ಮದುವೆಯಾಗದವರಿಗೆ, ಪ್ರೇಯಸಿ/ಪ್ರಿಯಕರ ಇಲ್ಲದವರಿಗೆ ಫ್ರೀ ಆಟೋ ರೈಡ್ ನೀಡ್ತಿರುವ ಜೀವನ್‌ಸಾಥಿ
ಜೀವನ್‌ಸಾಥಿ.ಕಾಮ್ ಸಿಂಗಲ್ಸ್‌ಗಳಿಗಾಗಿ ಫ್ರೀ ಆಟೋ ರೈಡ್ ನೀಡುತ್ತಿದೆ. ಮದುವೆಯಂತೆ ಅಲಂಕರಿಸಿದ ಆಟೋದಲ್ಲಿ 'ಜೀವನಸಂಗಾತಿ ಸಿಕ್ಕರೆ ನಿಲ್ಲಿಸಿ' ಎಂಬ ಬರಹವಿದೆ. ಈ ವಿನೂತನ ಪ್ರಚಾರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಪ್ರೀತಿಸಿ ಮದುವೆಯಾಗುವವರದ್ದು ಒಂದು ಗೋಳಾದರೆ ಪ್ರೀತಿಸಲು ಹುಡುಗಿ/ಹುಡುಗ ಸಿಗದವರದ್ದು ಇನ್ನೊಂದು ಗೋಳು, ಪೋಷಕರು ನೋಡಿದ್ದು, ಮಕ್ಕಳಿಗಾಗಲ್ಲ, ಮಕ್ಕಳು ನೋಡಿದ್ದು ಪೋಷಕರಿಗಾಗಲ್ಲ, ಎಲ್ಲರಿಗೂ ಓಕೆ ಆಯ್ತು ಅನ್ನುವಷ್ಟರಲ್ಲಿ ಇನ್ನೇನೋ ಕೊರತೆಗಳು. ಹೀಗಾಗಿ ಇತ್ತೀಚೆಗೆ ಸರಿಯಾದ ವಧುವರ ಹುಡುಕಿ ಮಕ್ಕಳಿಗೆ ಮದ್ವೆ ಮಾಡಿಸುವುದೇ ಪೋಷಕರಿಗೆ ದೊಡ್ಡ ತಲೆನೋವಾದರೆ ಇತ್ತ ಮಕ್ಕಳಿಗೂ ಗೊತ್ತು ಗುರಿ ಇಲ್ಲದವರನ್ನು ಆರೇಂಜ್ ಮ್ಯಾರೇಜ್ ಹೆಸರಲ್ಲಿ ಜೀವನಸಂಗಾತಿಯಾಗಿ ಆಯ್ಕೆ ಮಾಡುವುದಕ್ಕೆ ಅಷ್ಟೇ ಭಯವಿದೆ. ಆದರೆ ಹೀಗಾಗಿ ಗಂಡು ಹೆಣ್ಣು ಸರಿ ಸಂಖ್ಯೆಯಲ್ಲೇ ಇದ್ದರೂ ಮದುವೆಯಾಗುವುದಕ್ಕೆಂದು ಹೊರಟವರಿಗೆ ಹುಡುಗನೂ ಸಿಗಲ್ಲ, ಹುಡಗಿಯೂ ಸಿಗಲ್ಲ, ಇದು ಮದುವೆ ಆಗಲು ಹೊರಟಿರುವವರ ಗೋಳು. ಇದೇ ಕಾರಣಕ್ಕೆ ಇಂದು ಸಿಂಗಲ್ಸ್ ಆಗಿ ಬದುಕುವವರ ಸಂಖ್ಯೆ ಹೆಚ್ಚಾಗಿದೆ. ಅನೇಕರು ಮದುವೆಯೊಂದು ಬೇಡವೇ ಬೇಡ ಎಂಬ ನಿರ್ಧಾರಕ್ಕೆ ಬರುತ್ತಿರುವವ ಸಂಖ್ಯೆ ಹೆಚ್ಚಾಗುತ್ತಿದೆ. ಇದರ ಜೊತೆಗೆ ಡೇಟಿಂಗ್ ಆಪ್‌ಗಳು ಕೂಡ ಹೆಚ್ಚಾಗುತ್ತಿವೆ.
ಹೀಗಿರುವಾಗ ವಿವಾಹವಾಗುವವರಿಗಾಗಿಯೇ ಇರುವ ಮ್ಯಾಟ್ರಿಮೋನಿಯಲ್ ಸೈಟ್‌ಗಳು, ಗ್ರಾಹಕರಿಲ್ಲದೇ ಪರದಾಡುತ್ತಿವೆ. ಆನ್‌ಲೈನ್‌ನಲ್ಲೇ ಒಳ್ಳೆಯ ಜೋಡಿ ಹುಡುಕಿ ಕೊಡುವ ಮ್ಯಾಟ್ರಿಮೋನಿಯಲ್ ಸೈಟ್‌ಗಳು ಬೇಕಾದಷ್ಟಿದ್ದು, ಅದರಲ್ಲಿ ಜೀವನ್‌ಸಾಥಿಡಾಟ್‌ಕಾಮ್ ಕೂಡ ಒಂದು ಅದೀಗ ವಿವಾಹವಾಗದ ಗರ್ಲ್‌ಫ್ರೆಂಡ್/ಬಾಯ್‌ಫ್ರೆಂಡ್ ಕೂಡ ಇಲ್ಲದ ಸಿಂಗಲ್ಸ್‌ಗಳಿಗಾಗಿ ಫ್ರೀ ಆಟೋ ರೈಡ್ ನೀಡುತ್ತಿದ್ದು, ಈ ನವವಧುವಿನಂತೆ ಸಿಂಗಾರ ಮಾಡಲಾಗಿರುವ ಈ ಆಟೋದ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಅಲ್ಲದೇ ಆಟೋದ ಒಳಗೆ ಹಾಗೂ ಹೊರಗೆ ಬರೆದಿರುವ ವಾಕ್ಯಗಳು ಕೂಡ ಜನರನ್ನು ವ್ಯಾಒಕವಾಗಿ ಸೆಳೆಯುತ್ತಿದ್ದು, ಈ ಜೀವನ್‌ಸಾಥಿ ಡಾಟ್‌ಕಾಮ್‌ನ ಫ್ರಿ ರೈಡ್ ವೀಡಿಯೋ ನೋಡಿದ ಜನ ಸಖತ್ ಕಾಮೆಂಟ್ ಮಾಡುತ್ತಿದ್ದಾರೆ. ಹಾಗಿದ್ರೆ ಆ ಆಟೋ ಹೇಗಿದೆ ನೋಡೋಣ ಬನ್ನಿ...
ಈ ಆಟೋ ರಿಕ್ಷಾವನ್ನು ಮದುವೆ ಮನೆಯಂತೆಯೇ ಹೂಗಳು ಹಾಗೂ ಪಿಂಕ್ ಬಣ್ಣದ ಕರ್ಟನ್‌ಗಳಿಂದ ಸಿಂಗರಿಸಲಾಗಿದೆ. ಆಟೋದ ಮೇಲ್ಭಾಗದ ಒಂದು ಸೈಡ್‌ನಲ್ಲಿ ಫ್ರೀ ರೈಡ್ ಫಾರ್ ಸಿಂಗಲ್ಸ್ ಎಂದು ಬರೆಯಲಾಗಿದೆ ಹಾಗೆಯೇ ಹಿಂಭಾಗದಲ್ಲಿ 'ಭೈಯ್ಯಾ ಜೀವನ್‌ಸಾಥಿ ದಿಖೆ ತೋ ರುಕ್ ದೇನಾ' ಅಂದರೆ ಜೀವನಸಂಗಾತಿ ಕಾಣಿಸಿದರೆ ಆಟೋ ನಿಲ್ಲಿಸಿ ಎಂದು ಬರೆಯಲಾಗಿದೆ. ಅಲ್ಲದೇ ಆಟೋದ ಸೀಟ್‌ನ ಹಿಂಭಾಗದಲ್ಲಿ (BE WITH SOMEONE JISKE SAATH AUTO BHI MERCEDES LAGE) ಅಂದರೆ ಆಟೋದಲ್ಲಿ ಹೋದರು ಮರ್ಸಿಡಿಸ್‌ನಲ್ಲಿ ಹೋದಂತಹ ಅನುಭವ ನೀಡುವ ಯಾರ ಜೊತೆಗಾದರೂ ನೀವು ಇರಿ ಎಂದು ಬರೆಯಲಾಗಿದೆ. ಅಲ್ಲದೇ ಆಟೋದ ಮೀಟರ್ ಇರುವ ಜಾಗದಲ್ಲಿ, (Meter se chalo, society ke kehne se nahi) ಆಟೋವನ್ನು ಮೀಟರ್‌ನಿಂದ ಚಲಾಯಿಸಿ ಸಮಾಜದ ಮಾತುಗಳನ್ನು ಕೇಳುತ್ತಾ ಅಲ್ಲ ಎಂದು ಬರೆಯಲಾಗಿದೆ.
ಹಾಗೆಯೇ ಈ ಆಟೋವನ್ನು ಚಲಾಯಿಸುತ್ತಿರುವ ವ್ಯಕ್ತಿ ತಲೆಗೆ ಮಧುಮಗನಂತ ಪೇಟ ತೊಟ್ಟಿದ್ದಾರೆ. ಆದರೆ ಯಾವ ನಗರದಲ್ಲಿ ಈ ರೀತಿ ಜೀವನಸಾಥಿ ಆಟೋ ಮೂಲಕ ಪ್ರಮೋಷನ್ ಮಾಡಿದೆ ಎಂಬುದು ವೈರಲ್ ಆಗಿಲ್ಲ, ಆದರೆ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿರುವುದಂತು ನಿಜ. ವೀಡಿಯೋ ನೋಡಿದ ಒಬ್ಬರು ಭೈಯಾ ಚಲೋ ಸೈಯ ಡುಂಡ್ನೇ ಅಂದರೆ ಸಹೋದರ ಹೋಗೋಣ ಸಂಗಾತಿಯ ಹುಡುಕಾಟಕ್ಕೆ ಎಂದು ಕಾಮೆಂಟ್ ಮಾಡಿದ್ದಾರೆ. ಹಾಗೆಯೇ ಮತ್ತೊಬ್ಬರು ಹೊರಡಿ ಸಹೋದರ ಜಿಬಿ ರಸ್ತೆಗೆ ಕರೆದುಕೊಂಡು ಹೋಗಿ ಎಂದು ಕಾಮೆಂಟ್ ಮಾಡಿದ್ದಾರೆ. ಹಾಗೆಯೇ ಮತ್ತೊಬ್ಬರು ಈ ಪ್ರಮೋಷನ್ ವಿಭಿನ್ನವಾಗಿದ್ದು, ತಾನು ಇದರಿಂದ ಇಂಪ್ರೆಸ್ ಆಗಿದ್ದಾಗಿ ಕಾಮೆಂಟ್ ಮಾಡಿದ್ದಾರೆ.