ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ: ದೇವೇಗೌಡ- ಡಿಕೆಶಿ ಕುಟುಂಬಗಳ ನಡುವಿನ ಪ್ರತಿಷ್ಠೆಯ ಫೈಟ್‌..!

ರಾಜ್ಯ ರಾಜಕಾರಣದಲ್ಲಿ ದೇವೇಗೌಡ ಮತ್ತು ಡಿ.ಕೆ.ಶಿವಕುಮಾರ್ ಬದ್ಧ ವೈರಿಗಳು. ಈವರೆಗೆ 4 ಚುನಾವಣೆಗಳಲ್ಲಿ ಎರಡು ಕುಟುಂಬದವರೇ ಕಾಂಗ್ರೆಸ್ - ಜೆಡಿಎಸ್‌ನಿಂದ ಮುಖಾಮುಖಿಯಾಗಿ ಸೋಲು - ಗೆಲುವು ಕಂಡವರು. ಈಗ ಮಂಜುನಾಥ್ ಜೆಡಿಎಸ್ ಬದಲಿಗೆ ಬಿಜೆಪಿ ಹುರಿಯಾಳಾಗಿದ್ದಾರೆ. 11 ವರ್ಷಗಳ ನಂತರ ಮತ್ತೆ ಎರಡು ಕುಟುಂಬಗಳ ರಾಜಕೀಯ ಘರ್ಷಣೆಗೆ ಕ್ಷೇತ್ರ ಸಾಕ್ಷಿಯಾಗಲಿದೆ.

Prestige Fight Between the HD Devegowda DK Families in Bengaluru Rural grg

ಎಂ.ಅಫ್ರೋಜ್ ಖಾನ್

ರಾಮನಗರ(ಏ.12):  ರಾಜಕೀಯ ಜಿದ್ದಾಜಿದ್ದಿಗೆ ಹೆಸರಾಗಿರುವ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಹೋದರ ಡಿ.ಕೆ.ಸುರೇಶ್ ಮತ್ತೆ ಕಣಕ್ಕಿಳಿದಿದ್ದಾರೆ. ಇವರ ವಿರುದ್ಧ ಬಿಜೆಪಿ ಅಭ್ಯರ್ಥಿಯಾಗಿ ಜೆಡಿಎಸ್ ವರಿಷ್ಠ ಎಚ್‌.ಡಿ.ದೇವೇಗೌಡರ ಅಳಿಯ ಡಾ.ಸಿ.ಎನ್.ಮಂಜುನಾಥ್ ಸ್ಪರ್ಧೆ ಮಾಡಿರುವುದರಿಂದ ಇದು ಪ್ರತಿಷ್ಠೆಯ ಕದನವಾಗಿ ರೂಪುಗೊಂಡಿದೆ.

ರಾಜ್ಯ ರಾಜಕಾರಣದಲ್ಲಿ ದೇವೇಗೌಡ ಮತ್ತು ಡಿ.ಕೆ.ಶಿವಕುಮಾರ್ ಬದ್ಧ ವೈರಿಗಳು. ಈವರೆಗೆ 4 ಚುನಾವಣೆಗಳಲ್ಲಿ ಎರಡು ಕುಟುಂಬದವರೇ ಕಾಂಗ್ರೆಸ್ - ಜೆಡಿಎಸ್‌ನಿಂದ ಮುಖಾಮುಖಿಯಾಗಿ ಸೋಲು - ಗೆಲುವು ಕಂಡವರು. ಈಗ ಮಂಜುನಾಥ್ ಜೆಡಿಎಸ್ ಬದಲಿಗೆ ಬಿಜೆಪಿ ಹುರಿಯಾಳಾಗಿದ್ದಾರೆ. 11 ವರ್ಷಗಳ ನಂತರ ಮತ್ತೆ ಎರಡು ಕುಟುಂಬಗಳ ರಾಜಕೀಯ ಘರ್ಷಣೆಗೆ ಕ್ಷೇತ್ರ ಸಾಕ್ಷಿಯಾಗಲಿದೆ.

ಮುನಿರತ್ನ ತರ ನಾನು ಹೇಡಿಯೂ ಅಲ್ಲ, ಕೇಡಿಯೂ ಅಲ್ಲ: ಡಿ.ಕೆ.ಸುರೇಶ್ ವಾಗ್ದಾಳಿ

ಇನ್ನು, ಮಾಜಿ ಸಿಎಂ ಕುಮಾರಸ್ವಾಮಿ ಮತ್ತು ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ರಾಜಕೀಯವಾಗಿ ಹಾವು-ಮುಂಗುಸಿಯಂತೆ ಇದ್ದವರು. ಇದರ ಲಾಭ ಪಡೆದ ಡಿಕೆ ಸಹೋದರರು, 2014ರಲ್ಲಿ ಸಿ.ಪಿ.ಯೋಗೇಶ್ವರ್ ಹಾಗೂ 2019ರಲ್ಲಿ ಕುಮಾರಸ್ವಾಮಿಯವರ ಬೆಂಬಲದೊಂದಿಗೆ ಗೆಲುವು ಸಾಧಿಸಿದ್ದರು. ಆದರೀಗ ಬಿಜೆಪಿ - ಜೆಡಿಎಸ್ ಮೈತ್ರಿ ಕಾರಣ ಉಭಯ ನಾಯಕರು ಹಗೆತನ ಮರೆತು ಒಗ್ಗೂಡಿದ್ದಾರೆ.

ಈಗ ಕುಮಾರಸ್ವಾಮಿ ಮತ್ತು ಯೋಗೇಶ್ವರ್ ಅವರ ಶಕ್ತಿ ಕುಂದಿಸಲು ಡಿಕೆ ಸಹೋದರರು ಕ್ಷೇತ್ರದ ಜೆಡಿಎಸ್ - ಬಿಜೆಪಿ ಕಾರ್ಯಕರ್ತರಿಗೆ ಗಾಳ ಹಾಕಿ ಯಶಸ್ವಿಯಾಗುತ್ತಿದ್ದಾರೆ. ಜೊತೆಗೆ, ಕಾಂಗ್ರೆಸ್ ಸೇರಲು ತುದಿಗಾಲಲ್ಲಿ ನಿಂತಿರುವ ಯೋಗೇಶ್ವರ್‌ ಪುತ್ರಿ ನಿಶಾ ಯೋಗೇಶ್ವರ್ ಅವರನ್ನು ಅಸ್ತ್ರವಾಗಿ ಬಳಸಿಕೊಂಡು ಯೋಗೇಶ್ವರ್ ವೇಗಕ್ಕೆ ತಡೆಯೊಡ್ಡುವ ಲೆಕ್ಕಾಚಾರಗಳೂ ನಡೆದಿವೆ.

ಕ್ಷೇತ್ರದ ಇತಿಹಾಸ:

ಇದು ಕಾಂಗ್ರೆಸ್‌ನ ಭದ್ರಕೋಟೆ. ಈ ಕ್ಷೇತ್ರದಲ್ಲಿ ಇದುವರೆಗೆ (2 ಉಪ ಚುನಾವಣೆ ಸೇರಿ) ಕಾಂಗ್ರೆಸ್ ಪಕ್ಷ 12 ಬಾರಿ, ಜೆಡಿಎಸ್ 3 ಹಾಗೂ ಬಿಜೆಪಿ 1 ಬಾರಿ ಗೆಲುವು ಸಾಧಿಸಿವೆ. ಪ್ರಸ್ತುತ ಕ್ಷೇತ್ರ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರಗಳ ಪೈಕಿ 5 ಕಡೆ ಕಾಂಗ್ರೆಸ್ ಶಾಸಕರಿದ್ದರೆ, 2 ಕಡೆ ಬಿಜೆಪಿ ಹಾಗೂ 1 ಕಡೆ ಜೆಡಿಎಸ್‌ನವರಿದ್ದಾರೆ. ಕಳೆದ ಲೋಕಸಭಾ ಚುನಾವಣೆಗೆ ಹೋಲಿಸಿದರೆ, ಕ್ಷೇತ್ರ ವ್ಯಾಪ್ತಿಯಲ್ಲಿ ಕೈ ಬಲ ಹೆಚ್ಚಾಗಿದೆ.

ಈ ಕ್ಷೇತ್ರದಲ್ಲಿ ಒಕ್ಕಲಿಗ ಮತದಾರರೇ ಅಧಿಕವಾಗಿದ್ದು, ಕಾಂಗ್ರೆಸ್‌ನ ಡಿ.ಕೆ.ಸುರೇಶ್ ಮತ್ತು ಬಿಜೆಪಿಯ ಮಂಜುನಾಥ್ ಅದೇ ಸಮುದಾಯಕ್ಕೆ ಸೇರಿದವರು. ಹೀಗಾಗಿ ಒಕ್ಕಲಿಗ ಮತಗಳು ವಿಭಜನೆಗೊಳ್ಳುವ, ಲಿಂಗಾಯತ ಮತಗಳು ಬಿಜೆಪಿ ಪಾಲಾಗುವ ಸಾಧ್ಯತೆಗಳೇ ಹೆಚ್ಚಾಗಿವೆ. ಉಳಿದಂತೆ ಅಲ್ಪಸಂಖ್ಯಾತ, ಹಿಂದುಳಿದ ಹಾಗೂ ದಲಿತ ಮತಗಳೇ ನಿರ್ಣಾಯಕವಾಗಿದ್ದು, ಮುಸ್ಲಿಂ ಮತಗಳು ಕಾಂಗ್ರೆಸ್‌ ಕೈ ಬಿಡಲ್ಲ. ಗ್ಯಾರಂಟಿ ಯೋಜನೆಗಳಿಂದಾಗಿ ಈ ಬಾರಿ ಹಿಂದುಳಿದ ಮತ್ತು ದಲಿತ ಮತಗಳೂ ಜೊತೆ ಇರಲಿವೆ ಎಂಬುದು ಕಾಂಗ್ರೆಸ್ ನವರ ಲೆಕ್ಕಾಚಾರ.

ಈ ಕ್ಷೇತ್ರದ ಫಲಿತಾಂಶವನ್ನು ಬೆಂಗಳೂರು ದಕ್ಷಿಣ ಮತ್ತು ಆರ್‌ಆರ್‌ ನಗರ ವಿಧಾನಸಭಾ ಕ್ಷೇತ್ರಗಳು ನಿರ್ಣಯಿಸಿದರೂ ಅಚ್ಚರಿ ಇಲ್ಲ. ಕಾರಣ ಲೋಕಸಭಾ ಕ್ಷೇತ್ರದ ಒಟ್ಟು ಮತದಾರರಲ್ಲಿ 44%ರಷ್ಟು ಜನರು ಈ ಎರಡೂ ಕ್ಷೇತ್ರಗಳಲ್ಲಿಯೇ ಹಂಚಿಹೋಗಿದ್ದಾರೆ.

ಎಚ್ ಡಿಡಿ ಮತ್ತು ಡಿಕೆಶಿ ಕುಟುಂಬದ ಸಮರ:

1985ರ ವಿಧಾನಸಭಾ ಚುನಾವಣೆಯಲ್ಲಿ ಸಾತನೂರು ಕ್ಷೇತ್ರದಲ್ಲಿ ದೇವೇಗೌಡರ ವಿರುದ್ಧ ಸೋತಿದ್ದ ಡಿ.ಕೆ.ಶಿವಕುಮಾರ್ , 1999ರ ಚುನಾವಣೆಯಲ್ಲಿ ಕುಮಾರಸ್ವಾಮಿ ಅವರನ್ನು ಮಣಿಸಿದ್ದರು. 2002ರಲ್ಲಿ ಕನಕಪುರದಲ್ಲಿ ಉಪಚುನಾವಣೆಯಲ್ಲಿ ದೇವೇಗೌಡರ ಎದುರು ಮತ್ತೊಮ್ಮೆ ಡಿಕೆಶಿ ಪರಾಭವಗೊಂಡಿದ್ದರು. ಇನ್ನು, 2013ರಲ್ಲಿ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ದೇವೇಗೌಡರ ಸೊಸೆ ಅನಿತಾ ಕುಮಾರಸ್ವಾಮಿ ಎದುರು ಡಿ.ಕೆ.ಸುರೇಶ್ ಗೆಲುವು ಸಾಧಿಸಿದರು.

2019ರ ಚುನಾವಣೆ ಫಲಿತಾಂಶ:

- ಡಿ.ಕೆ.ಸುರೇಶ್ - ಕಾಂಗ್ರೆಸ್ - ಗೆಲುವು- 8,78,258.
- ಅಶ್ವತ್ಥ ನಾರಾಯಣಗೌಡ - ಬಿಜೆಪಿ - ಸೋಲು- 6,71,388.
ಮತದಾರರ ವಿವರ:
ಪುರುಷರು: 11, 53,539
ಮಹಿಳೆಯರು: 10,61,652.
ಇತರರು: 342.
ಒಟ್ಟು: 28,02,580.

ಲೋಕಸಭಾ ಚುನಾವಣಾ ಪ್ರಚಾರಕ್ಕೆ ಧುಮುಕಿದ ಡಿಕೆಶಿ ಪತ್ನಿ ಉಷಾ! ಮೈದುನ ಡಿಕೆ ಸುರೇಶ್ ಪರ ಮತಯಾಚನೆ

ಅಭ್ಯರ್ಥಿಗಳ ಕಿರು ಪರಿಚಯ;

ಡಿ.ಕೆ.ಸುರೇಶ್:

ಕನಕಪುರ ತಾಲೂಕು ದೊಡ್ಡಾಲಹಳ್ಳಿ ಗ್ರಾಮದವರು. ಸಹೋದರ ಡಿ.ಕೆ.ಶಿವಕುಮಾರ್ ಅವರ ರಾಜಕೀಯ ಚಟುವಟಿಕೆಗಳಿಗೆ ಬೆಂಗಾವಲಾಗಿ ನಿಂತವರು. 2013ರಲ್ಲಿ ಸಂಸದರಾಗಿದ್ದ ಎಚ್.ಡಿ. ಕುಮಾರಸ್ವಾಮಿ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ನಡೆದ ಉಪ ಚುನಾವಣೆಯಲ್ಲಿ ಸ್ಪರ್ಧೆ ಮಾಡಿ, ಮೊದಲ ಚುನಾವಣೆಯಲ್ಲಿಯೇ ಪ್ರತಿಸ್ಪರ್ಧಿ ಅನಿತಾ ಕುಮಾರಸ್ವಾಮಿಯನ್ನು ಮಣಿಸಿದ್ದರು. 2014ರಲ್ಲಿ ಪಿ.ಮುನಿರಾಜು ಗೌಡ ವಿರುದ್ಧ ಗೆಲುವು ಸಾಧಿಸಿದರು. ಯುಪಿಎ ನೇತೃತ್ವದ ಕೇಂದ್ರ ಸರ್ಕಾರದಲ್ಲಿ ಜಲ ಸಂಪನ್ಮೂಲ ಸಮಿತಿ ಸದಸ್ಯರಾಗಿ, ಮಾಹಿತಿ ತಂತ್ರಜ್ಞಾನ ಸ್ಥಾಯಿ ಸಮಿತಿ ಸದಸ್ಯರಾಗಿ ಕಾರ್ಯ ನಿರ್ವಹಿಸಿದರು. 2019ರ ಲೋಕ ಸಮರದಲ್ಲಿ ಸಂಸದರಾಗಿ ಆಯ್ಕೆಯಾಗುವ ಮೂಲಕ ಗೆಲುವಿನ ಹ್ಯಾಟ್ರಿಕ್ ಬರೆದರು.

ಡಾ.ಸಿ.ಎನ್ .ಮಂಜುನಾಥ್:

ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕಿನ ಚೋಳೇನಹಳ್ಳಿ ಗ್ರಾಮದವರಾದ ಡಾ.ಸಿ.ಎನ್ .ಮಂಜುನಾಥ್ ಖ್ಯಾತ ಹೃದ್ರೋಗ ತಜ್ಞರು. ಪದ್ಮಶ್ರೀ ಮತ್ತು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು. 1982ರಲ್ಲಿ ಮೈಸೂರು ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್, 1985ರಲ್ಲಿ ಬೆಂಗಳೂರು ಮೆಡಿಕಲ್ ಕಾಲೇಜಿನಲ್ಲಿ ಎಂ.ಡಿ (ಜನರಲ್ ಮೆಡಿಸಿನ್), 1988ರಲ್ಲಿ ಮಂಗಳೂರಿನ ಕಸ್ತೂರಬಾ ಮೆಡಿಕಲ್ ಕಾಲೇಜಿನಲ್ಲಿ ಡಿ.ಎಂ ಕಾರ್ಡಿಯಾಲಜಿ ವ್ಯಾಸಂಗ ಮಾಡಿದ್ದಾರೆ. ಅಮೆರಿಕನ್ ಕಾಲೇಜ್ ಆಫ್ ಕಾರ್ಡಿಯಾಲಜಿ, ಇಂಟರ್‌ನ್ಯಾಷನಲ್ ಕಾಲೇಜ್ ಆಫ್ ಚಿರೋಪ್ರಾಕ್ಟರ್ಸ್‌ ಮತ್ತು ರಾಯಲ್ ಕಾಲೇಜ್ ಆಫ್ ಫಿಸಿಷಿಯನ್ಸ್‌ನಲ್ಲಿ ಫೆಲೋಷಿಪ್ ಪಡೆದಿದ್ದಾರೆ. ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ನಿರ್ದೇಶಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದವರು.

Latest Videos
Follow Us:
Download App:
  • android
  • ios