ಮನೆಯಲ್ಲೇ ಇರಬೇಕು ಎಂಬ ವರ್ಷಗಳ ಕನಸು ಇದೀಗ ನನಸಾಗಿದೆ. ಅದು ಯಾವ ರೀತಿಯಲ್ಲೇ ಆಗಿರಲಿ, ಅದನ್ನು ಪಾಸಿಟಿವ್ ಆಗಿ ತೆಗೆದುಕೊಂಡು, ಸದ್ಬಳಕೆ ಮಾಡಿಕೊಳ್ಳಲು ಆಯ್ಕೆಗಳಿದ್ದೇ ಇರುತ್ತವೆ. ಈ ಸಂದರ್ಭದಲ್ಲಿ ಅಕ್ಕಿ ಎಣಿಸುವುದು, ಮನೆಯ ಕಿಟಕಿಯಲ್ಲಿ ಕಂಬಿ ಎಷ್ಟಿವೆ ಎಂಬುದನ್ನೆಲ್ಲ ಎಣಿಸುವಂಥದ್ದು ಬಿಟ್ಟು ದಿನಚರಿಯನ್ನು ಸ್ವಲ್ಪ ಎನರ್ಜೆಟಿಕ್ ಆಗಿ ಇಟ್ಟುಕೊಳ್ಳುವತ್ತ ಗಮನ ಹರಿಸಬಹುದು. ಸೋಷ್ಯಲ್ ಡಿಸ್ಟೆನ್ಸಿಂಗ್ ಅನ್ನು ಫನ್ ಆ್ಯಂಡ್ ಯೂಸ್‌ಫುಲ್ ಆಗಿಸಲು ಇಲ್ಲಿವೆ ಕೆಲ ಉಪಾಯಗಳು. 

ಕ್ಲೀನಿಂಗ್
ಹಬ್ಬ ಬಂದಾಗ ಮನೆಯನ್ನು ಸಂಪೂರ್ಣ ಸ್ವಚ್ಛಗೊಳಿಸುವ ಅಭ್ಯಾಸ ಮುಂಚಿನಿಂದಲೂ ಭಾರತೀಯರಲ್ಲಿ ಇದೆ. ಆದರೆ ಈಗಿನ ತಲೆಮಾರು ಇಂಥ ಜವಾಬ್ದಾರಿಗಳಿಂದ ತಪ್ಪಿಸಿಕೊಂಡು ತಿರುಗಾಡುತ್ತಿತ್ತು. ಈ ಬಾರಿ ಹಬ್ಬವೇನೋ ಕಳೆದಿದೆ ನಿಜ, ಆದರೆ ಸ್ವಚ್ಛತೆಗೆ ಯಾವ ಸಮಯವಾದರೇನು? ಹೀಗಾಗಿ ಮನೆ ಮಂದಿಯೆಲ್ಲ ಸೇರಿಕೊಂಡು ಮನೆಯೊಳಗೇ ಸ್ವಚ್ಛತಾ ಆಂದೋಲನ ಹಮ್ಮಿಕೊಳ್ಳಿ. ಬಾತ್‌ರೂಂ, ಬೆಡ್‌ರೂಂ, ವಾರ್ಡ್‌ರೋಬ್, ವ್ಯಾಲೆಟ್, ಕಿಚನ್, ಹಾಲ್, ಮನೆಯ ಕರ್ಟನ್‌ಗಳು, ಮ್ಯಾಟ್‌ಗಳು, ಫ್ಯಾನ್ ಇನ್ನಿತರೆ ಫರ್ನಿಚರ್‌ಗಳು ಎಲ್ಲವನ್ನೂ ಧೂಳು ಹೊಡೆದು, ಸಾಧ್ಯವಾದುದನ್ನು ಒಗೆದು ಒಣಗಿಸಿ ಫ್ರೆಶ್ ಆಗಿಸಿ. ಇದು ಒಂದರಿಂದ ಎರಡು ದಿನ ತೆಗೆದುಕೊಳ್ಳಬಹುದು. ಆ ನಂತರದಲ್ಲಿ ಮನೆಯ ಎಲ್ಲ ಭಾಗವನ್ನೂ ಅಷ್ಟೇ ನೀಟ್ ಆಗಿ ಜೋಡಿಸಿಡಿ. ಅಷ್ಟೇ ಅಲ್ಲ, ಎಲ್ಲ ಕೋಣೆಗಳ ಫರ್ನಿಚರ್‌ಗಳ ಸ್ಥಳ ಬದಲಾಯಿಯಿ ಹೊಸ ಲುಕ್ ಕೊಡಬಹುದು. ಈಗ ನೋಡಿ ಮನೆ ಬಿಟ್ಟು ಆಚೆ ಹೋಗಬೇಕೆನಿಸುವುದೇ ಇಲ್ಲ. 

ಬದುಕು ಚೆನ್ನಾಗಿತ್ತು, ವೆಂಟಿಲೇಟರ್ ಯುವಕರಿಗೆ ನೀಡಿ ಎಂದು ಮಡಿದ 90ರ ಅಜ್ಜಿ

ಗೇಮ್ ನೈಟ್
ಇಷ್ಟು ದಿನ ಮನೆಯ ಮಕ್ಕಳು ಒಟ್ಟಿಗೆ ಸಮಯ ಕಳೆಯಲು ಸಾಧ್ಯವೇ ಆಗುತ್ತಿರಲಿಲ್ಲ. ಒಬ್ಬರಿಗೆ ಹೋಂ ವರ್ಕ್, ಮತ್ತೊಬ್ಬರಿಗೆ ಎಕ್ಸಾಂ- ಒಬ್ಬರಿಗೆ ಡ್ಯಾನ್ಸ್ ಕ್ಲಾಸ್, ಮತ್ತೊಬ್ಬರಿಗೆ ಸ್ಪೆಶಲ್ ಕ್ಲಾಸ್ ಎಂದು ಅವರು ಮುಖ ನೋಡಿಕೊಳ್ಳುವುದೇ ಹೆಚ್ಚು ಎಂಬಂತಾಗಿತ್ತು. ಈಗ ಹಾಗಲ್ಲ. ಅಕ್ಕ, ತಂಗಿ, ಅಣ್ಣ, ತಮ್ಮಂದಿರಿಗೆಲ್ಲ ಒಟ್ಟಿಗೇ ಇರಲೊಂದು ಅವಕಾಶ ದೊರೆತಿದೆ. ಇದನ್ನು ಭವಿಷ್ಯದದ ಉತ್ತಮ ನೆನಪಾಗಿಸಲು ಪ್ರತಿ ರಾತ್ರಿ ಗೇಮ್ ನೈಟ್ ಆರೇಂಜ್ ಮಾಡಿ. ಫೋನ್, ಟಿವಿ ಎಲ್ಲವನ್ನೂ ದೂರವಿಟ್ಟು ಲೂಡೋ, ಕೇರಂ, ಕಾರ್ಡ್ ಗೇಮ್ಸ್, ಟೊಪ್ಪಿ ಆಟ, ಪಗಡೆ, ಚೆಸ್, ಚಿತ್ರ ಬಿಡಿಸುವುದು, ಡಿಜೆ, ಅಂತ್ಯಾಕ್ಷರಿ ಮುಂತಾದ ಆಟಗಳಿಗಾಗಿ ದಿನದ ಒಂದೆರಡು ಗಂಟೆ ಮೀಸಲಾಗುವಂತೆ ನೋಡಿಕೊಳ್ಳಿ. ಇದರಿಂದ ಅವರ ನಡುವಿನ ಬಾಂಧವ್ಯವೂ ಹೆಚ್ಚುತ್ತದೆ. ಸಂಜೆ ಹೊತ್ತಿನಲ್ಲಿ ಮನೆಯ ಟೆರೇಸ್‌ನಲ್ಲಿ ಅರ್ಧ ಗಂಟೆ ಎಲ್ಲರೂ ವಾಕ್ ಮಾಡಿ. ದೇಹದ ವ್ಯಾಯಾಮದ ಅಗತ್ಯ ಹೀಗೆ ಪೂರೈಸಬಹುದು. 

ಮನೆಯನ್ನೇ ಉತ್ತಮ ರೆಸ್ಟೋರೆಂಟ್ ಆಗಿಸಿ
ಮನೆಯಲ್ಲಿ ಗಂಡ ಹಾಗೂ ಮಕ್ಕಳು ಎಂದೂ ಅಡುಗೆ ಮನೆ ಕಡೆ ಮುಖ ಹಾಕುವುದೇ ಇಲ್ಲ ಎಂಬುದು ನಿಮ್ಮ ದೂರಾಗಿದ್ದರೆ ಅವರನ್ನು ಅಡುಗೆಯಲ್ಲಿ ಸೇರಿಸಿಕೊಳ್ಳಲು, ಕಲಿಸಲು ಇದು ಸುಸಮಯ. ದಿನಾ ಸ್ಪೆಶಲ್ ಕೇಳುವ ಮಕ್ಕಳನ್ನು ಜೊತೆಗೇ ಸೇರಿಸಿಕೊಂಡು ಸ್ಪೆಶಲ್ ಅಡುಗೆ ಮಾಡಬಹುದು. ಲಾಕ್ಡ್ ಡೌನ್ ಸಮಯವಾದ್ದರಿಂದ ಹಣ್ಣು, ತರಕಾರಿ, ದಿನಸಿ ಲಿಮಿಟೆಡ್ ಇದ್ದರೆ ಇದ್ದುದರಲ್ಲೇ ಮ್ಯಾನೇಜ್ ಮಾಡುವುದು ಹೇಗೆಂಬುದನ್ನು ಕೂಡಾ ಅವರು ಕಲಿತುಕೊಳ್ಳಲು ಅವಕಾಶವಿದೆ. ಎಲ್ಲರೂ ಸೇರಿ ಡಿನ್ನರ್ ರೆಡಿ ಮಾಡಿ. ಇಲ್ಲವೇ ಒಂದೊಂದು ಹೊತ್ತಿನ ಅಡುಗೆಯನ್ನು ಒಬ್ಬೊಬ್ಬರು ವಹಿಸಿಕೊಳ್ಳಬಹುದು. ಮಕ್ಕಳು ಚಿಕ್ಕವರಾಗಿದ್ದರೆ ಕಾಫಿ, ಬೋರ್ನ್‌ವೀಟಾ ಮಾಡಲು ಬಿಡಿ. 

ಕಾಫಿ ಬ್ರೇಕ್
ಕಚೇರಿಯಲ್ಲಿ ಹೇಗೆ ಆಗಾಗ ಕಾಫಿ ಬ್ರೇಕ್ ತೆಗೆದುಕೊಳ್ಳುತ್ತಿದ್ದಿರೋ ಮನೆಯಲ್ಲಿಯೂ ವರ್ಕ್ ಫ್ರಂ ಹೋಂ ಮಾಡುವಾಗ ಅಂಥ ಬ್ರೇಕ್‌ಗಳಿಗೆ ಎಲ್ಲರೂ ಒಂದೇ ಸಮಯ ಮಾಡಿಕೊಳ್ಳಿ. ಮನೆಮಂದಿಯೆಲ್ಲ ಒಟ್ಟಿಗೆ ಕುಳಿತು ಕುಡಿಯುವುದು, ನ್ಯೂಸ್ ನೋಡುವುದು ಇಂಥದ್ದಕ್ಕೆಲ್ಲ ಅಪರೂಪಕ್ಕೊಂದು ಅವಕಾಶ ಸಿಕ್ಕಿದೆ. ಅದನ್ನು ಸದ್ಬಳಕೆ ಮಾಡಿಕೊಳ್ಳಿ. 

ಟಿವಿ ಟೈಂ
ಈಗ ಎಲ್ಲರ ಕೈಲೂ ಒಂದೊಂದು ಫೋನ್ ಬಂದ ಮೇಲೆ ಒಬ್ಬೊಬ್ಬರು ಒಂದೊಂದು ಕೋಣೆಯಲ್ಲಿ ಕುಳಿತು ತಮಗೆ ಬೇಕಾದ ಮೂವಿ ನೋಡುವುದು ಸಾಮಾನ್ಯವಾಗಿದೆ. ಇದರಿಂದ ಮನೆ ಮಂದಿಯೆಲ್ಲ ಒಟ್ಟಿಗೆ ಕುಳಿತುಕೊಂಡು ಚಲನಚಿತ್ರವೊಂದನ್ನು ಎಂಜಾಯ್ ಮಾಡುವ ಅನುಭವ ವಿರಳವಾಗಿದೆ. ಹಾಗಾಗಿ, ದೂರದರ್ಶನದಲ್ಲಿ ಬರುವ ರಾಮಾಯಣ, ಮಹಾಭಾರತ, ಸರ್ಕಸ್, ಶಕ್ತಿಮಾನ್ ಮುಂತಾದ ಕಾರ್ಯಕ್ರಮಗಳನ್ನು ಮನೆ ಮಂದಿಯೆಲ್ಲ ಒಟ್ಟಿಗೆ ಕುಳಿತು ನೋಡುವ ಅಭ್ಯಾಸ ಮಾಡಿಕೊಳ್ಳಿ. ಉತ್ತಮ ಕಾರ್ಯಕ್ರಮವೂ ಆಯಿತು, ಎಲ್ಲ ಒಟ್ಟಿಗಿದ್ದಂತೆಯೂ ಆಯಿತು. ಒಂದು ವೇಳೆ ಅಮೇಜಾನ್, ನೆಟ್‌ಫ್ಲಿಕ್ಸ್‌ಗಳ ಒಳ್ಳೆಯ ಚಿತ್ರ ನೋಡಲು ಮನಸ್ಸಾಗಿದ್ದರೆ ಅದನ್ನು ಟಿವಿಗೆ ಕನೆಕ್ಟ್ ಮಾಡಿ ಎಲ್ಲರೂ ಒಟ್ಟಾಗಿ ನೋಡಿ. ಒಬ್ಬರೇ ಏನನ್ನಾದರೂ ಮಾಡಬೇಕಿದ್ದರೆ ಅದು ಪುಸ್ತಕ ಓದುವುದು. ಪುಸ್ತಕಗಳನ್ನು ಓದುವ ಮಜಾ ಸವಿಯಲು ಇದು ಸುಸಮಯ. 

 ಕೊರೋನಾ ಸೋಂಕಿತ ವ್ಯಕ್ತಿ ತಿಂಡಿ ತಿಂದ ವಿಡಿಯೋ ವೈರಲ್‌!

ಭಜನೆ, ಹರಟೆ, ಮಸಾಜ್, ಯೋಗ
ಈ ಸಮಯ ಕುಟುಂಬದ ಸುಖ ಅನುಭವಿಸಲು ಯೋಗ್ಯವಾಗಿದೆ. ಹಾಗಾಗಿ ಆದಷ್ಟು ಎಲ್ಲರೂ ಒಟ್ಟಿಗೇ ಸಮಯ ಕಳೆಯುವಂತೆ ದಿನಚರಿ ಪ್ಲ್ಯಾನ್ ಮಾಡಿ. ಸಂಜೆಗೆ ಎಲ್ಲರೂ ಒಟ್ಟಾಗಿ ದೇವರ ಮುಂದೆ ಕುಳಿತು ಭಜನೆ ಮಾಡುವುದು, ಹಿರಿಯರು ಮಕ್ಕಳ ಬಳಿ ತಮ್ಮ ಬಾಲ್ಯದ ಕತೆಗಳನ್ನು ಹೇಳುವುದು, ಎಲ್ಲರೂ ಮನೆಯಲ್ಲೇ ತಯಾರಿಸಿದ ಫೇಶಿಯಲ್ ಹಚ್ಚಿಕೊಳ್ಳುವುದು, ಮಸಾಜ್ ಸೆಶನ್, ಬೆಳಗ್ಗೆ ಯೋಗ, ವ್ಯಾಯಾಮ ಮಾಡುವುದು ಮಾಡಬಹುದು.