ಪ್ರೀತಿಯ ತೀವ್ರತೆಯಷ್ಟೇ ಸುಖ ವಿರಹವೂ. ಹೋಗಿ ಬಾ, ನಾ ಕಾಯ್ತಿರ್ತೇನೆ ಅಂದಿದ್ದೆ. ಚೈನ್‌ ಸ್ಮೋಕರ್‌ ಅವ್ನು, ಟೀ ಕುಡೀತಾ ಸ್ಮೋಕ್‌ ಮಾಡುವ ಅಭ್ಯಾಸ. ಟೀ ಮಾಡಿಕೊಡೆ ಅಂದರೆ, ಕಿಚನ್‌ಗೆ ನೀನೂ ಬಾ ಅಪ್ಪಿಕೊಂಡಿರು, ನಾ ಟೀ ಮಾಡ್ತೀನಿ ಅಂತ ಅಂಟಿಕೊಂಡವಳು ನಾನು.

ನನ್ನ ಪ್ರೀತಿಗೆ ಪರೀಕ್ಷೆ ಒಡ್ಡಿ ಹೊರಟು ನಿಂತಿದ್ದ. ದಿನಾ ಒಂದು ಪೋಟೋ ಕಳಿಸೋ, ಬಿಟ್ಟಿರೋದು ಕಷ್ಟಅನಿಸುತ್ತೆ ಅಂತ ಕಣ್ಣೀರಾದೆ. ಓಕೆ ಓಕೆ ನೀನು ಪೋನು ಮೆಸೇಜು ಅಂತಾ ಡಿಸ್ಟರ್ಬ್‌ ಮಾಡಬೇಡಾ, ನಾನೇ ಫ್ರೀ ಇದ್ದಾಗ ಮಾತಾಡ್ತೇನೆ ಅಂದ.

ಕಣ್ಣಿನಲ್ಲಿ ಕಣ್ಣನ್ನಿಟ್ಟು ಅಪ್ಪಿಕೊಳ್ಳೋ ಒಮ್ಮೆ; ಹೇಳಿ ಬಿಡುವೆ ನೀ ನನಗ್ಯಾರೆಂದು

ನೀ ಬಳಿಯಿಲ್ಲದಿರುವಾಗ ನಿನ್ನ ನೆನಪುಗಳು ನನಗೆ ಹತ್ತಿರ ಹೋಗೋ ಎಂದೇ ಹುಸಿಮುನಿಸಿನಲಿ. ಪ್ರೇಮಿಗಳಿಗೆ/ವಿರಹಿಗಳಿಗೆ ಕಾಲ ಎನ್ನುವುದು ಶತ್ರು. ಹತ್ತಿರವಿದ್ದಾಗ -ಯುಗವೊಂದು ಕ್ಷಣ. ದೂರವಿರಲು ಕ್ಷಣವೊಂದು ಯುಗ. ಈ ಪಾಪಿ ಚಂದಿರನೂ ಸಹಾ ಅಷ್ಟೇ, ಪ್ರೇಮಿಗಳು ಹತ್ತಿರವಿರುವಾಗ ತಂಪು, ದೂರವಿರಲು ಸೂರ್ಯನಾಗಿ ಬದಲಾಗ್ತಾನೇ...

ದಿನವೆಲ್ಲಾ ಕೆಲಸ, ಓದು, ಏನೋ ಒಂದು. ರಾತ್ರಿಯಾದರೆ ನೀರವತೆಯಲ್ಲಿ ಬೇಕೆನಿಸುವ ಅವನು. ಏನೋ ಒಂದು ಮೆಸೇಜು...ದಿನಗಳೆದಂತೆ...ಇವನನ್ನು ನಾನು ಇಷ್ಟುಹೇಗೆ ಹಚ್ಚಿಕೊಂಡೆ ಅನಿಸತೊಡಗಿತು. ಪ್ರೇಮಪದ್ಯ ದಿನಾ ರಾತ್ರಿ ಮೊದಮೊದಲು ಕಳಿಸತೊಡಗಿದೆ. ಸಹಿಸಿಕೊಂಡ. ನಂತರ ವಿರಹದ ಗೀಚುವಿಕೆ. ಸುಮ್ಮನಾಗತೊಡಗಿದ.

ಭಯವಾಯ್ತು, ಕಾಟ ಕೊಡುತ್ತಿದ್ದೀನ? ಕೇಳಿದೆ.

ಇಲ್ಲವೇ ಹಚ್ಚಿಕೊಂಡ ಮೇಲೆ ಮುಗಿಯಿತು, ದೂರ ಹೋಗುವ ಮಾತಿಲ್ಲ. ಒಂದಷ್ಟುತಲೆಬಿಸಿ ಜಾಸ್ತಿ ಇದೆ, ಡೋಂಟ್‌ವರಿ ಸ್ವಲ್ಪ ಟೈಮ್‌ ಕೊಡು ಸರಿ ಹೋಗ್ತೇನೆ ಪ್ಲೀಸ್‌ ಅಂತ ಒಮ್ಮೆ ಕಾಲ್‌ ಬಂದಾಗ ಕೊಂಚ ನೆಮ್ಮದಿ.

ಅವನು ಅರ್ಥವಿರದ ಮಾತುಗಳನ್ನು ಆಡುವುದಿಲ್ಲ, ಹುಸಿ ಭರವಸೆಗಳ ಕೊಡುವುದಿಲ್ಲ. ನನಗೂ ಮಾತುಗಳಲ್ಲಿ ನಂಬಿಕೆ ಏನಿಲ್ಲ. ಏನೇನ್‌ ಆಗುತ್ತೋ ಅದು ಆಗಲೀ ಅಂತಾ ಎಷ್ಟುದಿನ ಸಹನೆ ವಹಿಸುವುದು?

ದಿನಗಳ ಲೆಕ್ಕ ಶುರುವಾಯ್ತು.. ಇಂದು, ಈಗ, ನಾಳೆ ಬಂದಾನು ಎಂಬ ನಿರೀಕ್ಷೆಯಲಿ..

ರೊಮ್ಯಾಂಟಿಕ್‌ ಆಗಿ ಪದ್ಯ ಬರೆಯುವ, ರೊಮ್ಯಾಂಟಿಕ್‌ ಆಗಿ ಮುದ್ದಿಸುವ ನನ್ನವನಿಗೆ ಮಾತಾಡಲಿಕ್ಕೆ ಮಾತ್ರಾ ಬಿಗುಮಾನ. ಮಾತಾಡುವ, ಹಾಡುವ ಅವನ ದನಿ ಕೇಳಿದರೆ ನನಗೋ ಏನೋ ಸಮಾಧಾನ.

ದೂರದಲ್ಲೆಲ್ಲೋ ಬ್ಯುಸಿ ಇದ್ದಾಗಲೂ ಮಧ್ಯ ರಾತ್ರಿ ಕಾಲ್‌ ಮಾಡಿ, ಮೊದಲಿಗೆ ನಾನೇ ಹೇಳಬೇಕು ಎಂದು ನ್ಯೂ ಇಯರ್‌ ವಿಷಸ್‌ ಮಾಡಿದ ಹಾಗೇ... ವ್ಯಾಲಂಟೈನ್ಸ್‌ ಡೇಗೂ ವಿಶ್‌ ಮಾಡೋಕೆ ಬರಬಾರದಾ? ಕಾಲ್‌ ಮಾಡ್ತಾನ? ಇವನ್ಯಾವಾಗ ಬಂದಾನು? ಎಂದು ತಳಮಳ. ಸ್ಟುಪಿಡ್‌... ತುಂಬಾ ಪ್ರೀತಿಯುಕ್ಕಿದಾಗ ಏನಾದರೂ ಒಂದು ಮುದ್ದು ಮುದ್ದಾದ ಹೆಸರಿನಿಂದ ಕರೆಯೋಣ ಅಂದುಕೊಂಡರೆ, ಅವನ ಹೆಸರಿಗಿಂತಾ ಚೆಂದದ ಬೇರೆ ಹೆಸರು ಸಿಕ್ಕಿಲ್ಲ ಇನ್ನೂ.

ಗಂಡಸರು ಪ್ರತಿ 7 ನಿಮಿಷಕ್ಕೊಮ್ಮೆ ಸೆಕ್ಸ್‌ ಬಗ್ಗೆ ಯೋಚಿಸ್ತಾರಾ?

ಮೌನ ವಿಷವಾಗಿ, ವಿರಹ ಕಡಲಾಗಿ ... ನಾನು ಉಳಿಯಲಿಲ್ಲ ನಾನಾಗಿ.. ಪ್ರೀತಿ, ಪ್ರೇಮ, ವಿರಹ ಎಲ್ಲಾ ಸಾಕಾಗಿ ಅವನು ಏನು ಮಾಡ್ತಿದ್ದಾನೋ, ಹೇಗಿದ್ದಾನೋ ಎಂಬ ತಲ್ಲಣ ಶುರುವಾಯ್ತು.

ಬೆಳ್‌ಬೆಳಿಗ್ಗೆ ಸೋನು ನಿಗಮ್‌ ಹಾಡ್ತಿದ್ದ, ನಾ ಕೇಳ್ತಿದ್ದೆ.. ಈ ರೊಮ್ಯಾಂಟಿಕ್‌ ವಾಯ್‌್ಸ ಕೇಳೋದೂ ಹಿಂಸೆ. ದೂರದಲ್ಲಿರುವ ಅವನು ಬೇಕು ತುಂಬಾ ಅನಿಸ್ತಾನೆ. ಒಮ್ಮೆ.. ಬಾರೋ ನೋಡಬೇಕು ಅಂದರೆ ಬ್ಯುಸಿ ಆಗೋಲ್ಲ ಅನ್ನೋವ್ನು, ಸಣ್ಣಗೆ ಕೋಪ, ಮಾತುಗಳು ಶುರು ನನ್ನವು, ರೇಗಿಸ್ತಾ... ರೇಗಿಸ್ತಾ ನನಗೋ ಕಣ್ಣಲ್ಲಿ ನೀರು. ಬಾಗಿಲು ತೆಗೆಯೇ ಬಕೆಟ್‌ ತಂದಿದ್ದೇನೆ ಕಣ್ಣೀರು ತುಂಬಿಸೋಕೆ ಅಂತ ಅನ್ನೋವ್ನು. ಅಳುವ ಕಣ್ಣು- ತುಟಿಯ ಮೇಲೆ ನಗು ಏಕ ಕಾಲಕ್ಕೆ ತರಿಸುವ ಚತುರ. ಕಾಡುತ್ತಾನೆ..

ಕರಿ ಹುಡುಗ ನನ್ನವನು, ಬಲಶಾಲಿ, ಚಿಕ್ಕ ಮಗುವಂತೆ ನನ್ನ ಎತ್ತಿಕೊಂಡು ಚುಂಬಿಸುವ ತುಂಟ. ಒರಟು ಕೈನಲ್ಲಿ ಮೆತ್ತ ಮೆತ್ತಗೆ ದೇಹದ ಒಂದೊಂದೇ ಭಾಗಗಳ ಸ್ಪರ್ಷಿಸುವಾಗ ಅದೆಷ್ಟುರೋಮಾಂಚನ! ಬೇಕೂ ಅನಿಸುತ್ತಾನೆ. ಒಂದು ಬಿಗಿಯಪ್ಪುಗೆ, ಸಿಹಿ ಮುತ್ತು ಸಾಕು ಎಂದೊಮ್ಮೆ ಕೇಳಿದ್ದೆ ನಾನು. ಅದು ಅಲ್ಲಿಗೆ ಮುಗಿಯಿತೇನು?

ಪ್ರೀತಿಸುವುದನ್ನು ಕಲಿಸಿದವ ಅವನು. ಸೋನು ನಿಗಮ್‌ ನಾ ಮಧುರ ಹಾಡುಗಳು ನನ್ನನ್ನು ಎಲ್ಲೆಲ್ಲಿಗೋ ಕೊಂಡಯ್ದವು. ಕನಸೋ ಇದು? ನನಸೋ? ಅವನು ಎದುರಲ್ಲಿ ಒಂದು ಕವರ್‌ ನಗುತ್ತಾ ನಿಂತಿದ್ದ!

ಯಾಕೋ ಹೀಗ್ಮಾಡಿದೆ? ಕಣ್ಣೀರು ನನಗೆ ದುಃಖಕ್ಕೂ ಖುಷಿಗೂ ಧಾರಾಕಾರ ಸಹಜ. ನಿಂಗೆ ಹೀಗೆ ಇಷ್ಟುಸಂತೋಷ ಸಿಗಲೀ ಅಂತ ನಕ್ಕ. ದಿನದಿನವೂ ಹೇಗೆ ಸಾಯ್ತಿದ್ದೆ ಗೊತ್ತಾ? ಈಗಲೂ ಮಾತುಗಳು ಬೇಕಾ ಅಂದು ಕವರ್‌ ನನ್ನತ್ತ ನೀಡಿದ. ಏನಿದು ಅಂದೇ. ಮಲ್ಲಿಗೆಯ ಘಮಲು ಮನೆಯ ತುಂಬಾ ಹರಡಿತ್ತು. ಬಿಚ್ಚಿ ನೋಡಿದರೆ ಗೊತ್ತಾಗುತ್ತೆ ಎಂದ.

ಅಷ್ಟಕ್ಕೂ ಪ್ರೀತಿ, ಮಲ್ಲಿಗೆಯ ಘಮ ಬಚ್ಚಿಡೋದು ಹೇಗೆ? ತೆಗೆದರೆ ಮಲ್ಲಿಗೆ, ಜೊತೆಯಲ್ಲಿ ತುಂಬಾ ಗಾಜಿನ ಬಳೆಗಳು. ಎಂದೋ ಒಮ್ಮೆ ನನಗೆ ಇದು ತಂದು ಕೊಡುವೆಯಾ ಎಂದಿದ್ದೆ. ಖುಷಿಯಾಯ್ತು ಇಂದು.

ಹ್ಯಾಪಿ ವ್ಯಾಲಂಟೈನ್ಸ್‌ ಡೇ ಕಣೆ ಅಂದ. ಅಯ್ಯೋ ಸ್ವೀಟ್‌ ತರಲಿಲ್ಲ, ಕೊಟ್ಟು ಬಿಡಲಾ ಹಾಗೇ ಎಂದ. ನಾ ತಲೆ ತಗ್ಗಿಸಿದ್ದೆ.. ಕಾಯಿಸಿ, ಪೀಡಿಸಿ, ನೋಯಿಸಿ, ಸತಾಯಿಸಿ ಪ್ರೀತಿಸುವ ಇವನ ಪರಿಗೆ ತುಂಬಾ ಭಾವುಕಳಾಗಿದ್ದೆ. ಸುರಿವ ಕಣ್ಣುಗಳ ತುಟಿಗಳಲಿ ಒರೆಸಿ ಸಕ್ಕರೆಯ ಮುತ್ತಿಟ್ಟಅವನ ಅಕ್ಕರೆಗೆ ಶರಣಾಗಿ ನಾನವನೊಳು ಒಂದಾದೆ.

ಒಲವೆಂದರೆ ಹೀಗೇ.. ಒಬ್ಬರಿಗಾಗಿ ಮತ್ತೊಬ್ಬರು ಜೀವಿಸುವುದು. ಪ್ರೇಮ ಅನ್ನೋದೂ ಸದಾ ಕಾಲದಲ್ಲೂ ಇರುತ್ತೆ, ಪ್ರೇಮಿಸುವುದು ಮಹಾಪರಾಧವೇನೋ ಎನ್ನುವ ಜನ ಅಂದು ಇಂದಿಗೂ ಇದ್ದಾರೆ.

- ಸುಜಾತಾ ಲೋಕೇಶ್