ. ಈ ಕಾರಣಕ್ಕೇ ಅವಳು ಕೊನೆಯವರೆಗೂ ಜೀವವೇ ಹೋಗುವಂಥಾ ಸನ್ನಿವೇಶದಲ್ಲೂ ಪಾರಾಗಿ ಬರಬಲ್ಲಳು ಎನ್ನುತ್ತಾರೆ ಹಿರಿಯರು. ಆ ಮಾತು ಸರಿಯೋ ತಪ್ಪೋ ಗೊತ್ತಿಲ್ಲ. ಆದರೆ ಜಾಸ್ಮಿನ್ ಎಂಬ ಹೆಣ್ಣುಮಗಳ ಕಥೆ ಕೇಳಿದರೆ ಎಂಥಾ ಕಷ್ಟದಲ್ಲಿರುವವರಿಗೂ ಸ್ಪೂರ್ತಿ ಬರುತ್ತೆ. ಸಾಯ್ತೀನಿ ಅಂತ ಹೊರಟವರಿಗೆ ಬದುಕಿನ ದಾರಿ ತೋರಿಸುತ್ತೆ.

ಈಕೆಯ ಹೆಸರು ಜಾಸ್ಮಿನ್. ಕೇರಳದ ಚಿಕ್ಕ ಹಳ್ಳಿಯಲ್ಲಿ ಜನನ. ಅಪ್ಪ ಅಮ್ಮ ಕೆಳ ಮಧ್ಯಮವರ್ಗದವರು. ಜಾಸ್ಮಿನ್ ಬಾಲ್ಯ ಸಾಧಾರಣವಾಗಿತ್ತು. ಸ್ಕೂಲ್ ಡೇಸ್ ನಲ್ಲಿ ಆಕೆಗಿನ್ನೂ ನೆನಪಿರೋದು ಐಸ್ ಕ್ಯಾಂಡಿ ಚೀಪುತ್ತಾ ಶಾಲೆಯಿಂದ ವಾಪಾಸಾಗ್ತಿದ್ದ ದಿನಗಳು. ಬಹುಶಃ ಬಾಲ್ಯದಲ್ಲಿ ತನಗೊಂದು ಚೆಂದದ ನೆನಪು ಅಂದರೆ ಅದೊಂದೇ ಅಂತಾರೆ ಜಾಸ್ಮಿನ್.
 

ಅದೊಂದು ದಿನ ಶಾಲೆಯಿಂದ ಹಿಂತಿರುವಾಗ ಮನೆಯಲ್ಲಿ ಅಪರಿಚಿತರು ಕೂತಿದ್ದರು. 'ನೀನು ಕೂಡಲೇ ಮುಖ ತೊಳೆದು ಬಟ್ಟೆ ಬದಲಾಯಿಸಿ ಅವರಿಗೆ ಟೀ ಸರ್ವ್ ಮಾಡು' ಅಂದರು ಅಮ್ಮ. ಜಾಸ್ಮಿನ್‌ಗೆ ಇದೇನು ಅಂತ ಅರ್ಥ ಆಗಲಿಲ್ಲ. ಅಮ್ಮ ಹೇಳಿದಂತೆ ಮಾಡಿದಳು. ಆದರೆ ಆಮೇಲೆ ಗೊತ್ತಾಯ್ತು, ಅವರು ಬಂದದ್ದು ತನ್ನ ಮದುವೆ ವಿಷಯ ಮಾತನಾಡಲಿಕ್ಕಾಗಿ ಅಂತ. ಆಗ ಜಾಸ್ಮಿನ್ಗಿನ್ನೂ ಹದಿನೇಳು.
 

ಬಹಳ ಗೊಂದಲದ ದಿನಗಳಲ್ಲಿ ಜಾಸ್ಮಿನ್ ತನಗೀಗಲೇ ಮದುವೆ ಬೇಡ ಅಂತ ಹಠ ಹಿಡಿದಳು. ಆದರೆ ಅವಳ ಮಾತಿಗೆ ಕಿವಿಗಿಡುವವರು ಅಲ್ಯಾರೂ ಇರಲಿಲ್ಲ. ಕಣ್ಮುಚ್ಚಿ ತೆರೆಯುವುದರೊಳಗೆ ಮದುವೆ ಸಿದ್ಧತೆಗಳೆಲ್ಲ ಪೂರ್ಣಗೊಂಡು ಮದುವೆ ದಿನವೂ ಬಂದೇ ಬಿಟ್ಟಿತು. ಆಗ ಜಾಸ್ಮಿನ್ ಗೆ ಹದಿನೆಂಟು ವರ್ಷ ತುಂಬಿ ಮೂರು ದಿನಗಳಾಗಿದ್ದವು.

 

ಈಕೆ ತನ್ನ ಗಂಡನನ್ನು ಮೊದಲ ಸಲ ನೋಡಿದ್ದು ವಿವಾಹದ ಮಂಟಪದಲ್ಲೇ.

 

'ಮದುವೆ ದಿನ ರಾತ್ರಿ ಆತನ ನಿಜವಾದ ಮುಖ ದರ್ಶನವಾಯ್ತು. ನಾನು ರೂಮ್‌ಗೆ ಹೋದಾಗ ಆತ ನನ್ನ ಮೈ ಮೇಲೆ ಎರಗಿದ. ಹಾಸಿಗೆ ಮೇಲೆ ಕೆಡವಿದ. ನಾನು ಕಿರುಚಾಡಿದೆ. ಅತ್ತು ಕರೆದೆ. ಆದರೆ ಯಾರೂ ರೆಸ್ಪಾನ್ಸ್ ಮಾಡಲೇ ಇಲ್ಲ. ಅವರಿಗೆ ಅದು ಸಾಮಾನ್ಯವಾಗಿತ್ತು. ಚಿಕ್ಕ ವಯಸ್ಸಿನಲ್ಲಿಯೇ ಮದುವೆಯಾಗುವ ಹುಡುಗಿಯರು ಮೊದಲ ರಾತ್ರಿ ಹಾಗೆಲ್ಲ ಕಿರುಚಿಕೊಳ್ಳೋದನ್ನು ಅವರು ಎಂದೂ ಗಂಭೀರವಾಗಿ ಪರಿಗಣಿಸುತ್ತಲೇ ಇರಲಿಲ್ಲ. ದಿನವೂ ಇದೇ ರೀತಿ ಕ್ರೂರವಾಗಿ ವರ್ತಿಸುತ್ತಿದ್ದ. ಆಮೇಲೆ ಗೊತ್ತಾಯಿತು, ಅವನಿಗೆ ಮಾನಸಿಕ ಸಮಸ್ಯೆ ಇದೆ ಅಂತ.

 

ಪ್ರತೀ ಸಲ ಬಾಂಬ್ ಸ್ಪೋಟಿಸಿದಾಗಲೂ ಈ ಮಗು ನಗುತ್ತಿತ್ತು!

 

ಈ ಸಂಬಂಧದಲ್ಲಿ ಜಾಸ್ಮಿನ್ ಗೆ ಒಂದು ವರ್ಷ ಮುಂದುವರಿದಳು. ಆಮೇಲೆ ತಾನಿಲ್ಲಿದ್ದರೆ ಜೀವವೇ ಹೋಗಿಬಿಡಬಹುದು ಅಂತ ಭಯವಾಗಿ ಡಿವೋರ್ಸ್‌ಗೆ ಅಪ್ಲೈ ಮಾಡಿದಳು. ಗಂಡನಿಂದ ವಿಚ್ಚೇದನ ಪಡೆದು ಹೊರಬಂದಾಗ ತುಸು ನಿರಾಳವಾಯ್ತು. ಆದರೆ ಆ ಖುಷಿಯೂ ಹೆಚ್ಚು ದಿನ ಇರಲಿಲ್ಲ. ಅವಳ ತವರಲ್ಲಿ ಮರು ಮದುವೆಗೆ ಒತ್ತಡ ಶುರುವಾಯ್ತು. ಈ ಬಾರಿ ಅವರ ಮಾತು ಕೇಳಲು ಜಾಸ್ಮಿನ್ ರೆಡಿ ಇರಲಿಲ್ಲ. ಆದರೆ ವಿಚ್ಚೇದಿತೆಯನ್ನು ಹೆಚ್ಚು ಕಾಳ ಮನೆಯಲ್ಲಿಟ್ಟುಕೊಳ್ಳಲು ಮನೆಯವರೂ ಸಿದ್ಧರಿರಲಿಲ್ಲ. ಕೊನೆಗೂ ಒಂದು ಶರತ್ತಿನೊಂದಿಗೆ ಮರು ಮದುವೆ ಒಪ್ಪಿದಳು ಜಾಸ್ಮಿನ್. ಆ ಷರತ್ತು ಮತ್ತೇನೂ ಅಲ್ಲ. ತಾನು ಇಷ್ಟಪಟ್ಟವರ ಜೊತೆಗೇ ಮದುವೆ ಮಾಡಬೇಕು ಅನ್ನುವುದು.

ನೆಯವರು ಇದಕ್ಕೊಪ್ಪಿದರು. ತನ್ನನ್ನು ನೋಡಲು ಬಂದವರಲ್ಲಿ ಒಬ್ಬ ವ್ಯಕ್ತಿ ಜಾಸ್ಮಿನ್‌ಗೆ ಇಷ್ಡವಾದ. ಅವನ ನಡೆ ನುಡಿ ಎಲ್ಲ ಇಷ್ಟವಾಯ್ತು. ಜಾಸ್ಮಿನ್ ಅವನನ್ನು ಮದುವೆಯಾಗಲು ಒಪ್ಪಿಗೆ ಸೂಚಿಸಿದಳು. ಮುಂದೆ ತನ್ನೆಲ್ಲ ನೋವು ಮರೆತು ಖುಷಿಯಾಗಿರಬಹುದು ಅನ್ನುವ ಕನಸಿನೊಂದಿಗೆ ಅವನೊಂದಿಗೆ ಮತ್ತೆ ಗೃಹಸ್ಥಾಶ್ರಮಕ್ಕೆ ಅಡಿಯಿಟ್ಟಳು.
 

ಆದರೆ ಮೊದಲ ರಾತ್ರಿಯಲ್ಲಿ ಅವಳ ಕನಸುಗಳೆಲ್ಲ ನುಚ್ಚುನೂರಾದವು. ಮೊದಲ ರಾತ್ರಿಯ ದಿನ ಅವಳ ಮುಖದ ಮೇಲೆ ಹೊಡೆದ. ಅವಳು ಥರಗುಟ್ಟಿಹೋದಳು. ಆಮೇಲೆ ಅವಳನ್ನು ಬಳಸಿ ಅತ್ಯಾಚಾರ ಮಾಡಿದ. ಆತ ಒಬ್ಬ ಡ್ರಗ್ ಅಡಿಕ್ಟ್ ಆಗಿದ್ದ. ಜಾಸ್ಮಿನ್ ಆಘಾತದಲ್ಲೇ ದಿನ ದಿನದೂಡತೊಡಗಿದಳು. ಒಮ್ಮೆ ಅವಳು ಗರ್ಭಿಣಿ ಅನ್ನೋದು ಗೊತ್ತಾಯ್ತು. ಅದನ್ನವಳು ಗಂಡನಿಗೂ ಹೇಳಿದಳು. ಆತ ಅವಳ ಹೊಟ್ಟೆಗೆ ಬಲವಾಗಿ ಒದ್ದ. ಒಳಗೆ ಬುಳು ಬುಳುನೆ ರಕ್ತ ಹರಿಯತೊಡಗಿತು. ಆಗ ಜಾಸ್ಮಿನ್ ಐದು ವಾರಗಳ ಗರ್ಭಿಣಿಯಾಗಿದ್ದಳು. ಗಂಡನ ಒದೆತಕ್ಕೆ ಶಿಶು ಮರಣಿಸಿತು.

 

ಪ್ರೀತಿ ಪಾತ್ರರು ಸತ್ತಾಗ, ಬದುಕಲ್ಲಿ ಮುಗುಳ್ನಗೆಯ ಮೊಳಕೆ ಒಡೆದಾಗ..

 

ಇದರಿಂದ ಜಾಸ್ಮಿನ್ ಗರ್ಭಕೋಶಕ್ಕೂ ಪೆಟ್ಟಾಗಿ ಆಕೆ ಆಪರೇಶನ್‌ಗೆ ಒಳಪಡಬೇಕಾಯ್ತು. ಬಹಳ ದಿನಗಳ ಆಸ್ಪತ್ರೆ ವಾಸದಿಂದ ಹೊರಬಂದ ಜಾಸ್ಮಿನ್‌ಳಲ್ಲಿ ಒಂದು ಛಲವಿತ್ತು. ತಾನು ತನಗಾಗಿ ಬದುಕಬೇಕು ಎಂಬ ಛಲ. ವಿದೇಶದಲ್ಲಿ ಬದುಕು ಕಟ್ಟಿಕೊಳ್ಳುತ್ತೇನೆ ಅಂತ ದಾಖಲೆಗಳನ್ನೆಲ್ಲ ರೆಡಿ ಮಾಡಿದಳು. ಮನೆಯವರು ಇದನ್ನು ವಿರೋಧಿಸಿ ದಾಖಲೆ ಸುಟ್ಟು ಹಾಕಿದರು. ಸಣ್ಣಪುಟ್ಟ ಕೆಲಸ ಮಾಡುತ್ತ ಒಂದಿಷ್ಟು ಹಣ ಒಟ್ಟು ಸೇರಿಸಿ ಜಾಸ್ಮಿನ್ ಮನೆಯಿಂದ ಹೊರಬಿದ್ದಳು.


ಕೊಚ್ಚಿಗೆ ಹೋಗಿ ಅಲ್ಲಿ ಫಿಟ್ ನೆಸ್ ಸೆಂಟರ್‌ನಲ್ಲಿ ರಿಸೆಪ್ಶನಿಸ್ಟ್ ಆಗಿ ಕೆಲಸಕ್ಕೆ ಸೇರಿದಳು. ಯಾಕೋ ತಾನೂ ಫಿಟ್‌ನೆಸ್ ಟ್ರೈನರ್ ಆಗಬೇಕು ಅನಿಸಿತು. ಫ್ಲೈಟ್ ಹತ್ತಿ ಬೆಂಗಳೂರಿಗೆ ಬಂದಳು. ಇಲ್ಲಿ ಮೂರು ತಿಂಗಳ ಫಿಟ್ ನೆಸ್ ಟ್ರೈನಿಂಗ್ ಕೋರ್ಸ್ ಮಾಡಿದಳು.
 

ಸದ್ಯಕ್ಕೀಗ ಈ ಜಾಸ್ಮಿನ್ ಬೆಂಗಳೂರಿನ ಪ್ರಸಿದ್ಧ ಫಿಟ್ ನೆಸ್ ಸೆಂಟರ್‌ನಲ್ಲಿ ಟ್ರೈನರ್ ಆಗಿದ್ದಾಳೆ. ಲೆವೆಲ್ ತ್ರೀ ಟ್ರೈನರ್ ಆಗಿದ್ದು ಸಾಧನೆಯ ಹಾದಿಯಲ್ಲಿ ಮುಂದುವರಿಯುತ್ತಿದ್ದಾಳೆ. ಅವಳ ಆತ್ಮವಿಶ್ವಾಸವೇ ಅವಳನ್ನಿಂದು ಈ ಮಟ್ಟಕ್ಕೆ ತಂದು ನಿಲ್ಲಿಸಿದೆ.

Follow Us:
Download App:
  • android
  • ios