Asianet Suvarna News Asianet Suvarna News

Karnataka Politics: ಚುನಾವಣೆ 8 ತಿಂಗಳು ಬಾಕಿ ಇರುವಾಗಲೇ ವಲಸೆ ಪರ್ವ ಶುರು..!

ತುಮಕೂರು ಜಿಲ್ಲೆಯಲ್ಲಿ ನಡೆಯುತ್ತಿದೆ ವಲಸೆ ಪರ್ವ, ಕಾಂಗ್ರೆಸ್‌ ತೊರೆದ ಇಬ್ಬರು ಮುಖಂಡರು, ವರ್ಷಾಂತ್ಯಕ್ಕೆ ಬೇರೆ ಬೇರೆ ಪಕ್ಷಗಳಿಂದಲೂ ವಲಸೆ

Political Leaders Changes Parties Before Karnataka Assembly Elections in Tumakuru grg
Author
First Published Sep 2, 2022, 2:44 PM IST

ಉಗಮ ಶ್ರೀನಿವಾಸ್‌

ತುಮಕೂರು(ಸೆ.02):  11 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡ ತುಮಕೂರು ಜಿಲ್ಲೆಯಲ್ಲಿ ಚುನಾವಣೆ 8 ತಿಂಗಳು ಬಾಕಿ ಇರುವಾಗಲೇ ವಲಸೆ ಪರ್ವ ಶುರುವಾಗಿದೆ. ಮೊನ್ನೆ ಮೊನ್ನೆಯಷ್ಟೆ ಎಂ.ಡಿ. ಲಕ್ಷ್ಮೀನಾರಾಯಣ ಅವರು ಕಾಂಗ್ರೆಸ್‌ ಪಕ್ಷಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ ಮಾಜಿ ಸಂಸದ ಮುದ್ದಹನುಮೇಗೌಡರು ಕೂಡ ರಾಜೀನಾಮೆ ನೀಡಿದ್ದು ವಲಸೆ ಪರ್ವಕ್ಕೆ ನಾಂದಿ ಶುರುವಾಗಿದೆ. ಈಗಾಗಲೇ ಜೆಡಿಎಸ್‌ನ ಬೆಮೆಲ್‌ ಕಾಂತರಾಜು ಕಾಂಗ್ರೆಸ್‌ಗೆ ಹೋಗಿದ್ದಾರೆ. ಇನ್ನು ಗುಬ್ಬಿ ಜೆಡಿಎಸ್‌ ಶಾಸಕ ಎಸ್‌.ಆರ್‌. ಶ್ರೀನಿವಾಸ್‌ ಅವರು ಕಳೆದ ಹಲವಾರು ತಿಂಗಳಿನಿಂದ ಜೆಡಿಎಸ್‌ನಿಂದ ಅಂತರ ಕಾಯ್ದುಕೊಂಡಿದ್ದಾರೆ. ಇದು ಮಾತ್ರವಲ್ಲ ಈಗಾಗಲೇ ಗುಬ್ಬಿಯಲ್ಲಿ ಜೆಡಿಎಸ್‌ ಅಭ್ಯರ್ಥಿಯನ್ನು ಘೋಷಿಸಿದೆ. ಸದ್ಯ ಶಾಸಕರಾಗಿರುವುದರಿಂದ ತಕ್ಷಣಕ್ಕೆ ಪಕ್ಷ ತೊರೆಯಲು ತೀರ್ಮಾನಿಸಿಲ್ಲ. ಆದರೂ ಪಕ್ಷ ತೊರೆಯುವ ಎಲ್ಲಾ ಸುಳಿವನ್ನು ನೀಡಿದ್ದಾರೆ.

ಗುಬ್ಬಿಯಿಂದ ಸತತ ನಾಲ್ಕು ಬಾರಿ ಶಾಸಕರಾಗಿರುವ ಎಸ್‌.ಆರ್‌. ಶ್ರೀನಿವಾಸ್‌ ಕಾಂಗ್ರೆಸ್‌, ಜೆಡಿಎಸ್‌ ಮೈತ್ರಿ ಸರ್ಕಾರದಲ್ಲಿ ಸಚಿವರಾಗಿದ್ದರು. ಸದ್ಯ ಅವರು ಕಾಂಗ್ರೆಸ್‌ ಕಡೆ ಮುಖ ಮಾಡಿದ್ದಾರೆ. ಇನ್ನು ತುರುವೇಕೆರೆ ತಾಲೂಕು ಮುನಿಯೂರಿನವರಾದ ಎಂ.ಡಿ. ಲಕ್ಷ್ಮೀನಾರಾಯಣ ಕೂಡ ಕಾಂಗ್ರೆಸ್‌ ತೊರೆದಿದ್ದಾರೆ. ಈ ಮೊದಲು ಬಿಜೆಪಿಯಲ್ಲಿದ್ದ ಲಕ್ಷ್ಮೀನಾರಾಯಣ ಅವರು ಯಡಿಯೂರಪ್ಪನವರ ಆಪ್ತರಾಗಿದ್ದರು. ಆದರೆ ಪಕ್ಷದೊಳಗಿನ ವೈಮನಸ್ಸಿನಿಂದ ಅವರು ಬಿಜೆಪಿ ತೊರೆದು ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದರು. ವಿಧಾನ ಪರಿಷತ್‌ ಸದಸ್ಯರೂ ಆಗಿದ್ದ ಎಂ.ಡಿ. ಲಕ್ಷ್ಮೀನಾರಾಯಣ ಅವರು ಕಳೆದ ಹಲವಾರು ತಿಂಗಳಿನಿಂದ ಪಕ್ಷದ ವರಿಷ್ಠರಿಂದ ಅಂತರ ಕಾಯ್ದುಕೊಂಡಿದ್ದರು. ಈಗ ಅಧಿಕೃತವಾಗಿ ಪಕ್ಷದಿಂದ ಹೊರ ನಡೆದಿದ್ದಾರೆ.

Karnataka Politics: ಮೋದಿ-ಯೋಗಿ ಎಂಟ್ರಿ: ರಾಜ್ಯ ಕೇಸರಿ ಪಡೆಯಲ್ಲಿ ಸಮರೋತ್ಸಾಹ!

ಇದಾದ ಬೆನ್ನಲ್ಲೇ ಮುದ್ದಹನುಮೇಗೌಡ ಕೂಡ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ್ದಾರೆ. ಎರಡು ಬಾರಿ ಶಾಸಕರಾಗಿ ಒಮ್ಮೆ ತುಮಕೂರು ಸಂಸದರಾಗಿದ್ದ ಮುದ್ದಹನುಮೇಗೌಡರು ನ್ಯಾಯಾಧೀಶರಾಗಿದ್ದರು. ಆದರೆ ರಾಜಕೀಯ ಇವರನ್ನು ಕೈ ಬೀಸಿ ಕರೆದಿದ್ದರಿಂದ ನ್ಯಾಯಾಧೀಶ ಹುದ್ದೆಗೆ ರಾಜೀನಾಮೆ ನೀಡಿ ರಾಜಕೀಯಕ್ಕೆ ಬಂದಿದ್ದರು. ಕಾಂಗ್ರೆಸ್‌ನಲ್ಲಿ ಹಲವಾರು ವರ್ಷಗಳ ಕಾಲ ಇದ್ದ ಮುದ್ದಹನುಮೇಗೌಡರು ಜೆಡಿಎಸ್‌ಗೆ ಸೇರ್ಪಡೆಯಾಗಿದ್ದರು. ಆದರೆ ಅಲ್ಲೂ ಅವರು ನೆಲೆ ನಿಲ್ಲಲು ಸಾಧ್ಯವಾಗಲಿಲ್ಲ. ಡಾ.ಜಿ.ಪರಮೇಶ್ವರ್‌ ಅವರು ಕೆಪಿಸಿಸಿ ಅಧ್ಯಕ್ಷರಾಗಿದ್ದಾಗ ಅವರೇ ಮುದ್ದಹನುಮೇಗೌಡರನ್ನು ಕಾಂಗ್ರೆಸ್‌ಗೆ ಕರೆ ತಂದು ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್‌ ಪಕ್ಷದಿಂದ ಟಿಕೆಟ್‌ ನೀಡಿದ್ದರು. ಆ ಚುನಾವಣೆಯಲ್ಲಿ ಗೆದ್ದು ಸಂಸದರೂ ಆದರು. ಆದರೆ ಐದು ವರ್ಷಗಳ ಬಳಿಕ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಹೊಂದಾಣಿಕೆಯಿಂದಾಗಿ ತುಮಕೂರು ಕ್ಷೇತ್ರಕ್ಕೆ ದೇವೇಗೌಡರು ಸ್ಪರ್ಧಿಸುವಂತಾಯಿತು. ಹೀಗಾಗಿ ಪಕ್ಷ ಮುದ್ದಹನುಮೇಗೌಡರಿಗೆ ಟಿಕೆಟ್‌ ನೀಡಲು ಸಾಧ್ಯವಾಗಲಿಲ್ಲ. ಹಾಲಿ ಸಂಸದರೊಬ್ಬರಿಗೆ ಟಿಕೆಟ್‌ ತಪ್ಪಿಸಿದ ಹಿನ್ನೆಲೆಯಲ್ಲಿ ರಾಜ್ಯಸಭೆಗೆ ಕಳುಹಿಸುವ ಭರವಸೆ ಸಿಕ್ಕಿತ್ತು. ಆದರೆ ಆ ಚುನಾವಣೆಯಲ್ಲಿ ದೇವೇಗೌಡರು ಸೋತಿದ್ದರಿಂದ ಅವರನ್ನೇ ರಾಜ್ಯಸಭೆಗೆ ಕಳುಹಿಸಲಾಯಿತು. ಹೀಗಾಗಿ ಎರಡನೇ ಬಾರಿಗೂ ಮುದ್ದಹನುಮೇಗೌಡರಿಗೆ ಅವಕಾಶ ತಪ್ಪಿತು. ಹೀಗಾಗಿ ಪಕ್ಷದ ವರಿಷ್ಠರ ಜೊತೆ ಮುನಿಸಿಕೊಂಡರು. ಕಳೆದ ಹತ್ತಾರು ತಿಂಗಳಿನಿಂದ ಮುದ್ದಹನುಮೇಗೌಡರು ಪಕ್ಷದೊಂದಿಗೆ ಅಂತರ ಕಾಯ್ದುಕೊಂಡರು. ಪಕ್ಷದಿಂದ ಮುದ್ದಹನುಮೇಗೌಡರಿಗೆ ಅನ್ಯಾಯವಾಗಿದೆ ಎಂಬುದು ಕಾಂಗ್ರೆಸ್‌ಗೂ ಕೂಡ ಗೊತ್ತಿತ್ತು. ಆದರೆ ಪರಿಹಾರ ಹುಡುಕಲು ಪಕ್ಷ ಸೋತಿದ್ದರಿಂದ ಅಂತಿಮವಾಗಿ ಮುದ್ದಹನುಮೇಗೌಡರು ಪಕ್ಷ ತೊರೆದಿದ್ದಾರೆ. ಚುನಾವಣೆ ಇನ್ನು ಸಮೀಪ ಬರುವಾಗ ಮತ್ತಷ್ಟು ಮಂದಿಯ ವಲಸೆ ಆರಂಭವಾಗಲಿದೆ ಎಂಬ ಚರ್ಚೆಗಳು ಶುರುವಾಗಿದೆ.
 

Follow Us:
Download App:
  • android
  • ios