ರಾಮನಗರಕ್ಕೆ ಇನ್ನೂ ಭೇಟಿ ನೀಡದ ಜಿಲ್ಲಾ ಉಸ್ತುವಾರಿ ಸಚಿವ
ಜಿಲ್ಲೆಗೆ ಭೇಟಿ ನೀಡದ ನೂತನ ಜಿಲ್ಲಾ ಉಸ್ತುವಾರಿ ಉಪಮುಖ್ಯಮಂತ್ರಿ ಸಿ.ಎನ್. ಅಶ್ವತ್ಥ ನಾರಾಯಣ| ಉಪ ಮುಖ್ಯಮಂತ್ರಿ ಸಿ.ಎನ್. ಅಶ್ವತ್ಥ ನಾರಾಯಣ ಅವರಿಗೆ ತವರು ಜಿಲ್ಲೆ ರಾಮನಗರ ಜೊತೆಗೆ ಚಿಕ್ಕಬಳ್ಳಾಪುರ ಜಿಲ್ಲೆಯ ಪ್ರಭಾರ ಉಸ್ತುವಾರಿ ಸಚಿವರ ಜವಾಬ್ದಾರಿಯನ್ನು ನೀಡಲಾಗಿದೆ| ಬೇರೆ ಜಿಲ್ಲೆಗಳಿಗೆ ಉಸ್ತುವಾರಿ ಸಚಿವರಾಗಿ ನೇಮಕಗೊಂಡಿರುವ ಬಹುತೇಕ ಸಚಿವರು ತಮ್ಮ ತಮ್ಮ ಜಿಲ್ಲೆಗಳಿಗೆ ಒಮ್ಮೆ ಭೇಟಿ ನೀಡಿ ಅಧಿಕಾರಿಗಳ ಸಭೆ ನಡೆಸಿದ್ದಾರೆ|
ಎಂ. ಅಫ್ರೋಜ್ ಖಾನ್
ರಾಮನಗರ(ಅ.9): ರೇಷ್ಮೆ ನಗರಿ ರಾಮನಗರ ಜಿಲ್ಲೆಗೆ ನೂತನ ಜಿಲ್ಲಾ ಉಸ್ತುವಾರಿ ಸಚಿವರಾಗಿ ನೇಮಕಗೊಂಡು 23 ದಿನಗಳು ಕಳೆದರೂ ಉಪಮುಖ್ಯಮಂತ್ರಿ ಸಿ.ಎನ್. ಅಶ್ವತ್ಥ ನಾರಾಯಣ ಅವರಿಗೆ ಜಿಲ್ಲೆಗೆ ಭೇಟಿ ನೀಡಲು ಇನ್ನೂ ಸಮಯ ಸಿಕ್ಕಿಲ್ಲ.
ಮುಖ್ಯಮಂತ್ರಿ ಯಡಿಯೂರಪ್ಪ ಹೆಚ್ಚು ಕಡಿಮೆ ಸಚಿವ ಸಂಪುಟ ವಿಸ್ತರಣೆಯಾಗಿ ಒಂದು ತಿಂಗಳ ನಂತರ ಅಳೆದು ತೂಗಿ(ಸೆಪ್ಟೆಂಬರ್ 16) ಜಿಲ್ಲೆಗಳನ್ನು ಸಚಿವರ ನಡುವೆ ಹಂಚಿದರು. ಉಪ ಮುಖ್ಯಮಂತ್ರಿ ಸಿ.ಎನ್. ಅಶ್ವತ್ಥ ನಾರಾಯಣ ಅವರಿಗೆ ತವರು ಜಿಲ್ಲೆ ರಾಮನಗರ ಜೊತೆಗೆ ಚಿಕ್ಕಬಳ್ಳಾಪುರ ಜಿಲ್ಲೆಯ ಪ್ರಭಾರ ಉಸ್ತುವಾರಿ ಸಚಿವರ ಜವಾಬ್ದಾರಿಯನ್ನು ನೀಡಲಾಗಿದೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಬೇರೆ ಜಿಲ್ಲೆಗಳಿಗೆ ಉಸ್ತುವಾರಿ ಸಚಿವರಾಗಿ ನೇಮಕಗೊಂಡಿರುವ ಬಹುತೇಕ ಸಚಿವರು ತಮ್ಮ ತಮ್ಮ ಜಿಲ್ಲೆಗಳಿಗೆ ಒಮ್ಮೆ ಭೇಟಿ ನೀಡಿ ಅಧಿಕಾರಿಗಳ ಸಭೆ ನಡೆಸಿದ್ದಾರೆ. ಪಕ್ಕದ ಮಂಡ್ಯ ಜಿಲ್ಲೆ ಸೇರಿದಂತೆ ಹಲವೆಡೆ ಪ್ರವಾಸ ನಡೆಸಿರುವ ಅಶ್ವತ್ಥ ನಾರಾಯಣ ಅವರು ರಾಮನಗರಕ್ಕೆ ಭೇಟಿ ನೀಡಲು ಇನ್ನೂ ಮನಸ್ಸು ಮಾಡಿಲ್ಲ.
ಚರ್ಚೆ ನಡೆಸಿಲ್ಲ:
ಉಪ ಮುಖ್ಯಮಂತ್ರಿ ಅಶ್ವತ್ಥ ನಾರಾಯಣರವರು ಜಿಲ್ಲೆಗೆ ಭೇಟಿ ನೀಡುವುದಿರಲಿ ಕನಿಷ್ಠ ಪಕ್ಷ ತಾವಿರುವಲ್ಲಿಗೆಯೇ ಜಿಲ್ಲಾಧಿಕಾರಿಗಳು, ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳನ್ನು ಕರೆಸಿಕೊಂಡು ಜಿಲ್ಲೆಯ ಅಭಿವೃದ್ಧಿ, ಸಮಸ್ಯೆಗಳ ಕುರಿತು ಚರ್ಚೆ ಕೂಡ ನಡೆಸಿಲ್ಲ. ಅನೇಕರ ಜಯಂತಿಗಳು ಹಾಗೂ ದಸರಾ ಆಹಾರ ಮೇಳ ನಡೆದರೂ ಪಾಲ್ಗೊಳ್ಳಲ್ಲಿಲ್ಲ.
ಜಿಲ್ಲೆಯು ಸತತ ಬರಗಾಲದಿಂದ ತತ್ತರಿಸಿದೆ. ಹಿಂಗಾರು ಮತ್ತು ಮುಂಗಾರಿನ ಬರದಿಂದಾಗಿ ರೈತರು ಕಂಗಾಲಾಗಿದ್ದಾರೆ. ಬೆಳೆ ನಷ್ಟಕ್ಕೆ ಇನ್ನೂ ಸಮರ್ಪಕವಾಗಿ ಪರಿಹಾರ ವಿತರಣೆ ಆಗಿಲ್ಲ. ಜಿಲ್ಲೆಯಲ್ಲಿ ಜಾನುವಾರುಗಳಿಗೆ ಸದ್ಯಕ್ಕೆ ಮೇವಿನ ಸಮಸ್ಯೆ ಇಲ್ಲದಿದ್ದರೂ, ಹಲವೆಡೆ ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ.
ಸಮಸ್ಯೆಗಳಿಗೆ ಸಿಕ್ಕದ ಉತ್ತರ:
ಮೈತ್ರಿ ಸರ್ಕಾರದ ಅವಧಿಯಲ್ಲಿ ರಾಮನಗರ ಜಿಲ್ಲೆಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಅನುಷ್ಠಾನಕ್ಕೆ ಮಂಜೂರಾಗಿರುವ ಅನುದಾನಕ್ಕೆ ಬ್ರೇಕ್ ಹಾಕಿರುವುದು, ಕನಕಪುರಕ್ಕೆ ಮಂಜೂರಾಗಿದ್ದ ಮೆಡಿಕಲ್ ಕಾಲೇಜಿನ ಸ್ಥಳಾಂತರ, ರಾಜೀವ್ ಗಾಂಧಿ ಆರೋಗ್ಯ ವಿವಿ, ಮೇಕೆದಾಟು ಯೋಜನೆ ಸೇರಿದಂತೆ ಅನೇಕ ಜ್ವಲಂತ ಸಮಸ್ಯೆಗಳಿಗೆ ಸಚಿವರಿಂದ ಮುಕ್ತಿ ದೊರಕಬೇಕಿದೆ.
ಆರನೇ ಜಿಲ್ಲಾ ಉಸ್ತುವಾರಿ ಸಚಿವ:
ರಾಮನಗರ ಜಿಲ್ಲೆಯಾಗಿ 13 ವಸಂತಗಳನ್ನು ಪೂರೈಸಿದೆ. ಆದರೆ, ಬಿಜೆಪಿಗರಿಗೆ ಕೇವಲ ಆರು ಬಾರಿ ಮಾತ್ರ ಉಸ್ತುವಾರಿ ಹೊಣೆ ದೊರೆತಿದೆ. ಶ್ರೀರಾಮುಲು, ಉಮೇಶ್ ಕತ್ತಿ, ರೇಣುಕಾಚಾರ್ಯ, ಬಚ್ಚೇಗೌಡ, ಸಿ.ಪಿ. ಯೋಗೇಶ್ವರ್ ಬಳಿಕ ಅಶ್ವತ್ಥ ನಾರಾಯಣ ಜಿಲ್ಲಾ ಉಸ್ತುವಾರಿಯ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಆದರೆ, ಇವರೆಲ್ಲರೂ ಅತ್ಯಂತ ಕಡಿಮೆ ಅವಧಿಯಲ್ಲಿಯೇ ಪಟ್ಟದಿಂದ ಕೆಳಗಿಳಿದಿದ್ದರು ಎಂಬುದು ವಿಶೇಷ. ಇನ್ನು ಕಾಂಗ್ರೆಸ್‌ನಿಂದ ಡಿ.ಕೆ. ಶಿವಕುಮಾರ್ 6 ರಿಂದ 7 ಬಾರಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾರೆ. ಎಚ್.ಡಿ. ಕುಮಾರಸ್ವಾಮಿ ಸ್ಥಳೀಯ ಶಾಸಕರಾಗಿ ಮುಖ್ಯಮಂತ್ರಿ ಪಟ್ಟಅಲಂಕರಿಸಿದ್ದರು. ಆದರೆ, ಉಸ್ತುವಾರಿ ಹೊಣೆ ಮಾತ್ರ ಹೊತ್ತಿರಲಿಲ್ಲ. ಇದೀಗ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರದಲ್ಲಿ ನೇಮಕಗೊಂಡಿರುವ 5 ಮಂದಿ ಉಸ್ತುವಾರಿ ಸಚಿವರು ಸಹ ಜಿಲ್ಲೆಯವರಲ್ಲ. ಆದರೆ, ಡಾ. ಅಶ್ವತ್ಥ ನಾರಾಯಣ ಒಂದೆಡೆ ಜಿಲ್ಲೆಯವರೇ ಆದರೂ, ಇನ್ನೊಂದು ಅರ್ಥದಲ್ಲಿ ಜಿಲ್ಲೆಯಿಂದ ದೂರವೇ ಉಳಿದು ಸರ್ಕಾರದಲ್ಲಿದ್ದಾರೆ ಎನ್ನಬಹುದು.
ಕೆಡಿಪಿ ಸಭೆ ನಡೆದು 14 ತಿಂಗಳು:
ಜೆಡಿಎಸ್ - ಕಾಂಗ್ರೆಸ್ ಮೈತ್ರಿ ಸರ್ಕಾರದ ಅವಧಿಯಲ್ಲಿ ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಡಿ.ಕೆ. ಶಿವಕುಮಾರ್ ಅಧ್ಯಕ್ಷತೆಯಲ್ಲಿ 2018ರ ಜುಲೈ 16ರಂದು ಜಿಲ್ಲಾಮಟ್ಟದ ಪ್ರಗತಿ ಪರಿಶೀಲನಾ ಸಭೆ ನಡೆದಿತ್ತು. ಆನಂತರ ಮೈತ್ರಿ ಸರ್ಕಾರದ ಉಳಿವು, ಐಟಿ ಇಡಿಯ ಸಂಕಷ್ಟದಂತಹ ಗೊಂದಲದಲ್ಲಿ ಡಿ.ಕೆ. ಶಿವಕುಮಾರ್ ಸಿಲುಕಿದ್ದರು.
ಮೈತ್ರಿ ಸರ್ಕಾರದ ಅವಧಿಯಲ್ಲಿ 12 ತಿಂಗಳ ಕಾಲ ಡಿ.ಕೆ. ಶಿವಕುಮಾರ್ ಕೆಡಿಪಿ ಸಭೆ ನಡೆಸುವ ಗೋಜಿಗೆ ಹೋಗಲಿಲ್ಲ. ಈಗ ಬಿಜೆಪಿ ಸರ್ಕಾರ ರಚನೆಯಾದ ಒಂದೂವರೆ ತಿಂಗಳ ನಂತರ ರಾಮನಗರ ಜಿಲ್ಲೆಯ ಉಸ್ತುವಾರಿ ಸಚಿವರಾಗಿ ಉಪಮುಖ್ಯಮಂತ್ರಿ ಅಶ್ವತ್ಥ ನಾರಾಯಣ ನೇಮಕಗೊಂಡಿದ್ದಾರೆ.
ಉಸ್ತುವಾರಿ ಜವಾಬ್ದಾರಿ ವಹಿಸಿಕೊಂಡು ಏಳು ದಿನಗಳು ಕಳೆದರೂ ಅಶ್ವತ್ಥ ನಾರಾಯಣ ಅವರಿಗೆ ಮಾತ್ರ ರಾಮನಗರ ಜಿಲ್ಲೆ ನೆನಪಿಗೆ ಬರುತ್ತಿಲ್ಲ. ವಾಸ್ತವವಾಗಿ ಹಳ್ಳಿಗಳಿಗೆ ಹೋಗಿ ನೋಡಿದರೆ ಸಮಸ್ಯೆ ಇರುವುದು ತಿಳಿಯುತ್ತದೆ. ಆದರೀಗ ಅನರ್ಹ ಶಾಸಕರ ಕ್ಷೇತ್ರಗಳಿಗೆ ನಡೆಯುತ್ತಿರುವ ಉಪಚುನಾವಣೆಯಲ್ಲಿ ತಲ್ಲೀನರಾಗಿದ್ದು, ತವರು ಜಿಲ್ಲೆಯನ್ನು ಮರೆತು ಬರೀ ರಾಜಕಾರಣಕ್ಕಾಗಿ ಸೀಮಿತರಾಗಿದ್ದಾರೆಯೇ ಎಂದು ಜಿಲ್ಲೆಯ ಜನರು ಮಾತನಾಡಿಕೊಳ್ಳುವಂತಾಗಿದೆ ಎಂಬುದೇ ವಿಪರ್ಯಾಸ.