Asianet Suvarna News Asianet Suvarna News

ಬಿಜೆಪಿಗೆ ಮೇಲ್ಮನೆ ಪ್ರತಿಪಕ್ಷ ನಾಯಕನ ಆಯ್ಕೆ ಕಗ್ಗಂಟು: ಹೈಕಮಾಂಡ್ ಮುಂದೆ 3 ಆಯ್ಕೆ, ಯಾವುದು ಫೈನಲ್‌?

ವಿಧಾನಪರಿಷತ್ತಿನ ಪ್ರತಿಪಕ್ಷದ ನಾಯಕನ ಆಯ್ಕೆ ಬಿಜೆಪಿಯಲ್ಲಿ ಕಗ್ಗಂಟಾಗಿ ಪರಿಣಮಿಸಿದ್ದು, ಅಧಿವೇಶನ ಆರಂಭವಾಗಿ ಎರಡು ದಿನಗಳಾದರೂ ಪ್ರತಿಪಕ್ಷದ ನಾಯಕನ ನೇಮಕವಾಗಿಲ್ಲ. 

Leader of Opposition in Upper House is in trouble for BJP gvd
Author
First Published Jul 17, 2024, 6:47 AM IST | Last Updated Jul 17, 2024, 10:00 AM IST

ಬೆಂಗಳೂರು (ಜು.17): ವಿಧಾನಪರಿಷತ್ತಿನ ಪ್ರತಿಪಕ್ಷದ ನಾಯಕನ ಆಯ್ಕೆ ಬಿಜೆಪಿಯಲ್ಲಿ ಕಗ್ಗಂಟಾಗಿ ಪರಿಣಮಿಸಿದ್ದು, ಅಧಿವೇಶನ ಆರಂಭವಾಗಿ ಎರಡು ದಿನಗಳಾದರೂ ಪ್ರತಿಪಕ್ಷದ ನಾಯಕನ ನೇಮಕವಾಗಿಲ್ಲ. ಇದೀಗ ಪ್ರಮುಖವಾಗಿ ಪ್ರಸ್ತಾಪವಾಗುತ್ತಿರುವ ಅಂಶ ಎಂದರೆ, ಮೊದಲ ಬಾರಿಗೆ ಪರಿಷತ್ ಪ್ರವೇಶಿಸಿರುವ ಸಿ.ಟಿ.ರವಿ ಅವರನ್ನು ಪ್ರತಿಪಕ್ಷದ ನಾಯಕನ ಸ್ಥಾನಕ್ಕೆ ಪರಿಗಣಿಸುತ್ತಾರೆಯೇ ಅಥವಾ ಇಲ್ಲವೇ ಎಂಬುದು. ಬಿಜೆಪಿ ವರಿಷ್ಠರಲ್ಲಿ ರವಿ ಅವರನ್ನು ನೇಮಕ ಮಾಡುವ ಬಗ್ಗೆಯೇ ಜಿಜ್ಞಾಸೆ ನಡೆದಿದೆ ಎನ್ನಲಾಗಿದೆ.ಹಾಗೆ ನೋಡಿದರೆ ಪ್ರತಿಪಕ್ಷ ನಾಯಕನ ನೇಮಕ ಮಾಡದೆ ಇರುವುದು ಬಿಜೆಪಿಗೆ ಅಭ್ಯಾಸವಾಗಿ ಹೋಗಿದೆ. 

ಕಳೆದ ವಿಧಾನಸಭಾ ಚುನಾವಣೆ ಬಳಿಕ ಸುಮಾರು ಆರು ತಿಂಗಳವರೆಗೆ ಉಭಯ ಸದನಗಳಲ್ಲೂ ಬಿಜೆಪಿಯು ಪ್ರತಿಪಕ್ಷ ನಾಯಕರ ನೇಮಕ ಮಾಡಿರಲಿಲ್ಲ. ಅದು ಇದೀಗ ಮತ್ತೊಮ್ಮೆ ಪರಿಷತ್ತಿನಲ್ಲಿ ಪುನರಾವರ್ತನೆಯಾಗುತ್ತಿದೆ.ಇದುವರೆಗೆ ಪರಿಷತ್ತಿನ ಪ್ರತಿಪಕ್ಷದ ನಾಯಕರಾಗಿದ್ದ ಕೋಟ ಶ್ರೀನಿವಾಸ್ ಪೂಜಾರಿ ಅವರು ಲೋಕಸಭೆ ಪ್ರವೇಶಿಸಿರುವುದರಿಂದ ಆ ಸ್ಥಾನ ತೆರವಾಗಿದೆ. ಇದೀಗ ಆ ಸ್ಥಾನಕ್ಕೆ ಯಾರನ್ನು ನೇಮಕ ಮಾಡಬೇಕು ಎಂಬ ಚರ್ಚೆ ಪಕ್ಷದಲ್ಲಿ ನಡೆದಿದೆ.ವಿಧಾನಸಭೆಯ ಪ್ರತಿಪಕ್ಷದ ನಾಯಕನ ಸ್ಥಾನಕ್ಕೆ ಒಕ್ಕಲಿಗ ಸಮುದಾಯದ ಆರ್‌.ಅಶೋಕ್ ಅವರನ್ನು ನೇಮಿಸಿರುವುದರಿಂದ ಜಾತಿ ಸಮೀಕರಣದ ಆಧಾರದ ಮೇಲೆ ವಿಧಾನಪರಿಷತ್ತಿನ ಪ್ರತಿಪಕ್ಷದ ನಾಯಕನ ಸ್ಥಾನವನ್ನು ಇತರ ಹಿಂದುಳಿದ ವರ್ಗ (ಒಬಿಸಿ) ಅಥವಾ ಪರಿಶಿಷ್ಟ ಜಾತಿಗೆ ಸೇರಿದವರನ್ನು ಪರಿಗಣಿಸುವ ಉದ್ದೇಶ ಹೊಂದಲಾಗಿದೆ. 

ನೀರಿನ ಸಮಸ್ಯೆಗೆ ಸೌಹಾರ್ದಯುತ ಪರಿಹಾರ ಅಗತ್ಯ: ಸಂಸದ ಮಂಜುನಾಥ್

ಆ ಪ್ರಕಾರ, ಎನ್‌.ರವಿಕುಮಾರ್‌, ಛಲವಾದಿ ನಾರಾಯಣಸ್ವಾಮಿ ಅವರ ಬಗ್ಗೆ ಪ್ರಸ್ತಾಪವಾಗಿತ್ತು. ಆದರೆ, ಇದೀಗ ಒಕ್ಕಲಿಗ ಸಮುದಾಯದ ಸಿ.ಟಿ.ರವಿ ಅವರೂ ಪ್ರಬಲ ಆಕಾಂಕ್ಷಿಯಾಗಿ ಹೊರಹೊಮ್ಮಿರುವುದು ನೇಮಕ ನಿರ್ಧಾರ ಅಂತಿಮಗೊಳಿಸಲು ಪ್ರಮುಖ ಅಡ್ಡಿಯಾಗಿದೆ ಎಂದು ತಿಳಿದು ಬಂದಿದೆ.ಅನುಭವ ಮತ್ತು ರಾಜಕೀಯ ಹಿರಿತನದ ಆಧಾರದ ಮೇಲೆ ಸಿ.ಟಿ.ರವಿ ಅವರ ನೇಮಕ ಬಗ್ಗೆ ಪಕ್ಷದಲ್ಲಿ ಅಪಸ್ವರವೇನೂ ಇಲ್ಲ. ಆದರೆ, ಬಹುತೇಕ ಸ್ಥಾನಗಳನ್ನು ಪ್ರಬಲ ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯಗಳಿಗೇ ನೀಡಿದರೆ ಹಿಂದುಳಿದ ವರ್ಗಗಳಿಗೆ ತಪ್ಪು ಸಂದೇಶ ರವಾನೆಯಾದಂತಾಗುತ್ತದೆ ಎಂಬ ಆತಂಕ ಪಕ್ಷದಲ್ಲಿದೆ. 

ಹೀಗಾಗಿಯೇ ಆ ಸ್ಥಾನವನ್ನು ಪರಿಷತ್ತಿನ ಹಿಂದುಳಿದ ವರ್ಗಗಳಿಗೆ ಸೇರಿದ ಸದಸ್ಯರಿಗೇ ನೀಡಬೇಕು ಎಂಬ ಅಭಿಪ್ರಾಯ ಹೆಚ್ಚಾಗಿದೆ. ಆ ಪೈಕಿ ರವಿಕುಮಾರ್ ಪರವಾಗಿ ಹೆಚ್ಚಿನ ಒಲವು ವ್ಯಕ್ತವಾಗಿದೆ.ಕೆಲದಿನಗಳ ಹಿಂದೆ ನಡೆದ ಪಕ್ಷದ ರಾಜ್ಯ ಘಟಕದ ಹಿರಿಯ ನಾಯಕರನ್ನು ಒಳಗೊಂಡ ಕೋರ್ ಕಮಿಟಿ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆದರೂ ಯಾವುದೇ ಹೆಸರನ್ನು ಶಿಫಾರಸು ಮಾಡದೆ ಹೈಕಮಾಂಡ್ ಜತೆ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಸಮಾಲೋಚನೆ ನಡೆಸಿ ಅಂತಿಮಗೊಳಿಸಬೇಕು ಎಂಬ ನಿರ್ಣಯ ಕೈಗೊಳ್ಳಲಾಗಿತ್ತು. 

ಆ ಪ್ರಕಾರ ವಿಜಯೇಂದ್ರ ಅವರು ದೆಹಲಿಗೆ ತೆರಳಿದ ವೇಳೆ ವರಿಷ್ಠರೊಂದಿಗೆ ಮಾತುಕತೆಯನ್ನೂ ನಡೆಸಿದ್ದಾರೆ.  ಆಯ್ಕೆ ಮಾಡುವ ಅಂತಿಮ ನಿರ್ಧಾರವನ್ನು ಹೈಕಮಾಂಡ್‌ಗೆ ಬಿಡಲಾಗಿದೆ. ಈ ಮಧ್ಯೆ ಕಳೆದ ವಾರ ಖುದ್ದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಸಿ.ಟಿ.ರವಿ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿ ಪ್ರತಿಪಕ್ಷದ ನಾಯಕನ ಆಯ್ಕೆ ಬಗ್ಗೆ ಚರ್ಚೆ ನಡೆಸಿದ್ದಾರೆ. ಈ ವೇಳೆ ರವಿ ಅವರು ತಮಗೆ ಅವಕಾಶ ಕಲ್ಪಿಸಿದರೆ ಪರಿಣಾಮಕಾರಿಯಾಗಿ ನಿಭಾಯಿಸುವ ಭರವಸೆ ನೀಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ನಡ್ಡಾ ಅವರು ಇತರ ನಾಯಕರ ಜತೆ ಸಮಾಲೋಚನೆ ನಡೆಸಿ ತೀರ್ಮಾನ ಕೈಗೊಳ್ಳುವುದಾಗಿ ಹೇಳಿದ್ದಾರೆ ಎನ್ನಲಾಗಿದೆ. 

ನಡ್ಡಾ ಅವರ ಮಾತುಕತೆ ಬೆನ್ನಲ್ಲೇ ಕಳೆದ ಎರಡು ದಿನಗಳಿಂದ ಅಧಿವೇಶನದ ಕಲಾಪದಲ್ಲಿ ಸಿ.ಟಿ.ರವಿ ಅವರು ಪರೋಕ್ಷವಾಗಿ ಪ್ರತಿಪಕ್ಷದ ನಾಯಕನ ಪಾತ್ರವನ್ನು ನಿಭಾಯಿಸುತ್ತಿದ್ದಾರೆ. ಅವರ ಬೆನ್ನಲ್ಲೇ ರವಿಕುಮಾರ್ ಅವರೂ ಪ್ರಬಲವಾಗಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ. ಇಬ್ಬರ ನಡುವೆ ಪೈಪೋಟಿಯೇ ಆರಂಭ‍ವಾದಂತಿದೆ. ಇದೀಗ ಬಿಜೆಪಿ ಹೈಕಮಾಂಡ್ ಮುಂದೆ ಮೂರು ಆಯ್ಕೆಗಳಿವೆ.ಒಂದು- ವಿಧಾನಸಭೆಯಲ್ಲಿ ಪ್ರತಿಪಕ್ಷದ ನಾಯಕ ಅಶೋಕ್ ಅವರನ್ನು ಮುಂದುವರೆಸಿ ವಿಧಾನಪರಿಷತ್ತಿನ ಪ್ರತಿಪಕ್ಷದ ನಾಯಕನ ಸ್ಥಾನವನ್ನು ಹಿಂದುಳಿದ ವರ್ಗದವರಿಗೆ ನೀಡುವುದು.

ಗೂಂಡಾ ವರ್ತನೆ, ಟಾರ್ಗೆಟ್ ರಾಜಕಾರಣ ಕಾಂಗ್ರೆಸ್ ಸಂಸ್ಕೃತಿ: ನಿಖಿಲ್ ಕುಮಾರಸ್ವಾಮಿ

ಎರಡು- ವಿಧಾನಸಭೆಯಲ್ಲಿ ಪ್ರತಿಪಕ್ಷದ ನಾಯಕ ಅಶೋಕ್ ಅವರನ್ನು ಮುಂದುವರೆಸಿ ಪರಿಷತ್ತಿನಲ್ಲೂ ಒಕ್ಕಲಿಗ ಸಮುದಾಯದ ಸಿ.ಟಿ.ರವಿ ಅವರನ್ನೇ ಪರಿಗಣಿಸುವುದು.ಮೂರು- ವಿಧಾನಸಭೆಯ ಪ್ರತಿಪಕ್ಷದ ನಾಯಕ ಅಶೋಕ್ ಅವರನ್ನು ಬದಲಿಸಿ ಅಲ್ಲಿ ಹಿಂದುಳಿದ ವರ್ಗದವರಿಗೆ ಅವಕಾಶ ಕಲ್ಪಿಸುವುದು. ಬಳಿಕ ಪರಿಷತ್ತಿನಲ್ಲಿ ಸಿ.ಟಿ.ರವಿ ಅವರಿಗೆ ಪ್ರತಿಪಕ್ಷದ ನಾಯಕ ಸ್ಥಾನ ನೀಡುವುದು.ಈ ಮೂರರ ಪೈಕಿ ಒಂದು ಕಾರ್ಯಗತಕ್ಕೆ ಬರುವ ಸಾಧ್ಯತೆಯಿದೆ. ಆದರೆ, ಇದೇ ಅಧಿವೇಶನದ ಅವಧಿ ಮುಗಿಯುವುದರೊಳಗಾಗಿ ನೇಮಕ ಆಗುತ್ತದೆಯೇ ಅಥವಾ ಅಧಿವೇಶನ ಬಳಿಕ ನೇಮಕ ಆಗುತ್ತದೆಯೇ ಎಂಬುದನ್ನು ಕಾದು ನೋಡಬೇಕು.

Latest Videos
Follow Us:
Download App:
  • android
  • ios