Asianet Suvarna News Asianet Suvarna News

Turning Point: ಅದೊಂದು ರಾತ್ರಿ.. "ಅಮ್ಮಾ ಎದ್ದು ಹೊರಡು.." ಅಂದಿದ್ದರು ಸಂಜಯ್ ಗಾಂಧಿ..!

ಇಂದಿರೆಯಂಥ ಇಂದಿರೆಯ ಸೋಲಿಗೆ ಕಾರಣವಾಗಿದ್ದ ಮಗ ಸಂಜಯ್‌ ಗಾಂಧಿಯೇ ತಾಯಿಯ ರಾಜಕೀಯ ಪುನರ್ಜನ್ಮಕ್ಕೆ ದಾರಿ ತೋರಿಸಿದ್ದ. ಅದೊಂದು ರಾತ್ರಿ.. "ಅಮ್ಮಾ ಎದ್ದು ಹೊರಡು.." ಎಂದು ಸಂಜಯ್‌ ಗಾಂಧಿ ಹೇಳಿತ್ತಿದ್ದಂತೆ ಇಂದಿರಾ ಗಾಂಧಿ ಮನೆಯ ಹೊರಗೆ ಕಾಲಿಟ್ಟಿದ್ದರು.
 

turning Point sanjay gandhi And Indira gandhi Belchhi in Bihar Story of Indian Politics san
Author
First Published Apr 10, 2024, 5:03 PM IST

ದೊಂದು ರಾತ್ರಿ.. "ಅಮ್ಮಾ ಎದ್ದು ಹೊರಡು.." ಎಂದುಬಿಟ್ಟಿದ್ದರು ಸಂಜಯ್‌ ಗಾಂಧಿ. ಮಗನ ಮಾತಿಗೆ ಎದುರಾಡದೆ 60 ವರ್ಷದ ಇಂದಿರಾ ಗಾಂಧಿ ಎದ್ದು ನಡೆದಿದ್ದರು. ಇಂದಿರಾ ಫೀನಿಕ್ಸ್‌ನಂತೆ ಮೇಲೆದ್ದು ನಿಲ್ಲಲು ಕಾರಣವಾಗಿತ್ತು ಅದೊಂದು ನರಮೇಧ. 1977ರ ಚುನಾವಣೆಯಲ್ಲಿ ಸೋತು ಸುಣ್ಣವಾಗಿ ಕೂತಿದ್ದ ಇಂದಿರಾ ಗಾಂಧಿಗೆ ಹಾಗೂ ಈ ಸೋಲಿಗೆ ಕಾರಣನಾಗಿದ್ದ ಮಗನೇ ರಾಜಕೀಯ ಪುನರ್ಜನ್ಮಕ್ಕೆ ದಾರಿ ತೋರಿಸಿದ್ದ. ದೆಹಲಿಯಿಂದ ಬಿಹಾರದ ಬೆಲ್ಚಿಗೆ ರಾತ್ರೋ ರಾತ್ರಿ ಮಾಜಿ ಪ್ರಧಾನಿ ಹೊರಟು ನಿಂತಿದ್ದರು. ಕಲ್ಲು-ಮುಳ್ಳುಗಳ ಹಾದಿ.. ರೈಲು, ಜೀಪು, ಟ್ರ್ಯಾಕ್ಟರ್.. 1,104 ಕಿ.ಮೀ ಪ್ರಯಾಣ ಸಾಗಿತ್ತು. ಆನೆಯ ಮೇಲೆ ಕುಳಿತೇ 4 ಗಂಟೆ ಇಂದಿರಾ ಗಾಂಧಿ ಪ್ರಯಾಣ ಮಾಡಿದ್ದರು. ಬೆಲ್ಚಿಯಲ್ಲಿ 14 ಮಂದಿ ದಲಿತರ ಕಗ್ಗೊಲೆಯೊಂದಿಗೆ ಇಂದಿರೆಗೆ ಬ್ರಹ್ಮಾಸ್ತ್ರ ಸಿಕ್ಕಿತ್ತು. ಖಳನಾಯಕಿಯಾಗಿದ್ದವರು ರಾತ್ರೋ ರಾತ್ರಿ "ಮಹಾತಾಯಿ"ಯಾದರು.

ಯೆಸ್‌.. "ಅಮ್ಮಾ ಎದ್ದು ಹೊರಡು.." ಇದು ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರಿಗೆ ರಾಜಕೀಯ ಪುನರ್ಜನ್ಮ ಕೊಟ್ಟಿದ್ದ ಮಾತು. ತುರ್ತು ಪರಿಸ್ಥಿತಿಯ ಕರಾಳತೆಯ ನಂತರ ಸೋತು ಸುಣ್ಣವಾಗಿದ್ದ ಇಂದಿರಾ ಗಾಂಧಿ ಫೀನಿಕ್ಸ್’ನಂತೆ ಮೇಲೆದ್ದು ಬಂದದ್ದೇ ಆ ಘಟನೆಯಿಂದ. ರಾತ್ರೋ ರಾತ್ರಿ ಇಂದಿರಾ ಗಾಂಧಿ ಎದ್ದು ಹೊರಟದ್ದೇ ರಾಷ್ಟ್ರ ರಾಜಕಾರಣಕ್ಕೆ ದೊಡ್ಡ ಟರ್ನಿಂಗ್‌ ಪಾಯಿಂಟ್‌ ಆಗಿ ಬಿಡ್ತು. ಅಷ್ಟಕ್ಕೂ ಅವತ್ತು ಇಂದಿರಾ ಹೊರಟದ್ದು ಎಲ್ಲಿಗೆ..? ಆ ಒಂದು ಹೆಜ್ಜೆಯ ಮೂಲಕ ಇಂದಿರಾ ಗಾಂಧಿ ಮರಳಿ ಸಾಮ್ರಾಜ್ಯ ಕಟ್ಟಿದ್ದು ಹೇಗೆ..? 

ನಂ.12, ನವದೆಹಲಿಯ ಕ್ರೆಸೆಂಟ್ ಬಂಗಲೆ. ಮಾಜಿ ಪ್ರಧಾನಿ ಇಂದಿರಾ ಗಾಂಧಿ 1977ರ ಲೋಕಸಭಾ ಚುನಾವಣೆಯಲ್ಲಿ ಸೋತು ಮನೆ ಸೇರಿದ್ದ ಸಮಯ. ತುರ್ತು ಪರಿಸ್ಥಿತಿ ಅನ್ನೋ ಮಹಾಪ್ರಮಾದಕ್ಕೆ ಇಂದಿರಾ ಗಾಂಧಿಯಷ್ಟೇ  ಅಲ್ಲ, ಅವರ ಇಡೀ ಕಾಂಗ್ರೆಸ್ ಪಕ್ಷವೇ ನೆಲ ಕಚ್ಚಿ ಬಿಟ್ಟಿತ್ತು. ರಾಯ್ ಭರೇಲಿಯಲ್ಲಿ ಇಂದಿರಾ ಸೋತರೆ, ಪಕ್ಕದ ಅಮೇಥಿಯಲ್ಲಿ ಪುತ್ರ ಸಂಜಯ್ ಗಾಂಧಿ ಹೀನಾಯವಾಗಿ ಸೋತು ಬಿಟ್ಟಿದ್ದರು. ಚುನಾವಣೆಯಲ್ಲಿ ಸೋತು ದೆಹಲಿಯ ನಂಬರ್ 12, ಕ್ರೆಸೆಂಟ್ ಬಂಗಲೆಯಲ್ಲಿ ದಿಕ್ಕೇ ತೋಚದವರಂತೆ ಕೂತಿದ್ದರು ಇಂದಿರಾ. ದೇಶದ ಜನ ತಮ್ಮನ್ನು ಶಾಶ್ವತವಾಗಿ ತಿರಸ್ಕರಿಸಿ ಬಿಟ್ಟರೆಂಬ ದುಃಖ, ದುಗುಡ. ರಾಜಕೀಯ ಭವಿಷ್ಯ ಇಲ್ಲಿಗೇ ಮುಗಿಯಿತು ಅನ್ನೋ ಯೋಚನೆಯಲ್ಲಿದ್ದಾಗಲೇ, ಇದ್ದಕ್ಕಿದ್ದಂತೆ ಬಾಗಿಲು ತಟ್ಟುವ ಸದ್ದು ಕೇಳಿಸಿತ್ತು ಎದ್ದು ಹೋಗಿ ನೋಡಿದರೆ, ಅಲ್ಲಿ ನಿಂತಿದ್ದದ್ದು ಪುತ್ರ ಸಂಜಯ್ ಗಾಂಧಿ. ಏನ್ ವಿಷ್ಯ ಅಂತ ಕೇಳೋದಕ್ಕೂ ಅವಕಾಶ ಕೊಡದೆ ಮಗ ಹೇಳಿದ್ದು ಒಂದೇ ಮಾತು. “ಅಮ್ಮಾ, ಎದ್ದು ಹೊರಡು.., ಈಗ್ಲೇ..”

ಹೊತ್ತಲ್ಲದ ಹೊತ್ತಲ್ಲಿ ಪುತ್ರ ಸಂಜಯ್ ಗಾಂಧಿ, ತಾಯಿ ಇಂದಿರಾಗೆ ಎದ್ದು ಹೊರಡು  ಅಂದಿದ್ದು ಎಲ್ಲಿಗೆ..? ಪುತ್ರನ ಒಂದೇ ಒಂದು ಮಾತಿಗೆ 60 ವರ್ಷದ ಇಂದಿರಾ ಗಾಂಧಿ, ಆ ರಾತ್ರಿ ಎದ್ದು ಹೊರಟದ್ದು ಎಲ್ಲಿಗೆ ಗೊತ್ತಾ..? 

ಬಿಹಾರದ ಬೆಲ್ಚಿ ಅನ್ನೋ ಗ್ರಾಮ. ಗ್ರಾಮ ಅನ್ನೋದ್ಕಿಂತ್ಲೂ ಅದೊಂದು ಕುಗ್ರಾಮ. ಆ ಊರಿನಲ್ಲಿ ಅವತ್ತು ಶ್ರೀಮಂತ ಕುರ್ಮಿ ಸಮುದಾಯಕ್ಕೆ ಸೇರಿದ್ದ ಭೂಮಾಲೀಕರ ಬಂದೂಕುಗಳು ಸದ್ದು ಮಾಡಿದ್ದವು. ಢಂ, ಢಂ, ಢಂ.. ಅಷ್ಟೇ.. ಸಾಲು ಸಾಲಾಗಿ ಬಿದ್ದದ್ದು 14 ಹೆಣಗಳು. ಇಡೀ ಊರಿಗೆ ಊರೇ ಸ್ಮಶಾನವಾಗಿತ್ತು.

ಮಹಾವೀರ್ ಮೆಹ್ತೋ ಮತ್ತು ಪರಶುರಾಮ್ ಧನುಕ್ ಅನ್ನೋ ಹೆಸರಿನ ರಕ್ಕಸ ಭೂಮಾಲೀಕರಿಬ್ಬರು, 14 ಮಂದಿ ದಲಿತರನ್ನು ಗುಂಡಿಟ್ಟು ಸುಟ್ಟು ಹಾಕಿದ್ದರು. ಎಲ್ಲಾ 20ರಿಂದ 30ರ ವಯಸ್ಸಿನ ಆಸುಪಾಸಿನ ಯುವಕರು. ಕೈಗಳನ್ನು ಕಟ್ಟಿ, ಪಕ್ಕದಲ್ಲೇ ಇದ್ದ ಜೋಳದ ಗದ್ದೆಗೆ ಎಳ್ಕೊಂಡ್ ಹೋಗಿ, ಸರತಿ ಸಾಲಿನಂತೆ ಒಬ್ಬೊಬ್ಬರನ್ನೇ ಗುಂಡು ಹಾರಿಸಿ ಅಮಾನುಷವಾಗಿ ಹತ್ಯೆ ಮಾಡಲಾಗಿತ್ತು. ನಂತರ ದೇಹಗಳನ್ನು ತುಂಡು ತುಂಡಾಗಿ ಕತ್ತರಿಸಿ ಬೆಂಕಿಗೆ ಎಸೆಯಲಾಗಿತ್ತು.  ದಿಲ್ಲಿಯಿಂದ 1,104 ಕಿ.ಮೀ ದೂರದ ಬೆಲ್ಚಿ. ಅಲ್ಲಿ 14 ಮಂದಿ ದಲಿತ ಯುವಕರ ತಲೆಗಳು ಉರುಳಿದರೆ, ಇತ್ತ ದಿಲ್ಲಿಯಲ್ಲಿ ಕೂತಿದ್ದ ಸಂಜಯ್ ಗಾಂಧಿ ತಲೆಯಲ್ಲಿ ತಾಯಿಯ ಪಟ್ಟಾಭಿಷೇಕಕ್ಕೆ ಮಾಸ್ಟರ್’ಪ್ಲಾನ್ ರೆಡಿಯಾಗಿ ಬಿಟ್ಟಿತ್ತು.

ಇತಿಹಾಸನ ಪ್ಲಾನ್ ಮಾಡಿ, ಬ್ಲೂಪ್ರಿಂಟ್ ಹಾಕಿ ಸೃಷ್ಠಿಸಕ್ಕಾಗಲ್ಲ, ಅದಕ್ಕೊಂಡು ಕಿಡಿ ಬೇಕಿತ್ತು ಅನ್ನೋ ಕೆಜಿಎಫ್‌ ಸಿನಿಮಾದ ಡೈಲಾಗ್‌ನಂತೆ, ಇಂದಿರಾ ಗಾಂಧಿಯ ಪಟ್ಟಾಭಿಷೇಕದ ಕಿಡಿ ಹೊತ್ತಿಕೊಂಡದ್ದು ಬಿಹಾರದ ಪಾಟ್ನಾ-ನಳಂದ ಜಿಲ್ಲೆಯ ಗಡಿಯಲ್ಲಿರುವ ಬೆಲ್ಚಿ ಅನ್ನೋ ಗ್ರಾಮದಲ್ಲಿ. ಆ ಕಾಲಕ್ಕೆ ನಟೋರಿಯಸ್ ಅಪರಾಧಿಗಳೇ ತುಂಬಿಕೊಂಡಿದ್ದ ಪ್ರದೇಶ. ಅಲ್ಲಿ ದಲಿತರ ನರಮೇಧದ ಸುದ್ದಿ ಗೊತ್ತಾಗುತ್ತಿದ್ದಂತೆ ಸಂಜಯ್ ಗಾಂಧಿ ಕಿವಿಗಳು ಚುರುಕಾಗಿದ್ದವು. ಸೋತು ಸುಣ್ಣವಾಗಿದ್ದ ಅಮ್ಮನ ರಾಜಕೀಯ ಪುನರ್ಜನ್ಮಕ್ಕೆ ಇದೇ ಅಸ್ತ್ರ ಅಂದುಕೊಂಡವರೇ, ತಾಯಿಯನ್ನ ರಾತ್ರೋ ರಾತ್ರಿ ಬಿಹಾರಕ್ಕೆ ಕಳುಹಿಸಿಬಿಡುತ್ತಾರೆ.

ಬಿಹಾರದಂಥಾ ಅರಾಜಕ ರಾಜ್ಯಕ್ಕೆ ಹೊತ್ತಲ್ಲದ ಹೊತ್ತಲ್ಲಿ ತಾಯಿಯನ್ನು ಹೊರಡಿಸಿದ ಸಂಜಯ್ ಗಾಂಧಿಗೆ ಹಿಗ್ಗಾಮುಗ್ಗ ಬೈದು ಬಿಡ್ತಾರೆ ಅಣ್ಣ ರಾಜೀವ್. “ಇವ್ನು ಅಮ್ಮನನ್ನು ಪ್ರಧಾನಿ ಪಟ್ಟದಿಂದ ಇಳಿಸಿದ್ದಷ್ಟೇ ಅಲ್ಲ, ಅಮ್ಮನ ಜೀವ ಕೂಡ ತೆಗೆದುಬಿಡ್ತಾನೆ” ಅನ್ನೋ ಆತಂಕ ರಾಜೀವ್ ಗಾಂಧಿಗೆ. ಆದರೆ, ತಾಯಿ ಇಂದಿರಾ, ಹಿರಿಮಗನ ಕಾಳಜಿಯ ಮಾತಿಗಿಂತ ಕಿರಿಮಗನ ಲೆಕ್ಕಾಚಾರದ ಮಾತಿಗೆ ಅಸ್ತು ಅಂದು ಬಿಟ್ಟಿದ್ದರು.


ರಾತ್ರೋ ರಾತ್ರಿ  ಎದ್ದು ನಿಂತರು 60 ವರ್ಷದ ಇಂದಿರಾ: 1977ರ ಲೋಕಸಭಾ ಚುನಾವಣೆಯಲ್ಲಿ ಇಂದಿರಾ ಗಾಂಧಿಯವರ ಸೋಲಿಗೆ, ಕಾಂಗ್ರೆಸ್ ಅಧಃಪತನಕ್ಕೆ ಕಾರಣಾನೇ ಸಂಜಯ್ ಗಾಂಧಿ. ಅವತ್ತೇನಾದ್ರೂ ಸಂಜಯ್, ಎಮರ್ಜೆನ್ಸಿಯಂಥಾ ಅನಾಹುತಕಾರಿ ಐಡಿಯಾವನ್ನು ತಾಯಿಗೆ ಕೊಡದೇ ಇದ್ದಿದ್ದರೆ, ಚುನಾವಣೆಯಲ್ಲಿ ಇಂದಿರಾ ಸೋಲುತ್ತಲೂ ಇರಲಿಲ್ಲ. ಕಾಂಗ್ರೆಸ್ ನಿರ್ನಾಮವಾಗುತ್ತಲೂ ಇರಲಿಲ್ಲ. ಆದರೆ, ಇಂದಿರಾ ಗಾಂಧಿಗೆ ಆ ರಾತ್ರಿ ಒಂದಂತೂ ಚೆನ್ನಾಗಿ ಅರ್ಥವಾಗಿ ಬಿಟ್ಟಿತ್ತು. ಸೋಲಿಗೆ ಕಾರಣನಾಗಿದ್ದ ಮಗನೇ ರಾಜಕೀಯ ಬದುಕಿಗೆ ಹೊಸ ದಾರಿ ತೋರಿಸುತ್ತಿದ್ದಾರೆ ಅಂತ. ಹಿಂದೆ ಮುಂದೆ ಯೋಚನೆ ಮಾಡದೆ, ದೆಹಲಿಯಿಂದ ರಾತ್ರಿ ರೈಲು ಹತ್ತಿ ಬಿಹಾರಕ್ಕೆ ಹೊರಟೇ ಬಿಡುತ್ತಾರೆ ಭಾರತದ ಮಾಜಿ ಪ್ರಧಾನಮಂತ್ರಿ ಇಂದಿರಾ ಗಾಂಧಿ.
ಜೀಪು, ಟ್ರ್ಯಾಕ್ಟರ್ ಹೋಗದಿದ್ರೇನಂತೆ... ಕಾಲುಗಳಿನ್ನೂ ಗಟ್ಟಿಯಾಗೇ ಇದ್ದಾವೆ ಅಂದುಕೊಂಡವರೇ ನಡೆಯೋದಕ್ಕೆ ಶುರು ಮಾಡ್ತಾರೆ ದೇಶದ ಮಾಜಿ ಪ್ರಧಾನಿ ಇಂದಿರಾ ಗಾಂಧಿ. ಹೋಗ್ತಾ ಹೋಗ್ತಾ ನದಿಯೊಂದು ಸಿಕ್ಕಿ ಬಿಡತ್ತೆ. ಬೆಲ್ಚಿ ಗ್ರಾಮ ತಲುಪ್ಬೇಕು ಅಂದ್ರೆ, ನದಿ ದಾಟಲೇಬೇಕು. ಅಪ್ಪಳಿಸಿ ಬಂದಿದ್ದ ಪ್ರವಾಹಕ್ಕೆ ನದಿ ಬೇರೆ ಉಕ್ಕಿ ಹರೀತಾ ಇರತ್ತೆ. ಇಂದಿರಾ ಗಾಂಧಿಯವ್ರಿಗೆ ಗುರಿ ಸ್ಪಷ್ಟವಾಗಿ ಕಾಣ್ತಾ ಇದ್ರೂ, ಆ ಗುರಿ ತಲುಪೋ ದಾರಿ ಬಂದ್ ಆಗಿತ್ತು.  ಸರಿ, ನದಿ ದಾಟೋದು ಹೇಗೆ..? ಈ ಪ್ರಶ್ನೆಗೆ ಉತ್ತರವಾದವನು ಒಬ್ಬ ಸ್ಥಳೀಯ ರೈತ. 'ಇಲ್ಲಿಂದ ರಸ್ತೆ ದುರ್ಗಮವಾಗಿತ್ತು. ಕುತ್ತಿಗೆಯ ಮಟ್ಟದವರೆಗೆ ನೀರು ತುಂಬಿಕೊಂಡಿತ್ತು. ಆಗ ಇಂದಿರಾ ಗಾಂಧಿಯವರು ಆನೆಯನ್ನು ಹತ್ತಿ ಪ್ರಯಾಣ ಮುಂದುವರಿಸಿದರು' ಎಂದು ಈ ರೈತ ಹೇಳಿದ್ದ.

ಆರೇ ಆರು ತಿಂಗಳ ಹಿಂದೆ ಪ್ರಧಾನಿ ಪಟ್ಟದಲ್ಲಿ ಕೂತಿದ್ದ ಇಂದಿರಾ ಗಾಂಧಿಯವರ ಜೊತೆ ಆ ಕ್ಷಣಕ್ಕೆ ಹಿಂಬಾಲಕರಿಲ್ಲ, ವಂಧಿಮಾಗಧರಿಲ್ಲ, ಸೆಕ್ಯೂರಿಟಿ ಸಿಬ್ಬಂದಿಯಿಲ್ಲ.  ಸುತ್ತ ಮುತ್ತ ಇದ್ದವರು ನರಮೇಧದಲ್ಲಿ ಪ್ರಾಣ ಕಳೆದುಕೊಂಡ ದಲಿತ ಕುಟುಂಬಗಳ ಸದಸ್ಯರು. ಸಾಕ್ಷಾತ್ ದುರ್ಗಾಮಾತೆಯೇ ನಮ್ಮ ಬಳಿ ಬಂದಳೇನೋ ಎನ್ನುವಂತೆ ಇಂದಿರಾ ಗಾಂಧಿಯವರ ಬಳಿ ಕಣ್ಣೀರು ಹಾಕುತ್ತಾ,  ದುಃಖ ತೋಡಿಕೊಳ್ಳುತ್ತಾರೆ ಇಂದಿರಾ ಗಾಂಧಿ, ಒಬ್ಬ ತಾಯಿಯಂತೆ ಆ ಜನರನ್ನು ಸಂತೈಸ್ತಾರೆ.

ಕಣ್ಣ ಮುಂದೆಯೇ ಮನೆ ಮಕ್ಕಳ ಮಾರಣಹೋಮವನ್ನು ನೋಡಿ, ಎದೆ ಒಡೆದುಕೊಂಡು ಅಳುತ್ತಿದ್ದವರಿಗೆ ಆ ಕ್ಷಣಕ್ಕೆ ಬೇಕಾಗಿದ್ದು ನಾಲ್ಕು ಸಾಂತ್ವನದ ಮಾತುಗಳಷ್ಟೇ. ಇಂದಿರಾ ಗಾಂಧಿ ಅವತ್ತು ಆ ಜನರ ಪಾಲಿಗೆ ತಾಯಿಯಾಗಿ ಬಿಟ್ಟಿದ್ದರು. ಅಷ್ಟೇ ಅಲ್ಲ, ಸೋಲಿನಿಂದ ಕಂಗೆಟ್ಟಿದ್ದ ಇಂದಿರಾ ಗಾಂಧಿ ತಮ್ಮ ರಾಜಕೀಯ ಪುನರ್ಜನ್ಮದ ದಾರಿಯಲ್ಲಿ ಮೊದಲ  ಹೆಜ್ಜೆ ಇಟ್ಟು ಬಿಟ್ಟಿದ್ದರು.

ಅಚ್ಚರಿಯ ಸಂಗತಿ ಏನ್ ಗೊತ್ತಾ? ಇಂದಿರಾ ಗಾಂಧಿಯವರು ದೆಹಲಿಯಿಂದ ಹೊರಟು, ಬಿಹಾರದ ಬೆಲ್ಚಿ ತಲುಪುವವರೆಗೆ ಅಲ್ಲಿ ನಡೆದ ನರಮೇಧದ ತೀವ್ರತೆ ಏನು ಅನ್ನೋದು, ಮುರಾರ್ಜಿ ದೇಸಾಯಿ ಸರ್ಕಾರಕ್ಕೆ ಗೊತ್ತೇ ಇದ್ದಿರಲಿಲ್ಲ. ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ಇಂದಿರಾ ಗಾಂಧಿ  ದೇಶದ ಕಣ್ಣಿಗೆ ಮಹಾತಾಯಿಯಂತೆ ಕಾಣೋದಕ್ಕೆ ಶುರುವಾಗಿದ್ರು. ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಹಿಡಿಶಾಪ ಹಾಕಿದವರೇ ಇಂದಿರಾ ಪರ ಜೈಕಾರ ಹಾಕಿದ್ರು. “ಆಧಿ ರೋಟಿ ಖಾಯೇಂಗೇ, ಇಂದಿರಾ ಕೋ ಬುಲಾಯೇಂಗೇ” ಅನ್ನೋ ಘೋಷಣೆಗಳನ್ನು ಕೂಗಿದರು.

ಆರೇ ಆರು ತಿಂಗಳುಗಳ ಹಿಂದೆ ನಡೆದ ಲೋಕಸಭಾ ಚುನಾವಣೆಯಲ್ಲಿ ಬಿಹಾರದ ಜನ ಇದೇ ಇಂದಿರಾ ಗಾಂಧಿಯವರ ಕಾಂಗ್ರೆಸ್ಸನ್ನು ಹೇಳ ಹೆಸರಿಲ್ಲದಂತೆ ಗುಡಿಸಿ ಹಾಕಿದ್ದರು. ಅದೇ ನೆಲ ಇಂದಿರಾ ಗಾಂಧಿಯ ರಾಜಕೀಯ ಪುನರ್ಜನ್ಮಕ್ಕೆ ಮುನ್ನುಡಿ ಬರೆದಿತ್ತು. ಅಲ್ಲಿಂದ ಮತ್ತೊಂದು ಪಕ್ಕಾ ಲೆಕ್ಕಾಚಾರದ ನಡೆ.. ಇಂದಿರಾ ಗಾಂಧಿಯವರ ಇಮೇಜೇ ಬದಲಾಗಿ ಬಿಡ್ತು. 

ಚದುರಂಗದಲ್ಲಿ ಇಂದಿರಾ ಉರುಳಿಸಿದ ದಾಳ ಹೇಗಿತ್ತು: ಬೆಲ್ಚಿ ನರಮೇಧ ಸಂತ್ರಸ್ಥ ಕುಟುಂಬಗಳನ್ನು ಭೇಟಿ ಮಾಡಿದ ಇಂದಿರಾ ಗಾಂಧಿ, ಅಲ್ಲಿಂದ ಹೊರಟವರೇ ಬಂದು ತಲುಪಿದ್ದು 60 ಕಿ.ಮೀ ದೂರದ ಪಾಟ್ನಾಗೆ. ಪಕ್ಕಾ ಲೆಕ್ಕಾಚಾರ ಹಾಕಿಯೇ ಪಾಟ್ನಾಗೆ ಬಂದಿದ್ದರು ಇಂದಿರಾ.. ಅಲ್ಲೊಬ್ಬರು ಮರಣಶಯ್ಯೆಯಲ್ಲಿ ಮಲಗಿದ್ದ ವಯೋವೃದ್ಧ ವ್ಯಕ್ತಿ. ಅವರ ಜೊತೆ ತೆಗೆಸಿಕೊಂಡ ಅದೊಂದು ಫೋಟೋ, ಇಂದಿರಾ ಗಾಂಧಿಯವರ ರಾಜಕೀಯ ಪುನರ್ಜನ್ಮಕ್ಕೆ ಮತ್ತೊಂದು ತಿರುವು ಕೊಟ್ಟು ಬಿಡ್ತು.

ಬೆಲ್ಚಿಯಿಂದ ಪಾಟ್ನಾಗೆ ಬಂದ ಇಂದಿರಾ ಗಾಂಧಿ ನೇರವಾಗಿ ಹೋಗಿದ್ದೆಲ್ಲಿಗೆ ಗೊತ್ತಾ..? ಜಯಪ್ರಕಾಶ ನಾರಾಯಣ್ ಅವರ ಮನೆಗೆ. ಲೋಕನಾಯಕ ಅಂತಾನೇ ಫೇಮಸ್ ಆಗಿದ್ದ ಜಯಪ್ರಕಾಶ್ ನಾರಾಯಣ್, ಇಂದಿರಾ ಗಾಂಧಿಯವರ ರಾಜಕೀಯ ನಿಲುವುಗಳ ಬದ್ಧ ವೈರಿಯಾಗಿದ್ದವರು. ಆಂದೋಲನಗಳ ಮೂಲಕ ಇಂದಿರಾ ನಿದ್ದೆಗೆಡಿಸಿದ್ದವರು. ಇದೇ ಜೆಪಿ ಅವರನ್ನು ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಇಂದಿರಾ ಗಾಂಧಿ ಜೈಲಿಗೂ ಕಳುಹಿಸಿ ಬಿಟ್ಟಿದ್ದರು. ಈಗ ನೋಡಿದರೆ, ಅದೇ ಇಂದಿರಾ ಗಾಂಧಿ ಜಯಪ್ರಕಾಶ್ ನಾರಾಯಣ್ ಅವರ ಮನೆ ಬಾಗಿಲಲ್ಲಿ ನಿಂತು ಬಿಟ್ಟಿದ್ದರು.

ಇಂದಿರಾ ಗಾಂಧಿಯವರು ಬಿಟ್ಟಿದ್ದ ಬಾಣ ಗುರಿ ತಲುಪಿತ್ತು. ಪಾಟ್ನಾದಿಂದ ಹೊರಟ ಇಂದಿರಾ ಗಾಂಧಿ ಬಂದು ತಲುಪಿದ್ದು, ತಮ್ಮ ರಾಜಕೀಯ ಕರ್ಮಭೂಮಿ ರಾಯ್'ಭರೇಲಿಗೆ. 1977ರ ಲೋಕಸಭಾ ಚುನಾವಣೆಯಲ್ಲಿ ತಮ್ಮನ್ನು ಸೋಲಿಸಿದ ಜನರ ಮುಂದೆ ಕೈ ಮುಗಿದು ನಿಂತ ಇಂದಿರಾ ಹೇಳಿದ್ದು ಒಂದೇ ಒಂದು ಮಾತು. 

ಯೆಸ್.. ಇಂದಿರಾ ಗಾಂಧಿಯವರನ್ನು ರಾಯ್ ಭರೇಲಿಯ ಜನರಷ್ಟೇ ಅಲ್ಲ, ಇಡೀ ದೇಶವೇ ಕ್ಷಮಿಸಿ ಬಿಟ್ಟಿತ್ತು. ಇಂದಿರಾ ಗಾಂಧಿ ಧೂಳಿನಿಂದೆದ್ದು ಬಂದರೆ, ಪ್ರಧಾನಿ ಪಟ್ಟದಲ್ಲಿ ಕೂತಿದ್ದ ಮುರಾರ್ಜಿ ದೇಸಾಯಿಯವರ ಬುಡವೇ ಅಲುಗಾಡೋದಕ್ಕೆ ಶುರುವಾಯ್ತು. ಇನ್ನು ಹೀಗೇ ಬಿಟ್ರೆ, ಈಕೆ ತನ್ನ ದೆಹಲಿ ಗದ್ದುಗೆಯನ್ನೇ ಕಿತ್ತುಕೊಂಡು ಬಿಡ್ತಾಳೆ" ಅಂದುಕೊಂಡವರೇ ಇಂದಿರಾ ಬಂಧನಕ್ಕೆ ಆದೇಶ ನೀಡ್ತಾರೆ. 1977ರ ಅಕ್ಟೋಬರ್ 3, ದೆಹಲಿಯ ನಂಬರ್ 12, ವಿಲ್ಲಿಂಗ್ಟನ್ ಕ್ರೆಸೆಂಟ್ ಬಂಗಲೆಯ ಮುಂದೆ ಪೊಲೀಸರು ನಿಂತಿದ್ದರು. ಇಂದಿರಾ ಗಾಂಧಿಯವರನ್ನು ಬಂಧಿಸುವಂತೆ ಪ್ರಧಾನಿ ಕಚೇರಿಯಿಂದ ಆದೇಶ ಹೊರ ಬಿದ್ದಿತ್ತು. ಅದು ಪ್ರಧಾನಿ ಮುರಾರ್ಜಿ ದೇಸಾಯಿ ರಾಜಕೀಯವಾಗಿ ಮಾಡಿದ್ದ ಅತೀ ದೊಡ್ಡ ತಪ್ಪು. ಇಂದಿರಾ ಗಾಂಧಿಯವರ ಕೈಗಳಿಗೆ ಪೊಲೀಸರು ಕೋಳ ತೊಡಿಸಿದ್ದೇ ತಡ, ಅವರ ಅದೃಷ್ಟವೇ ಬದಲಾಗಿ ಬಿಟ್ಟಿತು.

ಅನಾಹುತ ಮಾಡಿದ್ದ ಮಗನೇ ರಾಜಕೀಯ ಪುನರ್ಜನ್ಮಕ್ಕೆ ದಾರಿ ತೋರಿಸಿದ್ದ..! ಆನೆಯ ಮೇಲೆ ಕುಳಿತು ಆ ಹಳ್ಳಿಗೆ ಇಂದಿರಾ ಬಂದದ್ದೇಕೆ..?

ಬಿಹಾರದ ಬೆಲ್ಚಿ ಗ್ರಾಮಕ್ಕೆ ಹೋದಾಗ್ಲೇ ಜನರ ಕಣ್ಣಲ್ಲಿ ಇಂದಿರಾ ತಾಯಿಯಾಗಿ ಬಿಟ್ಟಿದ್ರು. ಈಗ ಅದೇ ತಾಯಿ ಕೈಗೆ ಕೋಳ ಹಾಕಿದ್ದನ್ನು ನೋಡಿ ಮುರಾರ್ಜಿ ದೇಸಾಯಿ ಸರ್ಕಾರದ ವಿರುದ್ಧ ಜನಾಕ್ರೋಶ ಸ್ಫೋಟವಾಯ್ತು. ಇಂದಿರಾ ಗಾಂಧಿಗೆ ಬೇಕಿದ್ದದ್ದು ಅದೇ ಆಗಿತ್ತು. ಎಮರ್ಜೆನ್ಸಿಯ ತಪ್ಪು ನಿರ್ಣಯದ ಕಾರಣಕ್ಕೆ 77ರ ಚುನಾವಣೆಯಲ್ಲಿ ಸೋತಿದ್ದ ಇಂದಿರಾ ಗಾಂಧಿ ಆರೇ ಆರು ತಿಂಗಳುಗಳಲ್ಲಿ ಧೂಳಿನಿಂದೆದ್ದು ಬಂದಿದ್ದರು. ಆದರೆ, ಹೇಗಾದರೂ ಮಾಡಿ ಲೋಕಸಭೆಯೊಳಗೆ ಹೋಗ್ಬೇಕಲ್ವಾ..? ಈ ಚಿಂತೆಯಲ್ಲಿದ್ದ ಇಂದಿರಾ ಗಾಂಧಿಯವರಿಗೆ ರಾಜಕೀಯ ಪುನರ್ಜನ್ಮ ಕೊಟ್ಟದ್ದು ಕರ್ನಾಟಕದ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ.

 

Turning Point ಎಮರ್ಜೆನ್ಸಿ ಪ್ರಮಾದಕ್ಕೆ ಅಮ್ಮ-ಮಗನಿಗೆ ದೇಶ ಕೊಟ್ಟ ಶಿಕ್ಷೆ ಎಂಥದ್ದು..?

1978ರಲ್ಲಿ ಚಿಕ್ಕಮಗಳೂರಿನಿಂದ ಲೋಕಸಭೆಗೆ ಸ್ಪರ್ಧಿಸಲು ಇಂದಿರಾ ಗಾಂಧಿ ಮುಂದಾಗುತ್ತಾರೆ. ಒಂದು ವರ್ಷದ ಹಿಂದಷ್ಟೇ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ದಿವಂಗತ ಡಿ.ಬಿ ಚಂದ್ರೇಗೌಡ್ರು ಕಾಂಗ್ರೆಸ್'ನಿಂದ ಗೆದ್ದಿರ್ತಾರೆ. ಮುಖ್ಯಮಂತ್ರಿ ದೇವರಾಜ ಅರಸು, ಚಿಕ್ಕಮಗಳೂರನ್ನೇ ಇಂದಿರಾ ಗಾಂಧಿಯವರ ಪುನರ್ಜನ್ಮದ ಅಖಾಡವನ್ನಾಗಿ ಆಯ್ಕೆ ಮಾಡ್ತಾರೆ. ಅಲ್ಲಿಂದ ಮುಂದೆ ಇಂದಿರಾ ಗಾಂಧಿ ತಿರುಗಿ ನೋಡಿದ್ದೇ ಇಲ್ಲ. ಇಂದಿರಾ ಗಾಂಧಿ ಮತ್ತೆ ಸಂಸತ್ ಪ್ರವೇಶಿಸುತ್ತಾರೆ. ಮುಂದೆ ಜನತಾ ಪಕ್ಷದ ಸರ್ಕಾರ ಆಂತರಿಕ ಕಲಹಗಳ ಕಾರಣದಿಂದ ಪತನಗೊಳ್ಳತ್ತೆ. 1980ರಲ್ಲಿ ಮತ್ತೆ ಲೋಕಸಭಾ ಚುನಾವಣೆ. ರಾಯ್ ಭರೇಲಿಯಿಂದ ಕಣಕ್ಕಿಳಿದ ಇಂದಿರಾ ಗಾಂಧಿ ತಾವೂ ಗೆದ್ದು, ಕಾಂಗ್ರೆಸ್ಸನ್ನೂ ಗೆಲ್ಲಿಸ್ತಾರೆ. 4ನೇ ಬಾರಿ ಪ್ರಧಾನಿ ಪಟ್ಟವೇರ್ತಾರೆ. 4 ವರ್ಷಗಳ ನಂತರ, ಸ್ವಂತ ಅಂಗರಕ್ಷಕರಿಂದಲೇ ಹತ್ಯೆಗೀಡಾಗೋ ಮೂಲಕ, ಭಾರತೀಯ ರಾಜಕಾರಣದಲ್ಲಿ ರಣಚಂಡಿಯಂಥಾ ಮಹಿಳೆಯೊಬ್ಬರ ರೋಚಕ ಅಧ್ಯಾಯ ಅಂತ್ಯವಾಗತ್ತೆ.

Follow Us:
Download App:
  • android
  • ios