Asianet Suvarna News Asianet Suvarna News

EQ ಹೆಚ್ಚಿರುವವರು ಉದ್ಯೋಗದಲ್ಲಿ ಒತ್ತಡ ನಿಭಾಯಿಸುವುದು ಹೀಗೆ...

ಹೆಚ್ಚು ಇಕ್ಯೂ(ಭಾವನಾತ್ಮಕ ಬುದ್ಧಿವಂತಿಕೆ) ಹೊಂದಿದ ಉದ್ಯೋಗಿಗಳು ಕೆಲಸದ ಸ್ಥಳದಲ್ಲಿ ಒತ್ತಡವನ್ನು ಇತರರಿಗಿಂತ ಹೆಚ್ಚು ಚೆನ್ನಾಗಿ ನಿಭಾಯಿಸಬಲ್ಲರು. 

How emotionally intelligent people handle stressful situations at work
Author
Bengaluru, First Published Dec 17, 2019, 6:44 PM IST

ವರ್ಕ್ ಪ್ರೆಶರ್, ಕಚೇರಿ ರಾಜಕೀಯ, ಡೆಡ್‌ಲೈನ್, ವೈಯಕ್ತಿಕ ಜೀವನದ ಸಮಸ್ಯೆಗಳು ಎಲ್ಲ ಸೇರಿದರೆ ಒತ್ತಡ ಎಂಬುದು ಬಹುತೇಕರ ಬದುಕಿನ ಅವಿಭಾಜ್ಯ ಅಂಗವಾಗಿ ಹೋಗಿದೆ. ಆದರೆ, ಭಾವನಾತ್ಮಕವಾಗಿ ಹೆಚ್ಚು ಬುದ್ದಿವಂತಿಕೆಯುಳ್ಳ ಉದ್ಯೋಗಿಗಳು ಇಂಥ ಪರೀಕ್ಷಾರ್ಥ ಪರಿಸ್ಥಿತಿಗಳು ತಮ್ಮನ್ನು ಮಾನಸಿಕವಾಗಿ, ದೈಹಿಕವಾಗಿ ನುಜ್ಜುಗುಜ್ಜಾಗಿಸಲು ಬಿಡದೆ ಉತ್ತಮ ಉತ್ಪಾದಕತೆ ಸಾಮರ್ಥ್ಯ ತೋರುತ್ತಾರೆ. ಹೀಗೆ ಎಮೋಶನಲ್ ಕೋಶಂಟ್ ಜಾಸ್ತಿ ಹೊಂದಿದ ಜನರನ್ನು ಕಾರ್ಪೋರೇಟ್ ಲೋಕದಲ್ಲಿ ಮೇಲಕ್ಕೆ ಕೊಂಡೊಯ್ಯುವ ಪ್ರಮುಖ ಗುಣಗಳು ಇಲ್ಲಿವೆ. 

ಕೆಲಸದ ವೇಳೆ ಮನಸ್ಸನ್ನು ಪ್ರಶಾಂತವಾಗಿಟ್ಟುಕೊಳ್ಳುವುದು ಹೇಗೆ?

ಪ್ರತಿಕ್ರಿಯೆ
ಕೋಪದಲ್ಲಿದ್ದಾಗ, ಅಥವಾ ಒತ್ತಡದಲ್ಲಿದ್ದಾಗ ನಾವು ಮನಸ್ಸಿಗೆ ತೋಚಿದ್ದನ್ನೆಲ್ಲ ಹೇಳಿ ಮತ್ತೊಬ್ಬರ ಮೇಲೆ ಕೂಗಾಡಿಬಿಡಬಹುದು. ಅಥವಾ ನನಗೆ ಈ ಕೆಲಸ ಸಾಕಾಗಿದೆ ಎನ್ನುವುದೋ, ಬಾಸ್‌ಗೆ ಬಯ್ಯುವುದೋ ಮಾಡಬಹುದು. ನಂತರದಲ್ಲಿ ಅಯ್ಯೋ ಹೀಗೆ ಮಾಡಬಾರದಿತ್ತು ಎಂದು ಕೊರಗುತ್ತೇವೆ. ಏಕೆಂದರೆ ನಾವು ಪ್ರತಿಕ್ರಿಯಿಸಲು ಸಮಯ ತೆಗೆದುಕೊಳ್ಳುವುದಿಲ್ಲ. ಆ ಕ್ಷಣ ನಮ್ಮೊಳಗಿನ ಕಿರಿಕಿರಿಯನ್ನು ಕಾರಿರುತ್ತೇವೆ ಅಷ್ಟೇ. ಆದರೆ, ಹೆಚ್ಚು ಇಕ್ಯೂ ಇರುವವರು ಎಂಥದೇ ಪರಿಸ್ಥಿತಿಯಲ್ಲೂ ಹೀಗೆ ಮಾಡುವುದಿಲ್ಲ. ಬದಲಿಗೆ ಅವರು ಮನಸ್ಸನ್ನು ನಿಯಂತ್ರಿಸಿಟ್ಟುಕೊಳ್ಳಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತಾರೆ. ಆ ಬಳಿಕ ಲಾಜಿಕಲ್ ಆಗಿ ಯೋಚಿಸಿ ಪ್ರತಿಕ್ರಿಯಿಸುತ್ತಾರೆ. ಇಲ್ಲಿಯೇ ಅವರು ಉದ್ಯೋಗದ ಸ್ಥಳದಲ್ಲಿ ಒಂದು ಕೈ ಮೇಲಾಗುವುದು. 

ಬರವಣಿಗೆ
ಭಾವನಾತ್ಮಕವಾಗಿ ಹೆಚ್ಚು ಬುದ್ದಿವಂತರಾದವರು ತಮ್ಮೆಲ್ಲ ನೆಗೆಟಿವ್ ಎಮೋಶನ್‌ಗಳನ್ನು ಒಂದೆಡೆ ಬರೆದಿಡುತ್ತಾರೆ. ಆ ದಿನ ಏನಾಯಿತು, ಆ ಪರಿಸ್ಥಿತಿಗೆ ತಾವು ಹೇಗೆ ಪ್ರತಿಕ್ರಿಯಿಸಬಹುದಿತ್ತು ಎಂದು ಯೋಚಿಸುತ್ತಾರೆ. ಇದರಿಂದ ಅವರಿಗೆ ತಮ್ಮ ನೆಗೆಟಿವ್ ಭಾವನೆಗಳನ್ನು ವ್ಯಕ್ತಪಡಿಸುವುದಕ್ಕೊಂದು ಸಾಧುವಾದ ಮಾಧ್ಯಮ ಸಿಗುವುದರ ಜೊತೆಗೆ, ಮನಸ್ಸನ್ನು ತಿಳಿಯಾಗಿಸಿಕೊಳ್ಳಲು ಸಾಧ್ಯವಾಗುತ್ತದೆ. 

ಕೆರಳಿಸುವುದೇನು?
ಇಕ್ಯೂ ಹೆಚ್ಚಿರುವವರಿಗೆ ತಮ್ಮನ್ನು ಕೆರಳಿಸುವ ವಿಷಯಗಳು ಯಾವುವು ಎಂಬುದು ಚೆನ್ನಾಗಿ ಅರ್ಥವಾಗಿರುತ್ತದೆ. ಏಕೆಂದರೆ, ಪ್ರತಿಯೊಬ್ಬರಿಗೂ ಕೆಲವೊಂದು ವಿಷಯಗಳು, ಕೆಲ ಸನ್ನಿವೇಶಗಳು ನೆಗೆಟಿವ್ ಪ್ರತಿಕ್ರಿಯೆ ಹೊರತರುತ್ತಿರುತ್ತವೆ. ಅದು ಕೊಳಕಾಗಿರುವ ಡೆಸ್ಕ್ ಇರಬಹುದು, ಅಥವಾ ಬೇಡದ ಮಾತನ್ನಾಡುವ ಸಹೋದ್ಯೋಗಿ ಇರಬಹುದು, ಹೇಳಿದ ಸಮಯಕ್ಕೆ ಕೆಲಸ ಮಾಡದ ಟೀಂ ಮೆಂಬರ್ ಇರಬಹುದು ಅಥವಾ ಉದ್ಯೋಗ ಸ್ಥಳದ ಬೇರಾವುದೇ ವಿಷಯಗಳಿರಬಹುದು. ಭಾವನಾತ್ಮಕ ಬುದ್ಧಿವಂತರಿಗೆ ತಮಗೆ ಆಗದ್ದು ಯಾವುದು ಹಾಗೂ ಅವನ್ನು ಹೇಗೆ ಹ್ಯಾಂಡಲ್ ಮಾಡಬೇಕು ಎಂಬುದು ಚೆನ್ನಾಗಿ ತಿಳಿದಿರುತ್ತದೆ. 

ಹಂಚಿಕೊಳ್ಳುವುದು
ಹೆಚ್ಚು ಇಕ್ಯೂ ಇರುವ ಉದ್ಯೋಗಿಗಳು ತಮ್ಮ ಫೀಲಿಂಗ್ಸ್ ಹೇಳಿಕೊಳ್ಳಲು ಸಂಕೋಚ ಪಟ್ಟುಕೊಂಡು ದೂರ ಉಳಿಯುವುದಿಲ್ಲ. ಬದಲಿಗೆ ತಾವು ನಂಬಿಕೆ ಇಟ್ಟವರ ಬಳಿ ಅದನ್ನು ಹೇಳಿಕೊಳ್ಳುತ್ತಾರೆ. ಅವರು ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಲು ಸಮಯ ತೆಗೆದುಕೊಳ್ಳುತ್ತಾರೆ, ಸಲಹೆಗಾಗಿ ಮತ್ತೊಬ್ಬರನ್ನು ಸಂಪರ್ಕಿಸುತ್ತಾರೆ, ಯಾವಾಗಲೂ ಓಪನ್ ಮೈಂಡೆಂಡ್ ಆಗಿರುವುದರ ಜೊತೆಗೆ, ಎಂಥದೇ ಪರಿಸ್ಥಿತಿ ಬಂದರೂ ಪಾಸಿಟಿವ್ ಆ್ಯಟಿಟ್ಯೂಡ್ ಹೊಂದಿರುತ್ತಾರೆ. 

ಕೆಲಸದಲ್ಲಿದ್ದರೆ ಬೆಸ್ಟೀ, ಹೆಚ್ಚುತ್ತೆ ಕೆಲಸದ ಮೇಲಿನ ಪ್ರೀತಿ
ಮೂರನೆಯವರ ದೃಷ್ಟಿಕೋನ
ಯಾವುದಾದರೂ ಪರಿಸ್ಥಿತಿಯನ್ನು ಮತ್ತೊಬ್ಬರ ದೃಷ್ಟಿಯಿಂದ ಅರ್ಥ ಮಾಡಿಕೊಳ್ಳಲು ಯತ್ನಿಸುವುದರಿಂದ ಕೆಲವೊಮ್ಮೆ ಉತ್ತಮ ನಿರ್ಧಾರಗಳು ಹೊರಬರುತ್ತವೆ. ಭಾವನಾತ್ಮಕವಾಗಿ ಬುದ್ಧಿವಂತರಾಗಿರುವವರು ತಮ್ಮ ಸುತ್ತಮುತ್ತಲಿನ ಜನರನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಬಲ್ಲರು. ಅವರು ಎಂಥ ಪರಿಸ್ಥಿತಿಯಲ್ಲಿ ಬೆಳೆದುಬಂದಿದ್ದಾರೆ, ಅವರ ಯೋಚನೆಗಳೇನು, ಅವರ ಸಂಸ್ಕೃತಿ ಏನು ಎಲ್ಲವನ್ನೂ ಅರಿತು ನ್ಯೂಟ್ರಲ್ ಆಗಿ ಎಲ್ಲರೊಡನೆ ವರ್ತಿಸಬಲ್ಲರು. ಜೊತೆಗೆ ವೃಥಾ ಯಾರ ಮೇಲೂ ಅಧಿಕಾರ ಚಲಾಯಿಸದೆ ಸ್ನೇಹಶೀಲರಾಗಿ ಕೆಲಸ ಮಾಡಿಸಿಕೊಳ್ಳಬಲ್ಲರು. ತಮ್ಮ ಯಾವ ವರ್ತನೆ, ಪ್ರತಿಕ್ರಿಯೆಗಳಿಂದ ಏನೆಲ್ಲ ಡ್ಯಾಮೇಜ್ ಆಗಬಹುದೆಂದು ಮುಂಚೆಯೇ ಯೋಚಿಸಿ ಮುಂದಿನ ಹೆಜ್ಜೆ ಇಡುತ್ತಾರೆ. 

ಕಲಿಕೆ ನಿರಂತರ
ಯಾರೂ ಕೂಡಾ ರಾತ್ರಿ ಕಳೆದು ಬೆಳಗಾಗುವುದರಲ್ಲಿ ಎಮೋಶನಲ್ ಇಂಟೆಲಿಜೆಂಟ್ ಆಗಲಾರರು. ಎಲ್ಲರೂ ಈ ಬಗ್ಗೆ ನಿರಂತರವಾಗಿ ತಪ್ಪು ಮಾಡುತ್ತಾ, ಸರಿಪಡಿಸಿಕೊಳ್ಳುತ್ತಾ ಅನುಭವದಿಂದ ಉತ್ತಮವಾಗುತ್ತಾ ಸಾಗುತ್ತಾರೆ. ಭಾವನಾತ್ಮಕ ಆರೋಗ್ಯ ಕಾಪಾಡಿಕೊಳ್ಳುವತ್ತ ಗಮನ ಹರಿಸುವುದು, ತಪ್ಪಿಂದ ಕಲಿಯುವುದು, ಎಲ್ಲವನ್ನೂ ಪಾಸಿಟಿವ್ ಆಗಿ ನೋಡುವುದು ಇವರ ನಿರಂತರ ಕಲಿಕೆಯ ಭಾಗವಾಗಿರುತ್ತದೆ. 

ಯಶಸ್ವೀ ವ್ಯಕ್ತಿಗಳು ಉದ್ಯೋಗ ಸಂಬಂಧೀ ಅಭ್ಯಾಸಗಳಿವು..

Follow Us:
Download App:
  • android
  • ios