Asianet Suvarna News Asianet Suvarna News

ಯಡಿಯೂರಪ್ಪ ಗೆಲುವಿನ ಹಿಂದಿನ ಗುಟ್ಟು ರಟ್ಟು!

ಬಿಎಸ್‌ವೈ ಒಮ್ಮೊಮ್ಮೆ ನಿಧಾನ ನಡೆಯಬಹುದು, ಆದರೆ ಹಿಂದಕ್ಕೆ ಮಾತ್ರ ನಡೆಯೋದಿಲ್ಲ| ಕಟ್ಟುವ, ಬೆಳೆಸುವ ಮತ್ತು ಪ್ರೋತ್ಸಾಹಿಸುವ ಗುಣದಿಂದ ಯಡಿಯೂರಪ್ಪ ಅವರು ಎಲ್ಲರ ಪ್ರೀತಿಗೆ ಪಾತ್ರರಾಗಿದ್ದಾರೆ. ಕೊಟ್ಟಮಾತಿನಂತೆ ನಡೆದುಕೊಳ್ಳುವ ಅವರ ಪ್ರಾಮಾಣಿಕತೆ ರಾಜಕೀಯ ವಲಯದಲ್ಲಿ ಒಂದು ನಂಬಿಕೆಯ ವಾತಾವರಣ ಮೂಡಿಸಿದೆ. ಅವರ ಗೆಲುವಿನ ಗುಟ್ಟುಗಳಲ್ಲಿ ಇದೂ ಒಂದು. ಇನ್ನೊಂದು, ಆಪದ್ಬಾಂಧವನಂತೆ ಒದಗಿಬರುವ ಅವರ ಗುಣ.

The Reason Behind The Success Of Karnataka CM BS Yediyurappa A Write Up By MLA Murugesh R Nirani
Author
Bangalore, First Published Dec 12, 2019, 1:41 PM IST

ಮುರುಗೇಶ ಆರ್‌ ನಿರಾಣಿ, ಶಾಸಕ, ಉದ್ಯಮಿ

ಬಿಎಸ್‌ವೈ ಅವರಿಗೆ ಒಂದು ಅಪರೂಪದ ಚರಿಷ್ಮಾ ಇದೆ. ಕಟ್ಟುವ, ಬೆಳೆಸುವ ಮತ್ತು ಪ್ರೋತ್ಸಾಹಿಸುವ ಗುಣದಿಂದ ಅವರು ಎಲ್ಲರ ಪ್ರೀತಿಗೆ ಪಾತ್ರರಾಗಿದ್ದಾರೆ. ಕೊಟ್ಟಮಾತಿನಂತೆ ನಡೆದುಕೊಳ್ಳುವ ಅವರ ಪ್ರಾಮಾಣಿಕತೆ ರಾಜಕೀಯ ವಲಯದಲ್ಲಿ ಒಂದು ನಂಬಿಕೆಯ ವಾತಾವರಣ ಮೂಡಿಸಿದೆ. ಹಾಗೆಯೇ ಸಹಾಯ ಮಾಡಿದವರನ್ನು ಅವರು ಎಂದೂ ಕೈಬಿಡುವುದಿಲ್ಲ. ಈ ಒತ್ತಡದ ದಿನಗಳಲ್ಲಿ ಅವರು ಈ ಎಲ್ಲ ಸದ್ಗುಣಗಳನ್ನು ಗಟ್ಟಿಯಾಗಿ ಕಾಪಾಡಿಕೊಂಡಿದ್ದರಿಂದ ಅವರಿಗೆ ಗೆಲುವು ಒಲಿಯುತ್ತಿದೆ. 17 ಜನ ಶಾಸಕರು ಒಬ್ಬ ವ್ಯಕ್ತಿಯ ಮೇಲೆ ಭರವಸೆ ಇಟ್ಟು ರಾಜೀನಾಮೆ ಕೊಡುತ್ತಾರೆ ಎಂದರೆ ಆ ನಂಬಿಕೆಗೆ ಅರ್ಹವಾದ ವ್ಯಕ್ತಿ ತೀರ ಅಪರೂಪದ ನಾಯಕನೇ ಆಗಿರಬೇಕು. ಈಚೆಗೆ ನಡೆದ 15 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಯಡಿಯೂರಪ್ಪ ಅವರು ದಕ್ಷತೆ-ಜಾಣ್ಮೆಯಿಂದ ನಂಬಿದವರಿಗೆ ಸಂತಸವಾಗುವಂತೆ ಕೆಲಸ ಮಾಡಿದರು. ಉಪಚುನಾವಣೆಯನ್ನು ಸವಾಲಾಗಿ ಸ್ವೀಕರಿಸಿ ತಮ್ಮ ಪಕ್ಷದ 12 ಅಭ್ಯರ್ಥಿಗಳ ಗೆಲುವಿಗೆ ಮುನ್ನುಡಿ ಬರೆದರು.

ಗೆಲ್ಲುವ ಕ್ಷೇತ್ರಗಳ ಪಟ್ಟಿಅವರ ಕಿಸೆಯಲ್ಲಿ

ಭಾರತದ ರಾಜಕಾರಣದಲ್ಲಿ ಪ್ರಧಾನಿ ಮೋದಿಯವರ ನಂತರ ಯಡಿಯೂರಪ್ಪ ಹೆಸರು ಹೆಚ್ಚು ಜನಪ್ರಿಯ. ಪ್ರತಿ ಚುನಾವಣೆಯಲ್ಲೂ ಯಡಿಯೂರಪ್ಪ ಸ್ವತಃ ಸಮೀಕ್ಷೆ ನಡೆಸುತ್ತಾರೆ. ಚುನಾವಣೆಗೆ ಮೊದಲ ಬಾರಿ ಪ್ರವಾಸ ಆರಂಭಿಸಿದಾಗಲೇ ಎಲ್ಲ ಕ್ಷೇತ್ರಗಳ ಪರಿಸ್ಥಿತಿ ಅವಲೋಕಿಸಿ ಗೆಲ್ಲಬಹುದಾದ ಕ್ಷೇತ್ರಗಳ ಪಟ್ಟಿತಯಾರಿಸಿಕೊಳ್ಳುತ್ತಾರೆ. ಚುನಾವಣೆ ಪ್ರಕ್ರಿಯೆ ಆರಂಭ, ಅಭ್ಯರ್ಥಿ ಘೋಷಣೆಗಳ ಹಂತದಲ್ಲಿ ಪಟ್ಟಿಯನ್ನು ಪರಿಷ್ಕರಿಸಿ ಚುನಾವಣೆಗೆ 7-8 ದಿನವಿರುವಾಗ ಬಹುತೇಕ ಅಂತಿಮ ಪಟ್ಟಿಸಿದ್ಧಪಡಿಸಿ ಜೇಬಿನಲ್ಲಿಟ್ಟುಕೊಳ್ಳುತ್ತಾರೆ. ಕಳೆದ ಲೋಕಸಭಾ ಚುನಾವಣೆಯಲ್ಲೂ ಇದೇ ರೀತಿ ಸಮೀಕ್ಷೆ ನಡೆಸಿ, 22ಕ್ಕಿಂತ ಹೆಚ್ಚಿನ ಸ್ಥಾನ ಜಯಿಸುತ್ತೇವೆಂದು ಮೊದಲಿನಿಂದಲೂ ಹೇಳಿದ್ದರು. ಪ್ರತಿಕ್ರಿಯೆ ಜೊತೆಗೆ ತಮ್ಮದೇ ರಾಜಕೀಯ ಅನುಭವದ ಮೂಲಕ ಸಮೀಕ್ಷೆ ನಡೆಸುವ ವಿಧಾನವನ್ನು ಬಿಎಸ್‌ವೈ ಮುಂದುವರಿಸಿದ್ದಾರೆ.

ಬಿಎಸ್‌ವೈ ಕಾಲಿಗೆ ಬಿದ್ದ JDS ಶಾಸಕ ಸುರೇಶ್ ಗೌಡ

ಆಪದ್ಬಾಂಧವ ಎಂದಿದ್ದರು ಶ್ರೀಗಳು

ಮಂತ್ರಾಲಯದ ರಾಘವೇಂದ್ರ ಸ್ವಾಮಿ ಮಠದ ಹಿಂದಿನ ಗುರುಗಳಾದ ಸುಯತೀಂದ್ರ ತೀರ್ಥರು ಬಿಎಸ್‌ವೈ ಬೇಟಿಯಾದಾಗಲೆಲ್ಲ ‘ಆಪತ್ಬಾಂಧವ ಯಡಿಯೂರಪ್ಪ’ ಎಂದು ಪ್ರೀತಿಯಿಂದ ಸಂಬೋಧಿಸುತ್ತಿದ್ದರು. ಇದನ್ನು ಗಮನಿಸಿದ ಪತ್ರಕರ್ತರೊಬ್ಬರು ಸುಯತೀಂದ್ರ ತೀರ್ಥರನ್ನು, ‘ಸ್ವಾಮೀಜಿ, ಇಡೀ ಭಕ್ತ ಸಮುದಾಯ ತಮ್ಮನ್ನು ಆಪತ್ಬಾಂಧವ ಎನ್ನುತ್ತದೆ. ಆದರೆ ತಾವು ಬಿಎಸ್‌ವೈ ಅವರನ್ನು ಆಪತ್ಬಾಂಧವ ಎನ್ನುತ್ತೀರಿ. ಏನಿದರ ಮರ್ಮ?’ ಎಂದು ಪ್ರಶ್ನಿಸಿದರು. ಸ್ವಾಮೀಜಿ ಒಂದು ಕ್ಷಣ ಭಾವುಕರಾದರು. ಯಡಿಯೂರಪ್ಪ ಪ್ರಭಾವಿ ರಾಜಕಾರಣಿ ಎನ್ನುವ ಕಾರಣಕ್ಕೆ ಈ ಮಾತು ಹೇಳುತ್ತಿಲ್ಲ. ನಿಮಗೆಲ್ಲರಿಗೂ ಗೊತ್ತಿರುವಂತೆ 2009ರಲ್ಲಿ ಪ್ರಕೃತಿ ವಿಕೋಪದಿಂದ ಸಂಕಷ್ಟಕ್ಕೆ ಸಿಲುಕಿ ಇಡೀ ಮಂತ್ರಾಲಯ ಜಲಾವೃತವಾದ ಸಂದರ್ಭದಲ್ಲಿ ನಾನು ಹಾಗೂ ಕೆಲವು ಭಕ್ತರು ಪ್ರವಾಹದಲ್ಲಿ ಸಿಲುಕಿದ್ದೆವು. ಎಲ್ಲಾ ಮುಗಿದುಹೋಯಿತು ಎಂದುಕೊಂಡಾಗ ಹೆಲಿಕಾಪ್ಟರ್‌ ಮೂಲಕ ನಮ್ಮನ್ನು ಯಡಿಯೂರಪ್ಪ ರಕ್ಷಿಸಿದರು. ಇಷ್ಟುಮಾತ್ರವಲ್ಲ, ಸುರಕ್ಷತಾ ಕ್ರಮಗಳನ್ನು ಸಮರೋಪಾದಿಯಲ್ಲಿ ಕೈಗೊಂಡರು. ಜಲಪ್ರಳಯದಿಂದ ತನ್ನ ಗುರುತನ್ನೇ ಕಳೆದುಕೊಂಡಿದ್ದ ಮಂತ್ರಾಲಯ ಕ್ಷೇತ್ರಕ್ಕೆ ಪುನರುತ್ಥಾನ ಕಲ್ಪಿಸಿದರು. ಯಡಿಯೂರಪ್ಪ ನಿಜ ಅರ್ಥದಲ್ಲಿ ಆಪತ್ಬಾಂಧವ ಎಂದು ಸ್ವಾಮೀಜಿ ಜಲಪ್ರಳಯದ ಆ ದಿನದ ಘಟನೆಯನ್ನು ಪತ್ರಕರ್ತರಿಗೆ ವಿವರಿಸಿದರು.

The Reason Behind The Success Of Karnataka CM BS Yediyurappa A Write Up By MLA Murugesh R Nirani

3.5 ವರ್ಷದಲ್ಲಿ ರಾಜ್ಯದ ಚಿತ್ರಣ ಬದಲು: ಬಿಎಸ್‌ವೈ

ಚಿದಂಬರಂ ಅವರೇ ಶ್ಲಾಘಿಸಿದ್ದರು

ಯಡಿಯೂರಪ್ಪ ಎಲ್ಲರ ಆಪತ್ಬಾಂಧವ! ಏಕೆಂದರೆ 2009ರಲ್ಲಿ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಉತ್ತರ ಕರ್ನಾಟಕದ ಭಾಗದಲ್ಲಿ ಬೀಕರ ನೆರೆ ಬಂದು ಅಪಾರ ಆಸ್ತಿ, ಜೀವ ಹಾನಿಗಳಾಗಿತ್ತು. ಇದನ್ನು ಸಮರ್ಥವಾಗಿ ನಿಭಾಯಿಸಿದ ಬಿಎಸ್‌ವೈ ಪ್ರವಾಹಪೀಡಿತರಿಗೆ ಅಗತ್ಯ ಪರಿಹಾರ ಒದಗಿಸಿದರು. ಖಾಸಗಿ ಉದ್ದಿಮೆದಾರರು ಹಾಗೂ ಮಠಗಳ ಸಹಭಾಗಿತ್ವದಲ್ಲಿ ಸಂತ್ರಸ್ತರಿಗಾಗಿ ಸುಮಾರು 12,000 ಮನೆಗಳನ್ನು ನಿರ್ಮಿಸಿ ವಿತರಿಸಿದರು. ಆಗ ಕೇಂದ್ರ ಗೃಹ ಸಚಿವರಾಗಿದ್ದ ಪಿ.ಚಿದಂಬರಂ 10 ವರ್ಷಗಳಲ್ಲಿ ಮಾಡಬೇಕಾದ ಕೆಲಸವನ್ನು ಯಡಿಯೂರಪ್ಪ ಒಂದು ವರ್ಷದಲ್ಲಿ ಸಾಧಿಸಿದ್ದನ್ನು ಶ್ಲಾಘಿಸಿದ್ದರು. ಇದು ದೇಶದಲ್ಲಿ ದಾಖಲೆಯಾಗಿ ಉಳಿದಿದೆ. ಈ ಮನೆಗಳನ್ನು ಪಡೆದ ಜನ ತಮ್ಮ ಮನೆಯಲ್ಲಿ ಬಿಎಸ್‌ವೈ ಫೋಟೊ ಇಟ್ಟು ಪೂಜಿಸುತ್ತಾರೆ. ಪ್ರವಾಹದ ಬಾಧೆಗೆ ಒಳಗಾದ ಉತ್ತರ ಕರ್ನಾಟಕದ 330 ಹಳ್ಳಿಗಳ ಜನರನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಿ ಅವರಿಗೆ ನೆಮ್ಮದಿಯ ಬದುಕು ಕಲ್ಪಿಸಿದ್ದು ಯಡಿಯೂರಪ್ಪ ಅವಧಿಯ ದಾಖಲೆ.

14 ಚುನಾವಣೆಯಲ್ಲಿ ಗೆಲುವು

ಮಂಡ್ಯ ಜಿಲ್ಲೆಯ ಬೂಕನಕೆರೆಯಲ್ಲಿ ಜನಿಸಿ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತನಾಗಿ ಸಾರ್ವಜನಿಕ ಜೀವನ ಪ್ರವೇಶಿಸಿದ ಯಡಿಯೂರಪ್ಪ, ಶಿವಮೊಗ್ಗ ಜಿಲ್ಲೆಯ ಶಿಕಾರಿಪುರವನ್ನು ತಮ್ಮ ಕಾರ್ಯಕ್ಷೇತ್ರವಾಗಿ ಆಯ್ಕೆ ಮಾಡಿಕೊಂಡು ಜನಸೇವೆ ಮಾಡುತ್ತಿದ್ದಾರೆ. ನಾನು ಒಮ್ಮೊಮ್ಮೆ ನಿಧಾನಕ್ಕೆ ನಡೆಯುತ್ತೇನೆ, ಆದರೆ ಹಿಂದಕ್ಕೆ ಮಾತ್ರ ನಡೆಯುವುದಿಲ್ಲ ಎಂದು ಅವರು ಆಗಾಗ ಹೇಳುತ್ತಾರೆ. ಅದು ಅಕ್ಷರಶಃ ಸತ್ಯ. 1983ರಲ್ಲಿ ಮೊದಲ ಬಾರಿ ಶಿಕಾರಿಪುರ ಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆಯಾದ ಅವರು, ಮುಂದೆ ಇದೇ ಕ್ಷೇತ್ರದಿಂದ 7 ಬಾರಿ ಗೆದ್ದಿದ್ದಾರೆ. ಪುರಸಭೆಯಿಂದ ಲೋಕಸಭೆ ಸೇರಿದಂತೆ ಅವರು ಬದುಕಿನಲ್ಲಿ 14 ಚುನಾವಣೆಗಳನ್ನು ಎದುರಿಸಿ ಗೆದ್ದಿದ್ದಾರೆ. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಅವರ ಸರ್ಕಾರದಲ್ಲಿ ನಾನು ಬೃಹತ್‌ ಕೈಗಾರಿಕೆ ಮಂತ್ರಿಯಾಗಿ ಸರ್ಕಾರದ ಇಕ್ಕಟ್ಟಿನ ಸ್ಥಿತಿಯನ್ನು ತೀರಾ ಸಮೀಪದಿಂದ ನೋಡಿದ್ದೇನೆ. ಆಗ ವಿರೋಧ ಪಕ್ಷಗಳಾಗಿದ್ದ ಕಾಂಗ್ರೆಸ್‌, ಜೆಡಿಎಸ್‌ ನಾಯಕರು ಸರ್ಕಾರ ಅಭದ್ರಗೊಳಿಸಲು ವಿಪರೀತ ಗೊಂದಲ ಸೃಷ್ಟಿಸಿದ್ದರು.

ಅಸಹಾಯಕರಿಗೆ ನೆರವಾಗುವ ಮನಸ್ಸು

2010ರಲ್ಲಿ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಸಾವಯವ ಕೃಷಿಗೆ ಉತ್ತೇಜನ ನೀಡುವ ಉದ್ದೇಶದಿಂದ ಸಾವಯವ ಕೃಷಿಕನ ಮನೆಯಲ್ಲಿ ವಾಸ್ತವ್ಯ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಶಿರೋಳ ಗ್ರಾಮದ ಶಿವಲಿಂಗಯ್ಯ ಗಣಾಚಾರಿ ಅವರ ತೋಟದ ಮನೆಯಲ್ಲಿ ವಾಸ್ತವ್ಯ ಮಾಡಿದ್ದರು. ಮರುದಿನ ಗ್ರಾಮದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ವಿಜಯಲಕ್ಷ್ಮೇ ಸದಾಶಿವ ಗಣಿ ಎಂಬ ವಿದ್ಯಾರ್ಥಿನಿ ಎದ್ದು ನಿಂತು, ‘ನನ್ನ ತಂದೆ ಬಡ ರೈತ. ಅವರ ಆರೋಗ್ಯ ಕೆಟ್ಟಿದೆ. ದವಾಖಾನೆ ಖರ್ಚಿಗೆ ಇದ್ದ ಎರಡು ಎಕರೆ ಭೂಮಿ ಕೂಡ ಮಾರಿದ್ದಾರೆ. ನಾನು ಬಿ.ಎಸ್‌.ಸಿ. ಪಾಸಾಗಿ ಬಾಗಲಕೋಟೆ ಕಾಲೇಜಿನಲ್ಲಿ ಎಂ.ಸಿ.ಎ ಓದುತ್ತಿದ್ದೇನೆ. ಕಾಲೇಜು ಶುಲ್ಕ, ಹಾಸ್ಟೆಲ್‌ ಶುಲ್ಕ ಕಟ್ಟಲೂ ಆಗಲಿಲ್ಲ. ಈಗ ಶಿರೋಳ ಗ್ರಾಮಕ್ಕೆ ಬಂದು ಮನೆಯಲ್ಲಿ ಕುಳಿತಿದ್ದೇನೆ. ನನಗೆ ನೆರವಾಗಬೇಕು’ ಎಂದು ವಿನಂತಿ ಮಾಡಿದಳು.

ಆಗ ಇನ್ನೊಮ್ಮೆ ನಿನ್ನ ಹೆಸರು ಹೇಳಮ್ಮ ಎಂದು ಯಡಿಯೂರಪ್ಪ ಕೇಳಿದರು. ನಂತರ, ನಾಡಿನ ಎಲ್ಲ ಮಕ್ಕಳಿಗೆ ನೆರವಾಗಬೇಕು ಎಂದು ನನ್ನ ಮನಸ್ಸು ಹಂಬಲಿಸುತ್ತಿದೆ. ಅದು ಆಗುತ್ತದೆಯೋ, ಇಲ್ಲವೋ ಗೋತ್ತಿಲ್ಲ. ಆದರೆ ನಿನ್ನನ್ನು ದತ್ತು ಪಡೆದಿದ್ದೇನೆ. ನಿನ್ನ ಓದಿನ ಖರ್ಚುವೆಚ್ಚಕ್ಕೆ ಪೂರ್ಣ ಅನುಕೂಲ ಮಾಡುವೆ ಎಂದು ಹೇಳಿದರು. ವಾಗ್ದಾನದಂತೆ ವಿಜಯಲಕ್ಷ್ಮೇ ಶಿಕ್ಷಣಕ್ಕೆ ವರ್ಷಕ್ಕೆ 2 ಲಕ್ಷದ 40 ಸಾವಿರ ಪಾವತಿಸಿದರು. ಆಕೆಯ ತಂದೆಯ ಚಿಕಿತ್ಸೆಗೆ 1.10 ಲಕ್ಷ ರು. ನೆರವು ನೀಡಿದರು. ಯಡಿಯೂರಪ್ಪ ಅವರ ರಾಜಕೀಯ ನಿಲುವುಗಳು ಏನೇ ಇರಬಹುದು. ಆದರೆ ಅವರದು ಬಡವರ, ಅಸಹಾಯಕರ ದುಃಖಕ್ಕೆ ಕರಗುವ ಮನಸ್ಸು. ಹಾಗಾಗಿಯೇ ವಿಜಯಲಕ್ಷ್ಮೇ ಮಾತ್ರವಲ್ಲ ಇಂಥ ಅನೇಕ ಅಸಹಾಯಕರಿಗೆ ನೆರವಿನ ಹಸ್ತ ಚಾಚಿದ್ದಾರೆ.

ಮತ್ತೊಂದು ಅಗ್ನಿಪರೀಕ್ಷೆ

ಯಡಿಯೂರಪ್ಪ ನನ್ನ ರಾಜಕೀಯ ಗುರು. ಅವರ ಸಮರ್ಪಣ ಮನೋಭಾವ, ಧೈರ್ಯ, ಋುಜುತ್ವ ನನನ್ನು ಬಹಳ ಆಕರ್ಷಿಸಿವೆ. ಅವರೊಂದಿಗೆ ಪ್ರವಾಸ ಮಾಡುವ, ಸರ್ಕಾರ ನಡೆಸುವ, ಪಕ್ಷ ಸಂಘಟಿಸುವ, ಅನೇಕ ಸಭೆ ಸಮಾರಂಭಗಳಲ್ಲಿ ವೇದಿಕೆ ಹಂಚಿಕೊಳ್ಳುವ, ಅವರೊಂದಿಗೆ ಊಟಮಾಡುವ ಭಾಗ್ಯ ನನಗೆ ದೊರೆತಿದೆ. ಧಾರವಾಡ ಜಿಲ್ಲೆ ಪ್ರವಾಸದ ಸಂದರ್ಭದಲ್ಲಿ ಬಾಲಕಿಯೊಬ್ಬಳು ಶಾಲೆಗೆ ಹೋಗಲು ಸೈಕಲ್‌ ಬೇಕು ಎಂದು ತಂದೆ ಎದುರು ಕಣ್ಣೀರು ಹಾಕುವುದನ್ನು ಪ್ರತ್ಯಕ್ಷವಾಗಿ ಕಂಡ ಯಡಿಯೂರಪ್ಪ, ಹೆಣ್ಣುಮಕ್ಕಳು ಶಾಲೆಗೆ ಹೋಗಲು ಸೈಕಲ್‌ ನೀಡುವ ಮಹತ್ವದ ಯೋಜನೆ ಜಾರಿಗೆ ತಂದರು. ಕೆಎಂಎಫ್‌ಗೆ ಹಾಲು ಪೂರೈಸುವ ರೈತರಿಗೆ ಲೀಟರಿಗೆ 2 ರು. ಸಬ್ಸಿಡಿ ಜಾರಿ ಮಾಡಿದರು. ಪ್ರತ್ಯೇಕ ಕೃಷಿ ಬಜೆಟ್‌ ಎಂಬ ಅದ್ಭುತ ಕಲ್ಪನೆಯ ಹರಿಕಾರ ಯಡಿಯೂರಪ್ಪ. ರಾಜ್ಯದ ಸಮಗ್ರ ಅಭಿವೃದ್ಧಿಗೆ ವಿಷನ್‌-2020 ರೂಪಿಸಿದರು. ದೇಶದಲ್ಲಿ ಮೊದಲು ಬಾರಿಗೆ 2% ಬಡ್ಡಿದರದಲ್ಲಿ ರೈತರಿಗೆ ಸಾಲ ಸೌಲಭ್ಯ ಕಲ್ಪಿಸಿದರು.

ಅವರು ನನ್ನನ್ನು ಕೂಡ ಬಹಳ ಪ್ರೋತ್ಸಾಹಿಸಿ ಬೆಳೆಸಿದ್ದಾರೆ. ನಾನು ಭೇಟಿಯಾದಾಗಲೆಲ್ಲ, ‘ಮುರುಗೇಶ ಮತ್ತೆ ಯಾವ ಕಾರ್ಖಾನೆ ಕಟ್ಟುತ್ತಿದ್ದೀರಿ’ ಎಂದೇ ಮಾತು ಆರಂಭಿಸುತ್ತಾರೆ. ಅವರು ಬೇಸರಗೊಂಡದ್ದನ್ನು, ನಿರಾಸೆಗೊಂಡದ್ದನ್ನು ನಾನು ಒಮ್ಮೆಯೂ ನೋಡಿಲ್ಲ. ನಾಯಕನಾದವನು ಎಂಥ ಒತ್ತಡದಲ್ಲಿಯೂ ಯೋಚಿಸುವ ಮನಸ್ಸು, ಕೇಳುವ ಕಿವಿ ಕಳೆದುಕೊಳ್ಳಬಾರದು. ಜನರು ಹೇಳುವ ಮಾತು ಕಿವಿಗೊಟ್ಟು ಕೇಳುವ ಸಂಯಮ ಸಮಾಧಾನ ರೂಢಿಸಿಕೊಳ್ಳಬೇಕು ಎಂದು ಅವರು ತಮ್ಮ ಸಂಗಾತಿಗಳಿಗೆ ಹೇಳುತ್ತಾರೆ. ಮಂತ್ರಿಮಂಡಲ ವಿಸ್ತರಿಸುವ ದೊಡ್ಡ ಸವಾಲು ಅವರ ಮುಂದಿದೆ. ಇದು ಪಕ್ಷದಲ್ಲಿ ಆಂತರಿಕವಾಗಿ ಇನ್ನೊಂದು ಅಗ್ನಿಪರೀಕ್ಷೆ . ಇಲ್ಲಿಯೂ ಯಡಿಯೂರಪ್ಪ ಸರಿಯಾಗಿ ನಡೆದುಕೊಳ್ಳುತ್ತಾರೆ ಎಂಬ ಭರವಸೆ ನಮಗಿದೆ.

ಬಿಜೆಪಿಗೆ ಬಂದ್ಮೇಲೂ ‘ಬಂಡಾಯಗಾರರ’ ಒಗ್ಗಟ್ಟು: ‘ಅರ್ಹ’ ಶಾಸಕರಿಂದ ಬಿಎಸ್‌ವೈಗೆ ಹಲವು ಬೇಡಿಕೆ!

Follow Us:
Download App:
  • android
  • ios