ಕಲಬುರಗಿ[ಫೆ.25]: ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಮತ್ತೆ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ರಾಹುಲ್‌ ಗಾಂಧಿ ಪರ ಬ್ಯಾಟಿಂಗ್‌ ಆರಂಭಿಸಿದ್ದಾರೆ. ರಾಹುಲ್‌ ಗಾಂಧಿ ಅವರೇ ಮತ್ತೆ ಎಐಸಿಸಿ ಅಧ್ಯಕ್ಷರಾಗಬೇಕು ಎಂದು ಹೇಳಿದ್ದಾರೆ.

ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ ರಾಹುಲ್‌ ಪರ ತಮ್ಮ ನಿಲುವು ಪ್ರದರ್ಶಿಸಿದ್ದಾರೆ. ಅವರೇ ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್‌ ಮುನ್ನಡೆಸಲಿ ಎಂದಿದ್ದಾರೆ. ಇದೇ ವೇಳೆ, ಕೆಪಿಸಿಸಿಗೆ ನೂತನ ಅಧ್ಯಕ್ಷರ ನೇಮಕ ಶೀಘ್ರದಲ್ಲೇ ಆಗುತ್ತದೆ ಎಂದೂ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಸಿದ್ದರಾಮಯ್ಯ ಹೊಸ ಪಕ್ಷ ಪ್ರಾರಂಭಿಸ್ತಾರೆ ಅನ್ನುವ ಕಟೀಲ್‌ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಪ್ರತಿಪಕ್ಷ ನಾಯಕ, ಬಿಜೆಪಿ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ಗೆ ರಾಜಕೀಯ ಅನುಭವ ಕಡಿಮೆ, ಅವರ ಮಾತಿಗೆ ನಾನು ಏನೂ ಹೇಳುವುದಿಲ್ಲ ಎಂದರು.

ಏತನ್ಮಧ್ಯೆ, ಬಿಜೆಪಿಯೊಳಗಿನ ಆಂತರಿಕ ಭಿನ್ನಮತವನ್ನು ಉಲ್ಲೇಖಿಸಿದ ಅವರು, ಬಿಜೆಪಿಯಲ್ಲಿ ಅಧಿಕಾರದ ಕಚ್ಚಾಟ ಪ್ರಾರಂಭವಾಗಿದ್ದು ಅನೇಕರು ಪಕ್ಷ ತೊರೆಯಲು ಸಿದ್ಧರಾಗಿದ್ದಾರೆ. ಹೀಗಾಗಿ ಬಿಜೆಪಿಯಲ್ಲಿ ತಳಮಳ ಪ್ರಾರಂಭವಾಗಿದೆ. ಒಂದುವೇಳೆ ಅವರೊಳಗಿನ ಕಚ್ಚಾಟದಿಂದ ಸರ್ಕಾರ ಬಿದ್ರೆ ಮತ್ತೆ ಅಧಿಕಾರ ಹಿಡಿಯುವ ಯೋಚನೆ ಇಲ್ಲ. ನಾನು ರಾಜಕೀಯ ಜೀವನದಲ್ಲಿ ಅಧಿಕಾರದ ಹಿಂದೆ ಹೋಗಿಲ್ಲ ಎಂದರು.

ರಾಜ್ಯಕ್ಕೆ ಅನ್ಯಾಯ:

ಹದಿನೈದನೇ ಹಣಕಾಸು ಆಯೋಗದಿಂದ ಕರ್ನಾಟಕಕ್ಕೆ ದೊಡ್ಡ ಅನ್ಯಾಯವಾಗಿದ್ದು ಈ ವರ್ಷ .9000 ಕೋಟಿ ಕಡಿಮೆಯಾಗಿದೆ. ಮುಂದಿನ ವರ್ಷ .11258 ಕೋಟಿ ಕೊರತೆಯಾಗಲಿದೆ. ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಮತ್ತು ರಾಜ್ಯದ 25 ಬಿಜೆಪಿ ಸಂಸದರು ಏನು ಮಾಡ್ತಿದ್ದಾರೆ? ಇದರ ಬಗ್ಗೆ ಯಾರಾದರೂ ಧ್ವನಿ ಎತ್ತುತ್ತಿದ್ದಾರಾ ಎಂದು ಗುಡುಗಿದರು. ನಮಗೆ ಪ್ರವಾಹ ಬಂದಾಗಲು ಹೆಚ್ಚಿನ ಪರಿಹಾರ ನೀಡಲಿಲ್ಲ, ಯಡಿಯೂರಪ್ಪ ನಿಯೋಗ ಕರೆದುಕೊಂಡು ಹೋಗಲಿಲ್ಲ, ಮೋದಿ ಮತ್ತು ಅಮಿತ್‌ ಶಾ ಅವರಿಗೆ ಯಡಿಯೂರಪ್ಪ ಹೆದರುತ್ತಿದ್ದಾರೆ. ಯಡಿಯೂರಪ್ಪ ವೀಕೆಸ್ಟ್‌ ಮುಖ್ಯಮಂತ್ರಿ ಎಂದು ಟೀಕಿಸಿದರು.