ಗಣಪತಿ ವಿಸರ್ಜನೆ ವೇಳೆ ಭಕ್ತರ ಮನದಲ್ಲೆಲ್ಲೋ ನೋವು ಕಾಡೋದು ಸಹಜ. ಮುಗ್ದ ಮಕ್ಕಳು ಇದನ್ನು ತೋರ್ಪಡಿಸ್ತಾರೆ. ಪುಟಾಣಿಯೊಬ್ಬಳು ಗಣಪತಿ ಮೂರ್ತಿಯನ್ನು ತಬ್ಬಿ, ಬಿಕ್ಕಿ ಬಿಕ್ಕಿ ಅತ್ತಿದ್ದಾಳೆ. ಆಕೆಯ ಶುದ್ಧ ಪ್ರೀತಿಗೆ ನೆಟ್ಟಿಗರು ಕರಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಚಿಕ್ಕ ಹುಡುಗಿಯ ಅಳು ವೈರಲ್ ಆಗಿದೆ.
ಭಾರತೀಯರಿಗೆ ಗಣೇಶೋತ್ಸವ (Ganeshotsav) ಬರೀ ಹಬ್ಬವಲ್ಲ. ಅದೊಂದು ಭಾವುಕತೆ. ಎಲ್ಲರನ್ನು ಒಂದುಗೂಡಿಸುವ, ಸಂಭ್ರಮಿಸುವ ಸಮಾರಂಭ. ದೇಶದಲ್ಲಿ ಗಣೇಶೋತ್ಸವದ ಸಂಭ್ರಮ ಇನ್ನೂ ಮುಗಿದಿಲ್ಲ. ಮಹಾರಾಷ್ಟ್ರ ಸೇರಿದಂತೆ ಕರ್ನಾಟಕದ ಕೆಲ ಪ್ರದೇಶದಲ್ಲಿ ಸಾರ್ವಜನಿಕ ಗಣಪತಿಯ ಸ್ಥಾಪನೆ, ಪೂಜೆ, ಆರಾಧನೆ ನಡೀತಾನೇ ಇದೆ. ಗಣೇಶ ವಿಸರ್ಜನೆಯನ್ನು ಕೂಡ ಅದ್ಧೂರಿಯಾಗಿ ಮಾಡಲಾಗುತ್ತೆ. ಪಟಾಕಿ ಹಚ್ಚಿ, ಡೊಳ್ಳು ಬಾರಿಸಿ ಗಣಪತಿಯನ್ನು ಮೆರವಣಿಗೆಯಲ್ಲಿ ತರುವ ಭಕ್ತರು, ಗಣಪತಿ ಬಪ್ಪ ಮೋರಿಯ (Ganpati Bappa Morya) ಅಂತಾ ನೀರಿಗೆ ಬಿಡ್ತಾರೆ. ಈ ವರ್ಷ ಗಣೇಶ, ನೀರಿನಲ್ಲಿ ಮುಳುಗೆದ್ರೂ ಮುಂದಿನ ವರ್ಷ ಅದೇ ಸಂಭ್ರಮದಲ್ಲಿ ಮತ್ತೆ ಭಕ್ತರು ಮನೆಗೆ ತರ್ತಾರೆ. ಆದ್ರೆ ಗಣೇಶ ಬರುವಾಗಿದ್ದ ಖುಷಿ ಅವನನ್ನು ನೀರಿನಲ್ಲಿ ಬಿಟ್ಟು ಬಂದಾಗ ಮನೆಯಲ್ಲಿರೋದಿಲ್ಲ. ಮೋದಕ ಪ್ರಿಯನ ಆರಾಧನೆಯಲ್ಲಿ ತಲ್ಲೀನರಾಗಿರುವ ಭಕ್ತರಿಗೆ ಆತನ ಗೈರು ಮನಸ್ಸಿಗೆ ದುಃಖವನ್ನು ತರುತ್ತದೆ. ಸದ್ಯ ಗಣೇಶ ವಿಸರ್ಜನೆಯ ಅನೇಕ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿವೆ. ಆದ್ರೆ ಈ ವರ್ಷದ ದಿ ಬೆಸ್ಟ್ ವಿಡಿಯೋ ಅನ್ನಿಸಿಕೊಂಡಿದ್ದು ಈ ಪುಟಾಣಿಯ ವಿಡಿಯೋ.
ಮಕ್ಕಳದ್ದು ಶುದ್ಧ ಮನಸ್ಸು. ಅವರಿಗೆ ಯಾವುದೇ ಕಲ್ಮಶ, ನಾಟಕ, ಮೋಸ, ವಂಚನೆ ತಿಳಿದಿರೋದಿಲ್ಲ. ಯಾವುದೇ ವಸ್ತುವನ್ನಾಗ್ಲಿ, ಯಾವುದೇ ವ್ಯಕ್ತಿಯನ್ನಾಗ್ಲಿ ಅವರು ಮನಸ್ಪೂರ್ವಕವಾಗಿ ಪ್ರೀತಿಸ್ತಾರೆ. ಅದ್ರಲ್ಲಿ ನಮ್ಮ ದೊಡ್ಡ ಹೊಟ್ಟೆ ಗಣಪ ಕೂಡ ಸೇರಿದ್ದಾನೆ. ಗಣೇಶನೆಂದ್ರೆ ಮಕ್ಕಳಿಗೆ ವಿಶೇಷ ಪ್ರೀತಿ. ಈ ಪುಟಾಣಿ ಮಾತ್ರ ಗಣಪತಿಯನ್ನು ಅತಿಯಾಗಿ ಹಚ್ಕೊಂಡಂತಿದೆ. ಗಣಪತಿ ವಿಸರ್ಜನೆ ವಿರೋಧಿಸುವ ಆಕೆಯ ಅಳು, ಮುಗ್ದ ಪ್ರೀತಿಗೆ ಹಿಡಿದ ಕೈಗನ್ನಡಿಯಾಗಿದೆ.
ಗಣಪತಿ ಮೂರ್ತಿ ಮುಂದೆ ಸೀರೆಯುಟ್ಟು, ತಲೆಗೆ ದೊಡ್ಡ ಕುಂಕುಮ ಇಟ್ಟು, ಪುಟಾಣಿ ಕೈ ಬೀಸ್ತಾ, ಅಳ್ತಿರುವ ಈ ಬಾಲೆಗೆ ಗಣೇಶ ವಿಸರ್ಜನೆ ಸೂತಾರಾಂ ಇಷ್ಟ ಇಲ್ಲ. ಗಣೇಶನನ್ನು ನೀರಿನಲ್ಲಿ ಬಿಡ್ಬೇಡಿ ಎಂಬುದೇ ಆಕೆಯ ವಿನಂತಿ. ಅವಳು ಅಳ್ತಿರೋದನ್ನು ನೋಡಿದ್ರೆ ಮೂರ್ತಿಯಾಗಿ ಕುಳಿತಿರುವ ಗಣೇಶ ಕೂಡ ಪ್ರತಿಕ್ರಿಯೆ ನೀಡ್ತಾನೇನೋ ಅನ್ನಿಸುತ್ತೆ. ಆಗಾಗ ಗಣಪತಿ ಮೂರ್ತಿ, ಆತನ ಕಣ್ಣು, ಕೆನ್ನೆಯನ್ನು ಮುಟ್ಟುವ ಹುಡುಗಿ, ಮೂರ್ತಿಯನ್ನು ತಬ್ಬಿಕೊಂಡು ಅಳ್ತಾಳೆ. ಗಣೇಶನ ಸೊಂಡಿಲು ಹಿಡಿದು ಬೇಡ್ವೇ ಬೇಡ ಎನ್ನುತ್ತಾಳೆ. ಗಣೇಶನನ್ನು ನೀರಿಗೆ ಬಿಡ್ಬೇಡಿ ಅಂತ ಮನವಿ ಮಾಡಿಕೊಳ್ತಾಳೆ.
Vineeta Singh ಹೆಸರಿನ ಎಕ್ಸ್ ಖಾತೆ (X account) ಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಅತ್ಯಂತ ಕಠಿಣ ವಿದಾಯ. ಶೀಘ್ರವೇ ಇವಳ ಅಮ್ಮನ ಜೊತೆ ಗಣಪತಿ ಬರ್ತಾನೆ ಎಂದು, ವಿಡಿಯೋಕ್ಕೆ ಶೀರ್ಷಿಕೆ ಹಾಕಲಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿರುವ ಈ ವಿಡಿಯೋವನ್ನು ಈವರೆಗೆ 1 ಲಕ್ಷ 20 ಸಾವಿರಕ್ಕಿಂತಲೂ ಹೆಚ್ಚು ಬಾರಿ ವೀಕ್ಷಣೆ ಮಾಡಲಾಗಿದೆ. ಸಾವಿರಾರು ಮಂದಿ ಲೈಕ್ ಮಾಡಿದ್ದು, ನೂರಾರು ಪ್ರತಿಕ್ರಿಯೆ ಬಂದಿದೆ.
ಈ ವಿಡಿಯೋ ನೋಡಿದ ಬಳಕೆದಾರರು, ಹೃದಯ ಸ್ಪರ್ಶಿಸುವ ವಿಡಿಯೋ ಎಂದು ಕಮೆಂಟ್ ಮಾಡಿದ್ದಾರೆ. ಗಣಪತಿ ಬಪ್ಪ ಮೋರಿಯ ಎಂದ ಬಳಕೆದಾರರು, ಸನಾತನ ಧರ್ಮಕ್ಕೆ ಜೈ ಎಂದಿದ್ದಾರೆ. ಇದು ಮಗುವಿನ ಪ್ರೀತಿ. ಕಲ್ಮಶವಾದ ಪ್ರೀತಿ ಎಂದು ಬಳಕೆದಾರರೊಬ್ಬರು ಕಮೆಂಟ್ ಮಾಡಿದ್ರೆ, ಭಗವಂತ ಗಣೇಶನ ಕೃಪೆ ಈ ಮಗುವಿನ ಮೇಲೆ ಸದಾ ಇರಲಿ ಎಂದು ಬಳಕೆದಾರರು ಆಶೀರ್ವದಿಸಿದ್ದಾರೆ. ಸೆಪ್ಟೆಂಬರ್ 4 ರಂದು 9 ವರ್ಷದ ಅಭಿನವ್ ಅರೋರಾ ರೀಲ್ಸ್ ಒಂದು ವೈರಲ್ ಆಗಿತ್ತು. ಗಣಪತಿ ವಿಸರ್ಜನೆ ವೇಳೆ ಆತ ಕೂಡ ಗಣಪತಿ ಮೂರ್ತಿಯನ್ನು ತಬ್ಬಿಕೊಂಡು, ಬಿಕ್ಕಿಬಿಕ್ಕಿ ಅತ್ತಿದ್ದ.
