Relationship Tips: ಸಿಂಗಲ್ಲಾ? ಸಂಗಾತಿ ಹುಡುಕಾಟದಲ್ಲಿ ಹತಾಶರಾಗ್ಬೇಡಿ
ಪ್ರೀತಿಸಬೇಕು ಎನ್ನುವ ಭರದಲ್ಲಿ ನಿಮಗೆ ಹೊಂದಾಣಿಕೆ ಆಗದ ವ್ಯಕ್ತಿಯೊಂದಿಗೆ ಸಾಂಗತ್ಯ ಹೊಂದಬೇಕಾಗಿಲ್ಲ. ಎಲ್ಲರಂತೆ ನಾವೂ ಬೇಗ ಬಾಳಸಂಗಾತಿಯನ್ನು ಹುಡುಕಿಕೊಳ್ಳಬೇಕು ಎನ್ನುವ ಆತುರಕ್ಕೆ, ಹತಾಶೆಗೆ ಬೀಳದೆ ನಿಮ್ಮದೇ ವಿಧಾನದಲ್ಲಿ ನಿಮಗೆ ಹೊಂದುವ ವ್ಯಕ್ತಿಯನ್ನೇ ಆಯ್ಕೆ ಮಾಡಿಕೊಳ್ಳುವುದು ಜಾಣತನ.
ಪ್ರೀತಿಸಬೇಕು, ಪ್ರೀತಿಯಲ್ಲಿ ಬೀಳಬೇಕು, ಯಾರಿಂದಲಾದರೂ ಪ್ರೀತಿಸಲ್ಪಡಬೇಕು, ನಾವೂ ಇನ್ನೊಬ್ಬರ ಪ್ರೀತಿಗೆ ಒಳಗಾಗಬೇಕು, ಅವರನ್ನೇ ಬಾಳಸಂಗಾತಿಯನ್ನು ಮಾಡಿಕೊಳ್ಳಬೇಕು ಎನ್ನುವ ತುಡಿತ ಎಲ್ಲರಲ್ಲೂ ಸಾಮಾನ್ಯ. ಸಾಮಾನ್ಯವಾಗಿ, ಹರೆಯದ ದಿನಗಳಲ್ಲಿ ಬ್ರೇಕಪ್ ಆದ ಬಳಿಕ ಥಟ್ ಎಂದು ಇನ್ನೊಂದು ಪ್ರೀತಿಯಲ್ಲಿ ಬೀಳುವವರು ಅಧಿಕ. ಹಾಗೆಯೇ, ಪ್ರೀತಿಸಲು ಪೀರ್ ಪ್ರೆಷರ್ ಕೂಡ ಒತ್ತಡ ಹಾಕುತ್ತಿರುತ್ತದೆ. ಆದರೆ, ಈ ಎಲ್ಲ ಹಂತಗಳನ್ನು ದಾಟಿದರೂ ಕೆಲವೊಮ್ಮೆ ಸೂಕ್ತ ವ್ಯಕ್ತಿ ಕಾಣಿಸುವುದಿಲ್ಲ. ಆಗ ಒಂದು ರೀತಿಯ ಹತಾಶೆ ಶುರುವಾಗಬಹುದು. ಮದುವೆಯ ವಯಸ್ಸಾಗಿದ್ದರೂ ಮದುವೆಯಾಗಲು ಸೂಕ್ತ ವಧು ಅಥವಾ ವರ ಸಿಗದೆ ಹತಾಶೆ ಮತ್ತು ಪ್ರೀತಿಗಾಗಿ ತುಡಿತ ಹೆಚ್ಚಾಗಬಹುದು. ಮೊದಲು ಬೇಕೆಂದೇ ಮದುವೆಯನ್ನು ಮುಂದೂಡುತ್ತ ಬಂದು ಕೊನೆಗೊಮ್ಮೆ ಯಾರನ್ನೋ ಒಪ್ಪಿಕೊಂಡ ಹಾಗೆ ಆಗುವ ಸಾಧ್ಯತೆ ಈ ಸಮಯದಲ್ಲಿ ಅಧಿಕ. ಹೀಗಾಗಿ, ಪ್ರೀತಿಯ ಆಯ್ಕೆಯಲ್ಲೂ ಗಡಿಬಿಡಿ ಆಗಬಹುದು. ಡೆಸ್ಪರೇಟ್ ಆಗಿದ್ದಾಗ ನಿಮಗೆ ಹೊಂದಾಣಿಕೆ ಆಗುವ ಸೂಕ್ತ ವ್ಯಕ್ತಿಯ ಆಯ್ಕೆಯಲ್ಲಿ ಸೋಲುವುದು ಹೆಚ್ಚು. ಯಾರನ್ನೋ ಆಯ್ಕೆ ಮಾಡಿಕೊಂಡು ಅದನ್ನೇ ಪ್ರೀತಿ ಎಂದು ಭ್ರಮಿಸುವ ಸಾಧ್ಯತೆಗಳು ಅಧಿಕ. ಹೀಗಾಗಿ, ಯಾವುದೇ ಕಾರಣಕ್ಕೂ ಸಂಗಾತಿಯ ಆಯ್ಕೆಯಲ್ಲಿ ಸೋಲಬಾರದು ಎಂದಾದರೆ ಹತಾಶ ಮನಸ್ಥಿತಿಗೆ ಇಳಿಯಬಾರದು. ಒಂದೊಮ್ಮೆ ನೀವೂ ಸಹ ಸೂಕ್ತ ಸಂಗಾತಿ ಸಿಗದೆ ಹತಾಶರಾಗಿದ್ದರೆ ಅದನ್ನು ಮೀರಲು ಕೆಲವು ಟಿಪ್ಸ್ ಅನುಸರಿಸಬೇಕು.
• ನಿಮ್ಮ ಬಗ್ಗೆ ಹೆಚ್ಚು ಗಮನ ವಹಿಸಿ (Time for Yourself)
ಶಿಕ್ಷಣ (Education) ಮುಗಿದು, ವೃತ್ತಿಯಲ್ಲೂ ಸೈ ಎನಿಸಿಕೊಂಡಿರುವವರು ನೀವಾಗಿದ್ದರೆ ಸಂಗಾತಿಯ (Partner) ಆಯ್ಕೆಗೆ ಇದು ಸೂಕ್ತ ಸಮಯ. ಆದರೆ, ಇದುವರೆಗೂ ನಿಮಗೆ ಪ್ರೀತಿ-ಪ್ರೇಮದ (Love) ಅನುಭವ ಇಲ್ಲವಾಗಿದ್ದರೆ ನಿಮ್ಮ ಬಗ್ಗೆ ಹೆಚ್ಚಿನ ಗಮನ ವಹಿಸಬೇಕು. ಏಕೆಂದರೆ, ಇಂಥದ್ದೊಂದು ಮಧುರಾನುಭೂತಿ ನಿಮಗಿನ್ನೂ ಆಗಿಲ್ಲ. ಹೀಗಾಗಿ, ಏಕಾಏಕಿ ಯಾರನ್ನಾದರೂ ಪ್ರೀತಿಸಲು ಮುಂದಾಗದೆ ಅಳೆದು-ತೂಗಿ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳಬೇಕು. ಯಾರು ಏನಾದರೂ ಅಂದುಕೊಳ್ಳಲಿ, ನಿಮಗೆ ಸೂಕ್ತರಾಗುವವರು ಸಿಗುವವರೆಗೂ ನೀವು ಧಾವಂತಕ್ಕೆ ಬೀಳಬೇಡಿ. ಈ ವಿಚಾರದಲ್ಲಿ ಗಡಿಬಿಡಿ ಮಾಡಿಕೊಂಡರೆ ಅನರ್ಹ (Wrong Choice) ವ್ಯಕ್ತಿಯನ್ನು ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚು.
ಒಂಟಿ ಜೀವನದ ಸುಖ ತಾತ್ಕಾಲಿಕ, ಆಯಸ್ಸೇ ಕಡಿಮೆಯಾಗುತ್ತೆ ಅನ್ನುತ್ತೆ ಅಧ್ಯಯನ
• ಒಂಟಿಯಾಗಿರುವುದರ ಲಾಭದತ್ತ ಚಿತ್ತ ನೆಡಿ (Advantage being Single)
ಜೀವನದಲ್ಲಿ ಒಂಟಿಯಾಗಿ ಇರುವುದರಿಂದಲೂ ಸಾಕಷ್ಟು ಲಾಭವಿದೆ. ಏಕೆಂದರೆ, ನಿಮ್ಮ ಜೀವನಕ್ಕೆ ನೀವೇ ಬಾಸ್ (Boss) ಆಗಿರುತ್ತೀರಿ. ಯಾರ ಮುಲಾಜಿಗೂ ಒಳಗಾಗದೆ ಬದುಕು ಸಾಗಿಸುವ ಸ್ವಾತಂತ್ರ್ಯ (Liberty) ಹೊಂದಿರುತ್ತೀರಿ. ಜೀವನವಿಡೀ ನೀವು ಏಕಾಂಗಿಯಾಗಿ ಇರಬೇಕಾಗಿಲ್ಲ, ಕೆಲವು ಸಮಯದವರೆಗೆ ಸಿಗುವ ಈ ಲಾಭವನ್ನು ಖುಷಿಯಿಂದ ಅನುಭವಿಸಿ. ವೃತ್ತಿ ಬದುಕಿನ ಏಳ್ಗೆಗೆ ಗಮನ ಕೊಡಿ. ನಿಮಗೇನು ಬೇಕೋ ಅದನ್ನು ಮಾಡುತ್ತ ಎಂಜಾಯ್ (Enjoy) ಮಾಡಿ. ಒಂಟಿಯಾಗಿ ಪ್ರವಾಸಕ್ಕೆ (Tour) ಹೋಗಿ. ಅದ್ಭುತ ಅನುಭವ ನಿಮ್ಮದಾಗುತ್ತದೆ.
• ಹೊಸ ಸ್ನೇಹಿತರನ್ನು ಮಾಡಿಕೊಳ್ಳಿ (Make New Friends)
ಒಂಟಿಯಾಗಿರುವುದು ಎಂದರೆ ಹೊಸ ಸ್ನೇಹಕ್ಕೆ ಮುಕ್ತವಾಗಿರಬಾರದು ಎಂದಲ್ಲ. ಹೀಗಾಗಿ, ಸ್ನೇಹಿತರು, ನೆಂಟರಿಷ್ಟರ ಸಮಾರಂಭಗಳಿಗೆ ಹೋಗಿ. ಅದರಲ್ಲೂ ಸ್ನೇಹ (Friend) ವಲಯದ ಆಹ್ವಾನವನ್ನು ಮಿಸ್ ಮಾಡಿಕೊಳ್ಳಬಾರದು. ಅಲ್ಲಿಯೇ ನಿಮಗೆ ಸೂಕ್ತ ಸಂಗಾತಿ ದೊರೆತರೂ ದೊರೆಯಬಹುದು. ಅಲ್ಲದೆ, ಉತ್ತಮ ಸ್ನೇಹಿತರು ಲಭ್ಯವಾಗಬಹುದು. ಅದರಿಂದ ಜೀವನ ಇನ್ನಷ್ಟು ಸುಖಮಯವಾಗುತ್ತದೆ. ಎಂದಿಗೂ ಒಂಟಿಯಾಗಿರಲು ಯತ್ನಿಸಬೇಡಿ. ಸ್ನೇಹಿತರೊಂದಿಗೆ ಬೆರೆತಾದ ನಿಮ್ಮ ದುಮ್ಮಾನ ಮರೆಯಲು ಸಾಧ್ಯವಾಗುತ್ತದೆ. ಹಾಗೆಯೇ, ನಿಮ್ಮ ಬಗ್ಗೆ ಕಾಳಜಿ (Care) ವಹಿಸುವವರಿಗಾಗಿ ಸಮಯ ಕೊಡಿ.
ಮದ್ವೆ ಆದವರಿಗಿಂತ ಸಿಂಗಲ್ ಮಹಿಳೆಯರು ತುಂಬಾನೆ ಹ್ಯಾಪಿಯಾಗಿರ್ತಾರಂತೆ!
• ಇತರರೊಂದಿಗೆ ಹೋಲಿಕೆ ಮಾಡಿಕೊಳ್ಳಬೇಡಿ (Do not Compare Yourself to Others)
ಯಾವುದೇ ಕಾರಣಕ್ಕೂ ಸ್ನೇಹಿತರು, ವಾರಗೆಯವರೊಂದಿಗೆ ಹೋಲಿಕೆ ಮಾಡಿಕೊಳ್ಳಬೇಡಿ. ನೀವು ನೀವಾಗಿರಿ. ಈ ಸಮಯದಲ್ಲಿ ಬೇರೆಯವರೊಂದಿಗೆ ಹೋಲಿಕೆ ಮಾಡಿಕೊಂಡು ಕುಗ್ಗುವುದು ಸರಿಯಲ್ಲ. ನಿಮ್ಮ ಆದ್ಯತೆ ನಿಮಗಿದ್ದೇ ಇರುತ್ತದೆ. ಆತ್ಮವಿಶ್ವಾಸದಿಂದ ವರ್ತಿಸಿ. ವಿವಿಧ ಉತ್ತಮ ಚಟುವಟಿಕೆಗಳಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಿ. ನಿಮ್ಮನ್ನು ನಿಮ್ಮಂತೆ ಒಪ್ಪಿಕೊಳ್ಳುವವರು ಸಿಗುವವರೆಗೂ ಒಂಟಿಯಾಗಿರಲು ಬೇಸರ ಮಾಡಿಕೊಳ್ಳಬೇಡಿ.