ಅಮೃತ್‌ ಕಾಲ ವರ್ಸಸ್ ಅನ್ಯಾಯ ಕಾಲ: 2024ರ ಲೋಕಸಭಾ ಚುನಾವಣೆಯ ಪ್ರಮುಖ ಚುನಾವಣಾ ಅಜೆಂಡಾಗಳಿವು

ಈ ಬಾರಿಯೂ ಚುನಾವಣೆಯಲ್ಲಿ ಪ್ರಮುಖ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್‌ ತಮ್ಮ ಕಾರ್ಯಸೂಚಿಗಳ ಕುರಿತು ಈಗಾಗಲೇ ಸುಳಿವು ನೀಡಿವೆ. ಹಾಗಿದ್ದರೆ ಈ ಬಾರಿಯ ಚುನಾವಣೆಯಲ್ಲಿ ಯಾವ ವಿಷಯಗಳು ಹೆಚ್ಚು ಚರ್ಚಿತವಾಗಬಹುದು ಎಂಬ ವಿಶ್ಲೇಷಣೆ ಇಲ್ಲಿದೆ.

Major Election Agenda for 2024 Lok Sabha Elections akb

ನವದೆಹಲಿ: ಚುನಾವಣೆಗಳ ವೇಳೆ ರಾಜಕೀಯ ಪಕ್ಷಗಳ ಭರವಸೆ ಮುಗಿಲು ಮುಟ್ಟುತ್ತದೆ. ಇದಕ್ಕೆ ಈ ಬಾರಿಯ ಲೋಕಸಭಾ ಚುನಾವಣೆಯೂ ಹೊರತಲ್ಲ. ಈ ಬಾರಿಯ ಭಾರೀ ತುರುಸಿನ ಚುನಾವಣೆಯಲ್ಲಿ ಎಲ್ಲಾ ರಾಜಕೀಯ ಪಕ್ಷಗಳು ಗ್ಯಾರಂಟಿ ಮೂಲಕ ಜನರ ಮನ ಸೆಳೆಯುಲು ಮುಂದಾಗುವುದಂತೂ ಖಚಿತ.

ರಾಜಕೀಯ ನಾಯಕರು, ಪಕ್ಷಗಳು ತಮ್ಮ ಕಾರ್ಯಸೂಚಿ, ಅಜೆಂಡಾ, ಭರವಸೆಗಳನ್ನು ಹೇಗೆ ಜನರ ಮುಂದೆ ನಿರೂಪಿಸಿ ಅವರ ಗಮನ ಸೆಳೆಯುತ್ತವೆ ಎಂಬುದರ ಮೇಲೆ ಚುನಾವಣೆಯ ಗೆಲುವು-ಸೋಲು ನಿರ್ಧಾರವಾಗುತ್ತದೆ. ಈ ಬಾರಿಯೂ ಚುನಾವಣೆಯಲ್ಲಿ ಪ್ರಮುಖ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್‌ ತಮ್ಮ ಕಾರ್ಯಸೂಚಿಗಳ ಕುರಿತು ಈಗಾಗಲೇ ಸುಳಿವು ನೀಡಿವೆ. ಹಾಗಿದ್ದರೆ ಈ ಬಾರಿಯ ಚುನಾವಣೆಯಲ್ಲಿ ಯಾವ ವಿಷಯಗಳು ಹೆಚ್ಚು ಚರ್ಚಿತವಾಗಬಹುದು ಎಂಬ ವಿಶ್ಲೇಷಣೆ ಇಲ್ಲಿದೆ.


ಮೋದಿ ಕಾ ಗ್ಯಾರಂಟಿ

ಸತತ 3ನೇ ಅವಧಿಗೆ ಅಧಿಕಾರಕ್ಕೆ ಏರುವ ಹುಮ್ಮಸ್ಸಿನಲ್ಲಿರುವ ಪ್ರಧಾನಿ ಮೋದಿ ಈ ಬಾರಿ ‘ಮೋದಿ ಕಾ ಗ್ಯಾರಂಟಿ’ಯನ್ನೇ ತಮ್ಮ ಪ್ರಮುಖ ಚುನಾವಣಾ ಘೋಷಣೆಯಾಗಿ ಈಗಾಗಲೇ ಬಳಸುತ್ತಿದ್ದಾರೆ. ಪಕ್ಷದ ವೆಬ್‌ಸೈಟ್‌ನಲ್ಲಿ ಬಣ್ಣಿಸಿರುವಂತೆ ಮೋದಿ ಕಾ ಗ್ಯಾರಂಟಿ ಎಂದರೆ, ಯುವಸಮೂಹದ ಅಭಿವೃದ್ಧಿ, ಮಹಿಳಾ ಸಬಲೀಕರಣ, ರೈತರು, ದಶಕಗಳಿಂದ ಕಡೆಗಣಿಸಲ್ಪಟ್ಟ ದಮನಿತರ ಅಭ್ಯುದಯ. ತನ್ನ ಎಲ್ಲಾ ಜನಕಲ್ಯಾಣ ಕಾರ್ಯಕ್ರಮಗಳನ್ನು ಸಮಾಜದ ಕಟ್ಟಕಡೆಯ ವ್ಯಕ್ತಿಗೆ ತಲುಪಿಸುವುದು ಗ್ಯಾರಂಟಿಯ ಮೂಲ ಗುರಿ. ಈ ಘೋಷವಾಕ್ಯ ಈ ಬಾರಿ ಬಿಜೆಪಿಯ ಪ್ರತಿ ಕಾರ್ಯಕ್ರಮದಲ್ಲೂ ಅನುರಣಿಸುವುದು ಖಚಿತ.

ಕಾಂಗ್ರೆಸ್‌ನ ನ್ಯಾಯ್‌ ಗ್ಯಾರಂಟಿ

ಸತತ ಸೋಲಿನ ಆಘಾತದಲ್ಲಿ ಕಾಂಗ್ರೆಸ್‌ಗೆ ಹಿಮಾಚಲಪ್ರದೇಶ, ಕರ್ನಾಟಕ, ತೆಲಂಗಾಣ ವಿಧಾನಸಭೆಯ ಗೆಲುವು ಒಂದಿಷ್ಟು ಭರವಸೆಯ ಆಶಾಕಿರಣವಾಗಿ ಹೊರಹೊಮ್ಮಿತ್ತು. ಈ ರಾಜ್ಯಗಳಲ್ಲಿ ಕಾಂಗ್ರೆಸ್‌ ಹಲವು ಗ್ಯಾರಂಟಿ ಭರವಸೆ ನೀಡಿ ಅದರ ಫಲವನ್ನೂ ಕಂಡಿತ್ತು. ಹೀಗಾಗಿ ಇದೇ ತಂತ್ರವನ್ನು ಲೋಕಸಭೆಯಲ್ಲೂ ಪ್ರಯೋಗಿಸಲು ಮುಂದಾಗಿರುವ ಕಾಂಗ್ರೆಸ್‌, ಯುವಸಮೂಹ, ರೈತರು, ಮಹಿಳೆಯರು, ಕಾರ್ಮಿಕರಿಗೆ 5 ನ್ಯಾಯದ ಭರವಸೆಯ ಘೋಷಣೆ ಮಾಡಿದೆ. ಮಣಿಪುರದಲ್ಲಿ ನಡೆದ ಭಾರತ್‌ ಜೋಡೋ ಯಾತ್ರೆಯ ವೇಳೆ ಕಾಂಗ್ರೆಸ್‌ ಇಂಥದ್ದೊಂದು ಘೋಷಣೆ ಮಾಡಿತ್ತು. ಲೋಕಸಭಾ ಚುನಾವಣೆಗೆ ಕಾಂಗ್ರೆಸ್‌ ಬಿಡುಗಡೆ ಮಾಡಲಿರುವ ಪ್ರಣಾಳಿಕೆ ಬಹುತೇಕ ಈ ವಿಷಯಗಳ ಸುತ್ತಲೇ ಇರಲಿದೆ ಎನ್ನಲಾಗಿದೆ.

ನಿರುದ್ಯೋಗ ಮತ್ತು ಬೆಲೆ ಏರಿಕೆ

ಕಾಂಗ್ರೆಸ್‌ ನೇತೃತ್ವದ ಇಂಡಿಯಾ ಮೈತ್ರಿಕೂಟ ದೇಶದಲ್ಲಿನ ನಿರುದ್ಯೋಗ ಸಮಸ್ಯೆ ಮತ್ತು ಬೆಲೆ ಏರಿಕೆಯ ವಿಷಯದ ಬಗ್ಗೆ ದೊಡ್ಡಮಟ್ಟದಲ್ಲಿ ಧ್ವನಿ ಎತ್ತುವ ಕೆಲಸ ಮಾಡುತ್ತಿದೆ. ಉದ್ಯೋಗ ಸೃಷ್ಟಿಯಲ್ಲಿ ಸರ್ಕಾರ ವಿಫಲವಾಗಿರುವುದು ಎನ್‌ಡಿಎ ಸರ್ಕಾರದ ಅತಿದೊಡ್ಡ ವೈಫಲ್ಯ ಎಂದು ಮೈತ್ರಿಕೂಟ ಟೀಕಿಸುತ್ತಿದೆ. ಈ ವಿಷಯದಲ್ಲಿ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳುವ ಎಲ್ಲಾ ಯತ್ನಗಳನ್ನೂ ಅದು ಮಾಡುತ್ತಿದೆ.

ಆದರೆ ಮತ್ತೊಂದೆಡೆ ಹೊಸ ಉದ್ಯೋಗ ಸೃಷ್ಟಿಯಲ್ಲಿ ಆಗಿರುವ ಬೆಳವಣಿಗೆ ಮತ್ತು ಆರ್ಥಿಕತೆಯಲ್ಲಿನ ತೀವ್ರ ಪ್ರಗತಿಯ ಅಂಕಿ ಅಂಶ ಮುಂದಿಟ್ಟುಕೊಂಡು ಬಿಜೆಪಿ, ವಿಪಕ್ಷಗಳಿಗೆ ತಿರುಗೇಟು ನೀಡುವ ಕೆಲಸ ಮಾಡಿದೆ. ರಾಜಕೀಯ ಪಕ್ಷಗಳಿಗೆ ಉತ್ತಮ ಆಹಾರವಾಗುವ ಈ ವಿಷಯ ಚುನಾವಣೆ ವೇಳೆ ಇನ್ನಷ್ಟು ತೀವ್ರತೆ ಪಡೆದುಕೊಳ್ಳುವ ಸಾಧ್ಯತೆ ಇದೆ.

Video 10.5 ಲಕ್ಷ ಮತಗಟ್ಟೆ, 55 ಲಕ್ಷ ಇವಿಎಂ: ಏ.19ರಿಂದ ಜೂ.1ರ ವರೆಗೆ ಲೋಕಸಭಾ ಚುನಾವಣೆ!

370ನೇ ವಿಧಿ ರದ್ದು, ಸಿಎಎ, ಏಕರೂಪ ನಾಗರಿಕ ಸಂಹಿತೆ

ಈ ಮೂರೂ ವಿಷಯಗಳು ದಶಕಗಳಿಂದ ಬಿಜೆಪಿಯ ಪ್ರಮುಖ ಚುನಾವಣಾ ಭರವಸೆಗಳಾಗಿ ಮೂಡಿಬಂದಿವೆ. ಈ ಪೈಕಿ ಈಗಾಗಲೇ ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇ಼ಷ ಸ್ಥಾನಮಾನ ನೀಡುವ 370ನೇ ವಿಧಿ ರದ್ದಾಗಿದ್ದು, ಇತ್ತೀಚೆಗೆ ಸಿಎಎ ಜಾರಿ ಕುರಿತು ಅಧಿಸೂಚನೆಯೂ ಹೊರಬಿದ್ದಿದೆ. ಹೀಗಾಗಿ ಈ ಎರಡೂ ಸಾಧನೆಗಳನ್ನು ಬಿಜೆಪಿ ತನ್ನ ಪ್ರಚಾರಕ್ಕೆ ಬಹುವಾಗಿ ಬಳಸಿಕೊಳ್ಳುವುದು ಖಚಿತ. ಮತ್ತೊಂದೆಡೆ ಉತ್ತರಾಖಂಡದಲ್ಲಿ ಬಿಜೆಪಿ ಸರ್ಕಾರ ಏಕರೂಪ ನಾಗರಿಕ ಸಂಹಿತೆ ಜಾರಿಗೊಳಿಸಿದ್ದು, ಅದು ಕೂಡಾ ಬಿಜೆಪಿ ಪಾಲಿಗೆ ಇನ್ನೊಂದು ಅಸ್ತ್ರವಾಗುವ ಎಲ್ಲಾ ಸಾಧ್ಯತೆಗಳಿವೆ. ಈ ಸಾಧನೆಗಳನ್ನು ಬಿಜೆಪಿ ನಾವು ನುಡಿದಂತೆ ನಡೆದಿದ್ದೇವೆ ಎಂಬ ಘೋಷಣೆಗೆ ಉದಾಹರಣೆಯಾಗಿ ಬಳಸಿಕೊಳ್ಳುವ ಸಾಧ್ಯತೆ ನಿಚ್ಚಳವಾಗಿದೆ.

ಅಯೋಧ್ಯೆ ರಾಮಮಂದಿರ ನಿರ್ಮಾಣ

ಕಳೆದ ಜ.22ರಂದು ಅಯೋಧ್ಯೆಯಲ್ಲಿ ಉದ್ಘಾಟನೆಗೊಂಡ ರಾಮಮಂದಿರ ಬಿಜೆಪಿಯ ಗೆಲುವಿನ ಉತ್ಸಾಹವನ್ನು ಮತ್ತಷ್ಟು ಹೆಚ್ಚಿಸಿದೆ. ಉದ್ಘಾಟನಾ ಕಾರ್ಯಕ್ರಮದಲ್ಲಿ ಸ್ವತಃ ಪ್ರಧಾನಿ ನರೇಂದ್ರ ಮೋದಿ, ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌, ಯುಪಿ ಸಿಎಂ ಯೋಗಿ ಆದಿತ್ಯನಾಥ್ ಭಾಗಿ ದೇಶದ ಜನತೆಯ ಮೇಲೆ ಅಚ್ಚಳಿಯ ಚುನಾವಣಾ ಮುದ್ರೆ ಒತ್ತಿದ್ದು ಸುಳ್ಳಲ್ಲ. ಬಿಜೆಪಿಯ ದಶಕಗಳ ಹಿಂದಿನ ರಾಮಮಂದಿರ ನಿರ್ಮಾಣದ ಭರವಸೆ ನನಸಾಗಲು ಪ್ರಧಾನಿ ಮೋದಿ ಕಾರಣ ಎಂದು ಬಿಜೆಪಿ ನಾಯಕರು ನೇರವಾಗಿ ಮೋದಿಗೆ ಈ ಶ್ರೇಯ ಸಲ್ಲಿಸಿದ್ದಾರೆ. ಉದ್ಘಾಟನೆ ವೇಳೆ ಹಿಂದಿ ಭಾಷಿಕ ರಾಜ್ಯಗಳಲ್ಲಿ ಎಲ್ಲೆಲ್ಲೂ ಹಾರಾಡಿದ ಕೇಸರಿ ಧ್ವಜ, ರಾಮಮಂದಿರ ವಿಷಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಎಷ್ಟು ನೆರವಾಗಬಹುದು ಎಂಬುದರ ಬಗ್ಗೆ ಸ್ಪಷ್ಟ ಸಂದೇಶ ರವಾನಿಸಿದೆ. ಮಂದಿರ ಬಿಜೆಪಿಯ ಪಾಲಿಗೆ ದೊಡ್ಡ ಬೋನಸ್‌ ಎಂಬುದನ್ನು ವಿಪಕ್ಷಗಳ ನಾಯಕರು ಕೂಡಾ ಒಪ್ಪಿಕೊಳ್ಳುತ್ತಾರೆ. ಈ ಬಾರಿ ಬಿಜೆಪಿ ಏಕಾಂಗಿಯಾಗಿ 370 ಸ್ಥಾನ ಗೆಲ್ಲಬಹುದು ಎಂಬ ವಿಶ್ವಾಸಕ್ಕೆ ಬಹುಪಾಲು ಕಾರಣ ರಾಮಮಂದಿರ ಅಲೆ ಎಂಬುದು ರಾಜಕೀಯ ವಿಶ್ಲೇಷಕರ ಅಭಿಮತ.

ಲೋಕಸಭಾ ಬಳಿಕ ಜಮ್ಮು ಕಾಶ್ಮೀರದಲ್ಲಿ ವಿಧಾನಸಭೆ ಚುನಾವಣೆ, 10 ವರ್ಷದ ಬಳಿಕ ಮತದಾನ!

ಚುನಾವಣಾ ಬಾಂಡ್‌ ಮಾಹಿತಿ

ಕೇಂದ್ರ ಚುನಾವಣಾ ಆಯೋಗವು ಇತ್ತೀಚೆಗೆ, ರಾಜಕೀಯ ಪಕ್ಷಗಳಿಗೆ ಚುನಾವಣಾ ಬಾಂಡ್‌ ನೀಡಿದವರ ಮಾಹಿತಿಯನ್ನು ಬಹಿರಂಗಪಡಿಸಿದೆ. ಬಾಂಡ್‌ನಲ್ಲಿ ಬಹುಪಾಲು ಹಣ ಬಿಜೆಪಿ ಹೋಗಿರುವುದು ಮತ್ತು ಇಷ್ಟು ದಿನ ಈ ಮಾಹಿತಿಯನ್ನು ರಹಸ್ಯವಾಗಿಯೇ ಇಡಲು ಕಾರಣ ಯೋಜನೆಯಲ್ಲಿನ ಗೋಲ್‌ಮಾಲ್‌. ಹೀಗಾಗಿ ಈ ಬಗ್ಗೆ ಉನ್ನತ ಮಟ್ಟದ ತನಿಖೆ ಆಗಬೇಕೆಂದು ಕಾಂಗ್ರೆಸ್‌ ಆಗ್ರಹ ಮಾಡುತ್ತಿದೆ. ಇದರ ಜೊತೆಗೆ ಚುನಾವಣೆಗೆ ಕ್ಷಣಗಣನೆ ಆರಂಭವಾಗಿರುವಾಗ ತನ್ನ ಬ್ಯಾಂಕ್‌ ಖಾತೆಗಳನ್ನು ಸ್ಥಗಿತ ಮಾಡಿದ್ದರ ಬಗ್ಗೆಯೂ ಕಾಂಗ್ರೆಸ್‌ ಹಲವು ಬಾರಿ ಬಹಿರಂಗವಾಗಿಯೇ ಅಪಸ್ವರ ಎತ್ತಿದೆ. ಇದರ ಹಿಂದೆ ದುರುದ್ದೇಶವಿದೆ ಎಂದು ಆರೋಪಿಸಿದೆ. ಇದನ್ನು ಪ್ರಚಾರದ ವೇಳೆ ಬಳಸಿಕೊಳ್ಳುವ ಸಾಧ್ಯತೆಯೂ ಇದ್ದೇ ಇದೆ. ಆದರೆ ಜನತೆ ಪಾಲಿಗೆ ಈ ವಿಷಯ ಎಷ್ಟು ಪರಿಣಾಮಕಾರಿ ಎಂಬುದನ್ನು ಕಾಲವೇ ಹೇಳಬಲ್ಲದು.


ಅಮೃತ್‌ ಕಾಲ ವರ್ಸಸ್ ಅನ್ಯಾಯ ಕಾಲ

ಈ ಚುನಾವಣೆಯ ಪ್ರಮುಖ ಚರ್ಚಿತ ವಿಷಯವಾಗುವ ಎಲ್ಲಾ ಸಾಧ್ಯತೆ ಇರುವ ಅಂಶವಿದು. ಪ್ರಧಾನಿ ಮೋದಿ ಆಡಳಿತದ ಅವಧಿಯಲ್ಲಿ ಉತ್ತಮ ಆಡಳಿತ, ಉತ್ತಮ ಆರ್ಥಿಕ ಪ್ರಗತಿ ಮತ್ತು ಭವಿಷ್ಯದ ಕುರಿತ ಚಿಂತನೆಗಳನ್ನು ಬಿಜೆಪಿ ಅಮೃತ ಕಾಲ ಎಂದು ಬಣ್ಣಿಸಿದೆ. ಜೊತೆಗೆ ಕೋವಿಡ್‌ ಸಾಂಕ್ರಾಮಿಕ ನಿರ್ವಹಣೆ, ಬಡತನ ಪ್ರಮಾಣ ಇಳಿಕೆ, ಉಚಿತ ಪಡಿತರ ವಿತರಣೆ ಮತ್ತು ಬಡವರಿಗೆ ಇತರೆ ಕಲ್ಯಾಣ ಯೋಜನೆಗಳನ್ನು ತನ್ನ ಸಾಧನೆಯಾಗಿ ಬಿಜೆಪಿ ಬಿಂಬಿಸಿಕೊಳ್ಳುತ್ತಿದೆ.

ಮತ್ತೊಂದೆಡೆ ಮೋದಿ ಆಡಳಿತದ 10 ವರ್ಷಗಳನ್ನು ಅನ್ಯಾಯದ ಕಾಲ ಎಂದು ಕಾಂಗ್ರೆಸ್‌ ಟೀಕಿಸಿದೆ. ಬೆಲೆ ಏರಿಕೆ, ನಿರುದ್ಯೋಗ ಹೆಚ್ಚಳ, ಸಾಂವಿಧಾನಿಕ ಸಂಸ್ಥೆಗಳ ಮೇಲೆ ಹಿಡಿತ, ಸಂವಿಧಾನದ ಮೇಲಿನ ದಾಳಿ, ಹೆಚ್ಚುತ್ತಿರುವ ಆರ್ಥಿಕ ಅಸಮತೋಲನ ವಿಷಯವನ್ನು ತನ್ನ ಟೀಕೆಗಾಗಿ ಕಾಂಗ್ರೆಸ್‌ ಬಳಸಿಕೊಂಡಿದೆ.

ರೈತರ ವಿಷಯ ಮತ್ತು ಕನಿಷ್ಠ ಬೆಂಬಲ ಬೆಲೆಗೆ ಕಾನೂನಿನ ಮಾನ್ಯತೆ

ಲೋಕಸಭಾ ಚುನಾವಣೆ ಘೋಷಣೆಗೂ ಮುನ್ನ ದೆಹಲಿ ಗಡಿಯಲ್ಲಿ ನಡೆದ ರೈತರ ಪ್ರತಿಭಟನೆ ವಿಪಕ್ಷಗಳ ಪಾಲಿಗೆ ಅಸ್ತ್ರವಾಗಿ ಸಿಕ್ಕಿದೆ. ಕನಿಷ್ಠ ಬೆಂಬಲ ಬೆಲೆಗೆ ಕಾನೂನಿನ ಖಾತ್ರಿ ನೀಡಬೇಕೆಂಬ ರೈತರ ಬೇಡಿಕೆಯನ್ನು ತನ್ನ ಗ್ಯಾರಂಟಿಯಾಗಿ ಬಳಸಿಕೊಳ್ಳಲು ವಿಪಕ್ಷಗಳ ಇಂಡಿಯಾ ಮೈತ್ರಿಕೂಟ ಮುಂದಾಗಿದೆ. ಇನ್ನೊಂದೆಡೆ ಕೇಂದ್ರ ಸರ್ಕಾರ ಪ್ರತಿಭಟನಾ ನಿರತ ರೈತರ ಜೊತೆ ಸತತ ಮಾತುಕತೆ ನಡೆಸುವ ಮೂಲಕ ಅವರ ಸಮಸ್ಯೆ ಪರಿಹರಿಸುವ ಯತ್ನ ಮಾಡಿದೆ. ಜೊತೆಗೆ ಪ್ರತಿಭಟನೆಯಲ್ಲಿ ನಿರತ ಕೆಲ ರೈತರು ರಾಜಕೀಯ ಪ್ರೇರಿತರಾಗಿದ್ದಾರೆ ಎಂಬ ಆರೋಪವನ್ನೂ ಮಾಡಿದೆ. ಜೊತೆಗೆ ಪಿಎಂ ಕಿಸಾನ್‌ ಯೋಜನೆ ರೈತರ ಜೀವನದಲ್ಲಿ ಹೇಗೆ ಬದಲಾವಣೆ ತಂದಿದೆ ಎಂಬುದನ್ನು ತೋರಿಸುವ ಮೂಲಕ ರೈತರ ಪರ ತಾನು ಇರುವುದಾಗಿ ತೋರಿಸಿಕೊಳ್ಳುವ ಯತ್ನ ಮಾಡಿದೆ.

ಸೈದ್ದಾಂತಿಕ ಸಮರ

ಈ ಚುನಾವಣೆ ಬಿಜೆಪಿ ಮತ್ತು ಕಾಂಗ್ರೆಸ್‌ ನಡುವಿನ ಸೈದ್ಧಾಂತಿಕ ಸಮರಕ್ಕೆ ಸಾಕ್ಷಿಯಾಗಲಿದೆ ಎಂದು ವಿಶ್ಲೇಷಿಸಲಾಗಿದೆ. ಎರಡೂ ಬಣಗಳು ಜನತೆ ಮುಂದೆ ತಮ್ಮ ತಮ್ಮ ಸೈದ್ಧಾಂತಿಕ ನಿಲುವುಗಳನ್ನು ಮಂಡಿಸಿ ಎರಡರ ಪೈಕಿ ಒಂದನ್ನು ಆಯ್ಕೆ ಮಾಡಿಕೊಳ್ಳುವಂತೆ ಮನವಿ ಮಾಡಿಕೊಳ್ಳಲಿವೆ.

ವಿಕಸಿತ ಭಾರತದ ನೀಲನಕ್ಷೆ

ಅಭಿವೃದ್ಧಿ ಹೊಂದಿದ ದೇಶವಾಗಿ ಬದಲಾವಣೆಯೇ ನಮ್ಮ ಗುರಿ ಎಂದು ಪ್ರಧಾನಿ ನರೇಂದ್ರ ಮೋದಿ ದೇಶದ ಜನತೆ ಮುಂದೆ ಭವಿಷ್ಯದ ಪರಿಕಲ್ಪನೆ ಬಿತ್ತಿದ್ದಾರೆ. ನಮ್ಮ ಸರ್ಕಾರದ ಕಾರ್ಯಕ್ರಮಗಳು ಮತ್ತು ಬದ್ಧತೆ 2047ರ ವೇಳೆಗೆ ಈ ಗುರಿ ಸಾಧಿಸಲು ನೆರವಾಗಲಿದೆ ಎಂಬ ಭರವಸೆಯನ್ನು ಮೋದಿ ನೀಡುತ್ತಿದ್ದಾರೆ. ವಿಕಸಿತ ಭಾರತದ ವಿಷಯ, ಈ ಬಾರಿ ಬಿಜೆಪಿಯ ಪ್ರಮುಖ ಭರವಸೆಗಳ ಪೈಕಿ ಒಂದಾಗಿರುವ ಸಾಧ್ಯತೆ ಇದೆ. ಇನ್ನೊಂದೆಡೆ ಇಂಥ ಭರವಸೆ ಕೇವಲ ಬೂಟಾಟಿಕೆ ಎಂದು ವಿಪಕ್ಷಗಳು ದೂರುತ್ತಿವೆ.

2024ರ ಲೋಕಸಭಾ ಚುನಾವಣೆ ಏಪ್ರಿಲ್‌ 19 ರಿಂದ ಜೂನ್‌ 1 ರವರೆಗೆ ಒಟ್ಟು ಏಳು ಹಂತಗಳಲ್ಲಿ ನಡೆಯಲಿದೆ. ಜೂನ್ 4 ರಂದು ಮತ ಎಣಿಕೆ ನಡೆದು ಫಲಿತಾಂಶ ಘೋಷಣೆಯಾಗಲಿದೆ. ಕರ್ನಾಟಕದಲ್ಲಿ ಎಪ್ರಿಲ್ 26 ಹಾಗೂ ಮೇ7 ರಂದು ಎರಡು ಹಂತದಲ್ಲಿ ಮತದಾನ ನಡೆಯಲಿದೆ. ಚಿತ್ರದುರ್ಗ, ಉಡುಪಿ-ಚಿಕ್ಕಮಗಳೂರು, ದಕ್ಷಿಣ ಕನ್ನಡ, ಹಾಸನ, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ, ಮಂಡ್ಯ, ಮೈಸೂರು, ಚಾಮರಾಜನಗರ, ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ, ಬೆಂಗಳೂರು ಗ್ರಾಮಾಂತರ ಹಾಗೂ ಬೆಂಗಳೂರು ಸೆಂಟ್ರಲ್​‌ನಲ್ಲಿ ಮೊದಲ ಹಂತದಲ್ಲಿ ಮತದಾನವಾಗಲಿದೆ. 2ನೇ ಹಂತದ ಚುನಾವಣೆ ಮೇ 7 ರಂದು ಶಿವಮೊಗ್ಗ, ದಾವಣಗೆರೆ, ಹಾವೇರಿ, ಉತ್ತರ ಕನ್ನಡ, ಬಳ್ಳಾರಿ, ಧಾರವಾಡ, ಕೊಪ್ಪಳ, ಬೆಳಗಾವಿ, ಚಿಕ್ಕೋಡಿ, ಬಾಗಲಕೋಟೆ, ರಾಯಚೂರು, ಬಿಜಾಪುರ ಕಲಬುರಗಿ ಮತ್ತು  ಬೀದರ್‌ ಕ್ಷೇತ್ರಗಳಲ್ಲಿ ನಡೆಯಲಿದೆ.

Latest Videos
Follow Us:
Download App:
  • android
  • ios