Healthy Relationship: ಸುಖಾಸುಮ್ನೆ ಜಗಳ ಆಡಿದ್ರಾ? ಇಲ್ಲಿವೆ ಪ್ಯಾಚಪ್‌ಗೆ ದಾರಿ
ಬಹಳಷ್ಟು ಜನಕ್ಕೆ, ಅದ್ರಲ್ಲೂ ಹುಡ್ಗೀರಿಗೆ ಈ ಅಭ್ಯಾಸ(ದುರಭ್ಯಾಸ?) ಇರುತ್ತೆ. ಮೂಡ್ ಹಾಳಾದ್ರೆ ತಾವೇನ್ ಮಾತಾಡ್ತಿದೀವಿ, ಮಾಡ್ತಿದೀವಿ ಅನ್ನೋದೇ ಗೊತ್ತಾಗಲ್ಲ. ಯಾವಯಾವ್ದೋ ಕೋಪ, ಕಿರಿಕಿರಿನ್ನ ತಮ್ಗೆ ಹತ್ರದೋರ್ ಮೇಲೆ ರೇಗಾಡಿ ತೋರ್ಸ್‌ಕೊಳೋದು. ಆಮೇಲೆ ತಾನ್ ಹಂಗೆಲ್ಲ ಮಾಡ್ಬಾರ್ದಿತ್ತು ಅಂತ ಕೊರ್ಗೋದು. ನೀವೂ ಇಂಥ ತಪ್ಪನ್ನು ಮಾಡೋರಾದ್ರೆ ನಿಮ್ಮ ಒಳ್ಳೆಯದಕ್ಕಾಗಿಯೇ ಈ ಲೇಖನ ನೀವ್ ಓದ್ಲೇಬೇಕು.
ಇವತ್ತು ಬೆಳ್ಳಂಬೆಳಗ್ಗೆನೇ ವಿನಾಕಾರಣ ಪತಿ ಮೇಲೆ ರೇಗಾಡಿದ್ದೀರಾ? ಯಾವುದೋ ಕೋಪವನ್ನು ಪತ್ನಿ ಮೇಲೆ ಕೂಗಾಡಿ ತೋರಿಸಿದ್ದೀರಾ? ನಿನ್ನೆಯೆಲ್ಲ ಸುಖಾಸುಮ್ಮನೆ ಜಗಳವೆತ್ತಿ, ಇಬ್ಬರೂ ಜಗಳಾಡಿ, ಮಲಗಿ ಏಳುವಾಗ- ಅಷ್ಟೊಂದು ಜಗಳ ಮಾಡುವ ಅಗತ್ಯವೇ ಇರಲಿಲ್ಲ ಅನಿಸ್ತಾ ಇದ್ಯಾ? ಈಗ ಪ್ಯಾಚಪ್ ಮಾಡ್ಕೊಳ್ಳೋದ್ ಹೆಂಗಪ್ಪಾ ಅಂತ ಪೇಚಾಡ್ತಿದೀರಾ? ಹೆಚ್ಚೇನು ಚಿಂತೆ ಮಾಡ್ಬೇಡಿ. ಇಂಥ ಸಿಲ್ಲಿ ಫೈಟ್ಸ್‌ನೆಲ್ಲ ಮಾಫಿ ಮಾಡ್ಸೋಕೆ ಸಿಂಪಲ್ ಟಿಪ್ಸ್(tips) ಇಲ್ಲಿವೆ.
ಆದ್ರೆ ಟಿಪ್ಸ್ ಓದೋಕಿಂತ ಮೊದ್ಲು ನೀವು ತಿಳ್ಕೊಳ್ಬೇಕಾಗಿರೋ ವಿಷ್ಯ ಅಂದ್ರೆ ನಿಮ್ಮ ಎಮೋಶನ್ಸ್ ಮೇಲೆ ಹಿಡಿತ ಸಾಧಿಸೋ ಅಗತ್ಯ ನಿಮಗಿದೆ ಅನ್ನೋದು. ಪದೇ ಪದೆ ಭಾವನೆಗಳ ಮೇಲೆ ನಿಯಂತ್ರಣ ಕಳೆದುಕೊಳ್ಳೋದು, ಆಮೇಲ್ ಹಾಗ್ ಮಾಡ್ಬಾರ್ದಿತ್ತು ಎಂದು ಕೊರ್ಗೋದೇನಂಥ ಒಳ್ಳೆ ವಿಷಯ ಅಲ್ಲ. ಒಂದೋ ಎರ್ಡೋ ಸಾರಿಯಾದ್ರೆ ಪಾರ್ಟ್ನರ್ ಕೂಡಾ ಹೋಗ್ಲಿ ಬಿಡು ಅಂತ ಅರ್ಥ ಮಾಡ್ಕೋತಾರೆ. ಆದ್ರೆ ಪದೇ ಪದೇ ನೀವು ಹಾಗೇ ಆಡ್ತಿದ್ರೆ ಮಾತ್ರ ನಿಮ್ಮ ಬಗ್ಗೆ ಅಸಡ್ಡೆ, ಕೋಪ, ಅಸಮಾಧಾನ ಹುಟ್ಕೊಳತ್ತೆ. ಬಹುಷಃ ನಿಮ್ಮ ಪಾರ್ಟ್ನರ್ ಹೇಳಿಕೊಳ್ಳದೇ ಇರಬಹುದು. ಆದ್ರೆ ಸುಮ್‌ಸುಮ್ನೆ ಜಗಳ ಮಾಡೋದು ಯಾರಿಗೂ ಹಿತ ತರೋ ವರ್ತನೆಯಂತೂ ಅಲ್ಲ.
ಹಾಗಾಗಿ, ನೆಕ್ಸ್ಟ್ ಟೈಂ ನಿಮ್ಮ ಮೂಡ್(mood) ಹಾಳಾದಾಗ ಭಾವನೆಗಳ ಮೇಲೆ ಹತೋಟಿ ಸಾಧಿಸಲು ಯತ್ನಿಸಿ. ಬೇರೆಲ್ಲಿನದೋ ಸಿಟ್ಟನ್ನು ಮತ್ತೆಲ್ಲೋ ತೋರಿಸುವ ಅಭ್ಯಾಸ ಬಿಡಿ. ಹೇಗೆಂದು ತಿಳಿಯುತ್ತಿಲ್ಲವೆಂದರೆ, ಒಂದೆರಡು ಗಂಟೆ ಮಾತನಾಡದೆ ಉಳಿಯಿರಿ.
ಈಗ ಸಂಗಾತಿ ಮನಸ್ಸನ್ನು ಹಗುರಾಗಿಸೋ ವಿಧಾನಕ್ಕಾಗಿ ನೀವು ತಡಕಾಡ್ತಿದ್ರೆ ತುಂಬಾ ಸಿಂಪಲ್ಲಾಗಿನೂ ಎಫೆಕ್ಟಿವ್ವಾಗಿರೋ ದಾರಿಗಳು ಇಲ್ಲಿವೆ.
ಮ್ಯಾಜಿಕ್ ವರ್ಡ್
ಯಾವುದೇ ಜಗಳವಿರಲಿ, ಸಾರಿ(sorry) ಅನ್ನೋದೊಂದು ಮ್ಯಾಜಿಕ್ ವರ್ಡ್. ಜಗಳ ದೊಡ್ಡದಾಗಿದ್ದರೂ, ಸಣ್ಣದಾದರೂ ಅದರ ಕಹಿಗಳನ್ನೆಲ್ಲ ಕರಗಿಸುವ ಶಕ್ತಿ ಒಂದು ಪುಟ್ಟ ಸಾರಿಗಿದೆ. ನೀವು ಮಾಡಿದ್ದು ತಪ್ಪು ಎಂದು ಅರಿವಾಗಿದ್ದರೆ, ಈಗೋ(ego) ಬದಿಗಿರಿಸಿ ಮೊದಲು ನಿಮ್ಮ ಪಾರ್ಟ್ನರ್ ಬಳಿ ಹೋಗಿ ಸಾರಿ ಕೇಳಿ. ಪುಟ್ಟದೊಂದು ಸಾರಿಯಲ್ಲಿ, ನೀವು ನಿಮ್ಮ ತಪ್ಪನ್ನು ಒಪ್ಪಿಕೊಂಡಿದ್ದೀರಿ ಮತ್ತು ನಿಮಗೆ ಆ ನಿಮ್ಮ ವರ್ತನೆ ಬಗ್ಗೆ ಬೇಸರವೆನಿಸಿದೆ ಎಂಬುದು ಅರ್ಥವಾಗುತ್ತದೆ. ಹಾಗಂಥ ಪದೇ ಪದೆ ಸಾರಿ ಕೇಳುವ ಪ್ರಮೇಯ ತಂದುಕೊಂಡಿರಾದರೆ ಮ್ಯಾಜಿಕ್ ವರ್ಡ್ ಕೂಡಾ ತನ್ನ ತೂಕ ಕಳೆದುಕೊಳ್ಳುತ್ತದೆ. ಆಮೇಲೆ ಸಾರಿ ಕೇಳುವುದು ಫಾರ್ಮಾಲಿಟಿಯಾಗುತ್ತದೆಯೇ ಹೊರತು ನಿಮ್ಮ ಪಶ್ಚಾತ್ತಾಪದ ವ್ಯಕ್ತರೂಪ ಎನಿಸುವುದಿಲ್ಲ.
ಭಾವನೆ(emotions)ಗಳನ್ನು ಬಿಚ್ಚಿಡಿ
ನಿಮ್ಮ ನಡೆ ಬಗ್ಗೆ ನಿಮಗೆೇ ಸಿಕ್ಕಾಪಟ್ಟೆ ಹಿಂಸೆ ಆಗುತ್ತಿದ್ದರೆ, ನಿಮ್ಮ ಸಂಗಾತಿ(partner)ಗೆ ಹೇಗೆನಿಸಿರಬೇಡ ಎಂಬುದನ್ನು ಯೋಚಿಸಿ. ಅದನ್ನು ತಿಳಿಗೊಳಿಸಲು ಮೊದಲು ನಿಮ್ಮ ಮನಸ್ಸನ್ನು ಅವರೆದುರು ತೆರೆದಿಡುವುದು ಮುಖ್ಯ. ಯಾಕೆ ನೀವು ಹಾಗೆ ಮಾತಾಡಿದ್ರಿ, ಅದರ ಹಿಂದೆ ನಿಮ್ಮನ್ನು ಕೊರೆಯುತ್ತಿದ್ದ ವಿಷಯಗಳೇನು, ಆ ಕ್ಷಣದಲ್ಲಿ ನಿಮ್ಮ ಮನಸ್ಸು ಯಾಕಾಗಿ ಹದಗೆಟ್ಟಿತ್ತು ಎಂಬುದನ್ನೆಲ್ಲ ವಿವರಿಸಿ. ನಂತರ ನೀವು ರೇಗಾಡಬಾರದಿತ್ತು, ಹಾಗೆ ರೇಗಿದ್ದಕ್ಕೆ ನಿಮ್ಮ ಮನಸ್ಸಿಗೆ ಎಷ್ಟು ಕಿರಿಕಿರಿಯಾಗಿದೆ ಎಂಬುದನ್ನು ಕೂಡಾ ವಿವರವಾಗಿ ಹೇಳಿ. ಈ ನಡೆ ನಿಮ್ಮ ಸಂಬಂಧದಲ್ಲಿ ಹೆಚ್ಚು ಪಾರದರ್ಶಕತೆ (transperency) ತರುತ್ತದೆ. ಇದರಿಂದ ನಿಮ್ಮ ಸಂಗಾತಿಗೂ ನಿಮ್ಮ ಮನಸ್ಸು ಹೆಚ್ಚು ಹೆಚ್ಚು ಅರ್ಥವಾಗುತ್ತದೆ.
ಮಾತಿಗಿಂತ ಕೃತಿಯಲ್ಲಿ ತೋರಿ
ಸಾರಿ ಕೇಳಲು ನಿಮಗೆ ಸಂಕೋಚವೋ, ನಾಚಿಕೆಯೋ ಅಡ್ಡಿ ಬರುತ್ತಿದೆ ಎಂದಲ್ಲಿ ನಿಮ್ಮ ಕೃತಿಯಲ್ಲಿ ನಿಮಗೆ ನಿಮ್ಮ ತಪ್ಪು ಅರಿವಾಗಿದೆ ಎಂಬುದನ್ನು ತೋರಿಸಿ. ತಪ್ಪನ್ನು ಮತ್ತೆ ರಿಪೀಟ್ ಮಾಡಬೇಡಿ. ಜೊತೆಗೆ, ಆದಷ್ಟು ಪ್ರೀತಿಯಿಂದ ನಡೆದುಕೊಳ್ಳಿ. ಅವರಿಗಿಷ್ಟದ ಅಡುಗೆ ಮಾಡಿ. ಇದು ನೀವು ನಿಮ್ಮ ತಪ್ಪುಗಳಿಂದ ಕಲಿಯಲು ಸಿದ್ಧರಿರುವಿರಿ ಹಾಗೂ ನಂಬಿಕೆಗೆ ಹೆಚ್ಚು ಅರ್ಹರು ಎಂಬುದನ್ನು ಸಂಗಾತಿಗೆ ಅರ್ಥ ಮಾಡಿಸುತ್ತದೆ.