Asianet Suvarna News Asianet Suvarna News

ಮಧ್ಯಪ್ರದೇಶ ರಾಜಕೀಯ: ಬೆಂಗಳೂರಲ್ಲಿ ಹೈಡ್ರಾಮಾ!

ಮ.ಪ್ರ. ರಾಜಕೀಯ: ಬೆಂಗ್ಳೂರಲ್ಲಿ ಹೈಡ್ರಾಮಾ| ರಾಜ್ಯಸಭೆಗೆ ಮತಯಾಚನೆ ನೆಪದಲ್ಲಿ ಬೇಟಿ| ಬೆಂಗಳೂರಲ್ಲಿ ಬಂಡಾಯ ಶಾಸಕರ ಭೇಟಿಗೆ ಆಗಮನ| ರೆಸಾರ್ಟ್‌ ರಸ್ತೆಯಲ್ಲೇ ಧರಣಿ| ಬಂಧನ, ಬಿಡುಗಡೆ, ಪೊಲೀಸರು ಬಿಜೆಪಿಗರ ರೀತಿ ವರ್ತಿಸಬಾರದು

Madhya Pradesh Politics High Drama In Bengaluru
Author
Bangalore, First Published Mar 19, 2020, 7:29 AM IST

ಬೆಂಗಳೂರು[ಮಾ.19]: ನಗರದ ಹೊರವಲಯದ ರೆಸಾರ್ಟ್‌ನಲ್ಲಿ ತಂಗಿರುವ ಮಧ್ಯಪ್ರದೇಶ ಕಾಂಗ್ರೆಸ್‌ನ ಬಂಡಾಯ ಶಾಸಕರ ಭೇಟಿಗೆ ಬಂದ ಕಾಂಗ್ರೆಸ್‌ನ ಹಿರಿಯ ನಾಯಕ, ಮಾಜಿ ಮುಖ್ಯಮಂತ್ರಿ ದಿಗ್ವಿಜಯ್‌ ಸಿಂಗ್‌ ಅವರನ್ನು ರೆಸಾರ್ಟ್‌ಗೆ ಬರುವ ಮೊದಲೇ ಪೊಲೀಸರು ತಡೆದಾಗ ರಸ್ತೆಯಲ್ಲೇ ಧರಣಿ, ಬಂಧನ ಬಿಡುಗಡೆ ಸೇರಿದಂತೆ ಭಾರಿ ಹೈಡ್ರಾಮಾ ನಡೆಯಿತು.

"

ಮಧ್ಯಪ್ರದೇಶದ ವಿಧಾನಸಭೆಯಿಂದ ರಾಜ್ಯಸಭೆಗೆ ನಡೆಯುವ ಚುನಾವಣೆಗೆ ಕಾಂಗ್ರೆಸ್‌ ಅಭ್ಯರ್ಥಿಯಾಗಿರುವ ದಿಗ್ವಿಜಯ್‌ ಸಿಂಗ್‌ ಅವರು ಚುನಾವಣೆಯಲ್ಲಿ ಮತ ಚಲಾಯಿಸುವಂತೆ ಕೋರುವ ನೆಪದಲ್ಲಿ ದೇವನಹಳ್ಳಿ ಬಳಿಯ ರಮಡಾ ರೆಸಾರ್ಟ್‌ನಲ್ಲಿ ತಂಗಿರುವ ಮಧ್ಯಪ್ರದೇಶ ಕಾಂಗ್ರೆಸ್‌ ಬಂಡಾಯ ಶಾಸಕರನ್ನು ಭೇಟಿ ಮಾಡಲು ನಗರಕ್ಕೆ ಬುಧವಾರ ಬೆಳಗಿನ ಜಾವ ಆಗಮಿಸಿದ್ದರು. ಕೆಂಪೇಗೌಡ ಅಂತಾರಾಷ್ಟ್ರೀಯ ನಿಲ್ದಾಣಕ್ಕೆ ಆಗಮಿಸಿದ ಅವರು ನೇರವಾಗಿ ದೇವನಹಳ್ಳಿಯತ್ತ ತೆರಳಿದರು. ಈ ವೇಳೆ ಅವರನ್ನು ಮಾರ್ಗಮಧ್ಯದಲ್ಲೇ ತಡೆದ ಪರಿಣಾಮ ದಿಗ್ವಿಜಯ್‌ ಸಿಂಗ್‌ ಹಾಗೂ ಅವರೊಂದಿಗೆ ಇದ್ದ ಕಾರ್ಯಕರ್ತರು ಪೊಲೀಸರೊಂದಿಗೆ ತೀವ್ರ ವಾಗ್ವಾದ ನಡೆಸಿದರು. ಇದಕ್ಕೆ ಪೊಲೀಸರು ಜಗ್ಗದಾಗ ಸಿಂಗ್‌ ಅವರು ರಸ್ತೆಯಲ್ಲೇ ಧರಣಿಗೆ ಕುಳಿತರು. ಈ ವೇಳೆ ಪೊಲೀಸರು ಅವರನ್ನು ವಶಕ್ಕೆ ಪಡೆದರು.

ದಿಗ್ವಿಜಯ್‌ ಸಿಂಗ್‌ ಅವರನ್ನು ವಶಕ್ಕೆ ಪಡೆದು ಅಮೃತಹಳ್ಳಿ ಪೊಲೀಸ್‌ ಠಾಣೆಗೆ ಕರೆತರುತ್ತಿದ್ದಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಸೇರಿದಂತೆ ರಾಜ್ಯ ಕಾಂಗ್ರೆಸ್‌ನ ಹಲವು ಶಾಸಕರು, ಮುಖಂಡರು, ಕಾರ್ಯಕರ್ತರು ಕೂಡ ಠಾಣೆಗೆ ಧಾವಿಸಿ ಅವರನ್ನು ಬಿಡುಗಡೆಗೊಳಿಸುವ ಪ್ರಯತ್ನ ನಡೆಸಿದರು. ಮತ್ತೊಂದೆಡೆ ವಿಧಾನಸಭೆಯಲ್ಲಿ ಪ್ರತಿಪಕ್ಷ ಕಾಂಗ್ರೆಸ್‌ ಸದಸ್ಯರು ಪೊಲೀಸರ ಕ್ರಮ ಖಂಡಿಸಿ ಬಾವಿಗಿಳಿದು ಪ್ರತಿಭಟನೆ ನಡೆಸಿದರು. ತಮ್ಮ ನಾಯಕರನ್ನು ಬಿಡುಗಡೆ ಮಾಡಿದ್ದರಿಂದ ಭೋಜನ ವಿರಾಮದ ಬಳಿಕ ಪ್ರತಿಭಟನೆ ಹಿಂಪಡೆದರು.

ಈ ಮಧ್ಯೆ, ಭೋಜನ ವಿರಾಮಕ್ಕೆ ಸದನ ಮುಂದೂಡಿದಾಗ ಕೆಪಿಸಿಸಿ ಕಚೇರಿಯಲ್ಲಿ ದಿಗ್ವಿಜಯ್‌ ಸಿಂಗ್‌ ಅವರೊಂದಿಗೆ ತುರ್ತು ಸಭೆ ನಡೆಸಿದ ಡಿ.ಕೆ.ಶಿವಕುಮಾರ್‌, ರಾಜ್ಯ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತಿತರರ ನಾಯಕರು ಮಧ್ಯಪ್ರದೇಶ ಕಾಂಗ್ರೆಸ್‌ನ ಬಂಡಾಯ ಶಾಸಕರ ಭೇಟಿಗೆ ಇರುವ ಮಾರ್ಗಗಳ ಬಗ್ಗೆ ಚರ್ಚೆ ನಡೆಸಿದ್ದು, ಗುರುವಾರ ಮತ್ತೆ ಈ ದಿಸೆಯಲ್ಲಿ ಪ್ರಯತ್ನ ನಡೆಸಲು ತೀರ್ಮಾನಿಸಿದರು ಎನ್ನಲಾಗಿದೆ.

ದಿಗ್ವಿಜಯ್‌ಗೆ ಡಿಕೆಶಿ ಸಾಥ್‌:

ಮಧ್ಯಪ್ರದೇಶದ ವಿಧಾನಸಭೆಯಿಂದ ರಾಜ್ಯಸಭೆಗೆ ನಡೆಯುವ ಚುನಾವಣೆಗೆ ಕಾಂಗ್ರೆಸ್‌ ಅಭ್ಯರ್ಥಿಯೂ ಆಗಿರುವ ದಿಗ್ವಿಜಯ್‌ ಸಿಂಗ್‌ ಅವರು ಬುಧವಾರ ಬೆಳಗ್ಗೆಯೇ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ನಿಲ್ದಾಣಕ್ಕೆ ಆಗಮಿಸಿ ಅಲ್ಲಿಂದ ತಮ್ಮ ಪಕ್ಷದ ಬಂಡಾಯ ಶಾಸಕರು ತಂಗಿರುವ ದೇವನಹಳ್ಳಿ ಬಳಿಯ ರಮಡಾ ರೆಸಾರ್ಟ್‌ಗೆ ಭೇಟಿ ನೀಡಲು ಮುಂದಾದರು. ವಿಮಾನ ನಿಲ್ದಾಣದಲ್ಲಿ ಅವರನ್ನು ಸ್ವಾಗತಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಸೇರಿದಂತೆ ರಾಜ್ಯ ಕಾಂಗ್ರೆಸ್‌ನ ವಿವಿಧ ನಾಯಕರು ಕೂಡ ಅವರನ್ನು ಹಿಂಬಾಲಿಸಿದರು. ಆದರೆ, ರಮಡಾ ರೆಸಾರ್ಟ್‌ಗೆ ಮೂರು ಕಿ.ಮೀ. ದೂರದಲ್ಲಿ ಸಿಂಗನಾಯಕನಹಳ್ಳಿ ಬಳಿಯೇ ಪೊಲೀಸರು ದಿಗ್ವಿಜಯ್‌ ಸಿಂಗ್‌ ಅವರನ್ನು ತಡೆದರು.

ರೆಸಾರ್ಟ್‌ನಲ್ಲಿರುವ ಶಾಸಕರು ತಾವು ಯಾರನ್ನೂ ಭೇಟಿ ಮಾಡಲು ಇಚ್ಛಿಸುವುದಿಲ್ಲ ಎಂದು ಪತ್ರ ಬರೆದುಕೊಟ್ಟಿರುವುದಾಗಿ ಹೇಳಿ ದಿಗ್ವಿಜಯ್‌ ಸಿಂಗ್‌ ಅವರನ್ನು ಮಾರ್ಗಮಧ್ಯೆಯೇ ತಡೆದರು. ಈ ವೇಳೆ, ರಸ್ತೆಯಲ್ಲಿ ತೀವ್ರ ವಾಹನ ದಟ್ಟಣೆ ಉಂಟಾಗಿದ್ದರಿಂದ ಡಿ.ಕೆ.ಶಿವಕುಮಾರ್‌ ಅವರ ಕಾರು ಘಟನಾ ಸ್ಥಳದಿಂದ ಸಾಕಷ್ಟುದೂರ ಹಿಂದೆಯೇ ಉಳಿದಿತ್ತು. ಕೊನೆಗೆ ತಮ್ಮನ್ನು ವಶಕ್ಕೆ ಪಡೆದ ಪೊಲೀಸರೊಂದಿಗೆ ದಿಗ್ವಿಜಯ್‌ ಸಿಂಗ್‌ ಹಾಗೂ ಅವರ ಬೆಂಬಲಿಗರು ತೀವ್ರ ವಾಗ್ವಾದ ನಡೆಸಿದರು. ಪೊಲೀಸರ ಕ್ರಮವನ್ನು ಖಂಡಿಸಿದ ದಿಗ್ವಿಜಯ್‌ಸಿಂಗ್‌ ಅವರು, ‘ನಾನು ರಾಜ್ಯಸಭಾ ಚುನಾವಣೆಯಲ್ಲಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದೇನೆ. ನನ್ನ ಮತದಾರರಾದ ಶಾಸಕರು ರೆಸಾರ್ಟ್‌ ಒಳಗಿದ್ದಾರೆ. ಅವರನ್ನು ಭೇಟಿ ಮಾಡಿ ಮತಯಾಚಿಸಲು ಬಂದಿದ್ದೇನೆ. ಇದು ನನ್ನ ಹಕ್ಕು. ನೀವು ನನ್ನ ಹಕ್ಕನ್ನು ಕಸಿಯುತ್ತಿದ್ದೀರಿ. ನಾನೇನೂ ಯಾವುದೇ ಆಯುಧಗಳನ್ನು ಹಿಡಿದು ಬಂದಿಲ್ಲ. ಬೇಕಿದ್ದರೆ ಪರೀಕ್ಷೆ ಮಾಡಿಕೊಳ್ಳಿ. ನನ್ನ ಜತೆ ರೆಸಾರ್ಟ್‌ ಒಳಗೆ ನೀವೂ ಬನ್ನಿ, ನಿಮ್ಮ ಮುಂದೆಯೇ ಮತಯಾಚನೆ ಮಾಡುತ್ತೇನೆ’ ಎಂದು ಮನವಿ ಮಾಡಿದರು.

ಇದಕ್ಕೆ ಒಪ್ಪದ ಪೊಲೀಸರು, ಒಳಗಿರುವ ಶಾಸಕರಿಗೆ ತಮ್ಮನ್ನು ಭೇಟಿ ಮಾಡಲು ಆಸಕ್ತಿ ಇಲ್ಲ. ನಮಗೆ ರಕ್ಷಣೆ ಕೊಡಿ ಎಂದು ಪತ್ರ ಬರೆದಿದ್ದಾರೆ. ಹೀಗಾಗಿ ಒಳಗೆ ಬಿಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು. ಪೊಲೀಸರ ಮಾತನ್ನು ನಂಬದ ದಿಗ್ವಿಜಯ್‌ ಸಿಂಗ್‌, ಶಾಸಕರು ಬರೆದಿರುವ ಪತ್ರವನ್ನು ತೋರಿಸುವಂತೆ ಒತ್ತಾಯಿಸಿದಾಗ ಮೊಬೈಲ್‌ನಲ್ಲಿದ್ದ ಪತ್ರವನ್ನು ಡಿಸಿಪಿ ಭೀಮಾಶಂಕರ್‌ ತೋರಿಸಿದರು. ಅದನ್ನು ಒಪ್ಪದ ದಿಗ್ವಿಜಯ್‌ ಸಿಂಗ್‌ ಅವರು, ಇದು ಶಾಸಕರ ನಕಲಿ ಸಹಿ ಮಾಡಲಾದ ಪತ್ರ ಎನಿಸುತ್ತಿದೆ. ನಾನು ನಮ್ಮ ಕಾಂಗ್ರೆಸ್‌ ಶಾಸಕರನ್ನು ಭೇಟಿ ಮಾಡಲು ಬಂದಿದ್ದೇನೆ, ಬಿಜೆಪಿ ಶಾಸಕರನ್ನಲ್ಲ. ಒಳಗಿರುವವರು ಕೂಡ ಕಾಂಗ್ರೆಸ್‌ ಶಾಸಕರು ಮತ್ತು ರಾಜ್ಯಸಭೆ ಚುನಾವಣೆಯಲ್ಲಿ ನನ್ನ ಮತದಾರರಾಗಿದ್ದಾರೆ. ಅವರ ಭೇಟಿಗೆ ಅವಕಾಶ ನೀಡುವುದಿಲ್ಲ ಎನ್ನುವುದು ಸರಿಯಲ್ಲ ಎಂದರು.

ರಸ್ತೆಯಲ್ಲೇ ದಿಗ್ವಿಜಯ್‌ ಧರಣಿ:

ಎಷ್ಟೇ ಪ್ರಯತ್ನ ಮಾಡಿದರೂ ಪೊಲೀಸರು ಬಿಡದೆ ವಾಪಸ್‌ ತೆರಳುವಂತೆ ಸೂಚಿಸಿದಾಗ ದ್ವಿಗ್ವಿಜಯ್‌ ಸಿಂಗ್‌ ಅವರು ರಸ್ತೆ ಮಧ್ಯೆ ಕುಳಿತು ಧರಣಿಗೆ ಮುಂದಾದರು. ಅವರನ್ನು ಮನವೊಲಿಸುವ ವಿಫಲ ಯತ್ನ ನಡೆಸಿದ ಪೊಲೀಸರು ದಿಗ್ವಿಜಯ್‌ ಸಿಂಗ್‌ ಹಾಗೂ ಅವರ ಜೊತೆಗಿದ್ದ ಐವರು ಶಾಸಕರನ್ನು ವಶಕ್ಕೆ ಪಡೆದು ಅಮೃತಹಳ್ಳಿ ಪೊಲೀಸ್‌ ಠಾಣೆಗೆ ಕರೆದೊಯ್ದರು.

ರಾಜ್ಯ ಕಾಂಗ್ರೆಸ್‌ ನಾಯಕರ ಮಧ್ಯಪ್ರವೇಶ:

ದಿಗ್ವಿಜಯ್‌ ಸಿಂಗ್‌ ಅವರನ್ನು ಬಂಧಿಸಿ ಠಾಣೆಗೆ ಕರೆದುಕೊಂಡು ಬರುತ್ತಿದ್ದಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌, ಶಾಸಕರಾದ ರಿಜ್ವಾನ್‌ ಅರ್ಷದ್‌, ಕೃಷ್ಣ ಬೈರೇಗೌಡ, ಎನ್‌.ಎ.ಹ್ಯಾರಿಸ್‌ ಮತ್ತಿತರರು ಠಾಣೆಗೆ ಧಾವಿಸಿದರು. ನಂತರ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ದೂರವಾಣಿ ಮಾಡಲು ನಡೆಸಿದ ಪ್ರಯತ್ನ ವಿಫಲವಾಗಿ ಠಾಣೆಯಲ್ಲೇ ಕೆಲ ಕಾಲ ತಮ್ಮ ನಾಯಕರೊಂದಿಗೆ ಕುಳಿತುಕೊಳ್ಳಬೇಕಾಯಿತು. ಕೆಲ ಹೊತ್ತಿನ ನಂತರ ಪೊಲೀಸರು ಎಲ್ಲರನ್ನೂ ಬಿಡಗಡೆ ಮಾಡಿದರು.

ಪೊಲೀಸರ ವಿರುದ್ಧ ಡಿಜಿಗೆ ದೂರು:

ಪೊಲೀಸ್‌ ವಶದಿಂದ ಬಿಡುಗಡೆ ನಂತರ ದಿಗ್ವಿಜಯ್‌ ಸಿಂಗ್‌ ಹಾಗೂ ಡಿ.ಕೆ. ಶಿವಕುಮಾರ್‌ ಅವರನ್ನು ಒಳಗೊಂಡ ನಿಯೋಗ ರಾಜ್ಯ ಪೊಲೀಸ್‌ ಮಹಾ ನಿರ್ದೇಶಕ ಪ್ರವೀಣ್‌ ಸೂದ್‌ ಅವರನ್ನು ಭೇಟಿ ಮಾಡಿ ಪೊಲೀಸರ ಕ್ರಮದ ವಿರುದ್ಧ ದೂರು ಸಲ್ಲಿಸಿತು. ಈ ನಡುವೆ ದಿಗ್ವಿಜಯ್‌ ಸಿಂಗ್‌, ಪೊಲೀಸರು ನನಗೆ ಅಡ್ಡಿಪಡಿಸಿ ರಾಜಕೀಯ ಮಾಡುತ್ತಿದ್ದಾರೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಡಿಜಿಪಿ ಸೂದ್‌, ನಾವು ಕಾನೂನು ಪಾಲಿಸಬೇಕಾಗಿದೆ. ರಾಜಕೀಯ ಮಾಡಲು ಇಚ್ಛಿಸುವುದಿಲ್ಲ, ಎಲ್ಲರೂ ಒಂದೇ ಎಂದರು. ಆಗ ಕಾಂಗ್ರೆಸ್‌ ನಾಯಕರು ಅಲ್ಲಿಂದ ಹೊರನಡೆದರು.

ಪೊಲೀಸರು ಬಿಜೆಪಿಗರ ರೀತಿ ವರ್ತಿಸಬಾರದು

ಮಧ್ಯಪ್ರದೇಶ ಶಾಸಕರು ಉಳಿದುಕೊಂಡಿರುವ ರೆಸಾರ್ಟ್‌ಗೆ ಕಾರಣವಿಲ್ಲದೆ ನಮಗೆ ಪ್ರವೇಶ ನಿರಾಕರಿಸಲಾಗಿದೆ. ಪೊಲೀಸರು ಸಂವಿಧಾನ ಬದ್ಧವಾಗಿ ನಡೆದುಕೊಳ್ಳಬೇಕೆ ಹೊರತು ಬಿಜೆಪಿ ಕಾರ್ಯಕರ್ತರಂತೆ ಅಲ್ಲ.

- ಡಿ.ಕೆ.ಶಿವಕುಮಾರ್‌, ಕೆಪಿಸಿಸಿ ಅಧ್ಯಕ್ಷ

ಮತ ಕೇಳಲು ಬಂದಿದ್ದೆ

ನಾನು ಕುದುರೆ ವ್ಯಾಪಾರಕ್ಕಾಗಿ ಬಂದಿರಲಿಲ್ಲ. ರಾಜ್ಯಸಭಾ ಚುನಾವಣೆ ಅಭ್ಯರ್ಥಿಯಾಗಿ ನಮ್ಮ ಪಕ್ಷದವರ ಮತ ಕೇಳಲು ಬಂದಿದ್ದೆ. ಪೊಲೀಸರು ಬಂಧಿಸಿದರು. ಇದರ ವಿರುದ್ಧ ಕಾನೂನು ಹೋರಾಟ ಮಾಡುತ್ತೇವೆ.

- ದಿಗ್ವಿಜಯ್‌ ಸಿಂಗ್‌, ಕಾಂಗ್ರೆಸ್‌ ನಾಯಕ

Follow Us:
Download App:
  • android
  • ios