Loksabha Elections 2024: ರಾಯಚೂರು ಲೋಕಸಭಾ ಕ್ಷೇತ್ರದಲ್ಲಿ ಗರಿಗೆದರಿದ ರಾಜಕೀಯ ಚಟುವಟಿಕೆಗಳು!
ರಾಯಚೂರು ಮತ್ತು ಯಾದಗಿರಿ ಲೋಕಸಭಾ ಕ್ಷೇತ್ರವೂ ಎಸ್ ಟಿ ಮೀಸಲು ಕ್ಷೇತ್ರ. ಈ ಕ್ಷೇತ್ರದ ಟಿಕೆಟ್ ಗಾಗಿ ನಾಯಕ ಸಮುದಾಯದ ಪ್ರಬಲ ಮುಖಂಡರು ನಾನಾ ಕಸರತ್ತು ಶುರು ಮಾಡಿದ್ದಾರೆ.
ವರದಿ: ಜಗನ್ನಾಥ ಪೂಜಾರ್, ಏಷ್ಯಾನೆಟ್ ಸುವರ್ಣನ್ಯೂಸ್, ರಾಯಚೂರು
ರಾಯಚೂರು (ಮಾ.03): ರಾಯಚೂರು ಮತ್ತು ಯಾದಗಿರಿ ಲೋಕಸಭಾ ಕ್ಷೇತ್ರವೂ ಎಸ್ ಟಿ ಮೀಸಲು ಕ್ಷೇತ್ರ. ಈ ಕ್ಷೇತ್ರದ ಟಿಕೆಟ್ ಗಾಗಿ ನಾಯಕ ಸಮುದಾಯದ ಪ್ರಬಲ ಮುಖಂಡರು ನಾನಾ ಕಸರತ್ತು ಶುರು ಮಾಡಿದ್ದಾರೆ. 8 ವಿಧಾನಸಭಾ ಕ್ಷೇತ್ರ ಹೊಂದಿರುವ ರಾಯಚೂರು- ಯಾದಗಿರಿ ಲೋಕಸಭಾ ಕ್ಷೇತ್ರವು ಎಲ್ಲಾ ವಿಧಾನಸಭಾ ಕ್ಷೇತ್ರವೂ ಸಹ ತುಂಬಾ ವಿಭಿನ್ನ ರಾಜಕೀಯ ವ್ಯವಸ್ಥೆ ಹೊಂದಿರುವ ಕ್ಷೇತ್ರಗಳಾಗಿವೆ.
ರಾಯಚೂರು-ಯಾದಗಿರಿ ಲೋಕಸಭಾ ಕ್ಷೇತ್ರದ ಪರಿಚಯ: ರಾಯಚೂರು- ಯಾದಗಿರಿ ಲೋಕಸಭಾ ಕ್ಷೇತ್ರದಲ್ಲಿ ಸುಮಾರು 19 ಲಕ್ಷ 52 ಸಾವಿರ 545ಕ್ಕೂ ಹೆಚ್ಚು ಮತದಾರರು ಇದ್ದಾರೆ. ರಾಯಚೂರು ಜಿಲ್ಲೆಯಲ್ಲಿ 5 ವಿಧಾನಸಭಾ ಕ್ಷೇತ್ರಗಳು ಬಂದ್ರೆ, 3 ವಿಧಾನಸಭಾ ಕ್ಷೇತ್ರಗಳು ಯಾದಗಿರಿ ಜಿಲ್ಲೆಯಲ್ಲಿ ಬರುತ್ತವೆ. ಹೀಗಾಗಿ ಯಾದಗಿರಿ ಜಿಲ್ಲೆಯ ಮುಖಂಡರಿಗಿಂತ ರಾಯಚೂರು ಜಿಲ್ಲೆಯ ಮುಖಂಡರೇ ಹೆಚ್ಚು ಬಾರಿ ಲೋಕಸಭೆಗೆ ಸ್ಪರ್ಧೆ ಮಾಡಿ ಜಯಗಳಿಸಿದ್ದು ಇದೆ. 1952ರಲ್ಲಿ ಲೋಕಸಭಾ ಕ್ಷೇತ್ರ ರಚನೆ ಆಗಿದ್ದು, 1957ರಲ್ಲಿ ಚುನಾವಣೆ ನಡೆದ್ದು ಜಿ.ಎಸ್. ಮೇಲುಕೋಟೆ ಲೋಕಸಭಾ ಸದಸ್ಯರಾಗಿ ಆಯ್ಕೆ ಆಗುತ್ತಾರೆ.
ಸಾವಯವ ಬೆಳೆ ಬೆಳೆಯುವಲ್ಲಿ ರಾಜ್ಯ ಮೊದಲು: ಸಚಿವ ಈಶ್ವರ್ ಖಂಡ್ರೆ
1962ರಲ್ಲಿ ಜಗನ್ನಾಥ ರಾವ್ ಕಾಂಗ್ರೆಸ್ ನಿಂದ ಲೋಕಸಭೆಗೆ ಹೋಗುತ್ತಾರೆ. 1967ರಲ್ಲಿ ಸ್ವಾತಂತ್ರ ಪಕ್ಷದಿಂದ ರಾಜ ವೆಂಕಟಪ್ಪ ನಾಯಕ ಲೋಕಸಭಾಗೆ ಪ್ರವೇಶ ಮಾಡುತ್ತಾರೆ. 1971ರಲ್ಲಿ ಪಂಪನಗೌಡ ಕಾಂಗ್ರೆಸ್ ನಿಂದ ಆಯ್ಕೆ ಆಗುವರು. 1977ರಲ್ಲಿ ಕಾಂಗ್ರೆಸ್ ನಿಂದ ರಾಜಶೇಖರ ಕಲ್ಲೂರು ಲೋಕಸಭಾ ಸದಸ್ಯರಾಗುತ್ತಾರೆ. ಇನ್ನೂ 1980-1986ರವರೆಗೆ ಕಾಂಗ್ರೆಸ್ ನ ಬಿ.ವಿ. ದೇಸಾಯಿ ಲೋಕಸಭೆ ಸದಸ್ಯರಾಗಿ ಇರುತ್ತಾರೆ. 1986ರಲ್ಲಿ ಕಾಂಗ್ರೆಸ್ ನಿಂದ ಎಂ.ವೈ.ಗೋರ್ಪಾಡೆ ಲೋಕಸಭಾ ಚುನಾವಣೆಯಲ್ಲಿ ಜಯಗಳಿಸುತ್ತಾರೆ. 1989ರಲ್ಲಿ ರಾಜಾ ಅಂಬಣ್ಣ ನಾಯಕ ದೊರೆ ಲೋಕಸಭೆ ಸದಸ್ಯರಾಗುತ್ತಾರೆ.
1991ರಲ್ಲಿ ಕಾಂಗ್ರೆಸ್ ನಿಂದ ವೆಂಕಟೇಶ ನಾಯಕ ಲೋಕಸಭಾಗೆ ಪ್ರವೇಶ ಮಾಡುತ್ತಾರೆ. ಜನತಾ ದಳದಿಂದ ಸ್ಪರ್ಧೆ ಮಾಡಿದ 1996ರಲ್ಲಿ ರಾಜಾ ರಂಗಪ್ಪ ನಾಯಕ ಆಯ್ಕೆ ಆಗುತ್ತಾರೆ. 1998ರಲ್ಲಿ ಚುನಾವಣೆ ನಡೆದಾಗ ಮತ್ತೆ ಕಾಂಗ್ರೆಸ್ ಅಭ್ಯರ್ಥಿಯಾದ ವೆಂಕಟೇಶ ನಾಯಕ ಆಯ್ಕೆ ಆಗುತ್ತಾರೆ. 1999 ಮತ್ತು 2004ರಲ್ಲಿ ವೆಂಕಟೇಶ ನಾಯಕ ಲೋಕಸಭಾ ಸದಸ್ಯರಾಗಿ ಆಯ್ಕೆ ಆಗುತ್ತಾರೆ. 2009ರಲ್ಲಿ ಬಳ್ಳಾರಿಯಿಂದ ಬಂದು ರಾಯಚೂರು ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಪಡೆದು ಸ್ಪರ್ಧೆ ಮಾಡಿದ ಸಣ್ಣ ಫಕೀರಪ್ಪ ಲೋಕಸಭಾ ಸದಸ್ಯರಾಗಿ ಆಯ್ಕೆ ಆಗುತ್ತಾರೆ.
2014ರಲ್ಲಿ ಇಡೀ ದೇಶದಲ್ಲಿ ಮೋದಿ ಹವಾ ಇದ್ರೂ ರಾಯಚೂರಿನಲ್ಲಿ ಕಾಂಗ್ರೆಸ್ ನಿಂದ ಸ್ಪರ್ಧೆ ಮಾಡಿದ ಬಿ.ವಿ.ನಾಯಕ ಲೋಕಸಭೆಗೆ ಆಯ್ಕೆ ಆಗುತ್ತಾರೆ. 2019ರಲ್ಲಿ ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ ಆಯ್ಕೆ ಆಗುತ್ತಾರೆ. 17 ಲೋಕಸಭಾ ಚುನಾವಣೆಯಲ್ಲಿ ರಾಯಚೂರು - ಯಾದಗಿರಿ ಲೋಕಸಭಾ ಕ್ಷೇತ್ರದಲ್ಲಿ ವೆಂಕಟೇಶ ನಾಯಕ ನಾಲ್ಕು ಬಾರಿ ಲೋಕಸಭೆ ಪ್ರವೇಶ ಮಾಡಿದ್ದು ಇತಿಹಾಸವಿದೆ. 17 ಬಾರಿ ನಡೆದ ಲೋಕಸಭಾ ಚುನಾವಣೆಯಲ್ಲಿ 13 ಬಾರಿ ಕಾಂಗ್ರೆಸ್ ಅಭ್ಯರ್ಥಿಗಳೇ ಈ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದು ಇದೆ. ಇನ್ನೂ ಬಿಜೆಪಿ ಎರಡು ಬಾರಿ ಗೆದ್ದರೇ, ಸ್ವಾತಂತ್ರ ಪಕ್ಷದ ಅಭ್ಯರ್ಥಿ ಒಂದು ಬಾರಿ ಜನತಾ ದಳ ಒಂದು ಬಾರಿ ಗೆಲುವು ಸಾಧಿಸಿದೆ.
ಲೋಕಸಭಾ ಕ್ಷೇತ್ರದ ವಿಧಾನಸಭಾ ಕ್ಷೇತ್ರಗಳು ಹಾಗೂ ರಾಜಕೀಯ ವ್ಯವಸ್ಥೆ, ರಾಯಚೂರು- ಯಾದಗಿರಿ ಲೋಕಸಭಾ ಕ್ಷೇತ್ರದಲ್ಲಿ 8 ವಿಧಾನಸಭಾ ಕ್ಷೇತ್ರಗಳು ಬರುತ್ತವೆ.
ರಾಯಚೂರು ಜಿಲ್ಲೆಯ 5 ವಿಧಾನಸಭಾ ಕ್ಷೇತ್ರಗಳು:
1) ರಾಯಚೂರು ನಗರ ( ಸಾಮಾನ್ಯ)
2) ರಾಯಚೂರು ಗ್ರಾಮೀಣ ( ಎಸ್ ಟಿ ಮೀಸಲು)
3) ಮಾನ್ವಿ ( ಎಸ್ ಟಿ ಮೀಸಲು )
4) ದೇವದುರ್ಗ ( ಎಸ್ ಟಿ ಮೀಸಲು)
5 ) ಲಿಂಗಸೂಗೂರು ( ಎಸ್ ಸಿ ಮೀಸಲು)
ಯಾದಗಿರಿ ಜಿಲ್ಲೆಯ 3 ವಿಧಾನಸಭಾ ಕ್ಷೇತ್ರಗಳು:
1) ಯಾದಗಿರಿ ( ಸಾಮಾನ್ಯ )
2) ಶಹಾಪುರ (ಸಾಮಾನ್ಯ)
3) ಸುರಪುರ (ಎಸ್ ಟಿ)
8 ವಿಧಾನಸಭಾ ಕ್ಷೇತ್ರದಲ್ಲಿ 4 ಎಸ್ ಟಿ ಮೀಸಲು ಕ್ಷೇತ್ರಗಳು ಇದ್ರೆ, 3 ಸಾಮಾನ್ಯ ಕ್ಷೇತ್ರಗಳು ಇವೆ. ಒಂದು ಮಾತ್ರ ಎಸ್ ಸಿ ಮೀಸಲು ಕ್ಷೇತ್ರವಾಗಿದೆ. ಹೀಗಾಗಿ ನಾಯಕ ಸಮುದಾಯದ ನಾಯಕರೇ ಈ ಕ್ಷೇತ್ರದ ಟಿಕೆಟ್ ಗಾಗಿ ಪೈಪೋಟಿಗೆ ಇಳಿಯುತ್ತಾರೆ.
ರಾಯಚೂರು ಲೋಕಸಭಾ ಕ್ಷೇತ್ರದಲ್ಲಿ 2023ರ ವಿಧಾನಸಭಾ ಚುನಾವಣೆಯಲ್ಲಿ ಗೆದ್ದವರು ಯಾರು?: ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳ ಹುಡುಕಾಟಕ್ಕಾಗಿ ಸರ್ವೇ ಶುರು ಮಾಡಿದೆ. ಯಾವ ನಾಯಕರಿಗೆ ಟಿಕೆಟ್ ನೀಡಬೇಕು ಎಂಬ ವಿಚಾರವಾಗಿ ಸಭೆಗಳು ನಡೆಸಿ ಚರ್ಚೆ ನಡೆದಿದೆ. ರಾಯಚೂರು ನಗರದಲ್ಲಿ ಬಿಜೆಪಿಯಿಂದ ಗೆದ್ದ ಡಾ. ಶಿವರಾಜ್ ಪಾಟೀಲ್ ಶಾಸಕರಾಗಿದ್ದಾರೆ. ರಾಯಚೂರು ನಗರದಿಂದ ಸತತ ಮೂರನೇ ಬಾರಿಗೆ ಶಾಸಕರಾದ ಡಾ.ಶಿವರಾಜ್ ಪಾಟೀಲ್ ಗೆ ಬಿಜೆಪಿ ಹೈಕಮಾಂಡ್ ಜಿಲ್ಲಾಧ್ಯಕ್ಷ ಸ್ಥಾನ ಸಹ ನೀಡಿದೆ. ರಾಯಚೂರು ಗ್ರಾಮೀಣ ಶಾಸಕ ಬಸನಗೌಡ ದದ್ದಲ್ ಕಾಂಗ್ರೆಸ್ ನಿಂದ ಎರಡನೇ ಬಾರಿಗೆ ಆಯ್ಕೆ ಆಗಿದ್ದಾರೆ. ಕೆಲ ನಾಯಕರು ಲೋಕಸಭಾ ಟಿಕೆಟ್ ಬಸನಗೌಡ ದದ್ದಲ್ ಗೆ ನೀಡಿ ಎಂಬ ಬೇಡಿಕೆ ಇಟ್ಟಿದ್ರು. ಆದ್ರೆ ಬಸನಗೌಡ ದದ್ದಲ್ ಲೋಕಸಭಾ ಚುನಾವಣೆ ಸ್ಪರ್ಧೆಗೆ ಹಿಂದೇಟು ಹಾಕಿದ್ದಾರೆ.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿತ: ಮಾಜಿ ಸಚಿವ ಪ್ರಭು ಚವ್ಹಾಣ್
ಇದಕ್ಕೆ ಹೈಕಮಾಂಡ್ ಸಹ ಒಪ್ಪಿಗೆ ನೀಡಿ ವಾಲ್ಮೀಕಿ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನೀಡಿ ಹೆಚ್ಚಿನ ಜವಾಬ್ದಾರಿ ನೀಡಿದೆ. ಮಾನ್ವಿಯಲ್ಲಿ ಕಾಂಗ್ರೆಸ್ ಶಾಸಕ ಹಂಪಯ್ಯ ನಾಯಕ ಇದ್ದಾರೆ. ದೇವದುರ್ಗದಲ್ಲಿ ಜೆಡಿಎಸ್ ನಿಂದ ಆಯ್ಕೆಗೊಂಡ ಕರೆಮ್ಮ. ಜಿ.ನಾಯಕ ಇದ್ದು, ಲಿಂಗಸೂಗೂರಿನಲ್ಲಿ ಬಿಜೆಪಿಯ ಶಾಸಕ ಮಾನಪ್ಪ ವಜ್ಜಲ್ ಇದ್ದಾರೆ. ಇನ್ನೂ ಯಾದಗಿರಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ನ ಶಾಸಕ ಚೆನ್ನಾರೆಡ್ಡಿ ತುನ್ನೂರು ಇದ್ದಾರೆ. ಶಹಾಪೂರು ವಿಧಾನಸಭಾ ಕ್ಷೇತ್ರದಲ್ಲಿ ಸಚಿವ ಶರಣಬಸಪ್ಪ ದರ್ಶನಾಪುರ ಇದ್ದಾರೆ. ಇತ್ತ ಸುರಪುರನಲ್ಲಿ ರಾಜಾ ವೆಂಕಟಪ್ಪ ನಾಯಕ ಇದ್ರು. ಅನಾರೋಗ್ಯದಿಂದ ಸಾವನ್ನಪ್ಪಿದ್ದು, ಆ ಕ್ಷೇತ್ರದಲ್ಲಿ ಉಪ ಚುನಾವಣೆ ನಡೆಯಬೇಕಾಗಿದೆ. ಒಟ್ಟಾರೆ ರಾಯಚೂರು- ಯಾದಗಿರಿ ಲೋಕಸಭಾ ಕ್ಷೇತ್ರದ ಟಿಕೆಟ್ ಗಾಗಿ ಕಾಂಗ್ರೆಸ್ ಮತ್ತು ಬಿಜೆಪಿಯಲ್ಲಿ ಮೂರು - ನಾಲ್ಕು ಜನರು ನಾನೇ ಅಭ್ಯರ್ಥಿ ಅಂತ ಓಡಾಟ ನಡೆಸಿ ಎರಡೂ ಪಕ್ಷಗಳ ನಾಯಕರು ಟಿಕೆಟ್ ಗಾಗಿ ಕಸರತ್ತು ನಡೆಸಿದ್ದಾರೆ.